ಸಮೃದ್ಧ ಕನ್ನಡದ ವಿವೇಕ : ತಿರುಮಲೇಶ್ ಅವರ ಭಾಷಿಕ ಚಿಂತನೆಗಳು

ಸಮೃದ್ಧ ಕನ್ನಡದ ವಿವೇಕ : ತಿರುಮಲೇಶ್ ಅವರ ಭಾಷಿಕ ಚಿಂತನೆಗಳು

"ತಿರುಮಲೇಶರ ಈ ತೆರನಾದ ವ್ಯಾಪಕ ಬರವಣಿಗೆಯ ಹಿಂದಿರುವುದು ಕನ್ನಡದ ಪ್ರೀತಿಯೊಂದೇ, ಸದಾ ಹೊರನಾಡಿನಲ್ಲಿದ್ದು ಇಷ್ಟು ವ್ಯಾಪಕವಾಗಿ ಬರೆದವರಲ್ಲಿ ಕನ್ನಡದ ಮಟ್ಟಿಗೆ ತಿರುಮಲೇಶರೇ ಪ್ರಮುಖರೇನೊ" ಎನ್ನುವುದು ನನ್ನ ಅಭಿಪ್ರಾಯ. ಕವಿ, ಕತೆಗಾರ ಕೆ ವಿ ತಿರುಮಲೇಶ್ ಅವರು ಜನವರಿ ೩೦, ೨೦೨೩ರಂದು ನಿಧನರಾದಾಗ ನನಗನಿಸಿದ್ದು...

ಕೆ. ವಿ. ತಿರುಮಲೇಶರು ವೈವಿಧ್ಯ ಹಾಗೂ ವಿಫುಲತೆಗಳೆರಡರಿಂದಲೂ ಕನ್ನಡವನ್ನು ಸಮೃದ್ಧಗೊಳಿಸುತ್ತಿರುವ ಬರಹಗಾರರು. 1990ರ ದಶಕದಿಂದ ಈವರೆಗೂ ನಿರಂತರ ಬರವಣಿಗೆಯಲ್ಲಿ ತೊಡಗಿಕೊಂಡ ಕ್ರಿಯಾಶೀಲ, ಸಂವೇದನಾಶೀಲ ವ್ಯಕ್ತಿತ್ವ ಅವರದ್ದು. ಕಾವ್ಯ ಅವರ ಪ್ರಧಾನ ಆಸಕ್ತಿ. ನವ್ಯ ಕಾವ್ಯದ ಉತ್ತುಂಗ ಕಾಲಘಟ್ಟದ ಮುಖವಾಡಗಳು (1968) ಸಂಕಲನದಿಂದ ಆರಂಭಗೊಂಡ ಅವರ ಕಾವ್ಯಯಾನ ತನ್ನ ಪ್ರಯೋಗಶೀಲ ಮನೋಧರ್ಮದೊಂದಿಗೆ ವಿಸ್ತಾರಗೊಳ್ಳುತ್ತ `ಅಕ್ಷಯ ಕಾವ್ಯ’, ಅರಬ್ಬಿ’ `ಅವ್ಯಯ ಕಾವ್ಯ’ದಂಥ ನವ್ಯ ಮಹಾಕಾವ್ಯದವರೆಗೆ ವಿಸ್ತಾರಗೊಳ್ಳುತ್ತ ಸಾಗಿದೆ. ಇಂಗ್ಲಿಷ್ ಭಾಷೆ, ಸಾಹಿತ್ಯದೊಂದಿಗೆ; ಪೂರ್ವ - ಪಶ್ಚಿಮ ವಾಙ್ಮಯ ಪ್ರಪಂಚದ ವಿಸ್ತಾರವಾದ ಓದಿನೊಂದಿಗೆ ಕನ್ನಡದ ತವರುಮನೆಯನ್ನು ಕಾವ್ಯ, ಕಥೆ, ಕಾದಂಬರಿ, ಭಾಷಾಂತರ, ವೈಚಾರಿಕ ಬರಹಗಳು, ನಾಟಕ, ಅಂಕಣ ಬರಹಗಳು, ವಿಮರ್ಶೆ, ಕನ್ನಡ ನಾಡು-ನುಡಿಯ ಕುರಿತಾದ ಚಿಂತನೆ... ಹೀಗೆ ಎಲ್ಲ ಪ್ರಕಾರಗಳಲ್ಲೂ ಬೆಳಗುತ್ತ ಬಂದವರು. ಹುಟ್ಟಿನಿಂದ (ಕೇರಳದ ಕಾರಡ್ಕ) ಈವರೆಗೂ ಕನ್ನಡ ಪರಿಸರದ ಅಂಚಿನಲ್ಲೊ; ವಿದೇಶಗಳಲ್ಲೊ ಅಧ್ಯಯನ – ಅಧ್ಯಾಪನ ನಡೆಸಬೇಕಾಗಿ ಬಂದರೂ ಮಾನಸಿಕವಾಗಿ, ಕನ್ನಡ – ಕರ್ನಾಟಕವನ್ನೇ ಕೇಂದ್ರವಾಗಿಸಿಕೊಂಡು ತಮ್ಮ ಮಾತು - ಬರವಣಿಗೆಗಳ ಮೂಲಕ ಕನ್ನಡ ನಾಡು - ನುಡಿ, ಶಿಕ್ಷಣ, ಸಾಹಿತ್ಯ - ಸಂಸ್ಕೃತಿಯ ವಾಗ್ವಾದಗಳಲ್ಲಿ ಮುಖ್ಯರಾದವರು. ‘ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು..’ ಎಂಬ ಕುವೆಂಪು ವಾಣಿಗೆ ಕಳೆದ ಆರು ದಶಕಗಳಿಂದಲೂ ಅಬ್ಬರಗಳಿಲ್ಲದೆ ತಣ್ಣಗೆ ಸಾಕ್ಷಿಯಾದವರು.

