ಸಮುದ್ರ ಪಾಚಿ ಎಂಬ ಸತ್ವಯುತ ಸಾವಯವ ಗೊಬ್ಬರ

ಸಮುದ್ರ ಪಾಚಿ ಎಂಬ ಸತ್ವಯುತ ಸಾವಯವ ಗೊಬ್ಬರ

ಭಾರತದ ಕೃಷಿ ವ್ಯವಸ್ಥೆಯನ್ನು ಗೊಬ್ಬರದಲ್ಲಿ ಸ್ವಾವಲಂಬಿಯಾಗಿ ಮುನ್ನಡೆಸಲು ಸಧ್ಯೋಭವಿಷ್ಯದಲ್ಲಿ ಸಮುದ್ರ ಪಾಚಿ ಎಂಬ ಸಾಗರದ ನೀರಿನಲ್ಲಿ ಬೆಳೆಯುವ ಸಸ್ಯದ ಸಾವಯವ ಗೊಬ್ಬರ ಮಾರುಕಟ್ಟೆಯನ್ನು ಪ್ರವೇಶಿಸಿದೆ. ರಾಸಾಯನಿಕ ರಸಗೊಬ್ಬರವನ್ನು ಮೀರಿಸುವ ಶಕ್ತಿ ಉಳ್ಳ ಈ ಗೊಬ್ಬರದಲ್ಲಿ ಬಹುಬಗೆಯ ಪೋಷಕಾಂಶಗಳಿವೆ. ಕಳಕೊಳ್ಳುತ್ತಿರುವ ಮಣ್ಣಿನ ಜೈವಿಕ ಗುಣಧರ್ಮವನ್ನು ಇದು ಮರಳಿ ನೀಡಲು ಶಕ್ತ ಎನ್ನುತ್ತಾರೆ ವಿಜ್ಞಾನಿಗಳು. ಇದನ್ನು ಮಾನವ ಬಳಕೆಯ ಔಷದೋಪಚಾರಕ್ಕೆ ಬಳಸಲಾಗುತ್ತದೆ. ಹಾಗೆಯೇ ಸಸ್ಯ ಪೋಷಕವಾಗಿಯೂ ಬಳಕೆ ಮಾಡಲಾಗುತ್ತದೆ. ಭವಿಷ್ಯದಲ್ಲಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಇದು ನಮ್ಮ ಬೆಳೆಗಳನ್ನು ಮೇಲೆತ್ತಲಿದೆ.

ಸಮುದ್ರ ಪಾಚಿ ಅಥವಾ ಸೀ ವೀಡ್ (Seaweed) ಇದರ ಬಗ್ಗೆ ಈಗಾಗಲೇ ಬಹುತೇಕ ಕೃಷಿಕರಿಗೆ ಗೊತ್ತಾಗಿದೆ. ಬಹುತೇಕ ಗೊಬ್ಬರ ಮಾರಾಟಗಾರರಲ್ಲಿ ಇದು ಈಗ ಲಭ್ಯವಿದೆ. ಆದರೂ ಇದು ಇತರ NPK ಗೊಬ್ಬರಗಳಿಗೆ ಹೋಲಿಸಿದರೆ ಹೊಸತು.  ಹಾಗೆಂದು ಸಾಗರ ಪಾಚಿಯನ್ನು ಕೃಷಿಯಲ್ಲಿ, ಮಾನವ, ಪಶು ಆರೋಗ್ಯದಲ್ಲಿ ಬಳಕೆ ಮಾಡುವುದು ಸಾವಿರಾರು ವರ್ಷಗಳ ಹಿಂದೆಯೇ ಚೀನಾ, ಜಪಾನ್, ಆಮೇರಿಕಾ, ಯೂರೋಪ್ ರಾಷ್ಟ್ರಗಳಲ್ಲಿ ಇತ್ತು ಎಂಬ ಉಲ್ಲೇಖ ಇದೆ. ಹೆಚ್ಚಾಗಿ ಮಾನವ ಆರೋಗ್ಯ ರಕ್ಷಣೆಯಲ್ಲಿ ಇದರ ಬಳಕೆ ಹೆಚ್ಚು ಇತ್ತು. ಸಮುದ್ರ ಪಾಚಿಯನ್ನು ಕ್ಷಯ, ಸಂಧಿವಾತ, (arthritis) ಶೀತ, ಜ್ವರ ಮುಂತಾದ ರೋಗಗಳಿಗೆ ಬಳಕೆ ಮಾಡುತ್ತಿದ್ದರು. ಹಿಂದೆ ಇದು ಮನೆ ಮದ್ದಿನ ತರಹವೇ ಚಾಲ್ತಿಯಲ್ಲಿತ್ತು. ೧೯೯೦ರ ತರುವಾಯ ಇದರ ಬೇರೆ ಬೇರೆ ಗುಣಗಳನ್ನು ಸಂಶೊಧನಾತ್ಮಕವಾಗಿ ಗುರುತಿಸಿ, ಇದರಲ್ಲಿ ಸಾಗರ ಮೂಲದ ಬ್ಯಾಕ್ಟೀರಿಯಾ ಇರುವುದನ್ನು ಗುರುತಿಸಿದರು. ಇದರಷ್ಟು ಅಗ್ಗದ ಮೂಲ ವಸ್ತು ಬೇರೊಂದಿಲ್ಲದ ಕಾರಣ ಜಾಗತಿಕವಾಗಿ  ಔಷಧಿ ತಯಾರಿಕಾ ಉದ್ದಿಮೆಗಳು ಇದರ ಬಳಕೆಯನ್ನು ವ್ಯಾಪಕವಾಗಿ ಮಾಡಿಕೊಂಡವು. 

