ಸರಿಗಮ ‘ಪದ'

ಸರಿಗಮ ‘ಪದ'

ಪುಸ್ತಕದ ಲೇಖಕ/ಕವಿಯ ಹೆಸರು
ವಿಶ್ವೇಶ್ವರ ಭಟ್
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ.೪೦.೦೦, ಮುದ್ರಣ: ೨೦೦೮

ಪತ್ರಕರ್ತರಾದ ವಿಶ್ವೇಶ್ವರ ಭಟ್ ಇವರು ಬರೆದಿರುವ ಸರಿಗಮ ‘ಪದ' ಎಂಬ ಪುಸ್ತಕವು ಪತ್ರಿಕಾ ಭಾಷೆಗೊಂದು ಹದ ಎಂದು ಅವರೇ ಪುಸ್ತಕದ ಮುಖಪುಟದಲ್ಲೇ ಬರೆದುಕೊಂಡಿದ್ದಾರೆ. ‘ಪದ'ಕ್ಕೊಂದು ನನ್ನ ರಾಗ ಎಂಬ ಮುನ್ನುಡಿಯಲ್ಲಿ “ಇದು ನಾನು ಏಷಿಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ಪತ್ರಿಕೋದ್ಯಮದ ಮೇಷ್ಟ್ರಾಗಿ ಪಾಠ ಮಾಡುವಾಗ ವಿದ್ಯಾರ್ಥಿಗಳಿಗೆಂದು ಸಿದ್ಧಪಡಿಸಿದ ನೋಟ್ಸ್. ಪತ್ರಿಕೋದ್ಯಮ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ಬರೆದಿದ್ದು. ಭಾಷೆ ಹಾಗೂ ಪದ ಬಳಕೆ ಬಗ್ಗೆ ಎಂಥ ಸಂಯಮ, ಪ್ರೀತಿ, ಶ್ರದ್ಧೆ ಎಚ್ಚರ ವಹಿಸಬೇಕೆಂಬುದನ್ನು ಇಲ್ಲಿ ಸಾಕಷ್ಟು ನಿದರ್ಶನಗಳ ಮೂಲಕ ಹೇಳಲು ಪ್ರಯತ್ನಿಸಿದ್ದೇನೆ. ಈ ಕೃತಿ ಪತ್ರಕರ್ತರಿಗೆ ಬರೆಯುವುದು ಹೇಗೆಂದು ಕಲಿಸಿಕೊಡಲಿಕ್ಕಿಲ್ಲ. ಆದರೆ ಭಾಷೆ ಬಗ್ಗೆ ಒಂದಷ್ಟು ಜಾಗೃತಿ ಹಾಗೂ ಪ್ರೀತಿಯನ್ನಂತೂ ಮೂಡಿಸಬಲ್ಲದು. ಕ್ಷೇತ್ರ ಪ್ರವೇಶಕ್ಕೆ ಮುನ್ನುಡಿಯಾಗಬಲ್ಲುದು. ಇಷ್ಟೇ ಈ ಕೃತಿಯ ಆಶಯ. ಇದಕ್ಕಿಂತ ಹೆಚ್ಚಿನ ಹೊಳಹು ಸಿಕ್ಕರೆ ಅದು ಓದಿನ ಒರತೆ ಸೃಷ್ಟಿಸಿದ ತಂಪು ಅಷ್ಟೆ.” ಎಂದಿದ್ದಾರೆ. 

ಪದ ಪ್ರಯೋಗದ ಬಗ್ಗೆ ಹಲವಾರು ಉದಾಹರಣೆಗಳ ಸಹಿತ ಲೇಖಕರು ವಿವರಣೆ ನೀಡಿದ್ದಾರೆ. ಮೊದಲ ಅಧ್ಯಾಯವಾದ ‘ಪದ: ಮನುಕುಲದ ಅದ್ಭುತ ಆವಿಷ್ಕಾರ' ದಲ್ಲಿ ಪದವನ್ನು ಮಾನವ ಕಂಡು ಹುಡುಕಿದ ಅದ್ಭುತ ಆವಿಷ್ಕಾರ ಎಂದು ಹೆಸರಿಸಿದ್ದಾರೆ. ಎರಡನೇ ಅಧ್ಯಾಯದಲ್ಲಿ ವಿಶ್ವವನ್ನೇ ನಲುಗಿಸಿದ ಆ ಒಂದು ‘ಪದ' ದ ಬಗ್ಗೆ ವಿವರಿಸಿದ್ದಾರೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನ್ ದೇಶದ ಮೇಲೆ ಅಣುಬಾಂಬ್ ದಾಳಿ ನಡೆದ ಘಟನಾವಳಿಗಳನ್ನು ಉಲ್ಲೇಖಿಸಿದ್ದಾರೆ. ಜಪಾನ್ ದೇಶದವರು ಬಳಸಿದ ಆ ಒಂದು ಪದ ಯುದ್ಧದ ಸ್ವರೂಪವನ್ನೇ ಬದಲಾಯಿಸಿಬಿಟ್ಟೀತು ಎಂದು ಯಾರೂ ಅಂದುಕೊಂಡಿರಲಿಕ್ಕಿಲ್ಲ. ಅದು ೧೯೪೫ರ ಜುಲೈ ೨೬ರ ಸಮಯ ಚರ್ಚಿಲ್, ಟ್ರುಮನ್ ಮತ್ತು ಸ್ಟಾಲಿನ್, ಫೋಟ್ಸ್ ಡ್ಯಾಮ್ ನಲ್ಲಿ ಒಂದು ಘೋಷಣೆ ಮಾಡಿದರು. ಅದರಂತೆ ‘ಜಪಾನ್ ಶರಣಾಗಬೇಕು, ಇಲ್ಲವೇ ಪರಿಸ್ಥಿತಿ ಎದುರಿಸಬೇಕು'. ಈ ಘೋಷಣೆಯನ್ನು ಯಾವ ರೀತಿಯಾಗಿ ಎದುರಿಸಬೇಕು, ಏನು ಉತ್ತರ ನೀಡಬೇಕು ಎನ್ನುವುದು ಜಪಾನ್ ದೇಶದ ಸಚಿವ ಸಂಪುಟಕ್ಕೆ ಕಗ್ಗಂಟಾಗಿತ್ತು. ವಿಶ್ವದ ಬಲಿಷ್ಟ ರಾಷ್ಟ್ರಗಳನ್ನು ಎದುರು ಹಾಕಿ ಏಕಾಂಗಿಯಾಗಿ ಯುದ್ಧ ಮಾಡುವುದೂ ಸಾಧ್ಯವಿರಲಿಲ್ಲ. 

