ಸಮೃದ್ಧಿಯ ಸಂಕೇತ ಸಂಕ್ರಾಂತಿ ಹಬ್ಬ

ಸಮೃದ್ಧಿಯ ಸಂಕೇತ ಸಂಕ್ರಾಂತಿ ಹಬ್ಬ

ನಾವು ಜ್ಯೋತಿಷ್ಯದ ತಳಹದಿ ಹಾಗೂ ವೈಜ್ಞಾನಿಕ ನೆಲೆಗಟ್ಟಿನಡಿಯಲ್ಲಿ ನೋಡುವುದಾದರೆ, ಸೂರ್ಯ ಭಗವಾನನ ಪಥದ ಬದಲಾವಣೆ. ದಕ್ಷಿಣದಿಂದ ಉತ್ತರ ದಿಕ್ಕಿಗೆ ಮುಖ ಮಾಡುವುದೇ ಉತ್ತರಾಯಣ ಪುಣ್ಯಕಾಲ ಎನ್ನುತ್ತಾರೆ. ದಕ್ಷಿಣಾಯನದಿಂದ ಉತ್ತರಾಯಣಕ್ಕೆ ದಿನಕರನ ಪಥ ಬದಲಾವಣೆ. ಈ ಸಮಯದಲ್ಲಿ ದೀರ್ಘರಾತ್ರಿಯಿಂದ ದೀರ್ಘ ಹಗಲಿನೆಡೆಗೆ ಭಾಸ್ಕರನ ಪಯಣ. 

ಹಗಲಿರುಳೂ ನಿರಂತರ ತನ್ನ ಕಾಯಕವನ್ನು ನಿಷ್ಠೆಯಿಂದಗೈಯುವ ಸೂರ್ಯನೆಂಬ ಪ್ರಜ್ವಲಿಸುವ ನಕ್ಷತ್ರ ಜಗಕೆಲ್ಲ ಮಾದರಿ ಎಂದರೂ ತಪ್ಪಾಗಲಾರದು. ಸಂಕ್ರಾಂತಿ ಸಮೃದ್ಧಿಯ ಸಂಕೇತ. ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಕಾಲ ಮಕರ ಸಂಕ್ರಮಣ. ಇದನ್ನು ಉತ್ತರಾಯಣ ಪುಣ್ಯ ಕಾಲವೆಂದು ಹೇಳುತ್ತಾರೆ. ಇದು ದೇವತೆಗಳ ಕಾಲವಂತೆ. ಸೂರ್ಯನ ಶಾಖ ಭೂಮಿಗೆ ಹೆಚ್ಚಾಗಿ ಬೀಳುತ್ತದೆ. ಮುಂದೆ ಬೇಸಿಗೆ ಕಾಲ. ಇನ್ನು ವಸಂತಕಾಲದ ಅನುಭವವಾಗುತ್ತದೆ. ಎಲ್ಲೆಲ್ಲೂ ಹಸಿರ ಸಿರಿ, ಪ್ರಕೃತಿಯ ಸುಂದರ ದೃಶ್ಯ, ಚಿಗುರಿನ ಗೊಂಚಲು ಮನಸ್ಸಿಗೆ ಮುದವನ್ನು ನೀಡುತ್ತದೆ.

ಪುರಾಣದ ಹಿನ್ನೆಲೆಯನ್ನು ಓದಿದರೆ ಇಚ್ಛಾ ಮರಣಿಯಾದ ಭೀಷ್ಮ ಪಿತಾಮಹರು ಉತ್ತರಾಯಣವನ್ನೇ ಕಾದು ದೇಹತ್ಯಾಗ ಮಾಡಿದರೆಂದು ಉಲ್ಲೇಖವಿದೆ. ಸಂಕ್ರಾಂತಿಯ ನಂತರ ಚಳಿಯ ಪ್ರಭಾವ ಕಡಿಮೆಯಾಗಿ ಬೇಸಿಗೆಯ ಆರಂಭ. ದಕ್ಷಿಣ ಭಾರತದಲ್ಲಿ ಆಚರಿಸುವ ಸಂಭ್ರಮದ ಹಬ್ಬವಿದು. ಕೇರಳ, ಕರ್ನಾಟಕ, ತಮಿಳ್ನಾಡು ರಾಜ್ಯಗಳಲ್ಲಿ ‘ಮಕರ ಸಂಕ್ರಮಣ’ ಸಂಭ್ರಮ ಸಡಗರದ ಹಬ್ಬವಾಗಿದೆ. ಕರ್ನಾಟಕದಲ್ಲಿ ‘ಸುಗ್ಗಿ ಹಬ್ಬ’ ವಾಗಿಯೂ ಕೆಲವೆಡೆ ಆಚರಣೆಯಿದೆ. ಕಟಾವು ಮಾಡಿ ಕಷ್ಟಪಟ್ಟು ಬೆಳೆಸಿದ ದವಸಧಾನ್ಯ ರಾಶಿ ಹಾಕುವ ಸುಗ್ಗಿ ಸಮಯವಿದು. ಮುಖ್ಯವಾಗಿ ‘ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತನಾಡಿ’ ಎಂಬ ಧ್ಯೋತಕ. ಹೆಣ್ಣು ಮಕ್ಕಳು ಹೊಸ ದಿರಿಸುಗಳನ್ನು ಧರಿಸಿಕೊಂಡು ಹುರಿದ ಎಳ್ಳು, ಬೆಲ್ಲ, ಕೊಬ್ಬರಿ ತುಂಡು, ಸಕ್ಕರೆ ಉಪ್ಪುಅಚ್ಚು, ಹುರಿಗಡಲೆ, ನೆಲಗಡಲೆ, ಬಿಳಿಎಳ್ಳು(ಹೆಚ್ಚಾಗಿ) ನೆರೆಕರೆಯ ಮನೆಗಳಿಗೆ ಪರಸ್ಪರ ಹಂಚಿಕೊಂಡು ಸಂತಸ ಪಡುತ್ತಾರೆ. ಉ.ಕರ್ನಾಟಕದಲ್ಲಿ ಗಾಳಿಪಟ ಹಾರಿಸುವ ಸಂಪ್ರದಾಯವೂ ಇದೆ. ಹಾಗೆಯೇ ಗುಡಿಸಿ ಸಾರಿಸಿ ಬಣ್ಣ ಬಣ್ಣದ ರಂಗವಲ್ಲಿ ಹಾಕುವ ಸಂಪ್ರದಾಯವೂ  ಇದೆ.

