ಸರಕಾರವನ್ನು ಮಣಿಸಿದ "ಗೋವಾ ಉಳಿಸಿ” ಆಂದೋಲನ
ಉತ್ತರ ಗೋವಾದ ಬಿಕೊಲಿಮ್ನಲ್ಲಿ ಜಮಾಯಿಸಿದ್ದ ಸಾವಿರಾರು ಗ್ರಾಮವಾಸಿಗಳು ಸಾರ್ವಜನಿಕ ಅಹವಾಲು ಸಭೆಯೊಂದನ್ನು ರದ್ದು ಮಾಡಿಸಿದ್ದು - 18 ಜನವರಿ 2007ರಂದು. ಅವರ ರೋಷಕ್ಕೆ ಕಾರಣ, ಅದು ದುರುದ್ದೇಶದ ಮೋಸದ ಸಭೆ ಎಂಬುದು.
ಎರಡು ದಿನಗಳ ಮುಂಚೆ, ದಕ್ಷಿಣ ಗೋವಾದ ಕಾನಕೋನಾದ ಲೊಲಿಯಮ್ - ಪೊಲ್ಲೆಮ್ ಪಂಚಾಯತ್ನಲ್ಲಿ ಇಂತಹದೇ ಪ್ರತಿಭಟನೆ. ಅಲ್ಲಿ ಒಟ್ಟು ಸೇರಿದ್ದ 600 ಜನರು ಗಣಿಗಾರಿಕೆ ಉದ್ಯಮವೊಂದನ್ನು ವಿರೋಧಿಸಿ ಜಾಥಾ ನಡೆಸಿದರು. ಅದು 471 ಹೆಕ್ಟೇರ್ ಪ್ರದೇಶದಲ್ಲಿ ಬಾಕ್ಸೈಟ್ ಅಲ್ಯುಮಿನಿಯಮ್ ಜಂಬಿಟ್ಟಿಗೆ ಅಗೆಯುವ ಗಣಿಗಾರಿಕೆ ಯೋಜನೆ.
ಬಿಕೊಲಿಮ್ನಲ್ಲಿ ಜನರ ಪ್ರತಿಭಟನೆ ಹೇಗಿತ್ತು ಅಂತೀರಾ! ಸಾರ್ವಜನಿಕ ಅಹವಾಲು ಸಭೆ ನಡೆಯುವ 30 ದಿನಗಳ ಮುಂಚೆ, ಅಲ್ಲಿನ ಜನರಿಗೆ ಎಲ್ಲ ಅಂಕೆಸಂಖ್ಯೆ ಸಹಿತ ಮಾಹಿತಿ ಮತು ದಾಖಲೆಗಳನ್ನು ಒದಗಿಸದೆ ಇದ್ದದ್ದು ತಪ್ಪಾಯಿತೆಂದು ಅಧಿಕಾರಿಗಳು ಒಪ್ಪಿಕೊಂಡರು. ಮಾತ್ರವಲ್ಲ, ಸಾರ್ವಜನಿಕ ಅಹವಾಲು ಸಭೆಗಾಗಿ ಹೊಸ ದಿನಾಂಕ ನಿಗದಿ ಪಡಿಸಿದರು.
ದಕ್ಷಿಣ ಗೋವಾದ ಚಾಂದೋರ್ ಗ್ರಾಮದ 2,000 ಗ್ರಾಮಸ್ಥರು ತಮ್ಮ ಹಳ್ಳಿಯ ಅಭಿವೃದ್ಧಿಗಾಗಿ ಜನಪರ ಪಂಚವಾರ್ಷಿಕ ಯೋಜನೆ (2007 - 2012) ಸಿದ್ಧ ಪಡಿಸಿದರು. ಸುಸ್ಥಿರ ಹಾಗೂ ಜನಸ್ನೇಹಿ ಅಭಿವೃದ್ಧಿ ಅದರ ಉದ್ದೇಶ. ಯೋಜನೆ ರಚನೆಯ ಕೆಲಸ ಅವರೇ ಕೈಗೆತ್ತಿಕೊಳ್ಳಲು ಕಾರಣವೇನು? ಜನಪ್ರತಿನಿಧಿಗಳ ಅಸಡ್ಡೆ ಮತ್ತು ಗ್ರಾಮದ ಹದಗೆಟ್ಟ ಸ್ಥಿತಿಗತಿಗಳೇ ಕಾರಣ. ಈ ಯೋಜನೆಯ ಮೂಲಕ ನ್ಯಾಯಯುತ ಸಾಮಾಜಿಕ ಹಾಗೂ ಆರ್ಥಿಕ ಅಡಿಗಟ್ಟಿನಲ್ಲಿ ತಮ್ಮ ಬದುಕು ರೂಪಿಸುವುದು ಅವರ ಧ್ಯೇಯ.