ಗದ್ಯ ಬರವಣಿಗೆಯಲ್ಲಿ ಅವರಷ್ಟು ವಸ್ತು ವೈವಿಧ್ಯದ ವಿಸ್ತಾರವನ್ನು ದರ್ಶಿಸುವವರು ಕನ್ನಡದಲ್ಲಿ ವಿರಳ. ಹೈದರಾಬಾದ್‌ನಲ್ಲಿದ್ದುಕೊಂಡೇ ಐದಾರು ವರ್ಷಗಳ ಕಾಲ ಪ್ರತಿವಾದ ವಿಜಯ ಕರ್ನಾಟಕ ಪತ್ರಿಕೆಗೆ ಬರೆದ ‘ಆಳ ನಿರಾಳ’ ಅಂಕಣಗಳು ಅವರ ಓದಿನ ವಿಸ್ತಾರ ಹಾಗೂ ಬರವಣಿಗೆಯ ಬದ್ಧತೆಗೆ ಸಾಕ್ಷಿಯಾಗಿವೆ. ಅಭಿನವ ಪ್ರಕಟಿಸಿರುವ ಆಳ-ನಿರಾಳದ ನಾಲ್ಕು ಸಂಪುಟಗಳನ್ನು ಒತ್ತಟ್ಟಿಗೆ ನೋಡಿದಾಗ ಅವರ ಅಭಿರುಚಿ ಹಾಗೂ ಅಭಿಕ್ಷಮತೆಯ ಹರಹು ಬೆರಗು ಹುಟ್ಟಿಸುತ್ತದೆ. ನವೋದಯ ಹಾಗೂ ನವ್ಯದ ಆರಂಭದ ಕಾಲದ ಕೆಲವೇ ಮಹತ್ವದ ಲೇಖಕರಲ್ಲಿ ಕಾಣಬಹುದಾದ ವ್ಯಾಪಕ ಬರವಣಿಗೆಗೆ ಕನ್ನಡ ಪರಿಸರದ ನಡುವೆಯೇ ಹುಟ್ಟಿಕೊಳ್ಳುವ ಪ್ರೇರಣೆಗಳಿದ್ದವು. ಆದರೆ ತಿರುಮಲೇಶರ ಈ ತೆರನಾದ ವ್ಯಾಪಕ ಬರವಣಿಗೆಯ ಹಿಂದಿರುವುದು ಕನ್ನಡದ ಪ್ರೀತಿಯೊಂದೇ, ಸದಾ ಹೊರನಾಡಿನಲ್ಲಿದ್ದು ಇಷ್ಟು ವ್ಯಾಪಕವಾಗಿ ಬರೆದವರಲ್ಲಿ ಕನ್ನಡದಮಟ್ಟಿಗೆ ತಿರುಮಲೇಶರೇ ಪ್ರಮುಖರೇನೊ.

ಸಮಕಾಲೀನ ಸಂದರ್ಭದಲ್ಲಿ ಕನ್ನಡ ಭಾಷೆ, ವ್ಯಾಕರಣ, ಶಿಕ್ಷಣ ಮಾಧ್ಯಮ, ಸರ್ಕಾರದ ಭಾಷಾ ನೀತಿ, ಸಂಸ್ಕೃತ – ಕನ್ನಡ – ಇಂಗ್ಲಿಷ್, ಹಿಂದಿ ಮುಂತಾದ ಬಹುಭಾಷಾ ಸಂದರ್ಭಗಳ, ನೀತಿಗಳ ನಡುವೆ ಕನ್ನಡಿಗರ ವಿವೇಕ ಯಾವ ಚಿಂತನೆಯನ್ನು ನಡೆಸಬೇಕು, ವಿಶ್ವಾತ್ಮಕವಾಗಿ ನಮಗೆ ಯಾವೆಲ್ಲ ದೇಶ ಭಾಷೆಗಳ ಮಾದರಿಗಳು ಉಪಯುಕ್ತವಾಗಬಲ್ಲವು ಎಂಬ ಚಿಂತನೆಗಳನ್ನು ತಿರುಮಲೇಶರು ತಮ್ಮ ಅಂಕಣ ಬರೆಹವನ್ನೂ ಒಳಗೊಂಡಂತೆ, ಬೇರೆ - ಬೇರೆ ಸಂದರ್ಭಗಳ ಪ್ರತಿಕ್ರಿಯಾತ್ಮಕ ಬರೆಹಗಳಲ್ಲಿ ದಾಖಲಿಸಿದ್ದಾರೆ. `ಆಳ-ನಿರಾಳ 1, 2, 3, 4, `ನಮ್ಮ ಕನ್ನಡ’, `ಸಮೃದ್ಧ ಕನ್ನಡ’, `ಇನ್ನಷ್ಟು ಕನ್ನಡ’, `ವಾಗರ್ಥವಿಲಾಸ’ `ವಾಚನಶಾಲೆ’ ಮುಂತಾದ ಕೃತಿಗಳಲ್ಲಿ ಅವರ ಭಾಷಿಕ ಚಿಂತನೆಗಳು ವ್ಯಕ್ತಗೊಂಡಿವೆ. ಮುಖ್ಯವಾಗಿ ಅಭಿನವ ಪ್ರಕಟಿಸಿರುವ ‘ಇನ್ನಷ್ಟು ಕನ್ನಡ’ (2011) ಕೃತಿಯಲ್ಲಿ ಭಾಷೆ ಮತ್ತು ಭಾಷಾಶಾಸ್ತ್ರದ ಕುರಿತಾದ ಲೇಖನಗಳು ಸಂಕಲಿತಗೊಂಡಿವೆ.

