ಸಮ ಸಮಾಜದ ಮತ್ತೆ ಕಲ್ಯಾಣ...

ಸಮ ಸಮಾಜದ ಮತ್ತೆ ಕಲ್ಯಾಣ...

ನಮ್ಮ ಹಳ್ಳಿ ಹೋಟೆಲ್, ನಮ್ಮೂರಿನಲ್ಲಿ ಇರುವುದು ಒಂದೇ ಹೋಟೆಲ್. ನಮ್ಮ ತಾತ ನಂತರ ಅಪ್ಪ ಈಗ ನಾನು ಇದನ್ನು ನಡೆಸಿಕೊಂಡು ಹೋಗುತ್ತಿದ್ದೇವೆ.

ಬೆಳಗಿನ ತಿಂಡಿ-ಇಡ್ಲಿ, ಮಸಾಲ ವಡೆ, ಚಿತ್ರಾನ್ನ, ಉಪ್ಪಿಟ್ಟು, ಪೂರಿ ಸಾಗು, ಕೆಲವೊಮ್ಮೆ ದೋಸೆ. ಮಧ್ಯಾಹ್ನದ ಊಟ- ಅನ್ನ, ಸಾಂಬಾರ್, ಹಪ್ಪಳ, ಮಜ್ಜಿಗೆ, ಉಪ್ಪಿನಕಾಯಿ. ಪ್ರತಿ ಸೋಮವಾರ ಹೋಳಿಗೆ ಊಟ. ಸಂಜೆ ಬೊಂಡ, ಅವಲಕ್ಕಿ, ಮೆಣಸಿನಕಾಯಿ ಬಜ್ಜಿ. ರಾತ್ರಿ ಕೇವಲ ಅನ್ನ, ಸಾಂಬಾರ್ ಮತ್ತು ರಸಂ ಮಾತ್ರ. ಕಾಫಿ, ಟೀ, ಹಾಲು ದಿನಪೂರ್ತಿ ಇರುತ್ತದೆ.

ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ರವರೆಗೆ ನಿರಂತರವಾಗಿ ತೆರೆದಿರುತ್ತದೆ. ನಾನು, ನನ್ನ ಪತ್ನಿ, ಅಡುಗೆ ಭಟ್ಟರು ಹಾಗು 3 ಜನ ಸಹಾಯಕರು ನಮ್ಮ ಟೀಮ್. ಒಳಗೆ 15 ಜನ ಕುಳಿತುಕೊಳ್ಳುವಷ್ಟು ಟೇಬಲ್ ಕುರ್ಚಿ, ಹೊರಗೆ 10-12 ಜನ ಕೂರುವಷ್ಟು  ಹಲಗೆಗಳು. ಮೇಲೆ ಟಾರ್ಫಾಲ್. ಹೋಟೆಲ್ ಗೆ ಹೊಂದಿಕೊಂಡಂತಿರುವ  ಹಿಂಭಾಗದಲ್ಲೇ ನಮ್ಮ ಮನೆ.

ಹಿಂದಿನಿಂದಲೂ ಬಂದ ಪದ್ಧತಿಯಂತೆ ಊರಿನ ಬೇರೆಲ್ಲಾ ಜಾತಿಯ ಜನರು ಒಳಗಿನ ಜಾಗದಲ್ಲಿ ಕುಳಿತು ತಿಂದರೆ ದಲಿತರಿಗೆ ಹೊರಗಿನ ಜಾಗ ಮತ್ತು ಪ್ರತ್ಯೇಕ ತಟ್ಟೆ ಲೋಟಗಳು. ಅವರು ಒಳಗೆ ಬರುವಂತಿರಲಿಲ್ಲ. ಇದು ಮೊದಲಿನಿಂದ ಇದ್ದ ವ್ಯವಸ್ಥೆಯಾದ್ದರಿಂದ ಯಾವ ತೊಂದರೆಯೂ ಇಲ್ಲದೆ ನಡೆಯುತ್ತಿತ್ತು ಆದರೆ ಇತ್ತೀಚೆಗೆ ನಮ್ಮ ಊರಿನಲ್ಲಿ ಇದ್ದ ರೈತ ಸಂಘದ ಬೋರ್ಡ್ ಪಕ್ಕದಲ್ಲೇ "ದಲಿತ ಸಂಘರ್ಷ ಸಮಿತಿ" ಎಂದು ಮತ್ತೊಂದು ಬೋರ್ಡ್ ಹಾಕಿದ ಕೆಲವು ಯುವಕರು ಅಂಬೇಡ್ಕರ್ ಜಯಂತಿಯನ್ನು ಬಹಳ ವಿಜೃಂಭಣೆಯಿಂದ ಮಾಡಿದರು. 

