ಸರಳ, ಸಜ್ಜನ ಕವಿ - ಚೆನ್ನವೀರ ಕಣವಿ
ಸದಾ ಕಾಲ ಮುಖದಲ್ಲಿ ಮಂದಹಾಸ ಮೂಡಿಸಿಕೊಂಡು, ತಲೆಗೊಂದು ಟೋಪಿ ಧರಿಸಿ ಸಾಹಿತ್ಯ ಚಟುವಟಿಕೆಗಳಲ್ಲಿ ಹಮ್ಮು ಬಿಮ್ಮುಗಳಿಲ್ಲದೇ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಕನ್ನಡದ ಸಮನ್ವಯ ಕವಿಗಳಲ್ಲಿ ಓರ್ವರಾಗಿದ್ದ ಚೆನ್ನವೀರ ಕಣವಿಯವರು ಇನ್ನು ನೆನಪು ಮಾತ್ರ. ಇವರ ಕಾವ್ಯ ಹಾಗೂ ಚಿಂತನೆಗಳು ನಾಡಿಗೆ ಮಹತ್ವದ ಪ್ರೇರಣೆಯನ್ನು ಒದಗಿಸಿವೆ. ಯಾವ ಚಳುವಳಿಗಳ ಅಗತ್ಯವೂ ಇಲ್ಲದೇ ಸಾಹಿತ್ಯವನ್ನು ಉಳಿಸಿ, ಬೆಳೆಸಬಹುದು ಎಂಬುದು ಕಣವಿಯವರ ಅದಮ್ಯ ವಿಶ್ವಾಸವಾಗಿತ್ತು.
ಜೂನ್ ೨೮, ೧೯೨೮ರಂದು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ಸಕ್ಕರೆಪ್ಪ ಹಾಗೂ ಪಾರ್ವತಮ್ಮ ದಂಪತಿಗಳ ಮಗನಾಗಿ ಜನಿಸಿದವರು ಚೆನ್ನವೀರ ಕಣವಿಯವರು. ಇವರ ತಂದೆ ಸಕ್ಕರೆಪ್ಪ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದರು. ತಂದೆಯವರು ಶಿರುಂದ ಎಂಬ ಊರಿನಲ್ಲಿ ಶಿಕ್ಷಕರಾಗಿದ್ದ ಕಾರಣ ಇವರ ಬಾಲ್ಯ ಶಿರುಂದದಲ್ಲೇ ಕಳೆಯಿತು. ನಾಲ್ಕನೇ ತರಗತಿಯವರೆಗಿನ ಪ್ರಾಥಮಿಕ ಶಿಕ್ಷಣವನ್ನು ಶಿರುಂದದಲ್ಲೇ ಪೂರೈಸಿದರು. ನಂತರ ಧಾರವಾಡ ತಾಲೂಕಿನ ಗರಗ ಶಾಲೆಯಲ್ಲಿ ಏಳನೇ ತರಗತಿಯವರೆಗೆ ಶಿಕ್ಷಣ, ಬಳಿಕ ಮೂಲ್ಕಿ ಪರೀಕ್ಷೆಯನ್ನು ಬರೆದು ಧಾರವಾಡ ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಪಡೆದರು. ಬಳಿಕ ಧಾರವಾಡದ ಮುರುಘಾಮಠದಲ್ಲಿದ್ದುಕೊಂಡೇ ಪ್ರೌಢ ಶಿಕ್ಷಣವನ್ನು ಪೂರೈಸಿದರು.