ಮನುಷ್ಯನ ಸಾಮಾಜಿಕ ಅಗತ್ಯತೆಗಳೆಲ್ಲವುಗಳ ಸಂವಹನ ಮಾಧ್ಯಮವಾಗಿ ಹುಟ್ಟಿಕೊಂಡ ಭಾಷೆಯೊಂದನ್ನು ಕೇವಲ ಅದರ ರಾಚನಿಕ ನೆಲೆಯಿಂದ ಮಾತ್ರ ಅಧ್ಯಯನ ಮಾಡಿದರೆ ಸಾಲದೆಂಬ ಚಿಂತನೆಯನ್ನು ಆಧುನಿಕ ಭಾಷಾವಿಜ್ಞಾನ ನಮಗೆ ನೀಡಿತು. ಕಾಲ-ದೇಶಗಳ ‘ವ್ಯವಸ್ಥೆ’ಯ ಚಲನಶಿಲತೆಯ ಅರಿವಿಲ್ಲದೆ ಭಾಷೆಯ ಅಧ್ಯಯನ ಅಸಾಧ್ಯ. ಕೇವಲ ವ್ಯಾಮೋಹ, ದ್ವೇಷ, ಪ್ರತೀಕಾರ, ಮೇಲರಿಮೆ, ಕೀಳರಿಮೆ ಮುಂತಾದ ಭಾವನಾತ್ಮಕ ನೆಲೆಯಿಂದ, ವೈಯಕ್ತಿಕ ನೆಲೆಯಿಂದ ಭಾಷಾ ಬಾಂಧವ್ಯ ಅಥವಾ ಸಂಘರ್ಷದ ಸ್ವರೂಪಗಳನ್ನು ನಿರ್ಧರಿಸಲಾಗದೆಂಬ ಇತ್ತೀಚಿನ ವೈಜ್ಞಾನಿಕ ಚಿಂತನೆಯ ಅರಿವಿನೊಂದಿಗೆ ನಮ್ಮ ಭಾಷೆಯನ್ನು ನೋಡುವ ಕ್ರಮ ತಿರುಮಲೇಶರದ್ದು. ಇವತ್ತಿನ ಜಾಗತೀಕರಣದ ಹಾಗೂ ಸಮೂಹ ಸಂಪರ್ಕ ಮಾಧ್ಯಮಗಳ ಸಂದರ್ಭವಂತೂ ಯಾವ ಭಾಷಾ ಪ್ರಾಂತವನ್ನೂ ‘ದ್ವೀಪ’ವಾಗಿಟ್ಟಿಲ್ಲ. ಹೊರಜಗತ್ತಿನ ಸಂಪರ್ಕದಿಂದ ಸಂಪೂರ್ಣ ಬೇರ್ಪಟ್ಟ ‘ದ್ವೀಪ’ ಎಂಬ ಪರಿಕಲ್ಪನೆಯೇ ಇಂದು ಸ್ಥಿತ್ಯಂತರಗೊಂಡಿದೆ. ಹೀಗಿರುವಾಗ ‘ಭಾಷಾಶುದ್ಧಿ’ ಎಂಬ ಅತೀವಾದದ ಅಪಾಯದ ಬಗ್ಗೆ ತಿರುಮಲೇಶರು ತಮ್ಮ ಬರವಣಿಗೆಯಲ್ಲಿ ಎಚ್ಚರಿಸುತ್ತಾರೆ. ನದೀಮೂಲ, ಋಷಿಮೂಲದಂತೆ ಭಾಷಾಮೂಲವೂ ಸಹ ಎಂಬ ಅವರ ಸರಳ ಚಿಂತನೆ ‘ಜನಾಂಗ ಶುದ್ಧಿ’ಯಂತೆ ಭಾಷಾಶುದ್ಧಿಯ ವಿಚಾರವೂ ವ್ಯರ್ಥವೆಂಬ ವಿವೇಕವನ್ನು ಸಾಮಾನ್ಯರಿಗೆ ನೀಡುತ್ತದೆ.

