ಸರಕಾರ ಗಂಭೀರವಾಗಿ ಪರಿಗಣಿಸಬೇಕಿದೆ

ಸರಕಾರ ಗಂಭೀರವಾಗಿ ಪರಿಗಣಿಸಬೇಕಿದೆ

ಹಾಸನ ಜಿಲ್ಲೆಯಲ್ಲಿ ಸಂಭವಿಸಿದ ಸರಣಿ ಹೃದಯಾಘಾತ ಸಾವಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ನಿಖರ ಕಾರಣವನ್ನು ಕಂಡುಕೊಳ್ಳಲೆಂದು ಆರೋಗ್ಯ ಇಲಾಖೆಯು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ರಚಿಸಿದ್ದು ಗೊತ್ತಿರುವ ಸಂಗತಿಯೇ. ಈ ಸಮಿತಿಯು ನೀಡಿರುವ ವರದಿ ಯಲ್ಲಿ, 'ಆಟೋ ಮತ್ತು ಕ್ಯಾಬ್ ಚಾಲಕರಲ್ಲೇ ಹೆಚ್ಚಾಗಿ ಹೃದಯಾಘಾತವಾಗಿದೆ. ಚಾಲಕರ ಬದಲಾದ ಜೀವನಶೈಲಿ, ವಾಯುಮಾಲಿನ್ಯ, ಸದಾ ಕುಳಿತುಕೊಂಡಿರುವಿಕೆ ಇವುಗಳೇ ಇದಕ್ಕೆ ಕಾರಣ' ಎಂಬ ಅಂಶವನ್ನು ಉಲ್ಲೇಖಿಸಲಾಗಿದೆ. ಈ ಅಭಿಪ್ರಾಯಕ್ಕೆ ಸಂಬಂಧಿಸಿ ಇನ್ನಷ್ಟು ಕೂಲಂಕಷ ಚರ್ಚೆಗಳು ಆಗಬೇಕಿವೆ. ಆದರೆ, ಮೇಲೆ ಉಲ್ಲೇಖಿಸಿರುವ ಕಾರಣ ಅಥವಾ ಸ್ಥಿತಿಗಳಿಗೆ ಸಾಕ್ಷಿಯಾಗಿರುವ ಮಿಕ್ಕ ಉದ್ಯೋಗಸ್ಥರು/ನಾಗರಿಕರು ಇದನ್ನೊಂದು ಎಚ್ಚರಿಕೆಯ ಗಂಟೆಯಾಗಿ ಪರಿಗಣಿಸಿ, ತಮ್ಮ ಆ ಸ್ಥಿತಿಯನ್ನು ಯಾವ ರೀತಿಯಲ್ಲಿ ಸುಧಾರಿಸಿಕೊಳ್ಳಬಹುದು ಎಂಬುದರ ಕಡೆಗೆ ಗಮನ ಹರಿಸಲು ಇದು ಸಕಾಲ ಎನ್ನಲಡ್ಡಿಯಿಲ್ಲ. ಹಾಗೆ ನೋಡಿದರೆ, ಆಧುನಿಕ ವೈದ್ಯಕೀಯ ಚಿಕಿತ್ಸೆಗಳು, ಉಪಕರಣಗಳು ಇಲ್ಲದ ಹಿಂದಿನ ಕಾಲದಲ್ಲಿ ನಮ್ಮ ಹಿರೀಕರು ಹೃದಯಾಘಾತದಂಥ ಸಮಸ್ಯೆಗಳಿಗೆ ಈಡಾಗಿದ್ದು ಕಮ್ಮಿಯೇ. ಅದಕ್ಕೆ ಕಾರಣ, ಅವರ ಜೀವನಶೈಲಿಯಲ್ಲಿ 'ಪರಿಶ್ರಮ' ಎಂಬುದು ಅವಿಭಾಜ್ಯ ಅಂಗವಾಗಿದ್ದುದು. ವರ್ಷಗಳು ಉರುಳಿದಂತೆ ಮನೆಯನ್ನು ಚೊಕ್ತ ವಾಗಿಸುವುದಕ್ಕೆ, ಬಟ್ಟೆ ಒಗೆಯುವುದಕ್ಕೆ, ಆಡುಗೆಗೆ ರುಬ್ಬುವುದಕ್ಕೆ ಹೀಗೆ ಗೃಹಕ್ಷೇತ್ರ ಮತ್ತು ಕಾರ್ಯಕ್ಷೇತ್ರ ಎರಡರಲ್ಲಿಯೂ ಯಂತ್ರಗಳು ದಾಂಗುಡಿಯಿಟ್ಟ ನಂತರ ಪರಿಶ್ರಮವೇ ಕಡಿಮೆಯಾಗಿದೆ. ಯಂತ್ರಗಳು, ಸಾಧನಗಳು, ತಂತ್ರಜ್ಞಾನ ಇತ್ಯಾದಿಯನ್ನು ತೀರಾ ಅನಿವಾರ್ಯವಾದಾಗ ಮಾತ್ರವೇ ಬಳಸಿ, ಮಿಕ್ಕ ವೇಳೆ ದೇಹಶ್ರಮಕ್ಕೆ ಆದ್ಯತೆ ನೀಡಬೇಕಿದೆ. ಒಟ್ಟಿನಲ್ಲಿ ಮನಸ್ಸು ಮಾಡಬೇಕಷ್ಟೇ.

ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೧೨-೦೭-೨೦೨೫

ಚಿತ್ರ ಕೃಪೆ: ಇಂಟರ್ನೆಟ್ ತಾಣ