ಅದಾದ ಕೆಲವೇ ದಿನಗಳಲ್ಲಿ ಒಂದು ದಿನ ಆ ಊರಿನ ದಲಿತ ಚಳವಳಿಯನ್ನು ಹುಟ್ಟುಹಾಕಿದ ನನಗೆ ಪರಿಚಿತರೇ ಆದ ಮೇಷ್ಟ್ರು ಐದಾರು ಜನ ಹುಡುಗ ರೊಂದಿಗೆ ಬಂದು  "ನೀವು ಇಷ್ಟು ದಿನ ದಲಿತರಿಗೆ ನಿಮ್ಮ ಹೋಟೆಲ್ ಹೊರಗೆ ಊಟ ಕೊಡುತ್ತಿದ್ದಿರಿ. ಪ್ರತ್ಯೇಕ ತಟ್ಟೆ ಲೋಟ ಬೇರೆ ಇದೆ. ಓಕೆ. ಆದರೆ ಇನ್ನು ಮುಂದೆ ಎಲ್ಲರಂತೆ ನಮಗೂ ಒಳಗೆ ಪ್ರವೇಶ ಕೊಡಬೇಕು. ಕಾಲ ಬದಲಾಗುತ್ತಿದೆ ನಮ್ಮ ಯುವಕರು ಜಾಗೃತರಾಗುತ್ತಿದ್ದಾರೆ. ಕಾನೂನಿನ ಬೆಂಬಲವೂ ಇದೆ. ಯಾವ ಪ್ರತ್ಯೇಕತೆಯೂ ಮಾಡಬಾರದು. ನಾವೂ ನಿಮ್ಮಂತೆ ಮನುಷ್ಯರಲ್ಲವೆ. ನಾಳೆಯಿಂದ ನಾವು ಒಳಗೆ ಕುಳಿತು ತಿನ್ನುತ್ತೇವೆ " ಎಂದು ಗೌರವ ಪ್ರೀತಿಯಿಂದಲೇ ಮನವಿ ಮಾಡಿಕೊಂಡರು.

ನನಗೆ ಅವರು ಹೇಳುವುದು ನಿಜ ಅನಿಸಿದರು ಸ್ವಲ್ಪ ವಿಚಲಿತನಾದೆ. ತಕ್ಷಣ ನಿರ್ಧಾರ ಕೈಗೊಳ್ಳುವುದು ಸಾಧ್ಯವಿರಲಿಲ್ಲ. ನನ್ನ ವ್ಯಾಪಾರದಲ್ಲಿ ಶೇಕಡ 80 ಕ್ಕೂ ಹೆಚ್ಚು ಪಾಲು ಇದ್ದಿದ್ದು ಪ್ರಬಲ ಇತರ ಜಾತಿಯ ಜನರಿಂದ. ದಲಿತರು ಹೋಟೆಲ್ ಗೆ ಬರುತ್ತಿದ್ದುದು ಕೆಲವರು ಮಾತ್ರ. ಗೊಂದಲಕ್ಕೆ ಬಿದ್ದೆ. ಆ ಮೇಷ್ಟ್ರಿಗೆ  "ಆಯ್ತು, ಆದರೆ ನನ್ನ ಅಭಿಪ್ರಾಯ ತಿಳಿಸಲು ಮತ್ತು ಮುಂದಿನ ಯೋಚನೆ ಮಾಡಲು 15 ದಿನ ಕಾಲಾವಕಾಶ ಬೇಕು ಎಂದೆ.