ಜೀವಂತ ಭಾಷೆಯೊಂದು ನಮ್ಮ ಸುತ್ತಲಿನ ಬದಲಾವಣೆಗಳಿಗೆ ತಕ್ಕಂತೆ ಸ್ಪಂದಿಸಬೇಕಾಗುತ್ತದೆ. ಮಾಹಿತಿ ಸಂವಹನದ ಜೊತೆ-ಜೊತೆಗೆ ಜ್ಞಾನ ಸಂಪಾದನೆ, ಉತ್ಪಾದನೆ, ಹಿಂದಿನ ನೆನಪು, ಮುಂದಿನ ಕಾಣ್ಕೆ.. ಇವೆಲ್ಲವುಗಳೊಂದಿಗೆ ತನ್ನ ಅಸ್ತಿತ್ವವನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಈ ಕಾರಣದಿಂದಾಗಿಯೇ ನಾಗರಿಕ ಸಮಾಜವು ಇತರ ಸಮಸ್ಯೆಗಳಂತೆಯೇ ಭಾಷಿಕ ಸಮಸ್ಯೆಗಳನ್ನೂ, ವಿಭಿನ್ನ ದೃಷ್ಟಿಕೋನಗಳನ್ನು ಪ್ರತಿನಿಧಿಸುವ ಸಾರ್ವಜನಿಕ ಚರ್ಚೆಯ ಮೂಲಕ ಪರಿಹರಿಸಿಕೊಳ್ಳಬೇಕೆಂಬ ಸಾಮಾಜಿಕ ನೆಲೆಯ ಪರಿಹಾರವನ್ನು ಅವರು ಸೂಚಿಸುತ್ತಾರೆ. ಮನುಷ್ಯ ಸಹಜವಾದ ಪೂರ್ವಾಗ್ರಹಗಳು, ಅಸಹನೆ, ಅಸಹಿಷ್ಣುತೆ, ಭಾವುಕತೆ, ಅತಿರೇಕ ಮುಂತಾದವುಗಳನ್ನು ಸಂವಾದದಿಂದ ಸ್ವಯಂವೇದ್ಯವಾಗುವ ವಿಚಾರದಿಂದ ಮಾತ್ರ ತಿದ್ದಿಕೊಳ್ಳಲು ಸಾಧ್ಯ ಎಂಬ ಅವರ ಮಾತು ಇಂದಿನ ಭಾಷಾಂಧರು ನಡೆಸುವ ಬೀದಿ ಜಗಳದ ಸಾರ್ಥಕತೆಯನ್ನು ಎತ್ತಿ ತೋರಿಸುವಂತಿದೆ.

