ಸಮೂಹ ಸನ್ನಿಗೆ ಒಳಗಾಗಿರುವ ಬಹಳಷ್ಟು ಜನರು...

ಸಮೂಹ ಸನ್ನಿಗೆ ಒಳಗಾಗಿರುವ ಬಹಳಷ್ಟು ಜನರು...

ಇದು ನಿಜವಾದ ಆಕ್ರೋಶವೋ, ರಾಜಕಾರಣಿಗಳ ಚುನಾವಣಾ ತಂತ್ರಗಾರಿಕೆಯೋ, ದೇಶದ ನಿಜವಾದ ಪ್ರಗತಿಯ ಬದಲಾವಣೆಯೋ, ವಿನಾಶ ಕಾಲದ ವಿಪರೀತ ಬುದ್ದಿಯೋ ಕಾಲ ನಿರ್ಧರಿಸುತ್ತದೆ. ಆದರೆ ಸಾಮಾನ್ಯ ಜನರೊಂದಿಗೆ ಸಾಕಷ್ಟು ಬುದ್ದಿವಂತರು, ವಿದ್ಯಾವಂತರು, ಪ್ರೊಫೆಸರ್‌ ಗಳು, ವೈದ್ಯರು, ವಕೀಲರು, ಶಿಕ್ಷಕರು, ನಟನಟಿಯರು, ನಿವೃತ್ತ ಅಧಿಕಾರಿಗಳು, ಹಿರಿಯರು, ಯುವಕರು, ಹೋರಾಟಗಾರರು ಮುಂತಾದ ಅನೇಕ ಜನ ಹಿಜಾಬ್ ಕಾಶ್ಮೀರ ರಷ್ಯಾದ ಯುದ್ದ ಮುಂತಾದ ವಿಷಯಗಳಲ್ಲಿ ತುಂಬಾ ಭಾವನಾತ್ಮಕವಾಗಿ ಇತಿಹಾಸ ಅವರುಗಳಿಗೆ ತುಂಬಾ ಅನ್ಯಾಯ ಮಾಡಿದೆ, ಇತಿಹಾಸವನ್ನು ತಿರುಚಲಾಗಿದೆ. ಈಗ ನಿಜವಾದ ಇತಿಹಾಸ ಹೊರಬರುತ್ತಿದೆ ಎಂದು ತುಂಬಾ ಗಂಭೀರವಾಗಿ ಹೇಳುತ್ತಿದ್ದಾರೆ. ಇದು ಸಮೂಹ ಸನ್ನಿಯಾಗಿ ಮಾರ್ಪಟ್ಟು ಮಾಧ್ಯಮ ಮತ್ತು ‌ಸಾಮಾಜಿಕ ಜಾಲತಾಣಗಳಲ್ಲಿ ಇಡೀ ದೇಶವೇ ಈ ರೀತಿ ಪ್ರತಿಕ್ರಿಯಿಸುತ್ತಿದೆ ಎಂಬಂತೆ ಭಾಸವಾಗುತ್ತಿದೆ.

ಬಹುಶಃ ಈಗೇನಾದರೂ ನಮ್ಮ ಪ್ರಧಾನಿಗಳು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಯುದ್ಧ ಮಾಡಿದರೆ ಬಹುತೇಕ ಜನ ಬೆಂಬಲ ಅವರಿಗೆ ದೊರೆಯಬಹುದು. ನೆಪೋಲಿಯನ್ ಕಾಲದ ಫ್ರಾನ್ಸ್, ಹಿಟ್ಲರ್ ಕಾಲದ ಜರ್ಮನಿ, ಸ್ಟಾಲಿನ್ ಕಾಲದ ರಷ್ಯಾ, ಎರಡನೇ ಮಹಾಯುದ್ದ ಕಾಲದ ಜಪಾನ್, ಈಗಿನ ಪುಟಿನ್ ಕಾಲದ ರಷ್ಯಾದಂತ  ಸನ್ನಿವೇಶ ಭಾರತದಲ್ಲಿ ಉದ್ಭವವಾದಂತೆ ಕಾಣುತ್ತಿದೆ. ಇಡೀ ದೇಶ ಒಬ್ಬ ನಾಯಕನನ್ನು ದೈವತ್ವಕ್ಕೇರಿಸಿ ಆತನ ಹಿಂದೆ ಬಲವಾಗಿ ನಿಂತಿದೆ. ಅದರ ವಿರುದ್ಧ ಧ್ವನಿಗಳು ಈಗ ಕ್ಷೀಣಿಸಿವೆ.