ಅದಕ್ಕವರು ಸಂತೋಷದಿಂದಲೇ ಎಷ್ಟೋ ವರ್ಷಗಳು ಕಾದಿದ್ದೇವೆ. ಹದಿನೈದು ದಿನ ಯಾವ ಲೆಕ್ಕ. ಆದರೆ ನಿಮ್ಮ ನಿರ್ಧಾರ ನಮ್ಮ ವಿರುದ್ಧವಿದ್ದರೆ ನಾವು ಒಳಗೆ ನುಗ್ಗಿ ಗಲಾಟೆ ಮಾಡುವುದು ಗ್ಯಾರಂಟಿ ಎಂದು ಎಚ್ಚರಿಕೆಯನ್ನು ಕೊಟ್ಟು ಹೋದರು. ಈಗ ಯೋಚನೆಗೆ ಬಿದ್ದೆ. ವಿಷಯ ಗಂಭೀರವಾಗಿದೆ ಎಂದು ತಿಳಿದು ಇತರೆ ಕೆಲವು ಜನರ ಬಳಿ ಗುಟ್ಟಾಗಿ ವಿಷಯ ತಿಳಿಸಿದೆ. ಅದಕ್ಕವರು " ನೀವೇನು ಯೋಚನೆ ಮಾಡಬೇಡಿ, ಅವರ ಜೊತೆ ಒಟ್ಟಿಗೆ ಕುಳಿತು ತಿನ್ನಲು ಸಾಧ್ಯವಿಲ್ಲ. ಇದು ತಲತಲಾಂತರದಿಂದ ನಡೆದು ಬಂದಿದೆ. ನಿಮ್ಮ ಪರವಾಗಿ ನಾವು ನಿಲ್ಲುತ್ತೇವೆ. ಎಷ್ಟೇ ಗಲಾಟೆಯಾದರೂ ಪರವಾಗಿಲ್ಲ ಎಂದು ರೋಷದಿಂದಲೇ ಹೇಳಿದರು.

ಇದರಿಂದ ನನಗೆ ಧೈರ್ಯ ಉಂಟಾಗುವ ಬದಲು ಮತ್ತಷ್ಟು ಸಂಕಷ್ಟ ಹೆಚ್ಚಾಯಿತು. ಒಳಗೆ ಬನ್ನಿ ಎಂದು ದಲಿತರಿಗೆ ಹೇಳಿದರೆ ಬೇರೆ ಜಾತಿಯವರು ಹೋಟೆಲ್ ಗೆ ಬರುವುದಿಲ್ಲ. ವ್ಯಾಪಾರ ನಷ್ಟ ಮತ್ತು ಬದುಕು ಸಾಗುವುದಿಲ್ಲ . ಬರಬೇಡಿ ಎನ್ನಲು ನನಗೆ ಮನಸ್ಸಾಗುತ್ತಿಲ್ಲ ಅಲ್ಲದೆ ಅವರು ಗಲಾಟೆ ಮಾಡುತ್ತಾರೆ. ಆಗ ಇಬ್ಬರ ನಡುವೆಯೂ ಹೊಡೆದಾಟಗಳಾಗುತ್ತದೆ. ಇದಕ್ಕೆ ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ. ಇತ್ತೀಚಿನವರೆಗೂ ಅವರು ಕೇಳಿರಲಿಲ್ಲ. ನಾನು ಅದನ್ನು ಯೋಚಿಸಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬಿಗಡಾಯಿಸಿದೆ.

ಸ್ವಲ್ಪ ಸೂಕ್ಷ್ಮ ಮನಸ್ಸಿನವನಾದ ನನಗೆ ನನ್ನಿಂದಾಗಿ ಸಾವು ನೋವುಗಳು ಆಗುವುದು ಬೇಕಿರಲಿಲ್ಲ. ಸಮಸ್ಯೆ ಶಾಂತಯುತವಾಗಿ ಪರಿಹಾರವಾಗುವುದು ಅಸಾಧ್ಯ ಎಂದು ಮನವರಿಕೆಯಾಯಿತು. ಬಹಳ ಕಷ್ಟದಿಂದ, ದು:ಖದಿಂದ, ನೋವಿನಿಂದ ಒಂದು ನಿರ್ಧಾರಕ್ಕೆ ಬಂದೆ. ಬಹಳ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದ ನನ್ನ ಊರು, ಹೋಟೆಲ್ ಮನೆ ಎಲ್ಲಾ ಮಾರಿ ನಗರ ಸೇರುವುದೆಂದು ತೀರ್ಮಾನಿಸಿದೆ. 