ದೋಲು ಅಂದ್ರಾದೆಗೆ ವಯಸ್ಸು ಎಂಬತ್ತು. ಈ ಇಳಿವಯಸ್ಸಿನಲ್ಲಿ ಪ್ರತಿಭಟನೆಯ ರೋಷ ತುಂಬಿದೆ ಅವಳೆದೆಯಲ್ಲಿ. ತನ್ನ ಕುಟುಂಬ ಮತ್ತು ಮನೆ ಉಳಿಸಲಿಕ್ಕಾಗಿ ಹೋರಾಟದ ಹಾದಿಯಲ್ಲಿ ಹೆಜ್ಜೆಯಿಟ್ಟಿದ್ದಾಳೆ ಆಕೆ. ಯಾಕೆಂದರೆ, ಗೋವಾದ ರಾಜಧಾನಿಯಿಂದ 15 ಕಿಮೀ ದೂರದಲ್ಲಿರುವ ಅವಳ ಮನೆಗೆ ಬಾಂಬೊಲಿಮ್ನ ಅಭಿವೃದ್ಧಿ ಯೋಜನೆಯೊಂದು ವಕ್ಕರಿಸಿದೆ. ಅಭಿವೃದ್ಧಿಯ ನೆಪದಲ್ಲಿ ಅವಳ ಬಾವಿಗಳನ್ನು ಮುಚ್ಚಲಾಗಿದೆ ಮತ್ತು ಅವಳು ಸಮುದ್ರ ತೀರಕ್ಕೆ ಹೋಗದಂತೆ ನಿರ್ಬಂಧಿಸಲಾಗಿದೆ!
ಮಾಪುಸಾದ ಹತ್ತಿರದ ಟಿವಿಮ್ನ ಕೆಲವು ರೈತರೀಗ ಒಗ್ಗಟ್ಟಾಗಿ, ಅಲ್ಲಿ ನಿರ್ಮಾಣ ಆಗಲಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವನ್ನು ವಿರೋಧಿಸುತ್ತಿದ್ದಾರೆ. ಅದಕ್ಕಾಗಿ ಸರಕಾರವು ಕೃಷಿಜಮೀನು ಮತ್ತು ಖಾಸಗಿ ಅರಣ್ಯ ಪ್ರದೇಶವನ್ನು ವಶಪಡಿಸಿಕೊಂಡಿದ್ದರೂ ಅವರು ಎದೆಗುಂದಿಲ್ಲ. "ನಾವು ಹೋರಾಡುತ್ತಿರುವುದು ನಮ್ಮ ಹಕ್ಕುಗಳಿಗಾಗಿ. ಜನರು ಒಗ್ಗಟ್ಟಾಗಿ ಪ್ರತಿಭಟನೆಯ ಧ್ವನಿ ಎತ್ತಿದರೆ ಸರಕಾರ ಕೇಳಲೇ ಬೇಕಾಗುತ್ತದೆ" ಎನ್ನುತ್ತಾರೆ “ಟಿವಿಮ್ ಉಳಿಸಿ” ಆಂದೋಲನದ ಸಂಚಾಲಕ ಎಲ್ವಿನೋ ನೊರೊನ್ಹಾ.
17 ಜನವರಿ 2007ರಂದು ಮುಂಡಾದ ಜನರು ಅಲ್ಲಿನ ಒಬ್ಬ ಭೂಮಾಲೀಕನ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದರು. ಪರಿಸರ ಕಾರಣಕ್ಕಾಗಿ ಸೂಕ್ಷ್ಮವಾದ 2,432 ಚ.ಮೀ. ಮ್ಯಾನ್ಗ್ರೂವಿನಲ್ಲಿ ಆತ ಸುರಿದಿದ್ದ ತ್ಯಾಜ್ಯವಸ್ತುಗಳನ್ನು ತೆಗೆಯ ಬೇಕೆಂದು ಆತನಿಗೆ ಆದೇಶಿಸಲಾಗಿತ್ತು. ರೆವಿನ್ಯೂ ಇಲಾಖೆಯ ಆದೇಶ ಧಿಕ್ಕರಿಸಿ ಅಲ್ಲಿ ತ್ಯಾಜ್ಯ ಸುರಿಯುವುದನ್ನು ಆತ ಮುಂದುವರಿಸಿದ್ದ.
