ಸರಿಗನ್ನಡಂ ಗೆಲ್ಗೆ

ಸರಿಗನ್ನಡಂ ಗೆಲ್ಗೆ

ಪುಸ್ತಕದ ಲೇಖಕ/ಕವಿಯ ಹೆಸರು
ಅಪಾರ
ಪ್ರಕಾಶಕರು
ಛಂದ ಪುಸ್ತಕ, ಬನ್ನೇರುಘಟ್ಟ ರಸ್ತೆ, ಬೆಂಗಳೂರು -೫೬೦೦೭೬
ಪುಸ್ತಕದ ಬೆಲೆ
ರೂ.೩೯೦.೦೦, ಮುದ್ರಣ: ೨೦೨೩

ಛಂದ ಪುಸ್ತಕ ಪ್ರಕಾಶನದ ನೂರನೇ ಪುಸ್ತಕವಾಗಿ “ಸರಿಗನ್ನಡಂ ಗೆಲ್ಗೆ" ಪ್ರಕಟವಾಗಿದೆ. ಪತ್ರಕರ್ತ ಹಾಗೂ ಮುಖಪುಟ ವಿನ್ಯಾಸಗಾರರಾದ ‘ಅಪಾರ' ಇವರು ಈ ಪುಸ್ತಕದ ಲೇಖಕರು. ಇವರು ಕನ್ನಡದ ಬೆರಗನ್ನು ಕುರಿತ ೬೦೦ ಸ್ವಾರಸ್ಯಕರ ಕಿರು ಟಿಪ್ಪಣಿಗಳನ್ನು ಈ ಪುಸ್ತಕದಲ್ಲಿ ಪ್ರಕಟಿಸಿದ್ದಾರೆ. ಇವೆಲ್ಲವೂ ‘ಕಲರ್ಸ್ ಕನ್ನಡ’ ಟಿವಿ ಚಾನೆಲ್ ನಲ್ಲಿ ಪ್ರಸಾರವಾದ ಕಿರುಟಿಪ್ಪಣಿಗಳು. ಕಿರುತೆರೆಯಲ್ಲಿ ಬರುತ್ತಿದ್ದ “ಕನ್ನಡತಿ" ಧಾರಾವಾಹಿಯನ್ನು ಇನ್ನಷ್ಟು ಆಸಕ್ತಿದಾಯಕವನ್ನಾಗಿಸಲು ಮಾಡಿದ ಕಿರು ಪ್ರಯತ್ನವೇ ‘ಸರಿಗನ್ನಡಂ ಗೆಲ್ಗೆ'. ಅಪಾರ ಅವರು ಬರೆದ ಸಾಲುಗಳು ಆ ಧಾರಾವಾಹಿಗೆ ಬಹಳಷ್ಟು ಖ್ಯಾತಿಯನ್ನು ತಂದುಕೊಟ್ಟಿತು. 