ಕನ್ನಡದ ಸಮೃದ್ಧಿಗಾಗಿ ನಾವೇನು ಮಾಡಬಹುದು? ಈಗ ನಡೆಯುತ್ತಿರುವ ಕಾರ‍್ಯಗಳಲ್ಲಿ ಸರಿ ಯಾವುದು? ತಪ್ಪು ಯಾವುದು? ಜಾಗತಿಕವಾಗಿ ನಮಗೆ ಯಾವೆಲ್ಲ ಮಾದರಿಗಳಿವೆ. ಈ ನೆಲೆಯಲ್ಲಿ ತಿರುಮಲೇಶರ ಭಾಷಿಕ ಚಿಂತನೆಗಳು ಹರಡಿಕೊಂಡಿವೆ. ಕನ್ನಡ ಭಾಷೆಗೆ 2000 ವರ್ಷಗಳಿಗಿಂತ ದೀರ್ಘ ಚರಿತ್ರೆ ಇದೆ. ಕನ್ನಡ ಲಿಪಿ, ಭಾಷೆಯ ಕುರಿತಾದ ವಿವಿಧ ಚಾರಿತ್ರಿಕ ಸಂಗತಿಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಲು ಬೇಕಾದ ಆಕರಗಳು ಇವೆ. ಈ ಆಕರಗಳನ್ನು ಸಮರ್ಥವಾಗಿ ಬಳಸಿಕೊಂಡು ಹೆಚ್ಚು ವೈಜ್ಞಾನಿಕ ಅಧ್ಯಯನಗಳು ನಮ್ಮ ಭಾಷೆಯ ಕುರಿತಾಗಿ ನಡೆಯಬೇಕಿದೆ. ಭಾಷೆಯ ರಾಕ ಸ್ವರೂಪವನ್ನು ವಿವರಿಸುವ ವ್ಯಾಕರಣ ಗ್ರಂಥಗಳು ನಮ್ಮಲ್ಲಿ ಸಮೃದ್ಧವಾಗಿ, ಸಮಗ್ರವಾಗಿ ರೂಪುಗೊಂಡಿಲ್ಲ. ಹಳೆಗನ್ನಡದ ಮೇಲೆ ಸಂಸ್ಕೃತ ಭಾಷೆ, ವ್ಯಾಕರಣದ ಪ್ರಭಾವ, ಧಾರ್ಮಿಕ, ಐತಿಹಾಸಿಕ, ಶೈಕ್ಷಣಿಕ ಕಾರಣಗಳಿಂದ ಆಗಿರುವಾಗ ಸಂಸ್ಕೃತದ ಪ್ರಭಾವದಿಂದ ಸಂಪೂರ್ಣ ಮುಕ್ತವಾದ ವ್ಯಾಕರಣವನ್ನು ಹಳಗನ್ನಡ ಭಾಷೆಗೆ ರಚನೆ ಮಾಡುವುದು ಸಾಧುವಲ್ಲ. ಕನ್ನಡವು ತನ್ನ ವರ್ಣಮಾಲೆಯಲ್ಲೇ ಸಂಸ್ಕೃತದ ಅನೇಕ ಅಕ್ಷರಗಳನ್ನು ದೀರ್ಘಕಾಲದಿಂದಲೂ ಸ್ವೀಕರಿಸಿದೆ. ಆ ಅಕ್ಷರಗಳ ಬಳಕೆಯಿಂದ ಹುಟ್ಟಿಕೊಂಡ ಶಬ್ದಗಳು ತನ್ನ ಅರ್ಥಪರಂಪರೆಯನ್ನು ಕನ್ನಡ ಸಮುದಾಯದಲ್ಲಿ ಮೌಖಿಕವಾಗಿ ಸೃಷ್ಟಿಸಿಕೊಂಡಿವೆ. ಈಗ ಏಕಾಏಕಿ ನಾವು ಭಾಷಾ ಸುಧಾರಣೆಯ ನೆಪದಲ್ಲಿ ‘ಋ’ ಕಾರ, ಶ, ಷಕಾರ ಮಹಾಪ್ರಾಣಾಕ್ಷರಗಳು. ಇವೆಲ್ಲ ನಮ್ಮದಲ್ಲ; ಸಂಸ್ಕೃತದ್ದು ಎಂದು ತೆಗೆದು ಹಾಕಿದರೆ. ಪಾರಂಪರಿಕವಾಗಿ ಬಂದ ಶಬ್ದಾರ್ಥಗಳ ವಲಯದಲ್ಲಿ ಗೊಂದಲ ಉಂಟಾಗುವುದಿಲ್ಲವೆ? ಐತಿಹಾಸಿಕ ಕಾರಣಗಳಿಗಾದರೂ ಈ ಅಕ್ಷರಗಳನ್ನು ನಾವು ನಮ್ಮದೆಂದೇ ಸ್ವೀಕರಿಸಬೇಕಿದೆ. ಇಲ್ಲದೆ ಹೋದರೆ.. ಉದಾ: ದನ>ಧನ; ಬರ>ಭರ ಇಂಥ ರೂಪಗಳಲ್ಲಿ ಅರ್ಥವ್ಯತ್ಯಾಸವನ್ನು ಹೇಗೆ ಸಮರ್ಥಿಸಲು ಸಾಧ್ಯ? ಅದಕ್ಕೆಂದೇ ವೈಯ್ಯಾಕರಣಿ ಕೇಶೀರಾಜ-ಸಂಸ್ಕೃತ-ಸಂಸ್ಕೃತ-ತತ್ಸಮ-ತದ್ಭವಗಳೆಂಬ ವಿಭಾಗವನ್ನು ರೂಪಿಸಿದ್ದಾನೆ. ಡಿ.ಎಸ್. ಶಂಕರಭಟ್ ಅವರಂಥ ಭಾಷಾತಜ್ಞರು ಮಾತು ಬರವಣಿಗೆಯಲ್ಲಿ ವ್ಯತ್ಯಾಸ ಏರ್ಪಡಲು ಸಂಸ್ಕೃತ ಮಾದರಿಯನ್ನು ಅನುಸರಿಸಿದ್ದೇ ಕಾರಣ ಎಂದು ಆಕ್ಷೇಪಿಸುವುದನ್ನು ತಿರುಮಲೇಶರು ಒಪ್ಪುವುದಿಲ್ಲ.

ಏಕೆಂದರೆ ಜಗತ್ತಿನ ಯಾವ ಭಾಷೆಯಲ್ಲೂ ಅದು ಮಾತು ಮತ್ತು ಲಿಪಿ ಒಂದೇ ಆಗಿಲ್ಲ, ಆಗುವುದೂ ಇಲ್ಲ. ಇಂಗ್ಲಿಷ್ ಭಾಷೆ ವಿಶ್ವಮಾನ್ಯವಾಗಿದ್ದರೂ ಅದರ ಲಿಪಿ-ಆಡುರೂಪಗಳಲ್ಲಿ ಸಾಕಷ್ಟು ವ್ಯತ್ಯಾಸ ಇಲ್ಲವೆ? ಇವೆರಡೂ ಪ್ರತ್ಯೇಕವಾದ ರೂಢಿಯಿಂದಲೇ ನಮಗೆ ಸ್ಪಷ್ಟವಾಗುತ್ತದೆ. ಹಾಗಾಗಿ. ಕನ್ನಡ ಭಾಷೆಯ ಅಕ್ಷರ ಸುಧಾರಕರು ಮಂಡಿಸುವ ವಾದವನ್ನು ತಿರುಮಲೇಶರು ಕನ್ನಡದ ಸಮೃದ್ಧಿಗೆ ಪೂರಕವಾದುದಲ್ಲ ಎನ್ನುತ್ತಾರೆ. ಅಕ್ಷರಗಳನ್ನು ಕಡಿಮೆ ಮಾಡುತ್ತ ಹೋಗುವುದರಿಂದ ಶಬ್ದ ಸಂಪತ್ತು ಬಡವಾಗುತ್ತದೆ. ಸ್ಥೂಲವಾಗಿ ಒಂದೇ ಅರ್ಥವಿರುವ ಶಬ್ದಗಳಲ್ಲೂ ಧ್ವನಿವ್ಯತ್ಯಾಸದ ಬೇರೆ - ಬೇರೆ ಆಯ್ಕೆಗಳಿದ್ದಾಗ. ಅದರ ಧ್ವನಿ ಸಂಪತ್ತು, ಅರ್ಥ ಸೂಕ್ಷ್ಮತೆ ಹೆಚ್ಚುತ್ತದೆ ಇಂದಿನ ಮನೋವಿಜ್ಞಾನ, ಭಾಷಾ ವಿಜ್ಞಾನ ಜ್ಞೇಯವಾದ ದಲ್ಲಿ ನಂಬಿಕೆ ಇಟ್ಟಿದೆ. ಕನ್ನಡ ಭಾಷೆ. ಕಲೆ, ಸಾಹಿತ್ಯ, ಸಂಗೀತ, ವಿಜ್ಞಾನ, ಧರ್ಮ, ಕೃಷಿ, ತಂತ್ರಜ್ಞಾನ, ಆಧುನಿಕ ಜ್ಞಾನಸ್ಫೋಟನೆಯ ಎಲ್ಲ ಆಯಾಮಗಳನ್ನು ಜೀರ್ಣಿಸಿಕೊಂಡು ಒಳಗೊಳ್ಳುವಂತಾಗಬೇಕು. ಹೊಸ ಹೊಸ ಅರಿವಿನ ಉತ್ಪಾದಕ ಭಾಷೆಯಾಗಿ ಕನ್ನಡಿಗರು ಕನ್ನಡವನ್ನು ಕನ್ನಡಿಸುವಂತಾಗಬೇಕು. ಕೇವಲ ಶುದ್ಧೀಕರಣದ ಕಾರಾಗೃಹದಲ್ಲಿ ಬಮಧಿತವಾದರೆ ಸಾಲದೆಂಬ ನಿಲುವನ್ನು ತಮ್ಮ ತೌಲನಿಕ ಚಿಂತನೆಯ ನೆರವಿನೊಂದಿಗೆ ತಿರುಮಲೇಶರು ವ್ಯಕ್ತಪಡಿಸುತ್ತಾರೆ.