ಇವೆಲ್ಲ ಘಟನಾವಳಿಗಳು ಗೋವಾದ ಜನರು ಗೋವಾದ ನೆಲ-ಜಲ-ಪರಿಸರ ಉಳಿಸಲಿಕ್ಕಾಗಿ ಸಂಘಟಿತರಾಗಿರುವುದರ ಫಲ. 2006ರಲ್ಲಿ ಪ್ರತಿಭಟನೆಗಳ ಕಾವು ಏರಿ, ಕೊನೆಗೊಮ್ಮೆ ಗೋವಾದ ಜನತೆ ಒಕ್ಕೊರಲಿನಿಂದ ಘೋಷಿಸಿತು, "ಗೋವಾ ನಮ್ಮದು, ಅದನ್ನು ಉಳಿಸುವ ಹೊಣೆ ನಮ್ಮದು."
18 ಡಿಸೆಂಬರ್ 2006ರಂದು ಪಣಜಿಯ ಅಜಾದ್ ಮೈದಾನದಲ್ಲಿ ಜನಸಾಗರ. ಜಾತಿ-ಪಕ್ಷಗಳ ಭೇದ ಮರೆತು, ಗೋವಾದ ಪ್ರತಿಯೊಂದು ತಾಲೂಕಿನಿಂದಲೂ ಅಲ್ಲಿಗೆ ಬಂದಿದ್ದರು ಜನರು - "ಗೋವಾ ಉಳಿಸಿ ಆಂದೋಲನ”ದಲ್ಲಿ ಭಾಗವಹಿಸಲಿಕ್ಕಾಗಿ. “ಗೋವಾದ 2011ರ ಪ್ರಾದೇಶಿಕ ಯೋಜನೆ"ಯನ್ನು ರದ್ದುಪಡಿಸುವುದೇ ಅವರೆಲ್ಲರ ಗುರಿ. ಅದಕ್ಕಾಗಿ ಅಂತಿಮ ಹೋರಾಟಕ್ಕೆ ಸಜ್ಜಾಗಿತ್ತು ಗೋವಾದ ಜನತೆ.
ಗೋವಾದ ಜನರ ಆಕ್ರೋಶಕ್ಕೆ ಕಾರಣವಾದ “ಗೋವಾದ 2011ರ ಪ್ರಾದೇಶಿಕ ಯೋಜನೆ"ಯನ್ನು ಗೋವಾ ಟೌನ್ ಮತ್ತು ಕಂಟ್ರಿ ಪ್ಲಾನಿಂಗ್ ಕಾಯಿದೆ, 1974ರ ಸೆಕ್ಷನ್ 11ರ ಪ್ರಕಾರ ಗೋವಾ ಸರಕಾರ ಪ್ರಕಟಿಸಿತ್ತು. ಅದು ಗೋವಾದ “ಮಾಸ್ಟರ್ ಪ್ಲಾನ್”. ಕೃಷಿ, ಅರಣ್ಯ, ಕೈಗಾರಿಕೆ, ನಗರ ಮತ್ತು ಗ್ರಾಮ ಸಮುದಾಯಗಳ ನಿವಾಸ ಪ್ರದೇಶಗಳನ್ನು ಅದರಲ್ಲಿ ಗುರುತಿಸಲಾಗಿತ್ತು. ಒಟ್ಟಾರೆಯಾಗಿ ಅದು ಜನವಿರೋಧಿ ಯೋಜನೆ.
ಆದ್ದರಿಂದಲೇ ಪ್ರತಿಭಟನೆಯ ಅಲೆ. ಇದನ್ನು ಎದುರಿಸಲಾಗದೆ ಗೋವಾ ಸರಕಾರ ಜನರ ಕಣ್ಣೊರೆಸುವ ತಂತ್ರ ಹೂಡಿತು. ಹೊಸಯೋಜನೆಯನ್ನು 5 ಜನವರಿ 2007ರಂದು ಒಂದು ಸಮಿತಿಗೆ ಮರುಪರಿಶೀಲನೆಗಾಗಿ ಒಪ್ಪಿಸಿತು. ಆದರೆ ಗೋವಾದ ಜನತೆಯ ಒಕ್ಕೊರಲ ಬೇಡಿಕೆ ಸ್ಪಷ್ಟವಾಗಿತ್ತು: “ಅದನ್ನು ರದ್ದು ಮಾಡಿ.”