ಭಾರತ ಸರಕಾರದ ಪ್ರೋತ್ಸಾಹ: ನಮ್ಮ ದೇಶದಲ್ಲಿರುವ ಸುಮಾರು ೭೫೦೦ ಕಿಲೋ ಮೀಟರು ಸಮುದ್ರ ತೀರ ಪ್ರದೇಶಗಳಲ್ಲಿ ಕೆಲವು ಕಡೆಗಳಲ್ಲಿ ಈ ಸಾಗರ ಕಳೆ ನಿಕ್ಷೇಪ ಇದೆ. ಈ ಕಳೆಯಲ್ಲಿ ೨೭೧ ತಳಿಯ ೧೧೫೩ ವಿಧದ ಸಮುದ್ರ ಕಳೆಗಳಿವೆ ಎಂದು ಗುರುತಿಸಲಾಗಿದೆ. ಒಟ್ಟು ೯ ರಾಜ್ಯಗಳಲ್ಲಿ ( ಕರ್ನಾಟಕ, ಕೇರಳ, ಗೋವಾ, ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ಆಂಧ್ರ ಪ್ರದೇಶ, ಒಡಿಸ್ಸಾ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳು, ಲಕ್ಷದ್ವೀಪ ಇಲ್ಲೆಲ್ಲಾ ಸಮುದ್ರ ಪಾಚಿಯ ತಳಿಗಳು ಇವೆ. ಗುಜರಾತ್ ನಲ್ಲಿ ೧೭೦೦ ಕಿಲೋ ಮೀಟರ್ ಗೂ ಅಧಿಕ ಪ್ರದೇಶದಲ್ಲಿ ಈ ಕಳೆ ಇದೆ. ತಮಿಳುನಾಡು, ಆಂದ್ರ ಪ್ರದೇಶಗಳಲ್ಲಿ ೯೦೦ ಕಿಲೋ ಮೀಟರ್ ಗಳಷ್ಟು ಪ್ರದೇಶದಲ್ಲಿ ಇದೆ. ನಂತರ ಮಹಾರಾಷ್ಟ್ರ ಆ ಬಳಿಕ ಕೇರಳ, ಕರ್ನಾಟಕದ ಕಾರವಾರದಲ್ಲೂ ಈ ಕಳೆಯ ನಿಕ್ಷೇಪ ಇರುವುದನ್ನು ಪತ್ತೆ ಮಾಡಲಾಗಿದೆ. ಭಾರತ ಸರಕಾರದ ICAR-ಸೆಂಟ್ರಲ್ ಮೆರೈನ್ ಫಿಶರೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (CMFRI) ನ ಅಂದಾಜಿನ ಪ್ರಕಾರ, ಭಾರತವು ೨೦೨೧ರಲ್ಲಿ ಸುಮಾರು ೩೪,೦೦೦ ಟನ್ ಗಳಷ್ಟು ಕಡಲಕಳೆಗಳನ್ನು ಬೆಳೆಸಿದೆ. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ೨೦೨೫ ರ ವೇಳೆಗೆ ೧೧.೨ ಲಕ್ಷ ಟನ್‌ಗಳಿಗಿಂತ ಹೆಚ್ಚು ಉತ್ಪಾದನೆಯ ಗುರಿ ಹೊಂದಲಾಗಿದೆ. ಕಡಲಕಳೆ ಉತ್ಪಾದನೆಯನ್ನು ಉತ್ತೇಜಿಸಲು ಸರ್ಕಾರವು ಪ್ರತ್ಯೇಕವಾಗಿ ₹ ೬೪೦ ಕೋಟಿಯನ್ನು ಮೀಸಲಿಟ್ಟಿದೆ. ವರ್ಷಕ್ಕೆ ೯.೭ ಮಿಲಿಯನ್ ಟನ್ (ಆರ್ದ್ರ ತೂಕ) ಉತ್ಪಾದನಾ ಸಾಮರ್ಥ್ಯದೊಂದಿಗೆ ದೇಶದಲ್ಲಿ ಕಡಲಕಳೆ ಬೆಳೆಯಲು ಸಿಎಂಎಫ್‌ಆರ್‌ಐ ೩೪೨ ಸೂಕ್ತವಾದ ಕೃಷಿ ಸ್ಥಳಗಳನ್ನು ಜಿಯೋರೆಫರೆನ್ಸ್ ಮಾಡಿದೆ. ವಿದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಸಮುದ್ರ ಕಳೆಯ ಉತ್ಪಾದನೆ ತುಂಬಾ ಕಡಿಮೆ ಇದೆ. ಆದರೆ ಅವಕಾಶಗಳು ಹೇರಳವಾಗಿವೆ.  ಇದನ್ನು ಉನ್ನತ ಮಟ್ಟಕ್ಕೆ ತರಲು ಪ್ರಯತ್ನಗಳು ನಡೆಯುತ್ತಿವೆ.