ಕವಿರಾಜಮಾರ್ಗಕಾರ ಹೇಳಿದಂತೆ `ಹಲವು ಕನ್ನಡಂಗಳ್ ಇವೆ ಅವನ್ನು ಶಿಕ್ಷಣ, ಗ್ರಾಂಥಿಕ ಭಾಷೆ, ಲಿಪಿರೂಪಗಳೂ ಪ್ರತಿನಿಧಿಸುವಂತಾಗಬೇಕು. ನೃಪತುಂಗನ ಕವಿ ಶ್ರೀವಿಜಯ ಹೇಳಿದ; ಬುದ್ಧ ಹೇಳಿದ ‘ಮಧ್ಯಮ ಮಾರ್ಗ’ ಕನ್ನಡಕ್ಕೆ ಇಂದು ಅಗತ್ಯ. ಸ್ವರ ತಂತಿಯನ್ನು ಅತೀ ಬಿಗಿಗೊಳಿಸಿದರೆ ತುಂಡಾಗುವ; ಅತಿ ಸಡಿಲಿಸಿದರೆ ಸ್ವರವೇ ಹೊರಡದ ಬಗೆಯಂಥ ಬಗೆಯ ಭಾಷಾ ನಿಲುವು ನಮ್ಮ ಇಂದಿನ ಅಗತ್ಯವಾಗಿದೆ. ಇದು ಸಹಜತೆಯ ದಾರಿಯೂ ಆಗಿದೆ. ತಿರುಮೇಶರು ಹೇಳುವಂತೆ ಭಾಷೆಯಲ್ಲಿ ಯಾವುದನ್ನು ನಾವು ‘ಪ್ರಭಾವ’ ಎಂದು ಕರೆಯುತ್ತೇವೆಯೋ ಅದು ಸುತ್ತಲಿನ ಜೀವನ ಕ್ರಮದಲ್ಲಾದ ಮಾರ್ಪಾಡುಗಳಿಗೆ ಭಾಷೆಯೊಂದು ತನ್ನ ವಿಕಸನಕ್ಕೋಸ್ಕರ ನಡೆಸುತ್ತಿರುವ ಹೊಂದಾಣಿಕೆಯೇ ಆಗಿದೆ. ಹಾಗೆ ಮಾಡದಿದ್ದರೆ ಅದರ ಅಸ್ತಿತ್ವಕ್ಕೇ ಅಪಾಯ ಉಂಟಾಗುತ್ತದೆ. ಭಾರತೀಯ ಎಲ್ಲ ಭಾಷೆಗಳ ಮೇಲೆ ಪ್ರಭಾವ ಬೀರಿದ ಸಂಸ್ಕೃತ ಇಂದು ಏಕೆ ‘ಮೃತಭಾಷೆ’ಯಾಯಿತು ಎಂಬುದನ್ನು ನೋಡಿದರೆ ತಿರುಮಲೇಶರ ಭಾಷಿಕ ಚಿಂತನೆಯ ಮಹತ್ವ ನಮಗೆ ತಿಳಿಯುತ್ತದೆ.

