ಸಮ್ಮಿಶ್ರ ಸರಕಾರ : ಅಭಿವೃದ್ಧಿಗೆ ಹಿನ್ನಡೆಯಾಗದಂತೆ ನಡೆಯಲಿ

ಸಮ್ಮಿಶ್ರ ಸರಕಾರ : ಅಭಿವೃದ್ಧಿಗೆ ಹಿನ್ನಡೆಯಾಗದಂತೆ ನಡೆಯಲಿ

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಯಾವ ರಾಜಕೀಯ ಪಕ್ಷಕ್ಕೂ ಮತದಾರ ಬಹುಮತ ನೀಡದಿರುವ ಹಿನ್ನಲೆಯಲ್ಲಿ ದೇಶದಲ್ಲಿ ಮತ್ತೊಮ್ಮೆ ಸಮ್ಮಿಶ್ರ ಸರಕಾರದ ಯುಗಾರಂಭವಾಗುತ್ತಿದೆ. ನರೇಂದ್ರ ಮೋದಿಯೇ ಪ್ರಧಾನಿಯಾಗುವುದು ನಿಶ್ಚಿತವಾಗಿದೆ. ಆದರೆ ಅವರು ಟಿಡಿಪಿ, ಜೆಡಿಯು, ಶಿವಸೇನೆ ಶಿಂಧೆ ಬಣ, ಎಲ್ ಜೆ ಪಿ, ಜೆಡಿಎಸ್ ಸೇರಿದಂತೆ ಆರೇಳು ಪಕ್ಷಗಳನ್ನು ಜೊತೆಗೆ ಕರೆದುಕೊಂಡು ಅಧಿಕಾರ ನಡೆಸಬೇಕಿದೆ. ಎನ್ ಡಿ ಎ ನಲ್ಲಿ ೪೦ಕ್ಕೂ ಹೆಚ್ಚು ರಾಜಕೀಯ ಪಕ್ಷಗಳು ಇವೆಯಾದರೂ ಅವುಗಳ ಪೈಕಿ ಕನಿಷ್ಟ ಒಂದು ಸೀಟನ್ನಾದರೂ ಗೆದ್ದಿರುವ ರಾಜಕೀಯ ಪಕ್ಷಗಳು ಸುಮಾರು ಹತ್ತು ಮಾತ್ರ. ಹೀಗಾಗಿ ಇನ್ನುಳಿದ ರಾಜಕೀಯ ಪಕ್ಷಗಳು ಕೇಂದ್ರದಲ್ಲಿ ಸರ್ಕಾರ ರಚನೆಯ ದೃಷ್ಟಿಯಲ್ಲಿ ನಗಣ್ಯವಾಗಲಿವೆ.