ನನ್ನ ಪತ್ನಿಯ ಹುಟ್ಟೂರು ಇದೇ ಆಗಿದ್ದರಿಂದ ಆಕೆ ವಿಷಯ ಕೇಳಿ ಗಳಗಳನೆ ಅತ್ತಳು. ನಮಗೆ ವಿಧಿ ಇರಲಿಲ್ಲ. ಹೋಟೆಲ್ ಬಿಟ್ಟರೆ ಬೇರೆ ವ್ಯವಹಾರ ಗೊತ್ತಿರಲಿಲ್ಲ. ಒಂದು ವೇಳೆ ಹಠ ಹಿಡಿದರೆ ನನ್ನದೇ ಊರಿನ ಜನರ ಯಾವ ಕಡೆಯವರ  ತಲೆ ಬೇಕಾದರೂ  ಉರುಳುವ ಸಾಧ್ಯತೆ ಇತ್ತು. ಅದು ನನಗೆ ಬೇಕಿರಲಿಲ್ಲ ಮತ್ತು ಅದನ್ನು ಎದುರಿಸುವ ಧೈರ್ಯವೂ ಇರಲಿಲ್ಲ.

ಮನೆ, ಜಾಗ ಮಾರಲು ನಮ್ಮ ಊರಿನ ಹಿರಿಯರು ಮತ್ತು ಎಲ್ಲರಿಂದಲೂ ಗೌರವಿಸಲ್ಪಡುತ್ತಿದ್ದ ನಮ್ಮ ತಂದೆಯ ಆತ್ಮೀಯರು ಆದ ನಿವೃತ್ತ ತಹಶೀಲ್ದಾರ್ ಬಳಿ ಹೋದೆ. ವಿಷಯ ತಿಳಿಸಿ ಬೇಗ ಜಾಗ ಮಾರಿಸಿಕೊಡಬೇಕೆಂದು ವಿನಂತಿಸಿದೆ. ಅವರಿಗೆ ಪರಿಸ್ಥಿತಿ ಅರಿವಾಯಿತು. ತುಂಬಾ ನೊಂದುಕೊಂಡರು. ಆದರೂ ಕ್ಷಣ ಯೋಚಿಸಿ ಕೊನೆಯ ಪ್ರಯತ್ನವಾಗಿ ನನಗೆ ಒಂದು ಸಲಹೆ ನೀಡಿದರು. ಹೇಗಿದ್ದರೂ ಮನೆ ಮಾರುವ ನಿರ್ಧಾರ ಮಾಡಿದ್ದೀಯ. ಆ ಕೆಲಸ ನಾನು ಪೂರೈಸುತ್ತೇನೆ. ಆದರೆ ನೀನು ದಯವಿಟ್ಟು ಒಮ್ಮೆ ಎರಡೂ ಗುಂಪಿನ ಜನರನ್ನು ಒಟ್ಟಿಗೆ ಮಾತುಕತೆಗೆ ಸೇರಿಸು. ಇಬ್ಬರೂ ಸೇರಿ ಏನಾದರೂ ಪರಿಹಾರ ಸಾಧ್ಯವೇ ನೋಡೋಣ ಎಂದರು.

ನನಗೆ ಯಾವುದೇ ಭರವಸೆ ಇಲ್ಲದಿದ್ದರೂ ಹಿರಿಯರ ಮಾತು ಕಡೆಗಣಿಸದೆ ಎರಡೂ ಕಡೆಯ ಜನರನ್ನು ನನ್ನ ಹೋಟೆಲ್ ಮುಂದೆಯೇ ಇದ್ದ ಖಾಲಿ ಜಾಗದಲ್ಲಿ ಸೇರಿಸಿದೆ.  ಅವರನ್ನು ಉದ್ದೇಶಿಸಿ ಹಿರಿಯರು," ನೋಡಿ ಹಿಂದಿನಿಂದಲೂ ನಾವೆಲ್ಲ ಒಟ್ಟಿಗೇ ಇದ್ದೇವೆ. ಈ ಹೋಟೆಲ್ ನವರು ತಾತಾನ ಕಾಲದಿಂದಲೂ ಇಲ್ಲಿಯೇ ನೆಲೆಸಿದ್ದಾರೆ. ಈಗ ನಿಮ್ಮಿಬ್ಬರ ಜಾತಿಯ ಜಗಳದಿಂದ ಅವರು ಬೇಸತ್ತು ಊರು ಬಿಡುತ್ತಿದ್ದಾರೆ. ತುಂಬಾ ಒಳ್ಳೆಯ ಜನ. ನಿಮಗೂ ಗೊತ್ತು. ಅವರನ್ನು ಕಳೆದುಕೊಳ್ಳುವುದು ಬೇಡ. ದಯವಿಟ್ಟು ನಿಮ್ಮ ಪ್ರತಿಷ್ಠೆ ಬಿಟ್ಟು ಇಬ್ಬರೂ ಒಂದಾಗಿ ಒಂದು ಪರಿಹಾರ ಹುಡುಕಿಕೊಳ್ಳಿ” ಎಂದು ಹೇಳಿ ಮೊದಲಿಗೆ ಸಮಸ್ಯೆ ಹೇಳಲು ಪ್ರಬಲ ಜಾತಿಯವರಿಗೆ ಅವಕಾಶ ನೀಡಿದರು.