ರೈತಾಪಿ ಜನರು ತಮ್ಮ ಜೀವನದ ಅವಿಭಾಜ್ಯ ಅಂಗವಾದ ಎತ್ತು ಹಸು ಪಶುಸಂಪತ್ತುಗಳನ್ನು ಸಿಂಗರಿಸಿ, ಕೋಡುಗಳಿಗೆ ಬಣ್ಣಹಚ್ಚಿ ಮೆರೆಯುತ್ತಾರೆ. ಸಿಂಗರಿಸಿ ಮೆರವಣಿಗೆ ಮಾಡುವುದೂ ಇದೆ. ಹಳ್ಳಿಗಳಲ್ಲಿ ತಮ್ಮಜೀವನಾಡಿಯಾದ ಎತ್ತುಗಳಿಗೆ ದೃಷ್ಟಿಯಾಗದಂತೆ ‘ಕಿಚ್ಚು ಹಾಯಿಸುವ ಪದ್ಧತಿ’ ಸಹ ಇದೆ. ಗುಜರಾತ್, ಮಹಾರಾಷ್ಟ್ರಗಳಲ್ಲಿ ಗಾಳಿಪಟ ಹಾರಿಸುವ ಸಂಪ್ರದಾಯವಿದೆ.

ತಮಿಳುನಾಡಿನಲ್ಲಿ ನಾಲ್ಕು ದಿನಗಳ ಕಾಲ ಸಂಭ್ರಮದಿ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಾರೆ. ಭೋಗಿ, ನವನವೀನ ವಸ್ತ್ರಗಳ ತೊಡುಗೆಗಳು, ಸಮೃದ್ಧಿಯ ಪ್ರತೀಕವಾಗಿ ಹಾಲು-ಬೆಲ್ಲ ಕುದಿಸಿ ಉಕ್ಕಿಸುವುದು, ಪೊಂಗಲ್ ವಿಶೇಷ. ಕೆಲವೆಡೆ ‘ಜಲ್ಲಿಕಟ್ಟು’(ಗೂಳಿಪಳಗಿಸುವ ಆಟ) ಮನರಂಜನೆ ಏರ್ಪಡಿಸುತ್ತಾರೆ. ಗೋಸಂಪತ್ತು ವೃದ್ಧಿಗಾಗಿ ‘ಗೋಪೂಜೆ’ ಇಟ್ಟುಕೊಳ್ತಾರೆ.

ಇದೇ ದಿನ ಕೇರಳದ ಶಬರಿಮಲೆಯಲ್ಲಿ ‘ಮಕರ ಜ್ಯೋತಿ’ ಕಾಣಿಸುತ್ತದೆ. ವ್ರತವನ್ನು ಕೈಗೊಂಡು ಅಯ್ಯಪ್ಪಸ್ವಾಮಿಯ ದಿವ್ಯದರ್ಶನಕ್ಕೆ ಲಕ್ಷಗಟ್ಟಲೆ ಭಕ್ತಾದಿಗಳು ಹೋಗುತ್ತಾರೆ. ವೈಜ್ಞಾನಿಕ ಕಾರಣಗಳೇನೇ ಇರಲಿ. ನಂಬಿಕೆ, ಶ್ರದ್ಧೆ, ಸೇವೆ ಮುಖ್ಯ. ಕರ್ನಾಟಕದಲ್ಲಿ ಸುಗ್ಗಿ ಕಟಾವು ಮಾಡಿ ರಾಶಿ ಹಾಕಿ ಪೂಜೆ ಮಾಡುತ್ತಾರೆ. ಸಂಪ್ರದಾಯದ ವರ್ಗಾವಣೆ, ಸುಗ್ಗಿಯ ಕಷ್ಟಗಳನ್ನೆಲ್ಲ ಮರೆತು, ಬೆಳೆ ಮನೆಗೆ ಬಂದ ಸಂತಸ ಈ ಹಬ್ಬದಲ್ಲಿ ಕಾಣಬಹುದು. ಸ್ವರ್ಗದ ಬಾಗಿಲು ಉತ್ತರಾಯಣದಲ್ಲಿ ಈ ದಿನ ತೆರೆಯುತ್ತಾರೆಂದು ಪೌರಾಣಿಕ ಹಿನ್ನೆಲೆ. ಈ ಪುಣ್ಯಕಾಲದಲ್ಲಿ ಗಂಗಾ ಯಮುನಾ ಸಂಗಮ ಸ್ಥಳ ಪ್ರಯಾಗದಲ್ಲಿ  ಪುಣ್ಯ ಸಮುದ್ರಸ್ನಾನ, ಕುಂಭ ಮೇಳ ಮಾಡುವುದೂ ಇದೆ.