ಹತ್ತು ವರ್ಷದ ಹಿಂದಿನವರೆಗೆ ಸುದೀರ್ಘ ಕಾಲ ದೇಶದಲ್ಲಿ ಸಮ್ಮಿಶ್ರ ಸರ್ಕಾರವೇ ಇತ್ತು. ಆ ಅವಧಿಯಲ್ಲಿ ಆಡಳಿತದ ಮೇಲೆ ರಾಜಕೀಯ ಹಿತಾಸಕ್ತಿಗಳ ಹೊಯ್ದಾಟದಿಂದ ಆಗುತ್ತಿದ್ದ ದುಷ್ಪರಿಣಾಮಗಳು ಹಾಗೂ ಪ್ರಗತಿಯ ನಿಧಾನಗತಿಯನ್ನು ದೇಶದ ಜನರು ನೋಡಿದ್ದಾರೆ. ನಂತರ ಮೋದಿ ನೇತೃತ್ವದಲ್ಲಿ ೨೦೧೪ರಿಂದ ೨೦೨೪ರವರೆಗೆ ಬಿಜೆಪಿ-ಬಹುಮತದ ಬಲಿಷ್ಟ ಸರ್ಕಾರ ಆಡಳಿತ ನಡೆಸಿತು. ಹೆಸರಿಗೆ ಅದೂ ಎನ್ ಡಿ ಎ ಸರಕಾರವೇ ಆದರೂ, ಏಕಪಕ್ಷದ ಅಧಿಪತ್ಯವೇ ಇತ್ತು. ಅದರಿಂದಾಗಿ ಕಳೆದೊಂದು ದಶಕದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತನ್ನ ಆರ್ಥಿಕಾಭಿವೃದ್ಧಿಯ ವೇಗದಿಂದ ಸಾಧಕ ರಾಷ್ಟ್ರವಾಗಿ ಹೊರಹೊಮ್ಮಿದೆ. ದೇಶದ ಘನತೆಯೀಗ ಜಗತ್ತಿನಲ್ಲಿ ಹಿಂದೆಂದಿಗಿಂತ ಹಲವು ಪಟ್ಟು ಹೆಚ್ಚಾಗಿದೆ. ದೇಶದ ಒಳಗೂ ಆರ್ಥಿಕಾಭಿವೃದ್ಧಿಯ ವೇಗ ಜಗತ್ತೇ ಹುಬ್ಬೇರಿಸುವಂತೆ ಹೆಚ್ಚಾಗಿದೆ. ಮೊನ್ನೆಯಷ್ಟೇ ಬಿಡುಗಡೆಯಾದ ಅಂಕಿಅಂಶಗಳ ಪ್ರಕಾರ ೨೦೨೩ರಲ್ಲಿ ಭಾರತದ ಜಿಡಿಪಿಯು ಜಗತ್ತಿನಲ್ಲೇ ಅತ್ಯಂತ ಗರಿಷ್ಟ ಶೇ., ೮.೨ರ ದರದಲ್ಲಿ ವೃದ್ಧಿಸಿದೆ. ಭಾರತದಲ್ಲಿ ಇಂದು ಸಾರ್ವಜನಿಕ ಮೂಲಸೌಕರ್ಯಗಳೂ ಸೇರಿದಂತೆ ಎಲ್ಲಾ ರಂಗದಲ್ಲೂ ಅಗಾಧ ಬೆಳವಣಿಗೆಯಾಗುತ್ತಿದೆ. ಇದಕ್ಕೆ ಪ್ರಬಲ ನಾಯಕತ್ವ ಕಾರಣವಾಗಿತ್ತು ಎಂಬುದು ನಿಸ್ಸಂಶಯ. ಆದರೆ, ಸಮ್ಮಿಶ್ರ ಸರ್ಕಾರದಲ್ಲಿ ಕಠಿಣ ನಿರ್ಧಾರಗಳನ್ನು ಕೈಗೊಳ್ಳುವಾಗ ಹತ್ತಾರ್ಯ್ ಅಡೆತಡೆಗಳು ಎದುರಾಗುತ್ತವೆ. ಪ್ರಾದೇಶಿಕ ಪಕ್ಷಗಳು ತಮ್ಮ ಹಿತಾಸಕ್ತಿಯನ್ನು ಮುಂದಿಟ್ಟು ರಾಜಕೀಯ ಪಟ್ಟುಗಳನ್ನು ಹಾಕುತ್ತವೆ. ಅದು ತಪ್ಪಲ್ಲ. ಅದೂ ಅಭಿವೃದ್ಧಿಯ ರಾಜಕಾರಣವೇ. ಆದರೆ ಅದು ದೇಶದ ಒಟ್ಟಾರೆ ಪ್ರಗತಿಗೆ ಅಡ್ಡಿಯಾಗಬಾರದು. ಸಮ್ಮಿಶ್ರ ಸರಕಾರವೆಂಬುದು ತಂತಿಯ ಮೇಲಿನ ನಡಿಗೆ, ಹೀಗಾಗಿ ರಾಜಕೀಯ ಒಳಗೊಳ್ಳುವಿಕೆಯ ಜೊತೆಗೇ ಅಭಿವೃದ್ಧಿಯ ಚಕ್ರವೂ ವೇಗವಾಗಿ ತಿರುಗುತ್ತಿರುವಂತೆ ನೋಡಿಕೊಳ್ಳುವ ಹೊಣೆಯೀಗ ನರೇಂದ್ರ ಮೋದಿಯವರ ಹೆಗಲೇರಿದೆ.

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೦೬-೦೬-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