ಅವರಲ್ಲಿ ಒಬ್ಬರು "ನೋಡಿ ಹಿಂದಿನಿಂದಲೂ ಆಚರಿಸುತ್ತಿರುವ ಸಂಪ್ರದಾಯಕ್ಕೆ ನಾವು ಬದ್ದ. ಸಮಸ್ಯೆ ಸೃಷ್ಟಿಸುತ್ತಿರುವುದು ದಲಿತರೇ."ಎಂದರು. ಆಗ ದಲಿತ ನಾಯಕರೊಬ್ಬರು "ನೀವು ಹೇಳುವುದು ನಿಜ. ಆದರೆ ನನ್ನ ಪ್ರಶ್ನೆಗೆ ನೇರ ಉತ್ತರ ಕೊಡಿ.

'ನಾವು ಮನುಷ್ಯರು ಹೌದೇ ಅಲ್ಲವೇ  ? ಯಾರೂ ಮಾತನಾಡಲಿಲ್ಲ. ಅವರೇ ಮುಂದುವರೆಸಿದರು, "ನೋಡಿ ಕಾಲ ಬದಲಾಗಿದೆ. ನಮ್ಮ ಜನರಿಗೂ ಅವರ ಹಕ್ಕುಗಳ ಬಗ್ಗೆ ತಿಳಿವಳಿಕೆ ಮೂಡಿದೆ. ಅದಕ್ಕಿಂತ ಹೆಚ್ಚಾಗಿ ಇಷ್ಟುದಿನ ತಮಗಾದ ಶೋಷಣೆಯ ಬಗ್ಗೆ ಆಕ್ರೋಶವಿದೆ. ದಯವಿಟ್ಟು ಅದನ್ನು ಅರ್ಥ ಮಾಡಿಕೊಂಡು ನಮ್ಮನ್ನು ಸಮಾನಾಗಿ ಕಾಣಿ. ನಮಗೆ ಒಳಗೆ ಪ್ರವೇಶ ನೀಡಿ. ನಾವೇನು ರಾಕ್ಷಸರಲ್ಲ." 

ಪ್ರಬಲ ಜಾತಿಯವರ ಮದ್ಯೆ ಗುಸುಗುಸು ಪ್ರಾರಂಭವಾಯಿತು. ಕೊನೆಗೆ ಒಬ್ಬರು " ನೀವು ಒಳಗೆ ಬರಲು ನಮ್ಮ ಅಭ್ಯಂತರವೇನೂ ಇಲ್ಲ. ಆದರೆ ಕುಡಿದು ಅಸಭ್ಯವಾಗಿ ಒಳಗೆ  ಬಂದರೆ ನಮಗೆ ನಿಮ್ಮ ಜೊತೆ ಕುಳಿತು ಊಟ ಮಾಡಲು ಸಾಧ್ಯವಿಲ್ಲ ಮತ್ತು ನೀವು ಉಪಯೋಗಿಸುವ ತಟ್ಟೆ ಲೋಟ ಬೇರೆಯಾಗಿಯೇ ಇರಲಿ. ಇದಕ್ಕೆ ಒಪ್ಪಿದರೆ ಒಳಗೆ ಬನ್ನಿ."ಎಂದರು.