ಈ ಪುಸ್ತಕದ ಬೆನ್ನುಡಿಯಲ್ಲಿ ಕಂಡ ಸ್ವಾರಸ್ಯಕರವಾದ ಸಾಲುಗಳು ಹೀಗಿವೆ “ಶುದ್ಧ ಶುಂಠಿಯಲ್ಲಿ ಶುಂಠಿಯದೇನು ತಪ್ಪು? ಸೋಲುವುದು ಸರಿ, ಸೋತು ಸುಣ್ಣವಾಗುವುದು ಯಾಕೆ? ಎಂಟೇ ದಿಕ್ಕುಗಳಿರುವಾಗ ದಶದಿಕ್ಕು ಅನ್ನುವುದು ಯಾಕೆ? ಗಿರಿಜೆಗೆ ಮೀಸೆ ಯಾಕೆ ಅಂಟಿಕೊಂಡಿತು? ಮರೀಚಿಕೆಗೂ ಮಾರೀಚನಿಗೂ ಸಂಬಂಧ ಇದೆಯೇ? ಈ ಸಂಬಂಧ ಅನ್ನುವುದರಲ್ಲಿ ಬಾಲ ಸೀಳಬೇಕಾದ ಅಕ್ಷರ ಯಾವುದು? ಅಡಗೂಲಜ್ಜಿ ಕತೆ ಅಂದರೇನು? ಕುಚಿಕು ಅನ್ನುವುದು ಸಿನೆಮಾ ಹಾಡಿಗಿಂತ ಮೊದಲೇ ಇದ್ದ ಪದವೇ? ಈ ಚಳ್ಳೆಹಣ್ಣನ್ನು ಪೊಲೀಸರಿಗೇ ಯಾಕೆ ತಿನ್ನಿಸುವುದು? ಬಡ್ಡಿಮಗ ಅಂದರೆ ಅಷ್ಟೆಲ್ಲಾ ಕೆಟ್ಟರ್ಥ ಇದೆಯಾ? ನೀಟು ಅನ್ನುವುದು ಕನ್ನಡ ಪದ ಹೇಗಾಗುತ್ತೆ? ಹತ್ಯೆ ಬೇರೆ, ವಧೆ ಬೇರೆನಾ? ಬಿರುದು ಸರಿ, ಬಾವುಲಿ ಯಾಕೆ ಕೊಡುವುದು? ಧರ್ಮದೇಟಿಗೆ ಧರ್ಮದೇಟು ಅನ್ನುವುದು ಯಾವ ಧರ್ಮ? ತುಕಾಲಿ ಅನ್ನುವ ಪದವನ್ನು ಡಿಕ್ಷನರಿಗೇಕೆ ಸೇರಿಸಿಕೊಂಡಿಲ್ಲ? ಜಹಾಂಗೀರಿಗೆ ಆ ಸ್ವೀಟ್ ನೇಮ್ ಬಂದದ್ದು ಹೇಗೆ? ದಮ್ಮಯ್ಯ, ದಕ್ಕಯ್ಯ, ಸುತರಾಂ, ಚಾಚೂ - ಇವರೆಲ್ಲಾ ಯಾರು? ಕೊಡೆ ಇರುವುದು ಬಿಸಿಲಿಗೋ ಮಳೆಗೋ? ನಾಗಾಲೋಟದಲ್ಲಿ ಹಾವೂ ಇಲ್ಲ, ಲೋಟವೂ ಇಲ್ಲವೇ? ಮಾಣಿ ಎನ್ನುವ ಪದ ಉಡುಪಿ ಹೋಟೇಲುಗಳ ಅಡುಗೆಮನೆಯಲ್ಲಿ ತಯಾರಾದ ಬಿಸಿ ಪದಾರ್ಥವೇ? ಕುಟುಂಬದಲ್ಲಿ ಭಾವ ಒಬ್ಬನೇ ಬಾಲ ಇರುವ ಮಹಾಪ್ರಾಣಿಯೇ? ಪ್ರಮೀಳಾ ರಾಜ್ಯ ಅಂತ ನಿಜಕ್ಕೂ ಒಂದಿತ್ತೆ? ಎಷ್ಟು ಹರದಾರಿ ಸೇರಿದರೆ ಒಂದು ಗಾವುದ? ಡಕೋಟ ಸ್ಕೂಟರ್ ವಿಮಾನದಲ್ಲಿ ಹಾರಿ ಬಂತೇ? ತಲೆಗೆ ರುಂಡ ಅನ್ನುವುದಾದರೆ ರುಮಾಲಿಗೆ ಮುಂಡಾಸು ಅನ್ನುವುದೇಕೆ? ಮುಂದಿನ ಶತಮಾನದವರ ಪಾಲಿಗೆ ಈಗ ನಾವಾಡುವ ಕನ್ನದ ಹಳಗನ್ನಡವಾಗುತ್ತಾ?

ಪದೇ ಪದೇ ಮಾಡುವ ಕಾಗುಣಿತದ ತಪ್ಪುಗಳು, ಪದಗಳನ್ನು ಒಡೆದು ನೋಡಿದಾಗ ರಟ್ಟಾದ ಗುಟ್ಟುಗಳು, ಯಾವ ಪದದ ಸಿಟಿಜನ್ ಶಿಪ್ ಯಾವ ದೇಶದ್ದು? ಇಂಥ ಆರು ನೂರು ಬೆರಗಿನ ಸಂಗತಿಗಳನ್ನು ಸ್ವಾರಸ್ಯಕರವಾಗಿ ತೆರೆದಿಡುವ ಪುಸ್ತಕವಿದು.” ನಿಜಕ್ಕೂ ಇದೊಂದು ಅಪರೂಪದ ಪುಸ್ತಕ. ನಾವಾಡುವ ಮಾತುಗಳನ್ನು ಬಹಳ ಸ್ವಾರಸ್ಯಕರವಾಗಿ ವಿಶ್ಲೇಷಣೆ ಮಾಡಿದ್ದಾರೆ. 

ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಜಿಯೋ ಸ್ಟುಡಿಯೋಸ್ ನ ಕನ್ನಡ ಹೆಡ್ ಆಗಿರುವ ಪರಮ್ ಇವರು ‘ಕನ್ನಡವೆಂಬ ಆಮ್ಲಜನಕ' ಎಂಬ ತಮ್ಮ ಮಾತಿನಲ್ಲಿ ಹೀಗೆ ಅಭಿಪ್ರಾಯ ಪಡುತ್ತಾರೆ “ಕನ್ನಡ ಅಂದರೆ ಕೇಳದಿದ್ದಾಗಲೂ ಊಟ ಹಾಕಿದ ಅಮ್ಮನಂತೆ, ಯೋಚಿಸುವ ಶಕ್ತಿ ಬರುವ ಮೊದಲೇ ಇದ್ದ ಮನೆಯಂತೆ. ಗಮನಿಸದೇ ಇರುವಾಗಲೂ ಕೆಲಸ ಮಾಡುವ ಉಸಿರಾಟದಂತೆ. ಕುಕ್ಕಿಸಿಕೊಳ್ಳುವ ತನಕ ಜಂಬ ಮಾಡದ ಕಣ್ಣಿನಂತೆ. ಎಚ್ಚರವಿಲ್ಲದಿದ್ದಗಲೂ ಬದುಕಿಸಿದ ಬದುಕಿನಂತೆ. ಕನ್ನಡ ಒಂದು ಭಾಷೆ ಎಂದು ನನಗೆ ಈಗಲೂ ಅನಿಸುವುದಿಲ್ಲ. ಕನ್ನಡ ಅಕ್ಷರ ಬರೆದು ಬದುಕು ಕಟ್ಟಿಕೊಂಡ, ಆ ಅಕ್ಷರಗಳನ್ನು ದೃಶ್ಯ ಮಾಡಿ ಸಂತೋಷ ಪಟ್ಟುಕೊಂಡವನಿಗೆ ಸರಿಗನ್ನಡ ಎನ್ನುವುದರಲ್ಲಿ ಹೆಚ್ಚಿನ ನಂಬಿಕೆ ಇಲ್ಲ. ನನ್ನ ರೋಮಾಂಚನ ಇರುವುದು ಎಲ್ಲ ರೀತಿಯ ಕನ್ನಡದಲ್ಲಿ. ಒಂದೊಂದು ಕನ್ನಡ ಶಬ್ದವೂ ಹುಟ್ಟಿಸುವ ಸಂಭ್ರಮವನ್ನು ವಿವರಿಸಲು ಸಾಧ್ಯವಿಲ್ಲ. “ ಎಂದಿದ್ದಾರೆ.

ಕೃತಿಯ ಲೇಖಕರಾದ ಅಪಾರ ಇವರು ‘ಸರಿಗನ್ನಡಂ ಗೆಲ್ಗೆ' ಹುಟ್ಟಿದ ಬಗೆಯನ್ನು ತಮ್ಮ ‘ಅರ್ಥ'ಪೂರ್ಣ ಪದಯಾತ್ರೆ ಎಂಬ ಮುನ್ನುಡಿಯಲ್ಲಿ ಸವಿವರವಾಗಿ ವಿವರಿಸಿ, ಈ ಪ್ರಯಾಣದಲ್ಲಿ ಜೊತೆಯಾದವರನ್ನು ಸ್ಮರಿಸಿದ್ದಾರೆ. ಪ್ರತೀ ಪುಟದಲ್ಲಿ ಎರಡರಂತೆ ಟಿಪ್ಪಣಿಗಳನ್ನು ನೀಡುತ್ತಾ ಪುಸ್ತಕದಲ್ಲಿ ಆರು ನೂರು ಟಿಪ್ಪಣಿಗಳನ್ನು ಮುದ್ರಿಸಿರುವುದು ಅಭಿನಂದನಾರ್ಹ ಕಾರ್ಯವೇ ಸರಿ. ಕನ್ನಡದ ಅನೇಕ ಪದಗಳು ಇನ್ನೂ ತಪ್ಪಾಗಿಯೇ ಬಳಕೆಯಾಗುತ್ತಿದ್ದರೂ ಅದೇ ಸರಿಯಾದ ಪ್ರಯೋಗ ಎಂದು ಅನೇಕರು ನಂಬಿ ಮತ್ತೆ ಮತ್ತೆ ಅದನ್ನು ಬಳಸುತ್ತಿದ್ದಾರೆ. ಇದನ್ನು ಸರಿಪಡಿಸಲು ಅಮೇರಿಕದಿಂದ ನಿಯಮಿತವಾಗಿ ‘ವಿಶ್ವವಾಣಿ' ಪತ್ರಿಕೆಗೆ ಅಂಕಣವನ್ನು ಬರೆಯುವ ಶ್ರೀ ಶ್ರೀವತ್ಸ ಜೋಶಿಯವರು “ಸ್ವಚ್ಛ ಭಾಷೆ ಅಭಿಯಾನ"ವನ್ನೇ ಮಾಡಬೇಕಾಯಿತು. ಪ್ರತೀ ಬುಧವಾರ ಅವರು ವಾಟ್ಸಾಪ್ ಮುಂತಾದ ಸಾಮಾಜಿಕ ಜಾಲತಾಣಗಳ ಮುಖಾಂತರ ಕನ್ನಡ ಭಾಷೆಯನ್ನು ಸ್ವಚ್ಛ ಮಾಡುವ ಕಾಯಕಕ್ಕೆ ಇಳಿದಿದ್ದಾರೆ. ಈ ಬರಹಗಳನ್ನು “ಸ್ವಚ್ಛ ಭಾಷೆ ಅಭಿಯಾನ" ಎನ್ನುವ ಪುಸ್ತಕದ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಣೆ ಮಾಡಿದ್ದಾರೆ. 