ನಮ್ಮ ಕೃಷಿಗೆ ಇದೇ ಆಗಬೇಕು:  ಭಾರತ ದೇಶವು ಕೃಷಿ ಪ್ರಧಾನ ದೇಶ. ಇಲ್ಲಿರುವ ಕೃಷಿ ಭೂಮಿ ದೊಡ್ದದು. ಹಾಗಾಗಿ ಇಲ್ಲಿಗೆ ಸಾಧಾರಣ ಪ್ರಮಾಣದ ಬೆಳೆ ಪೋಷಕ ಸಾಕಾಗಲಾರದು. ಅದಕ್ಕೆ ಸಾಗರವೇ ಆಗಬೇಕು. ಸಾಗರದ ನಿರುಪಯುಕ್ತ ಕಳೆ ಗೊಬ್ಬರವಾದರೆ ಅದಕ್ಕೆ ಯಾರ ಅವಲಂಬನೆಯೂ ಇರಲಾರದು ಎಂಬುದು ನಮ್ಮ ಪ್ರಧಾನ ಮಂತ್ರಿಗಳ ಆಶಯ. ಸಮುದ್ರ ಕಳೆಗಳಿಂದ ಬರೇ ಗೊಬ್ಬರ ಮಾತ್ರವಲ್ಲ. ಆಹಾರ, ಕಾಸ್ಮೆಟಿಕ್ಸ್, ಔಷಧ ಉದ್ಯಮ ಅವಲಂಭಿತವಾಗಿದೆ. ಇದರಲ್ಲಿ Antioxidant activities, Antiviral activity, Antibiotic activity, Cellular growth activity, Antidiabetic activity, anticancer agents, Anti-inflammatory property, Antimicrobial and antifungal activity, Goitre treatment , Antitumor activity , Anti-ulcer wound healing and hepatoprotective activities ಇದೆ ಎಂಬುದಾಗಿ ಪತ್ತೆ ಮಾಡಲಾಗಿದೆ.

