ಸರಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ವೃದ್ಧಿಗೆ ಎಚ್ಚರಿಕೆ ಗಂಟೆ

ಸರಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ವೃದ್ಧಿಗೆ ಎಚ್ಚರಿಕೆ ಗಂಟೆ

ಸರ್ಕಾರೇತರ ಸಂಸ್ಥೆಯೊಂದು ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಸ್ಥಿತಿಗತಿ ಕುರಿತು ಬಿಡುಗಡೆ ಮಾಡಿರುವ ವರದಿ ದಂಗುಬಡಿಸುವಂತಿದೆಯಲ್ಲದೆ, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಗುಣಮಟ್ಟದ ಕುರಿತ ಚರ್ಚೆಗೂ ನಾಂದಿ ಹಾಡಿದೆ. ಪ್ರಥಮ್ ಎಜುಕೇಷನ್ ಫೌಂಡೇಷನ್ ಎಂಬ ಸಂಸ್ಥೆ ಸಿದ್ಧಪಡಿಸಿರುವ ವರದಿಯ ಪ್ರಕಾರ, ೫ ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಶೇ ೮೦ರಷ್ಟು ಮಕ್ಕಳಿಗೆ ಭಾಗಾಕಾರವೇ ಗೊತ್ತಿಲ್ಲ. ೮ ನೇ ತರಗತಿಯಲ್ಲಿರುವ ಶೇ ೬೪ ರಷ್ಟು ಮಕ್ಕಳಿಗೂ ಭಾಗಾಕಾರ ಗೊತ್ತಿಲ್ಲ. ೫ ನೇ ತರಗತಿಯಲ್ಲಿನ ೬೮ % ಮಕ್ಕಳು ಮಾತ್ರ ೨ ನೇ ತರಗತಿಯ ಪಠ್ಯವನ್ನು ಓದಬಲ್ಲರು ಎಂಬ ಸಂಗತಿಗಳಿವೆ. ಈ ಸ್ಪರ್ಧಾತ್ಮಕ ಯುಗದಲ್ಲಿ ಖಾಸಗಿ ಶಾಲೆಗಳ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗಿಂತ ಶೈಕ್ಷಣಿಕವಾಗಿ ಮುಂದಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ತ ಇಷ್ಟೊಂದು ಕಳಪೆಯಾಗಿದ್ದರೆ ಯಾವ ಪೋಷಕರು ತಾನೇ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿಯಾರು?

ಹಿಂದೆ ಸರ್ಕಾರಿ ಶಾಲೆಗಳಲ್ಲಿ ಕಲಿತ ಅಸಂಖ್ಯಾತ ಮಂದಿ ಇಂದು ಉನ್ನತ ಹುದ್ದೆಯಲ್ಲಿದ್ದಾರೆ. ಹಿಂದಿನ ಕಾಲದಲ್ಲಿ ಆ ರೀತಿಯ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಸರ್ಕಾರಿ ಶಾಲೆಗಳಲ್ಲಿ ಇತ್ತು. ಆದರೆ ಈಗ ಏಕೆ ಗುಣಮಟ್ಟ ಕುಸಿದಿದೆ? ಶಿಕ್ಷಣೈಲಾಖೆ ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಸರ್ಕಾರಿ ಶಾಲೆಗೆ ಸೇರುವ ಮಕ್ಕಳಿಗೆ ಹಲವು ಸವಲತ್ತುಗಳಿವೆ. ಸರ್ಕಾರಿ ಶಾಲೆಗಳಲ್ಲಿ ಶುಲ್ಕ ಕಡಿಮೆ ಇದೆ ಅಥವಾ ಉಚಿತ ಇದೆ ಎಂಬುದು ಮಾತ್ರವಲ್ಲದೆ ಹಲವು ಸೌಲಭ್ಯಗಳಿವೆ. ಉಚಿತ ಊಟ, ಸಮವಸ್ತ್ರ, ಪಠ್ಯಪುಸ್ತಕ, ಸೈಕಲ್, ಸ್ಯಾನಿಟರಿ ನ್ಯಾಪ್ ಕಿನ್, ಹಾಲು, ಮೊಟ್ಟೆ, ಚಿಕ್ಕಿ, ಬಾಳೆಹಣ್ಣು ಮುಂತಾದ ಸೌಕರ್ಯಗಳನ್ನು ಸರ್ಕಾರ ಕಲ್ಪಿಸಿದೆ. ಸರ್ಕಾರಿ ಶಾಲೆಗಳಲ್ಲಿ ಕೊಠಡಿ ಸಮಸ್ಯೆ ನೀಗಿಸಲು ಹೊಸ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಸರ್ಕಾರಿ ಶಾಲೆಗಳನ್ನು ದಾನಿಗಳಿಗೆ ದತ್ತು ಕೊಡಲಾಗುತ್ತಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಇಷ್ಟೆಲ್ಲಾ ಸೌಕರ್ಯ ಕಲ್ಪಿಸುತ್ತಿದ್ದರೂ, ಶಿಕ್ಷಣದ ಗುಣಮಟ್ಟ ಕುಸಿಯುತ್ತಿರುವುದು ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗಿದೆ. ಸರ್ಕಾರಿ ಶಾಲೆಗಳಲ್ಲಿ ಸೌಕರ್ಯ ಕಲ್ಪಿಸಿದರಷ್ಟೇ ಸಾಲದು. ಶಿಕ್ಷಣದ ಗುಣಮಟ್ಟಕ್ಕೂ ಒತ್ತು ನೀಡಬೇಕು ಎಂಬುದನ್ನು ಅಧ್ಯಯನ ವರದಿ ಸ್ಪಷ್ಟವಾಗಿ ವಿವರಿಸಿದೆ. ಈಗಲೇ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿದಿದೆ. ಶಿಕ್ಷಣದ ಗುಣಮಟ್ಟ ಇದೇ ರೀತಿ ಇದ್ದರೆ, ಜನರು ಆ ಶಾಲೆಗಳಲ್ಲಿ ಮಕ್ಕಳನ್ನು ಕಳುಹಿಸಲಿಕ್ಕೇ ಹೆದರಿಯಾರು. ಹೀಗಾಗಿ ಸರ್ಕಾರ ವರದಿಯನ್ನು ಗಂಭೀರವಾಗಿ ಪರಿಗಣಿಸಿ, ಗುಣಮಟ್ಟ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು.

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೩೦-೦೧-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