ಇದನ್ನೇ ಹೇಳಿದ್ದು ಇದು ತುಂಬಾ ಒಳ್ಳೆಯ ಬೆಳವಣಿಗೆಯೂ ಆಗಬಹುದು ಅಥವಾ ವಿನಾಶದ ಮಾರ್ಗವೂ ಆಗಬಹುದು. ರೋಟಿ, ಕಪಡಾ, ಮಕಾನ್ ನಿಂದ ಪ್ರಾರಂಭವಾದ ಭಾರತದ ಸ್ವಾತಂತ್ರ್ಯ ನಂತರದ ಮತದಾರನ ಆದ್ಯತೆಗಳು ಮುಂದೆ ಪಾನಿ, ಬಿಜಲಿ, ಘರ್ ಎಂದು ಬದಲಾಯಿತು. ಅನಂತರ ಶಿಕ್ಷಣ್, ಉದ್ಯೋಗ್, ಆರೋಗ್ಯ್, ರೋಡ್ ಡೆವಲಪ್ಮೆಂಟ್ ಎಂದಾಯಿತು. ತದನಂತರ ಆರ್ಟಿಐ, ಆರ್ಟಿಇ, ಭ್ರಷ್ಟಾಚಾರ್, ಲೋಕಪಾಲ್ ಇತ್ಯಾದಿಗಳು ಪ್ರಮುಖ ಆದ್ಯತೆಗಳಾದವು. ಈಗ ಭದ್ರತೆ, ಭಯೋತ್ಪಾದನೆ, ಅಯೋಧ್ಯೆ, ವಾರಣಾಸಿ, ಗಂಗಾಶುದ್ದಿ, ತಲ್ಲಾಖ್ ಹಿಜಾಬ್ ಜೊತೆಗೆ ಡಿಜಿಟಲ್ ಇಂಡಿಯಾ, ಸ್ಮಾರ್ಟ್ ಸಿಟಿ, ವಿಶ್ವಗುರು ಮುಂತಾದ ಆದ್ಯತೆಗಳು ನಮ್ಮನ್ನು ಆವರಿಸಿದೆ.

ಈಗ ಯೋಚಿಸುವ ಸರದಿ ನಮ್ಮೆಲ್ಲರದು. ಸಾಗುತ್ತಿರುವ ಹಾದಿ ಒಳ್ಳೆಯದೋ ಕೆಟ್ಟದ್ದೋ ವಿನಾಶವೋ ಭಾರತಾಂಬೆಯ ಮಡಿಲ ಮಕ್ಕಳಾಗಿ ಯೋಚಿಸಿ. ಅಮೂಲಾಗ್ರವಾಗಿ ಪರಿಶೀಲಿಸಿ.  ದೇಶದ ಹಿತಾಸಕ್ತಿ  ಗಮನದಲ್ಲಿಟ್ಟುಕೊಂಡು ಅಭಿಪ್ರಾಯ ವ್ಯಕ್ತಪಡಿಸಿ. ಇತಿಹಾಸದಲ್ಲಿ ಒಂದಷ್ಟು ಒಳ್ಳೆಯದು ಒಂದಷ್ಟು ಕೆಟ್ಟದ್ದು ಎಲ್ಲವೂ ಆಗಿದೆ. ಇಲ್ಲಿ ನಮಗೆ ಬೇಕಾದಷ್ಟು ಮಾತ್ರ ಆಯ್ಕೆ ಮಾಡಿಕೊಂಡು ಚರ್ಚಿಸುವುದು ತಪ್ಪಾಗುತ್ತದೆ. ನೋವಿನ ಕಹಾನಿ ಹೇಳ ಹೊರಟರೆ ಅದಕ್ಕೆ ಕೊನೆಯೇ ಇರುವುದಿಲ್ಲ.