ನಮ್ಮ ಶಿಕ್ಷಣದಲ್ಲಿ ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಕಲಿಸಬೇಕೆ? ಬೇಡವೆ? ಶಿಕ್ಷಣ ಮಾಧ್ಯಮ ಯಾವುದಾಗಬೇಕೆಂಬ ಚರ್ಚೆ ನಡೆಯುತ್ತಲೇ ಇದೆ. ಇದು ಯಾವ ಭಾಷೆ ಅಥವಾ ಮಾಧ್ಯಮದಲ್ಲೇ ಆಗಲಿ ನಾವು ನೀಡುತ್ತಿರುವ ಶಿಕ್ಷಣದ ಗುಣಮಟ್ಟದ ಮೇಲೆ ಅವಲಂಬಿತವಾಗಿದೆ. ಹಾಗಾಗಿ ಗುಣಮಟ್ಟದ ಶಿಕ್ಷಣ ನಮ್ಮ ಮುಖ್ಯ ಕಾಳಜಿಯಾಗಬೇಕೆಂಬುದು ಅವರ ವಾದ. ಇನ್ನು ಶಿಕ್ಷಣದಲ್ಲಿ ಪ್ರಾದೇಶಿಕ ಭಾಷೆ ಬಳಕೆಯಾಗಬೇಕೆಂಬ ವಾದ ಆಯಾ ಪ್ರದೇಶದ ಉಪಭಾಷೆಯಲ್ಲಿ ಶಿಕ್ಷಣ ನೀಡಬೇಕೆಂಬ ನಿಲುವಿಗೂ ಹೋಗುತ್ತದೆ. ಆದರೆ ಸರಿ ಸುಮಾರು ಒಂದೇ ತೆರನಾದ ಶಿಕ್ಷಣ ಭಾಷೆ - ಬರೆಹ ನಾಡಿನಾದ್ಯಂತ ಇದ್ದರೆ ಎಲ್ಲ ಕನ್ನಡವು ಒಂದೇ ಎಂಬ ಭಾವ ಸಾಧ್ಯವಾಗುತ್ತದೆ. ಶಿಕ್ಷಣ ಭಾಷೆ ತುಸು ಕೃತಕವಾಗಿರುವುದು ಸಹಜ. ಏಕೆಂದರೆ ಶಿಕ್ಷಣ ಎನ್ನುವುದೆ ಒಂದು ಪ್ರಭಾಷೆ. ಕೃತಕ ಪರಿಸರದಲ್ಲೇ ನಾವು ಅನೇಕ ಸಂಗತಿಗಳನ್ನು ಕಲಿಕೆಯಲ್ಲಿ ಅಳವಡಿಸಬೇಕಾಗುತ್ತದೆ. ಬೋಧನೆ ಕ್ರಿಯಾಶೀಲವಾಗಿರಬೇಕು.

ಆಕರ್ಷಕವಾಗಿರಬೇಕೆಂಬುದೇ ಎಲ್ಲಕ್ಕಿಂತ ಮುಖ್ಯ ಎನ್ನುವುದು ತಿರುಮಲೇಶರ ವಾದದ ತಿರುಳಾಗಿದೆ. ಏಕೆಂದರೆ ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೆ ಶಿಕ್ಷಣ ಭಾಷೆ ಜಾಗತಿಕ ಮಟ್ಟದ ಅನೇಕ ಜ್ಞಾನ ಶಾಖೆಗಳನ್ನು ಪಠ್ಯದಲ್ಲಿ ನಿರ್ವಹಿಸಬೇಕಾಗುತ್ತದೆ. ಈಗ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಮನ್ನಣೆ ಸಿಕ್ಕಿದೆ. ಇದು ಒಂದು ರೀತಿಯಲ್ಲಿ ‘ಕನ್ನಡ ರಾಷ್ಟ್ರೀಯತೆ’ಯ ಫಲ. ಶಾಸ್ತ್ರೀಯ ಭಾಷೆ ಶಿಕ್ಷಣದ ಸಂದರ್ಭದಲ್ಲಿ ʼಶಾಸ್ತ್ರಭಾಷೆ’ (ಅಂದರೆ ಶಿಕ್ಷಣ ಭಾಷೆ, ಆಗಬೇಕು. ಸಾಹಿತ್ಯದಲ್ಲಿ ಸ್ಥಳ, ಸಂದರ್ಭಗಳ ಚಿತ್ರಣ ಮಾಡಲು ಪ್ರಾದೇಶಿಕ ಭಾಷೆ ಉಪಯುಕ್ತವಾದರೆ, ವೈಚಾರಿಕತೆ ಪ್ರಧಾನವಾದ ಶಿಕ್ಷಣಕ್ಕೆ ಗ್ರಾಂಥಿಕ ಭಾಷೆಯೇ ಸೂಕ್ತ ಎನ್ನುವುದು ತಿರುಮಲೇಶರ ನಿಲುವಾಗಿದೆ.