16 ಜನವರಿ 2007ರಂದು ಮರ್ಮಗೋವಾದ ಲೋಹಿಯಾ ಮೈದಾನದಲ್ಲಿ "ಗೋವಾ ಉಳಿಸಿ ಆಂದೋಲನ”ದ ಬೃಹತ್ ಸಾರ್ವಜನಿಕ ಸಭೆ. ಅಲ್ಲಿಯೂ ನೆರೆದಿದ್ದ ಜನಸಾಗರದಿಂದ ಅದೇ ಬೇಡಿಕೆ. ಈಗ ಸರಕಾರ ಜನತೆಗೆ ಮಣಿಯಲೇ ಬೇಕಾಯಿತು. ಅಂತಿಮವಾಗಿ, 26 ಜನವರಿ 2007ರಂದು ಗೋವಾ ಸರಕಾರ '2011ರ ಅಭಿವೃದ್ಧಿ ಯೋಜನೆ"ಯನ್ನು ಹಿಂದೆಗೆದುಕೊಂಡಿತು.
ಹೋರಾಟಗಳು ಗೋವಾದ ಜನತೆಗೆ ಹೊಸತಲ್ಲ. “ಆದರೆ ಈ ಆಂದೋಲನದಲ್ಲಿ ಜನಸಾಮಾನ್ಯರು ನೇರವಾಗಿ ಭಾಗವಹಿಸಿದ್ದಾರೆ. ಅದರಿಂದ ಪಾಠವನ್ನೂ ಕಲಿತಿದ್ದಾರೆ. ಈಗೇನಾದರೂ ಪರಿಸರಕ್ಕೆ ಧಕ್ಕೆ ಆಗುವಂತಿದ್ದರೆ, ಜಿಲ್ಲಾಧಿಕಾರಿಯನ್ನು ನೇರವಾಗಿ ಸ್ಥಳಕ್ಕೆ ಕರೆದೊಯ್ದು, ಅನಾಹುತಕಾರಿ ಕೆಲಸವನ್ನು ಜನರೇ ನಿಲ್ಲಿಸುತ್ತಾರೆ” ಎಂಬುದು ಪರಿಸರವಾದಿ ಕ್ಲಾಡೆ ಅಲ್ವಾರಿಸ್ ಅವರ ಹೇಳಿಕೆ.
ಗೋವಾ ಬಚಾವೋ ಆಂದೋಲನಕ್ಕೆ ಸಮರ್ಥ ನಾಯಕತ್ವ ಒದಗಿಸಿದವರು ಜನಪ್ರಿಯ ವೈದ್ಯ ಡಾ. ಆಸ್ಕರ್ ರೆಬೆಲ್ಲೋ. ಅವರ ಅನುಸಾರ, “ಇದು ಜನತೆಗೆ ಸಂದ ಜಯ. ಅಧಿಕಾರವನ್ನು ಜನರೇ ಚಲಾಯಿಸಿದ ಕಾರಣ ಈ ಜಯ ನಮ್ಮದಾಯಿತು.” ಮುಂದಿನ ಅಭಿವೃದ್ಧಿ ಯೋಜನೆಗಳಲ್ಲಿ ಜನಾಭಿಪ್ರಾಯಕ್ಕೆ ಮನ್ನಣೆ ಸಿಗಲೇಬೇಕೆಂದು, ಅದಕ್ಕಾಗಿ ಜನರ ಸಂಘಟನೆ ಬಲಪಡಿಸುವುದರಲ್ಲಿ ಅವರೀಗ ಕಾರ್ಯನಿರತ.
ಕೃಷಿಜಮೀನು ಕಬಳಿಸುತ್ತಿರುವ ವಿಶೇಷ ವಿತ್ತ ವಲಯ ನಿರ್ಮಾಣ ಯೋಜನೆಗಳ ವಿರುದ್ಧ ಹೋರಾಡುತ್ತಿರುವ ಗ್ರಾಮೀಣ ಜನತೆಗೆ "ಗೋವಾ ಉಳಿಸಿ ಆಂದೋಲನ” ಪ್ರೇರಣೆಯಾಗಲಿ.
ಫೋಟೋ: ಡಿಸೆಂಬರ್ 2020ರಲ್ಲಿ ಗೋಡೆ-ಕಲಾಕೃತಿಗಳ ಮೂಲಕ ಗೋವಾದಲ್ಲಿ ಪರಿಸರ ಜಾಗೃತಿ …. ಕೃಪೆ: ಲೈಫ್ ಸ್ಟೈಲ್.ಲೈವ್ ಮಿಂಟ್.ಕೋಮ್