ಪುಸ್ತಕದಲ್ಲಿರುವ ಎಲ್ಲಾ ಆರು ನೂರು ಟಿಪ್ಪಣಿಗಳು ಒಂದಕ್ಕಿಂತ ಒಂದು ಚೆನ್ನಾಗಿವೆ. ಅದರ ಒಂದು ಸ್ಯಾಂಪಲ್ ಇಲ್ಲಿದೆ. ಓದಿಕೊಳ್ಳಿ…

"ಹಬ್ಬಗಳು ಬಂದಾಗ ಶುಭಾಶಯ ಹೇಳುವುದರಲ್ಲಿ ತಪ್ಪೇನು ಇಲ್ಲ. ಹೇಳುವುದರಲ್ಲಿ ತಪ್ಪಿರದಿದ್ದರೂ, ಬರೆಯುವಾಗ ಪದೇಪದೇ ತಪ್ಪುಗಳಾಗುವುದನ್ನು ನೋಡುತ್ತಲೇ ಇದ್ದೇವೆ. ಹಾರ್ದಿಕ ಅನ್ನುವ ಪದವನ್ನು ಬರೆಯುವಾಗ ದ ಅಕ್ಷರಕ್ಕೆ ಬಾಲ ಹಾಕುವುದು ಎಲ್ಲೆಡೆ ಕಂಡು ಬರುವ ತಪ್ಪು. ಹಾರ್ದಿಕ ಅಂದರೆ ಹೃದಯಪೂರ್ವಕ ಅಂತರ್ಥ. ಹೃದಯಕ್ಕೆ ಬಾಲ ಇರುತ್ತಾ? ಇಲ್ಲವಲ್ಲ? ಅಂದ ಮೇಲೆ ಹಾರ್ದಿಕಕ್ಕೂ ಬಾಲ ಬೇಡ. ಅದೇ ತರ, ಶುಭಾಶಯವನ್ನು ಕೆಲವರು ‘ಶುಭಾಷಯ' ಅಂತ ತಪ್ಪಾಗಿ ಬರೆಯುತ್ತಾರೆ. ಆಶಯದಲ್ಲಿ ಶಂಕರ ಶ ಇದ್ದ ಮೇಲೆ ಶುಭಾಶಯದಲ್ಲಿ ಷಡಕ್ಷರಿ ಷ ಯಾಕೆ ಬರುತ್ತೆ?”

೩೦೦ ಪುಟಗಳ ಈ ಸುಗ್ರಾಸ ಪುಸ್ತಕವನ್ನು ಲೇಖಕರು “ನುಡಿಯನ್ನೂ, ನಡೆಯನ್ನೂ ತಿದ್ದಿ ಬೆಳೆಸುವುದರಲ್ಲಿ ಅಮೋಘ ‘ಪಾತ್ರ' ವಹಿಸಿದ ನಮ್ಮ ಸ್ಪೂರ್ತಿ ದೇವತೆ ರಾಜ್ ಕುಮಾರ್” ಅವರಿಗೆ ಅರ್ಪಿಸಿದ್ದಾರೆ. ‘ಸಿರಿಗನ್ನಡಂ ಗೆಲ್ಗೆ' ಪುಸ್ತಕದ ಒಂದು ಪ್ರತಿ ನಿಜಕ್ಕೂ ನಿಮ್ಮ ಮನೆಯಲ್ಲಿ ಇರಲೇ ಬೇಕು ಎನ್ನುವಷ್ಟು ಮಾಹಿತಿಪೂರ್ಣವಾಗಿದೆ.