ಕೃಷಿಯಲ್ಲಿ ಸಮುದ್ರ ಕಳೆ ಉಪಯೋಗ: ಸಮುದ್ರ ಕಳೆ ಎಂಬುದು ಬಹುಬಗೆಯ ಪೋಷಕಗಳು ಒಳಗೊಂಡ ಒಂದು ನೈಸರ್ಗಿಕ ಮೂಲವಸ್ತು. ಇದರಲ್ಲಿ ಸೂಕ್ಷ್ಮ ಪೊಷಕಾಂಶಗಳು,  ಬೆಳವಣಿಗೆ ಪ್ರಚೋದಕ ಹಾರ್ಮೋನುಗಳು(GA), ಪೊಟ್ಯಾಶಿಯಂ. ಸಾರಜನಕ ಮತ್ತು ಹ್ಯೂಮಿಕ್ ಅಸಿಡ್ ಇರುತ್ತದೆ. ಇಷ್ಟೊಂದು ಬಗೆಯ ಸಸ್ಯ ಪೊಷಕಗಳು ಉಳಿದ ಯಾವುದೇ ನೈಸರ್ಗಿಕ ಮೂಲವಸ್ತುವಿನಲ್ಲಿ  ಇಲ್ಲದ ಕಾರಣ ಇದಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗಿದೆ. ಇದರ ಜೊತೆಗೆ ಜೀವಾಣುಗಳನ್ನು ಸೇರಿಸಲಿಕ್ಕೆ ಆಗುತ್ತದೆ. ಇದು ಮಣ್ಣಿನ ಜೀವಾಣುಗಳ ಚಟುವಟಿಕೆಯನ್ನು ಹೆಚ್ಚಿಸುತ್ತದೆ. ಉತ್ಕೃಷ್ಟ ಗುಣಮಟ್ಟದ ಫಲ ಸಿಗುತ್ತದೆ ಎನ್ನುತ್ತಾರೆ. ಕೆಲವು ಅಧ್ಯಯನಕಾರರು ಈ ವಸ್ತುವನ್ನು ಮಣ್ಣಿಗೆ ಸೇರಿಸುವುದರಿಂದ  ಮಣ್ಣಿನಲ್ಲಿ ಕೆಲವು ಕರಗದ ಘನ ಲೋಹಗಳು ಹಾಗೂ ನಂಜುಕಾರಕ (Toxic elements) ಗಳನ್ನು ಕರಗಿಸುತ್ತವೆ ಎಂದಿದ್ದಾರೆ. ಇದರಲ್ಲಿ ಮಣ್ಣಿನ ಜೀವಾಣುಗಳಿಗೆ, ಪ್ರಾಣಿ ಪಕ್ಷಿಗಳಿಗೆ ಹಾಗೂ ಬೇಸಾಯ ಮಾಡುವವರಿಗೆ ಯಾವುದೇ ಹಾನಿ ಇರುವುದಿಲ್ಲ. ಎಲ್ಲಾ ಸಮುದ್ರ ಕಳೆಗಳೂ ಗೊಬ್ಬರವಾಗುವುದಿಲ್ಲ. ಕೆಲವೇ ಕೆಲವು ಆಯ್ದ ಪ್ರದೇಶಗಳಲ್ಲಿ ಇರುವಂತದ್ದು ಮಾತ್ರ ಬಳಕೆಗೆ ಯೋಗ್ಯ. ಅದೇ ರೀತಿ ಕೆಲವು ಆಹಾರ ಬಳಕೆಗೆ, ಕೆಲವು ಫೀಡ್ ತಯಾರಿಕೆಗೆ ಕೆಲವು ಔದ್ಯಮಿಕ ಬಳಕೆಗೆ ಮತ್ತು ಔಷಧೀಯ ಬಳಕೆಗೆ ಮಾತ್ರ ಸೀಮಿತವಾಗಿರುತ್ತದೆ.

ಇವೆಲ್ಲಾ ಬಗೆಯವು ಗೊಬ್ಬರಕ್ಕೆ ಸೂಕ್ತ:

Sargassum cinereum, Sargassum  ilicifolium, Colpomenia sinuosa, Spatoglossum asperum, Padina tetrastromatica,  Stoechospermum Marginatum, Chaetomorpha media, Laurencia papillosa, Dictyopteris australis , Amphiroa fragilissima, Macrocystis pyrifera, Hydroclathrus clathratus ಈ ತಳಿಗಳ ಕಳೆಗಳು ಮಾತ್ರ ಬೆಳೆಪೋಷಕವಾಗಿ ಬಳಕೆ ಮಾಡಲು ಯುಕ್ತವಾದದ್ದು. ಈ ಕಳೆಗಳಲ್ಲಿ ಕೆಲವು ಕಂದು, ಹಸುರು, ಮತ್ತು ಕೆಂಪು ಬಣ್ಣದಲ್ಲಿರುತ್ತದೆ.