ಕರ್ನಾಟಕ ಕಾಲೇಜಿನಲ್ಲಿ ಬಿಎ ಪದವಿಯನ್ನು ಗಳಿಸಿ, ೧೯೫೨ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಮೂಲಕ ಎಂಎ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡರು. ಕಣವಿಯವರು ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಬರೆದ ಕವನವೊಂದನ್ನು ಗಮನಿಸಿ ಖ್ಯಾತ ಸಾಹಿತಿ ಡಿವಿಜಿಯವರು ಮೆಚ್ಚಿಕೊಂಡಿದ್ದರು. ಇದನ್ನು ಸ್ಪೂರ್ತಿಯಾಗಿ ತೆಗೆದುಕೊಂಡ ಕಣವಿಯವರು ನಂತರ ಕವನ ರಚನೆಯತ್ತ ಹೆಚ್ಚು ಗಮನ ಹರಿಸಿದರು. ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದರು. ಕೆಲವೇ ವರ್ಷಗಳಲ್ಲಿ ಪದೋನ್ನತಿಯನ್ನು ಹೊಂದಿ ೧೯೫೬ರಲ್ಲಿ ಇದೇ ಪ್ರಸಾರಾಂಗ ವಿಭಾಗದ ನಿರ್ದೇಶಕರಾಗಿ ೧೯೮೩ರ ವರೆಗೆ ಸೇವೆ ಸಲ್ಲಿಸಿದ್ದರು.
ಇವರ ಪತ್ನಿ ಶಾಂತಾ ದೇವಿಯವರು ಕೂಡ ಸಾಹಿತಿ. ಇವರು ಅತ್ಯುತ್ತಮ ಎನಿಸುವ ಹಲವಾರು ಕಥೆಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕಟ್ಟಿಕೊಟ್ಟಿದ್ದಾರೆ. ಕಣವಿ ದಂಪತಿಗಳಿಗೆ ಐದು ಮಂದಿ ಮಕ್ಕಳು (ನಾಲ್ಕು ಗಂಡು, ಒಂದು ಹೆಣ್ಣು).
ಚೆನ್ನವೀರ ಕಣವಿಯವರದ್ದು ವಿವಾದ ರಹಿತ ಕವನ ರಚನೆ. ಜನ ವಿರೋಧಿ ಕಾವ್ಯ ರಚನೆಗೆ ಎಂದೂ ಅವರು ಕೈ ಹಾಕಿದ್ದಿಲ್ಲ. ಇವರದ್ದು ಬೆಳಕಿನ ಅನ್ವೇಷಣೆ, ಆ ಬೆಳಕು ಇವರ ಕಾವ್ಯದಲ್ಲಿ ಹಲವಾರು ಆಯಾಮಗಳನ್ನು ಕಟ್ಟಿಕೊಟ್ಟಿದೆ. ಈ ಕಾರಣದಿಂದ ಇವರನ್ನು ಪ್ರೀತಿಯಿಂದ ‘ಚೆಂಬೆಳಕಿನ ಕವಿ' ಎಂದು ಕರೆಯುತ್ತಾರೆ. ‘ಜನವಿರೋಧಿ ಕಾವ್ಯ’ ಎಂಬ ಕಲ್ಪನೆಯನ್ನೂ ನಾನು ಮಾಡಲು ಸಾಧ್ಯವಿಲ್ಲ ಎಂದು ಕಣವಿಯವರು ಒಂದೆಡೆ ಬರೆಯುತ್ತಾರೆ. ನನ್ನ ಗುರಿಯೇನಿದ್ದರೂ ಜನ ಸಾಮಾನ್ಯರನ್ನು ಗೌರವದಿಂದ ಕಾಣುವುದು ಹಾಗೂ ಸಹೃದಯ ಓದುಗರ ಮನಸ್ಸನ್ನು ತಲುಪುವುದು ಎಂದು ಸದಾ ಕಾಲ ಹೇಳುತ್ತಿದ್ದರು. ಕನ್ನಡ ಸಾಹಿತ್ಯ ಸಾಗುವ ದಾರಿಯ ಬಗ್ಗೆ ಅವರಿಗೆ ಸ್ಪಷ್ಟವಾದ ಕಲ್ಪನೆ ಹಾಗೂ ಅರಿವು ಇತ್ತು.
