ಸರದಾರ

ಸರದಾರ

ಪುಸ್ತಕದ ಲೇಖಕ/ಕವಿಯ ಹೆಸರು
ಚಕ್ರವರ್ತಿ ಸೂಲಿಬೆಲೆ
ಪ್ರಕಾಶಕರು
ಅವನಿ ಪ್ರಕಾಶನ, ವಾಮಂಜೂರು, ಮಂಗಳೂರು
ಪುಸ್ತಕದ ಬೆಲೆ
ರೂ. ೧೦೦.೦೦ ಮುದ್ರಣ: ಆಗಸ್ಟ್ ೨೦೧೨

'ಸರದಾರ' ಪುಸ್ತಕವು ಹೆಸರೇ ಹೇಳುವಂತೆ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಜೀವನದ ಮೇಲೆ ಚಿತ್ರಿತವಾಗಿದೆ. ಖ್ಯಾತ ವಾಗ್ಮಿ, ಲೇಖಕ ಚಕ್ರವರ್ತಿ ಸೂಲಿಬೆಲೆ ಇವರ ಲೇಖನಿಯಿಂದ ಹೊರ ಬಂದ ಹೊತ್ತಗೆ ಇದು. ಸರ್ದಾರ್ ಪಟೇಲರ ಬಗ್ಗೆ ಹತ್ತು ಹಲವಾರು ಪುಸ್ತಕಗಳು ಹೊರಬಂದಿವೆ. ಆದರೂ ಚಕ್ರವರ್ತಿಯವರ ಬರವಣಿಗೆ ಧಾಟಿ ಬಹು ಸುಂದರ ಮತ್ತು ಅಪರೂಪ. ಸರ್ದಾರ್ ಪಟೇಲರ ಬಗ್ಗೆ ಅವರು ಬರೆದ ಬೆನ್ನುಡಿ ಹೀಗಿದೆ “ಹಾರೊಲ್ಡ್ ಮ್ಯಾಕ್ ಮಿಲನ್ (ಬ್ರಿಟೀಷ್ ಪ್ರೀಮಿಯರ್) ವೇವೆಲ್ಲರ ಬಳಿ ಒಂದು ಮಾತು ಹೇಳಿದ್ದ ‘ಭಾರತದ ರಾಜಕಾರಣಿಗಳಲ್ಲೆಲ್ಲ ನೆಹರೂ ಆಕರ್ಷಕವಾಗಿ ಕಂಡರೂ ಆತ ಪುಕ್ಕಲ. ಪಟೇಲರು ಮಾತ್ರ ನಾಯಕತ್ವದ ಗುಣಗಳನ್ನು ಹೊಂದಿರುವ ಅಪರೂಪದ ವ್ಯಕ್ತಿ'.

ಬ್ರಿಟೀಷರು ಭಾರತ ಬಿಡುವಾಗ ತಳವೂ ಇಲ್ಲದ ಕಂಠವೂ ಇಲ್ಲದ ತೂತುಗಳೇ ತುಂಬಿದ ಮಡಕೆ ಕೈಗಿಟ್ಟಿದ್ದರು. ಪಟೇಲರು ಇಂತಹುದನ್ನೇ ಕೈಗೆತ್ತಿಕೊಂಡು ನೀರು ಕುಡಿಯಲು ಯೋಗ್ಯವಾದ ಸುಂದರ ಮಡಿಕೆ ಮಾಡಿ ತುಂಬಿ ಕೊಟ್ಟರು. ಆತ ನಿಜಕ್ಕೂ ಮಹಾ ಕುಂಬಾರನೇ ಸರಿ.” ಈ ಬರಹಗಳನ್ನು ಓದುವಾಗಲೇ ನಮಗೆ ಪಟೇಲರ ವ್ಯಕ್ತಿತ್ವದ ಅರಿವಾಗುತ್ತದೆ. 