`ನಮಗೆಂಥಾ ಕನ್ನಡ ಬೇಕು?’ ಎಂಬ ವಿಚಾರವಾಗಿ ತಿರುಮಲೇಶರು ಡಿ.ಎಸ್. ಶಂಕರ ಭಟ್ ಅವರ ನಿಲುವಿಗಿಂತ ತನ್ನದು ಭಿನ್ನ ಎಂದು ಸ್ಪಷ್ಟಪಡಿಸುತ್ತಾರೆ. ‘ಭಟ್ ಅವರದ್ದು ಎಷ್ಟು ಅಗತ್ಯವೋ ಅಷ್ಟು ಅಗತ್ಯದ ಆಪತ್ಕಾಲೀನ ಕನ್ನಡ’ ಕನ್ನಡ ಸ್ಕೂಲು ದಾಟುವಂಥದ್ದಲ್ಲ ಇದು ಸರ್ವಶಿಕ್ಷಣದ ಮೂಲ ಉದ್ದೇಶವನ್ನೇ ಮೊಟಕುಗೊಳಿಸಿದಂತೆ. ಆದರೆ, ನನ್ನ ಮನಸ್ಸಿನಲ್ಲಿರುವುದು ಸರ್ವಶಕ್ತ ಕನ್ನಡ, ಜ್ಞಾನ ಗ್ರಹಣ, ಜ್ಞಾನೋತ್ಪತ್ತಿ ಹಾಗೂ ಜ್ಞಾನಸಂವಹನ. ಎಲ್ಲವೂ ಸಾಧ್ಯವಾಗುವಂಥದ್ದು. ಒಟ್ಟಾರೆ ನಮಗೆ ಬೇಕಾದದ್ದು ಶಿಕ್ಷಣದ ಮೂಲಕ ಲೋಕ ತೆರೆದುಕೊಡುವ ಕನ್ನಡ, ಲೋಕ ಮುಚ್ಚುವ ಕನ್ನಡವಲ್ಲ..’ ಎಂಬುದು ತಿಮಲೇಶರ ನಿಲುವಾಗಿದೆ.

ಹೀಗೆ ಡಿ.ಎನ್. ಶಂಕರಭಟ್, ಕೆ.ವಿ. ನಾರಾಯಣ ಮುಂತಾದವರ ಭಾಷಿಕ ಚಿಂತನೆಗೆ ಪ್ರತಿಕ್ರಿಯೆಯ ರೂಪದಲ್ಲಿ ವ್ಯಕ್ತವಾದ ತಿರುಮಲೇಶರ ಭಾಷಿಕ ಚಿಂತನೆಗಳು ಕನ್ನಡ ನಾಡು-ನುಡಿಗೆ ವಿಶ್ವಾತ್ಮಕವಾಗಿ ಒಳಿತನ್ನುಂಟುಮಾಡುವ ದಾರಿಯನ್ನು ತೋರುತ್ತವೆ. ಭಾಷೆಯ ಪ್ರಶ್ನೆ, ಸವಾಲುಗಳನ್ನು ವ್ಯವಸ್ಥೆಯ ಸಂಕೀರ್ಣತೆಯ, ವಾಸ್ತವಿಕತೆಯ ನೆಲೆಯಿಂದಲೇ ತಿಳಿಗೊಳಿಸಿಕೊಂಡಾಗಲೇ ‘ನಾಡು-ನುಡಿ’ಯ ಸಮೃದ್ಧಿ ಸಾಧ್ಯವಾಗುತ್ತದೆ. ಸಮೃದ್ಧಿ ಎಂಬುದು ಸಂಕುಚಿತ ನೆಲೆಯದ್ದಾದರೆ ಸ್ವಾರ್ಥವಾಗುತ್ತದೆ: ವಿಶ್ವವ್ಯಾಪಕವಾದಾಗ ಧನ್ಯತೆಯ ಹಿರಿಮೆಯನ್ನು ನಮಗೆ ಮೂಡುತ್ತದೆ. ಈ ಹಿರಿಮೆಯ ಗುಣ ಅಪಾರವಾಗಿ ತಿರುಮಲೇಶರ ಭಾಷಿಕ ಚಿಂತನೆಯಲ್ಲಿ ಅಂತರ್ಗತವಾಗಿದೆ.

- ನಾಗರಾಜ ಹೆಗಡೆ, ಅಪಗಾಲ

ಚಿತ್ರಕೃಪೆ - ಮಂಜುನಾಥ್‌ ಕಲ್ಲೇದೇವರ

Comments

Submitted by Venihbn Tue, 01/31/2023 - 16:08

ನಾಗರಾಜ ಹೆಗಡೆಯವರೆ ನಾನು 'ಸಂಪದ'ದ ಹೊಸ ಸದಸ್ಯೆ, ತಿರುಮಲೇಶರ ಬಗ್ಗೆ ನನಗೇನೂ ಅರಿವಿಲ್ಲ, ಅವರ ಎಲ್ಲ ಬರಹಗಳ ಸಂಕ್ಷಿಪ್ತ ಬರವಣಿಗೆ ಇದಾಗಿದೆ ಎಂದು ಭಾವಿಸುತ್ತೇನೆ. ನಿಮ್ಮ ಬರಹದಿಂದ ನೀವು ಅವರ ಬರಹಗಳನ್ನು ಪ್ರೀತಿಯಿಂದ ಓದಿದ್ದೀರಿ ಎಂದರ್ಥವಾಗುತ್ತದೆ. ಮತ್ತೂ ನನಗೆ ಅವರ ಬರಹಗಳ ಪರಿಚಯವೂ ಸುಂದರ ಸುದೀರ್ಘವಾಗಿ ದೊರೆತಂತಾಗಿದೆ

ಅವರ ಜಗತ್ ನಿರ್ಗಮನದ ಸುದ್ದಿ ಕನ್ನಡ ಓದುಗರಿಗೆ ಆದ ನಷ್ಟವೇ ಸರಿ.

ಧನ್ಯವಾದಗಳು