ಮಾರುಕಟ್ಟೆಯಲ್ಲಿ ಸಮುದ್ರ ಪಾಚಿಯ ಬೇರೆ ಬೇರೆ ರೂಪದ ಬೆಳೆ ಪೊಷಕಗಳು ಲಭ್ಯ. ಇತ್ತೀಚೆಗೆ ನಮ್ಮಲ್ಲಿ ಕೆಲವು ಜೈವಿಕ ಪೊಷಕಗಳೆಂದು ಕ್ಯಾನು, ಟಿನ್ನು ಗಳಲ್ಲಿ ನೆಟ್ವರ್ಕ್ ಮಾರ್ಕೆಟ್ಟಿಂಗ್ ಮೂಲಕ ಮಾರಾಟ ಮಾಡುವವರು ಇದನ್ನು ತಪ್ಪದೆ ಬಳಸಿರುತ್ತಾರೆ. ಇದು ಒಂದು ಇದ್ದರೆ ಬಳಸಿದಾಗ ಫಲ ತೋರಿಸಿಕೊಡುತ್ತದೆ.

ಸಾದಾರಣವಾಗಿ ಕಪ್ಪು ಬಣ್ಣದಲ್ಲಿ  ಸಿಗುತ್ತದೆ. ಸಂಸ್ಕರಣೆ ಮಾಡುವಾಗ ಬೇಕಾದ ಬಣ್ಣವನ್ನು ಸೇರಿಸಬಹುದು. ಇದನ್ನು ಕೆಲವರು ಹರಳು ರೂಪದಲ್ಲಿ, ಕೆಲವರು ಪುಡಿ ರೂಪದಲ್ಲಿ ಮತ್ತೆ ಕೆಲವರು ಜೆಲ್ ರೂಪದಲ್ಲಿ ತಯಾರಿಸಿ ಮಾರಾಟ ಮಾಡುತ್ತಾರೆ.  ಕೆಲವರು ಇನ್ನೂ ಕೆಲವು ಸಸ್ಯ ಪೋಷಕಗಳ ಜೊತೆಗೆ ಬ್ಲೆಂಡ್ ಮಾಡಿ ತಯಾರಿಸುತ್ತಾರೆ. ಕೃತಕವಾಗಿ ಬೆಳೆಯುತ್ತಾರೆ.  

ಸಮುದ್ರದಲ್ಲಿ ಕೆಲವು ಕಡೆ ತೀರ ಪ್ರದೇಶಗಳಲ್ಲಿ ಬಂಡೆಗಳಿಗೆ ಅಂಟಿಕೊಂಡು ಇರುತ್ತವೆ. ಇನ್ನು ಕೆಲವು ಆಳದಲ್ಲಿ ಇರುತ್ತವೆ. ಒಂದು ಮುತ್ತಿನ ಕಥೆ ಸಿನೆಮಾ ನೋಡಿದವರಿಗೆ ಸಾಗರದ ಆಳದಲ್ಲಿ ಏನೇನು ಸಸ್ಯಗಳು ಇರುತ್ತವೆ ಎಂಬ ಒಂದು ಚಿತ್ರಣ  ನೆನಪಿಗೆ ಬರಬಹುದು. ಬೇರೆ ಬೇರೆ ನಮೂನೆಯ ಸಮುದ್ರ ಸಸ್ಯಗಳು ಇರುತ್ತವೆ. ಇದನ್ನು  ತೀರ ಪ್ರದೇಶಗಳಲ್ಲಿ ಕೆಲವು  ರಕ್ಷಣಾ ವ್ಯವಸ್ಥೆಗಳನ್ನು ಮಾಡಿ ಬೆಳೆಸುತ್ತಾರೆ. ನಮ್ಮ ದೇಶದಲ್ಲಿ ಇದರ ಉತ್ಪಾದನೆಗೆ ನುರಿತ ಕೆಲಸಗಾರರು ಇಲ್ಲದೆ, ಕೆಲಸಗಾರರ ದುಬಾರಿ ವೇತನದಿಂದಾಗಿ ನಾವು ಹಿಂದುಳಿದಿದ್ದೇವೆ. ತಮಿಳುನಾಡಿನ ರಾಮೇಶ್ವರಂ, ರಾನಿಪೆಟ್ ಇಲ್ಲಿ ಇದನ್ನು ಬೆಳೆಸುತ್ತಾರೆ. ಹಾಗೆಯೇ ಗುಜರಾತ್ ಮತ್ತು ಒಡಿಸ್ಸಾದಲ್ಲೂ ಬೆಳೆಸುತ್ತಾರೆ.