ಸಂಕ್ರಾಂತಿ ಹಬ್ಬದಲ್ಲಿ ಹಂಚುವ ಎಳ್ಳಿಗೆ ಆರೋಗ್ಯಕ್ಕೂ ಹತ್ತಿರದ ಸಂಬಂಧವಿದೆ. ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಎಳ್ಳು ಮತ್ತು ಬೆಲ್ಲ ಉತ್ತಮ. ಎಳ್ಳಿನಲ್ಲಿ ಎಣ್ಣೆಯ ಅಂಶವಿದೆ. ಇದು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಶರೀರಕ್ಕೆ ಬಿಸಿಯನ್ನು ಬೆಲ್ದ ಅಂಶದಿಂದ ಸಿಗುತ್ತದೆ. ಎಳ್ಳು ಬೆಲ್ಲ ಸೇರಿಸಿ ಉಂಡೆಗಳನ್ನು ಮಾಡಿ ಸಹ ತಿನ್ನುತ್ತಾರೆ.

ವಿಶ್ವಕ್ಕೆ ಆವರಿಸಿದ ಕೆಟ್ಟ ಧೂಳೆಲ್ಲ ನಾಶವಾಗಲಿ. ಮಳೆಬೆಳೆ ಕಾಲಕಾಲಕ್ಕೆ ಬರಲಿ. ಕಣ್ಣಿಗೆ ಕಾಣಿಸದೆ ನಮ್ಮೆಲ್ಲರ ಬೆನ್ನಹಿಂದೆ ನಿಂತ ಮಹಾಶಕ್ತಿ  ,ನಮ್ಮನೆಲ್ಲ ಉತ್ತಮತೆಯತ್ತ ಕೈಹಿಡಿದು ನಡೆಸಲಿ. ತನುವಲಡಗಿದ ಅರಿಷಡ್ವರ್ಗಗಳೆಂಬ ಭಸ್ಮಾಸುರ ಭಸ್ಮವಾಗಲಿ.ಆರೋಗ್ಯ ಸದಾ ಇರಲಿ.ಪ್ರೀತಿ,ಸ್ನೇಹ,ಸಹೋದರತೆ, ಮಮಕಾರ, ವಾತ್ಸಲ್ಯದ ಗಾಳಿ ಬೀಸಲಿ. ದೇಶ ಸುಭಿಕ್ಷೆಯಿಂದ ಕೂಡಿರಲಿ.

ಈ ಪರ್ವ ಪುಣ್ಯಕಾಲದಲ್ಲಿ ದೇವಸ್ಥಾನಗಳಿಗೂ ಹೋಗಿ ಭಜಿಸುವ ಸಂಪ್ರದಾಯವಿದೆ. ಮನೆಯವರೆಲ್ಲ ಒಟ್ಟಾಗಿ ಸಿಹಿಯೂಟವುಂಡು ಸಂಭ್ರಮಿಸುವುದಿದೆ.ದಾನ ಧರ್ಮಾದಿಗಳನ್ನು ಮಾಡಬೇಕಂತೆ. ಪ್ರೀತಿ ಸ್ನೇಹವನ್ನು ಹಂಚುತ್ತಾ, ವೈರತ್ವವನ್ನು ಮರೆಯುತ್ತ, ಸುಖ ಸಮೃದ್ಧಿ,ಶಾಂತಿ, ಸಂತೋಷವನ್ನು ಅನುಭವಿಸುತ್ತಾ,ಉಷಾಕಾಲದ ರವಿಯ ಹೊನ್ನಿನ ಕಿರಣದಂತೆ ಬಾಳನ್ನು ಬೆಳಕಿನೆಡೆಗೆ ಹರಿಸೋಣ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಆಶಿಸೋಣ.

ರತ್ನಾ ಕೆ.ಭಟ್ ತಲಂಜೇರಿ

(ಸಂಗ್ರಹ ಹಾಗೂ ಓದಿದ ಅನುಭವ ಬುತ್ತಿ)

ಚಿತ್ರ: ಶ್ರೇಯಸ್ ಕಾಮತ್, ಬೆಂಗಳೂರು