ಇತಿಹಾಸದಲ್ಲಿ ಯಾರ್ಯಾರಿಗೆ ಅನ್ಯಾಯವಾಗಿದೆಯೋ ಅದನ್ನು ವರ್ತಮಾನದಲ್ಲಿ ಸರಿಪಡಿಸೋಣ. ಸತ್ತವರನ್ನು ಮತ್ತೆ ಮರಳಿ ಪಡೆಯಲು ಸಾಧ್ಯವಿಲ್ಲ. ಕನಿಷ್ಠ ಬದುಕಿರುವವರು ಪುನರ್ವಸತಿ ಕಲ್ಪಿಸಲು ಪ್ರಯತ್ನಿಸೋಣ. ಸರ್ಕಾರದ ಹಣ ಮತ್ತು ಸಾರ್ವಜನಿಕರ ಸಹಾಯ ಪಡೆದು ಈ ಕೆಲಸ ಮಾಡೋಣ. ಕಾಶ್ಮೀರ ಪಂಡಿತರೇ ಇರಲಿ, ಭೂಪಾಲ್ ಅನಿಲ ದುರಂತದಲ್ಲಿ ಗಾಯಾಳುಗಳಾದವರೇ ಇರಲಿ, ಸಿಖ್ ನಿರಾಶ್ರಿತರೇ ಇರಲಿ, ಗುಜರಾತ್ ದಾಳಿಗೊಳಗಾದವರೇ ಇರಲಿ, ಅಸ್ಪೃಶ್ಯತೆಯ ಅನ್ಯಾಯಕ್ಕೆ ಒಳಗಾದವರೇ ಇರಲಿ ಪಕ್ಷಪಾತ ಬೇಡ. ಹಿಂಸೆ ಹಿಂಸೆಯೇ. ರೂಪಗಳು ಕಾರಣಗಳು ಬೇರೆ ಇರಬಹುದು.

ಅದು ಬಿಟ್ಟು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದರೆ ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ವಿಧಿಸಿದಂತಾಗುತ್ತದೆ. ಇದು ಎಲ್ಲಾ ವಿಷಯಗಳಿಗು ಅನ್ವಯ. ದಯವಿಟ್ಟು ಉದ್ವೇಗಕ್ಕಿಂತ ನಿಯಂತ್ರಿತ ಮನಸ್ಥಿತಿ ಉತ್ತಮ. ಇಲ್ಲದಿದ್ದರೆ ಮುಂದೆ ತುಂಬಾ ಪಶ್ಚಾತ್ತಾಪ ಪಡಬೇಕಾಗುತ್ತದೆ. ವಿಶ್ವ ಇತಿಹಾಸ ಮತ್ತು ಅದು ಸಾಗಿಬಂದ ದಿಕ್ಕುಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿದರೆ ಖಂಡಿತ ಈ ಮುನ್ಸೂಚನೆ ನಿಮಗೆ ದೊರೆಯುತ್ತದೆ. ಈ ಕ್ಷಣದ ಯಶಸ್ಸಿನ ಭಾವನೆಗಳಲ್ಲಿ ತೇಲಿದರೆ ಭವಿಷ್ಯ ಕಾಣುವುದಿಲ್ಲ.

ಯೋಚಿಸಿ ಮತ್ತೆ ಮತ್ತೆ ಯೋಚಿಸಿ. ಇದು ಯಾರ ಪರ ಅಥವಾ ವಿರುದ್ದವೂ ಅಲ್ಲ. ಭಾರತ ದೇಶ ಮತ್ತು ಇಲ್ಲಿನ ಜನರ ಹಿತಾಸಕ್ತಿಯ ಆಶಯ ಮಾತ್ರ. ಅದಕ್ಕಾಗಿಯೇ ಎಲ್ಲಾ ಟೀಕೆಗಳ ಮಧ್ಯೆ ‌ಸತ್ಯ ಮತ್ತು ವಾಸ್ತವದ ಹುಡುಕಾಟ. ಹೇಳಲಾಗದ ಇನ್ನೂ ಅನೇಕ ವಿಷಯಗಳಿವೆ. ಮುಂದೆ ಆ ಬಗ್ಗೆ ಚರ್ಚಿಸೋಣ...

-ವಿವೇಕಾನಂದ ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