ಚಕ್ರವರ್ತಿಯವರು ತಮ್ಮ ಮುನ್ನುಡಿಯಲ್ಲಿ ಸರ್ದಾರ್ ಪಟೇಲ್ ಇವರ ಬಗ್ಗೆ ಬರೆದ ಮಾತುಗಳು ಹೀಗಿವೆ “ಚಿಕ್ಕಂದಿನಿಂದಲೂ ನಾನು ಕೇಳುತ್ತಿದ್ದ ಒಂದೇ ಒಂದು ಮಾತು ಅದು. ನೆಹರೂ ಬದಲಿಗೆ ಸರ್ದಾರ್ ಪಟೇಲರು ಪ್ರಧಾನಿಯಾಗಿರಬೇಕಿತ್ತು. ಆಗಿನಿಂದಲೂ ಪಟೇಲರು ನನ್ನ ಪಾಲಿನ ಹೀರೋ. ಅವರ ಸಾಮರ್ಥ್ಯಗಳು, ಧಾಡಸೀತನಗಳು ಸೆಳೆಯುತ್ತಲಿದ್ದವು. ಬುದ್ಧಿ ಬಲಿಯುತ್ತಾ ಪಟೇಲರನ್ನು ಓದುತ್ತಾ ಅವರ ತಾಕತ್ತಿನ ಹಿಂದಿನ ಪ್ರಯತ್ನಗಳು ಅನಾವರಣಗೊಳ್ಳುತ್ತಲೇ ನಡೆದವು. ಪ್ರತಿಯೊಮ್ಮೆ ಅವರ ನಿರ್ಧಾರದ ಗಡಸುತನದ ಕಥೆ ಕೇಳಿದಾಗೆಲ್ಲ ರಕ್ತ ಬಿಸಿಯಾಗುತ್ತಿತ್ತು. ಬೆನ್ನು ಹುರಿ ಛಳಕ್ ಎನ್ನುತ್ತಿತ್ತು. ಆಗೆಲ್ಲ ನನಗೆ ಕುತೂಹಲ.ಪಟೇಲರು ಹೀಗೇಕಾದರು? ಅವರಲ್ಲೊಬ್ಬ ಪ್ರಖರ ಹೋರಾಟಗಾರ, ಕುಶಲ ಕಾರ್ಮಿಕ, ಸಂಘಟಕ, ರಾಜಕೀಯ ಮುತ್ಸದ್ದಿ, ದೂರಗಾಮಿ ಚಿಂತಕ, ನಿಷ್ಟ ಅನುಯಾಯಿ, ವಿಶಿಷ್ಟ ನಾಯಕ ಇವರೆಲ್ಲರೂ ಏಕಕಾಲದಲ್ಲಿ ಇರಲು ಸಾಧ್ಯವಾಗಿದ್ದಾದರೂ ಹೇಗೆ? ಅಚ್ಚರಿಗೊಳ್ಳುತ್ತಿದ್ದೆ.”

“ಪಟೇಲರ ರಾಷ್ಟ್ರೀಯ ಜೀವನಕ್ಕೆ ತಳಕು ಹಾಕಿಕೊಂಡೇ ಸಾಗಿದ ಅವರ ಭಾವುಕ ಖಾಸಗಿ ಬದುಕು ನನ್ನನ್ನು ವಿಪರೀತ ಸೆಳೆಯಿತು. ಮಕ್ಕಳನ್ನು ಮುಂದೆ ತಂದು ರಾಜಕೀಯದ ಅಗ್ರಣಿಗಳನ್ನಾಗಿ ಮಾಡುವ ಕನಸನ್ನು ಓರಗೆಯ ನೆಹರೂ ಕುಟುಂಬ ಮಾಡುತ್ತಿದ್ದಾಗ ತನ್ನ ಮಗಳನ್ನು ಅಖಾಡಕ್ಕೆ ಕರೆತರದೆ ಶುದ್ಧ ರಾಜನೀತಿಜ್ಞನಾದನಲ್ಲ; ಅದೆಂಥ ತಪಸ್ಸದು ! ಛೆ... ಇಂಥಹ ನಾಯಕನನ್ನು ಸರ್ವೋಚ್ಚ ಸ್ಥಾನದಲ್ಲಿ ಕೂರಿಸುವಲ್ಲಿ ನಾವು ಸೋತುಬಿಟ್ಟೆವು. ಈಗಲೂ ಈ ಹೊಟ್ಟೆಯುರಿ ಇದೆ ನನಗೆ.”

ಪ್ರಕಾಶಕರಾದ ಅವನಿ ಪ್ರಕಾಶನದ ಪರವಾಗಿ ಶ್ರೀಪತಿ ಆಚಾರ್ಯರು ತಮ್ಮೆರಡು ಮಾತುಗಳನ್ನು ಬರೆದಿದ್ದಾರೆ. ಚಕ್ರವರ್ತಿಯವರು ಸರ್ದಾರ್ ಪಟೇಲರ ಜೀವನಗಾಥೆಯನ್ನು ಪುಟ್ಟ ಪುಟ್ಟ ಅಧ್ಯಾಯಗಳ ಮೂಲಕ ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಪುಸ್ತಕದ ಕೊನೆಯಲ್ಲಿ ಸರ್ದಾರ್ ಪಟೇಲರ ಕೆಲವೊಂದು ಅಪರೂಪದ ಚಿತ್ರಗಳಿವೆ. ಪ್ರತೀ ಅಧ್ಯಾಯದ ಪ್ರಾರಂಭದಲ್ಲಿ ಕಲಾವಿದ ಸೃಜನ್ ಅವರ ಪುಟ್ಟ ಪುಟ್ಟ ರೇಖಾಚಿತ್ರಗಳಿವೆ. ಬಸವರಾಜ ರುದ್ನೂರ ಇವರು ಪುಸ್ತಕದ ಮುಖಪುಟವನ್ನು ರಚನೆ ಮಾಡಿದ್ದಾರೆ. ಸುಮಾರು ೨೦೦ ಪುಟಗಳ ಈ ಪುಸ್ತಕವನ್ನು ಲೇಖಕರಾದ ಚಕ್ರವರ್ತಿಯವರು ಈ ಪುಸ್ತಕವನ್ನು ಎಸ್. ಆರ್. ರಾಮಸ್ವಾಮಿಯವರಿಗೆ ಅರ್ಪಣೆ ಮಾಡಿದ್ದಾರೆ.