ಆಗ ದಲಿತರೊಬ್ಬರು " ನಮ್ಮನ್ನು ಒಳಗೆ ಬಿಡಲು ನೀವು ಸಮ್ಮತಿಸಿದ್ದಕ್ಕೆ ಧನ್ಯವಾದಗಳು. ನಿಜ ನೀವು ಹೇಳಿದಂತೆ ಯಾರೇ ಕುಡಿದು ಬಂದು ಅಸಹ್ಯವಾಗಿದ್ದರೆ ಅವರೊಟ್ಟಿಗೆ ಊಟ ಮಾಡುವುದು ಕಷ್ಟ. ಅದಕ್ಕೆ ಜಾತಿಯ ಭೇದವಿಲ್ಲ. ಆದ ಕಾರಣ ಯಾರೇ ಕುಡಿದು ಬಂದರೂ ಜಾತಿಯ ಹಂಗಿಲ್ಲದೆ ಅವರು ಹೊರಗಡೆಯೇ ಇರಬೇಕು. ಕುಡಿಯದೇ ಬರುವ ಎಲ್ಲರಿಗೂ ಒಳಗೆ ಪ್ರವೇಶ ನೀಡಬೇಕು ಈ ನೆಪದಲ್ಲಾದರೂ ಕುಡಿತ ಕಡಿಮೆಯಾಗಲಿ. " 

ನೀವು ನಂಬುವುದಿಲ್ಲ, ಆದರೆ ಸತ್ಯವಾಗಿಯು ಎಲ್ಲರೂ ಎದ್ದು ನಿಂತು ಇದಕ್ಕೆ ಚಪ್ಪಾಳೆ ತಟ್ಟಿ ಸಂತೋಷದಿಂದ ಸ್ವಾಗತಿಸಿದರು. ಆದರೆ ತಟ್ಟೆ ಲೋಟ ಪ್ರತ್ಯೇಕವಾಗಿ ಇಡುವುದಕ್ಕೆ ದಲಿತರು ಪ್ರಬಲವಾಗಿ ವಿರೋಧಿಸಿದರು. ಅದನ್ನು ಒಪ್ಪಲು ಪ್ರಬಲ ಜಾತಿಯ ನಾಯಕರೂ ಸಿದ್ದರಿರಲಿಲ್ಲ. 

ಇನ್ನೇನು ಸಭೆ ವಿಫಲವಾಯಿತು ಎನ್ನುವಷ್ಟರಲ್ಲಿ ಹಿರಿಯರು ಎದ್ದು ನಿಂತು " ನೋಡಿ ಈಗಾಗಲೇ ನಿಮ್ಮ ಮನಸ್ಸಗಳು ಸ್ವಲ್ಪ ಹತ್ತಿರ ಬಂದಿದೆ. ಇದು ಸರಿಯೋ ತಪ್ಪೋ ಗೊತ್ತಿಲ್ಲ. ಆದರೆ ತಟ್ಟೆ ಲೋಟದ ವಿಷಯದಲ್ಲಿ ನಾನೊಂದು ಸಲಹೆ ಕೊಡುತ್ತೇನೆ. ಈ ಸ್ಟೀಲ್ ತಟ್ಟೆ ಲೋಟ ಬಿಟ್ಟು ಪರಿಸರ ಸ್ನೇಹಿಯೂ, ಆರೋಗ್ಯ ಸ್ನೇಹಿಯೂ ಆದ ಬಾಳೆಎಲೆ, ಸಮಾರಂಭಗಳಲ್ಲಿ ಉಪಯೋಗಿಸುವ ಊಟದ ಎಲೆ (ಮುತ್ತುಗದ ಎಲೆ) ಗಳನ್ನು ಊಟ ತಿಂಡಿಗೂ, ಕಾಫಿ ಟೀಗೆ ಕುಡಿದು ಬಿಸಾಡುವ ಪ್ಲಾಸ್ಟಿಕ್ ಲೋಟಗಳನ್ನು (ಆಗಿನ್ನೂ ಪ್ಲಾಸ್ಟಿಕ್ ನಿಷೇದಿಸಿರಲಿಲ್ಲ) ಉಪಯೋಗಿಸೋಣ. ಬೆಲೆ ಒಂದೆರೆಡು ರೂಪಾಯಿ ಜಾಸ್ತಿಯಾದರೂ ಪರವಾಗಿಲ್ಲ. ಬದಲಾವಣೆ ಆಗಲು ಸ್ವಲ್ಪ ಸಮಯ ಬೇಕಾಗುತ್ತದೆ. ಏನು ಹೇಳುತ್ತೀರಿ "ಎಂದರು.