ಅವರು ರಚಿಸಿದ ‘ವಿಶ್ವ ವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ' ಕವನ ಅತ್ಯಂತ ಜನಪ್ರಿಯ ಕಾವ್ಯಗಳಲ್ಲಿ ಒಂದು. ಕಣವಿಯವರು ಬೇಂದ್ರೆ, ಕುವೆಂಪು ಇನ್ನಿತರ ಕವಿಗಳಿಂದ ತುಂಬಾ ಪ್ರೇರಿತರಾಗಿದ್ದರೂ, ತಮ್ಮದೇ ಆದ ವಿಭಿನ್ನ ಶೈಲಿಯನ್ನು ಅಳವಡಿಸಿಕೊಂಡು ಸಾಹಿತ್ಯ ರಚಿಸಿದ್ದಾರೆ. ೧೯೪೯ರಲ್ಲಿ ಇವರ ಮೊದಲ ಕವನ ಸಂಕಲನ ‘ಕಾವ್ಯಾಕ್ಷಿ' ಬಿಡುಗಡೆಯಾಯಿತು. ನಂತರ ಹಲವಾರು ಕವನ ಸಂಕಲನಗಳು ಹೊರಬಂದವು. ಕಣವಿಯವರ ಮನಸ್ಸನ್ನು ಸೆಳೆದದ್ದು ಸಾನೆಟ್ ಎಂಬ ಕಾವ್ಯ ರಚನಾ ಪ್ರಕಾರ. ಇವರು ಸುಮಾರು ೧೫೦ಕ್ಕೂ ಅಧಿಕ ಸಾನೆಟ್ ಗಳನ್ನು ರಚನೆ ಮಾಡಿದ್ದಾರೆ.
ಇವರು ‘ಭಾವಜೀವಿ, ಆಕಾಶಬುಟ್ಟಿ, ಮಧುಚಂದ್ರ, ದಾರಿ ದೀಪ, ನೆಲ ಮುಗಿಲು, ಎರಡು ದಡ, ನಗರದಲ್ಲಿ ನೆರಳು, ಜೀವಧ್ವನಿ, ಮಣ್ಣಿನ ಮೆರವಣಿಗೆ, ಜೀನಿಯಾ, ಶಿಶಿರದಲ್ಲಿ ಬಂದ ಸ್ನೇಹಿತ, ಹೊಂಬೆಳಕು’ ಮುಂತಾದ ಕವನ ಸಂಕನಗಳನ್ನು ರಚನೆ ಮಾಡಿದ್ದಾರೆ. ಸಾಹಿತ್ಯ ಚಿಂತನ, ಕಾನ್ಯಾನುಸಂಧನ, ಸಮಾಹಿತ, ಮಧುರ ಚೆನ್ನ ಮೊದಲಾದುವುಗಳು ವಿಮರ್ಶಾತ್ಮಕ ಕೃತಿಗಳು. ಕಣವಿಯವರು ಮಕ್ಕಳ ಸಾಹಿತ್ಯವನ್ನೂ ಬರೆದಿದ್ದಾರೆ. ಹಕ್ಕಿ ಪುಕ್ಕ ಮತ್ತು ಚಿಣ್ಣರ ಲೋಕವ ತೆರೆಯೋಣ ಇವರ ಶಿಶು ಕವನಗಳು.
ಕಣವಿಯವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ೧೯೮೧ರಲ್ಲಿ ‘ಜೀವ ಧ್ವನಿ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿದೆ. ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಕರ್ನಾಟಕ ಕವಿ ರತ್ನ, ಪಂಪ ಪ್ರಶಸ್ತಿ, ಅನಕೃ ನಿರ್ಮಾಣ ಪ್ರಶಸ್ತಿಗಳು ಸಂದಿವೆ. ೨೦೨೦ರಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪುರಸ್ಕಾರ ಹಾಗೂ ಅದೇ ವರ್ಷ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ನ್ಯೂಸ್ ೧೮ ವತಿಯಿಂದ ಗೌರವ ಪ್ರಶಸ್ತಿ ನೀಡಲಾಗಿತ್ತು. ೧೯೯೬ರಲ್ಲಿ ಹಾಸನದಲ್ಲಿ ಜರುಗಿದ ೬೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಹಾಗೂ ೨೦೦೮ರ ಆಳ್ವಾಸ್ ನುಡಿಸಿರಿ ಇದರ ಸಮ್ಮೇಳನಾಧ್ಯಕ್ಷರಾಗಿದ್ದರು. ತಮ್ಮ ೯೩ನೇ ವಯಸ್ಸಿನಲ್ಲಿ ಫೆಬ್ರವರಿ ೧೮, ೨೦೨೨ರಂದು ಧಾರವಾಡದಲ್ಲಿ ನಿಧನ ಹೊಂದಿದರು.
ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದ ಎಂ.ಎ.ಸುಬ್ರಹ್ಮಣ್ಯನವರು ಹೇಳುವಂತೆ “ಯಾರಾದರೂ ಕಣವಿಯವರನ್ನು ಕಾರ್ಯಕ್ರಮಕ್ಕೆ ಕರೆಯಬೇಕೆಂದು ಬಯಸಿದರೆ ಅವರ ಬಳಿ ಹೋಗಿ ‘ಸರ್, ನೀವು ಬರಲೇ ಬೇಕು. ನೀವಿದ್ದರೇ ಕಾರ್ಯಕ್ರಮಕ್ಕೊಂದು ಘನತೆ' ಅಂದರೆ ‘ನಿಮ್ಮ ಮಾತುಗಳಿಂದ ನನ್ನನ್ನು ಕಟ್ಟುಹಾಕಿದ್ದೀರಿ. ಬರ್ತೀನಿ ಬಿಡಿ’ ಅನ್ನುತ್ತಿದ್ದರು. ಚೆನ್ನವೀರ ಕಣವಿ ಅವರೊಂದಿಗಿನ ನೆನಪುಗಳು, ಪ್ರಸಂಗಗಳು, ಸಂದರ್ಭಗಳೂ ಸಾವಿರ ಸಾವಿರ. ಆದರೆ ಎಲ್ಲೂ ಯಾರೊಂದಿಗೂ ನಮ್ಮ ಸಮನ್ವಯತೆಯನ್ನು, ಸಮಚಿತ್ತವನ್ನು, ಸಮತೂಕದ ಆಯವನ್ನೂ ತಪ್ಪಿ ಹೆಜ್ಜೆ ಇಟ್ಟವರಲ್ಲ, ಕನ್ನಡದ ಕಾವ್ಯ ಸಂಪತ್ತಿಗೆ ಇನ್ನೂ ಲಕ್ಷ ಲಕ್ಷ ಕವಿತೆಗಳು ಸೇರಬಹುದು. ಆದರೆ ; ಚೆನ್ನವೀರ ಕಣವಿಯಂತಹ ಒಬ್ಬರನ್ನಾದರೂ ಹೇಗೆ ಮತ್ತು ಎಲ್ಲಿಂದ ತರುವುದು? ಅವರ ಹಾಡಿನ ಸಾಲುಗಳು, ನಮ್ಮ ಎದೆಯಲ್ಲಿ ನಿರಂತರವಾಗಿ ಕೇಳುತ್ತಲೇ ಇರುತ್ತದೆ. ಸದ್ಯಕ್ಕೆ ಅದೇ ಸಾಕು.” ಎನ್ನುತ್ತಾರೆ. ಎಷ್ಟೊಂದು ಸತ್ಯವಾದ, ಸತ್ವಯುತವಾದ ಮಾತುಗಳಲ್ಲವೇ...?
ಚಿತ್ರ ಕೃಪೆ: ಅಂತರ್ಜಾಲ ತಾಣ