ವಿದೇಶದ ತಯಾರಿಕೆಗಳದ್ದೇ ಮೇಲುಗೈ: ನಮ್ಮ ದೇಶದಲ್ಲಿ ಸಮುದ್ರ ಪಾಚಿಯ ಉತ್ಪಾದನೆ ನಡೆಯುತ್ತಿದ್ದರೂ, ನಮ್ಮಲ್ಲಿಗೆ ಗರಿಷ್ಟ ಪ್ರಮಾಣದಲ್ಲಿ ರಪ್ತು ಆಗುವುದೇ ಹೆಚ್ಚು. ಈಗ ನಮ್ಮ ಮಾರುಕಟ್ಟೆಯಲ್ಲಿ  ಚೈನಾ ಮೂಲದಿಂದ ಬರುವ ಸಮುದ್ರ ಪಾಚಿ ಪ್ರಮಾಣ ಹೆಚ್ಚು. ಇದಲ್ಲದೆ, ಜರ್ಮನಿ, ಕೊರಿಯಾ, ಇಟಲಿ ಅಮೆರಿಕಾ ಇಲ್ಲೆಲ್ಲಾ ಇದನ್ನು ತಯಾರಿಸಿ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಭಾರತಕ್ಕೆ ರಪ್ತು ಮಾಡುತ್ತಾರೆ. ನಮ್ಮಲ್ಲಿ ಇದರ ಉತ್ಪಾದನೆ ಹೆಚ್ಚಾದರೆ ಮುಂದೆ ನಾವು ಸ್ವಾವಲಂಬಿಗಳಾಗಬಹುದು.

ಸಮಸ್ಯೆಗಳು: ಇದು ಹೆಚ್ಚಿನವರಿಗೆ ಮೂಲ ಗೊತ್ತಿಲ್ಲದ ವಸ್ತುವಾಗಿರುತ್ತದೆ. ಇದರಲ್ಲಿ  ಸತ್ವಾಂಶಗಳು ಇದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ ತಯಾರಕರು ಯಾವ ಮೂಲವಸ್ತುವನ್ನು  ಬಳಸಿರುತ್ತಾರೆ, ಇದು ನಿರುಪಯುಕ್ತವಾದ ವಸ್ತುವೇ, ಇವೆಲ್ಲಾ ನಮಗೆ ಗೊತ್ತಾಗುವುದಿಲ್ಲ. ಇದರ ಮಾರಾಟಕ್ಕೆ, ಗುಣಮಟ್ಟ ಪರೀಕ್ಷೆಗೆ ಯಾವ ವ್ಯವಸ್ಥೆಗಳೂ ಇಲ್ಲದ ಕಾರಣ ರೈತರಿಗೆ ಸ್ವಲ್ಪ ಗೊಂದಲಗಳಿವೆ. ಸಮುದ್ರ ಪಾಚಿ ಗೊಬ್ಬರದಲ್ಲಿ ಉತ್ತಮ ಸಾರಗಳಿವೆ.  ನಾಯಿಕೊಡೆಗಳಂತೆ ಈ ಗೊಬ್ಬರ ಪೂರೈಕೆ ಮಾಡುವವರು ಈಗಾಗಲೇ ಸೃಷ್ಟಿಯಾಗಿದ್ದಾರೆ. ಹಾಗೆಂದು ಎಲ್ಲಾ ಉತ್ಪನ್ನಗಳಲ್ಲೂ ಇದು ಇದೆ ಎಂದು ಹೇಳುವಂತಿಲ್ಲ. ಒಮ್ಮೆ ಬಳಕೆ ಮಾಡಿ ಅದರಿಂದ ಪ್ರತಿಫಲ ಉತ್ತಮವಾಗಿ ಕಂಡರೆ ಅದನ್ನು ಮುಂದುವರಿಸುವುದು ಸೂಕ್ತ.

ಚಿತ್ರ ಮತ್ತು ಮಾಹಿತಿ : ರಾಧಾಕೃಷ್ಣ ಹೊಳ್ಳ