ನನ್ನ ಅದೃಷ್ಟವೋ ಏನೋ ಎರಡೂ ಕಡೆಯವರು ಮಾತನಾಡಿ ಇದಕ್ಕೆ ಮನ:ಪೂರ್ವಕವಾಗಿ ಒಪ್ಪಿಗೆ ಸೂಚಿಸಿದರು. ನನಗೆ ಮಾತೇ ಹೊರಡಲಿಲ್ಲ. ಕಣ್ಣುಗಳಿಂದ ನೀರು ತನ್ನಿಂದ ತಾನೇ ಧಾರಾಕಾರವಾಗಿ ಸುರಿಯಿತು. ಏನೋ ಒಂದು ಪವಾಡ ಸಂಭವಿಸಿದಂತೆ ಭಾಸವಾಯಿತು. ಎಲ್ಲರಿಗೂ ಕೃತಜ್ಞತೆ ಹೇಳಿ ಮಾರನೆಯ ದಿನ ನಾನೇ ಸಂತೋಷದಿಂದ ಉಚಿತವಾಗಿ ಊಟದ ವ್ಯವಸ್ಥೆ ಮಾಡಿದೆ. ಎಲ್ಲರನ್ನೂ ಒಟ್ಡಿಗೆ ಕೂಡಿಸಿ ಊಟ ಹಾಕಿದೆ. ಊಟದ ನಂತರ ಎಲ್ಲರೂ ಹಿರಿಯರ ಸುತ್ತ ಕುಳಿತು ಎಲೆ ಅಡಿಕೆ ಹಾಕುತ್ತಾ ನಗುತ್ತಾ ಮಾತನಾಡುತ್ತಿದ್ದರು. 

ನನ್ನ ಹೆಂಡತಿ ಸ್ವತಃ ಊಟ ಮಾಡಿದ ಎಲೆ ಎತ್ತುತ್ತಾ ಬಂದವರಿಗೆ ನಗುಮುಖದಿಂದ ಸತ್ಕರಿಸುತ್ತಿದ್ದುದು ಕಣ್ಣಿಗೆ ಕಟ್ಡಿದಂತಿದೆ. ಇದು ನಡೆದು ಸುಮಾರು ಎರಡು ವರ್ಷವಾಗುತ್ತಾ ಬಂತು. ಇಲ್ಲಿಯವರೆಗೂ ನನಗೆ ಹೋಟೆಲ್ ಊಟದ ವಿಷಯದಲ್ಲಿ ಜಾತಿಗೆ ಸಂಬಂದಿಸಿದಂತೆ ಯಾವ ಸಮಸ್ಯೆಯೂ ಎದುರಾಗಿಲ್ಲ. ಎಲ್ಲಾ ಕಡೆ ನನ್ನ ದೇಶ ಜಾತಿ ಮುಕ್ತವಾಗುವತ್ತ ಸಾಗಲಿ ಎಂದು ಆಶಿಸುತ್ತೇನೆ. ನೀವೂ ಒಮ್ಮೆ ಬನ್ನಿ ನನ್ನ ಪುಟ್ಟ ಹೋಟೆಲ್ಲಿಗೆ ಯಾವ ಜಾತಿಯಾದರೂ, ಯಾವ ಧರ್ಮದವರಾದರೂ ಅಡ್ಡಿಯಿಲ್ಲ. 

ಸಮಾನತೆಯ ಸಮಾಜದತ್ತ, ಮತ್ತೆ ಕಲ್ಯಾಣ......

  • 301 ನೆಯ ದಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನಿಂದ ಸುಮಾರು‌ 25 ಕಿಲೋಮೀಟರ್  ದೂರದ ಚನ್ನರಾಯಪಟ್ಟಣ  ತಾಲ್ಲೂಕು  ತಲುಪಿತು. ಇಂದು 29/8/2021 ಭಾನುವಾರ 302 ನೆಯ ದಿನ  ನಮ್ಮ ಕಾಲ್ನಡಿಗೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನಿಂದ ಸುಮಾರು 37 ಕಿಲೋಮೀಟರ್  ‌ದೂರದ  ಹಾಸನ ನಗರ ತಲುಪಲಿದೆ. ನಾಳೆ 30/8/2021 ಸೋಮವಾರ 302 ನೆಯ ದಿನ ನಮ್ಮ ಕಾಲ್ನಡಿಗೆ  ಹಾಸನ ನಗರದಲ್ಲಿಯೇ ಇರಲಿದೆ. ಬಹುಶಃ ಅಲ್ಲಿ ಎರಡು ದಿನ ತಂಗುವ ಸಾಧ್ಯತೆ ಇದೆ.

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ: ಇಂಟರ್ನೆಟ್ ತಾಣ