ಇಂಥ ಸಂದಿಗ್ಧ ಸ್ಥಿತಿಯಲ್ಲಿ... ಜಪಾನ್ ಸಚಿವ ಸಂಪುಟ ಒಂದು ನಿರ್ಧಾರ ತೆಗೆದುಕೊಂಡಿತು. ಅದು ಕೇವಲ ಒಂದು ಪದದ ನಿರ್ಣಯ. 

‘ಮೊಕುಸಟ್ಸು !!’

ಇದಕ್ಕೆ ಎರಡು ಅರ್ಥಗಳು. ಒಂದು, ನಾವು ಪರಿಶೀಲಿಸುತ್ತೇವೆ, ಇನ್ನೊಂದು, ನಾವು ತಿರಸ್ಕರಿಸುತ್ತೇವೆ. ಜಪಾನ್ ಪ್ರಜೆಗಳಲ್ಲಿ ಬಹುತೇಕ ಮಂದಿ ಮೊದಲಿನ ಅರ್ಥವನ್ನೇ ಗ್ರಹಿಸಿಕೊಂಡರು. ಪೋಟ್ಸ್ ಡ್ಯಾನ್ ಘೋಷಣೆಯನ್ನು ಪರಿಶೀಲಿಸುತ್ತಿದ್ದೇವೆ ಎಂಬುದು ಜಪಾನ್ ಸಚಿವ ಸಂಪುಟದ ಆಶಯವಾಗಿತ್ತು. 

ಆದರೆ ಇಂಗ್ಲೀಷ್ ನಲ್ಲಿ ಸುದ್ದಿ ರವಾನಿಸುವ ಡೊಮಿ ನ್ಯೂಸ್ ಏಜೆನ್ಸಿ ಸುದ್ದಿಗಾರ ಸಚಿವ ಸಂಪುಟದ ನಿರ್ಣಯವನ್ನು ಎರಡನೆ ಅರ್ಥದಲ್ಲಿ (ನಾವು ತಿರಸ್ಕರಿಸುತ್ತಿದ್ದೇವೆ) ಗ್ರಹಿಸಿಕೊಂಡ. ಡೊಮಿ ನ್ಯೂಸ್ ಏಜೆನ್ಸಿಯಲ್ಲಿ ಸುದ್ದಿ ಬಂದಿದ್ದೇ ತಡ, ಮರುದಿನ ಅಮೇರಿಕ, ಇಂಗ್ಲೆಂಡ್, ರಷ್ಯಾ ಮುಂತಾದ ದೇಶಗಳ ಎಲ್ಲ ಪತ್ರಿಕೆಗಳಲ್ಲಿ ‘ಪೋರ್ಟ್ ಡ್ಯಾಮ್ ಘೋಷಣೆಯನ್ನು ಜಪಾನ್ ತಿರಸ್ಕರಿಸಿದೆ' ಎಂದು ಮುಖಪುಟದಲ್ಲಿ ದಪ್ಪಕ್ಷರದಲ್ಲಿ ಪ್ರಕಟವಾಯಿತು.

ಈ ಬಗ್ಗೆ ಜಪಾನ್ ಸೃಷ್ಟೀಕರಣ ನೀಡಬಹುದಾಗಿತ್ತು. ಆದರೆ ತಮ್ಮ ಪ್ರಜೆಗಳ ಎದುರು ತಾವು ಸೋತೆವು ಎಂಬ ಭಾವನೆ ಬರುತ್ತದೆ ಎಂಬ ಕಾರಣಕ್ಕೆ ಅವರೂ ಮೌನರಾದರು. ಜಪಾನ್ ದೇಶದ ಈ ಮೌನದ ನಿರ್ಧಾರ ಅವರಿಗೆ ಬಹಳ ದುಬಾರಿಯಾಗುತ್ತದೆ ಎಂದು ಸಚಿವ ಸಂಪುಟ ಗ್ರಹಿಸಲೇ ಇಲ್ಲ. ವಿಶ್ವದ ಬಲಿಷ್ಟ ರಾಷ್ಟ್ರಗಳಿಗೆ ಜಪಾನ್ ಸಡ್ಡು ಹೊಡೆದಿದೆ ಎಂದು ಪತ್ರಿಕಾ ವರದಿಯನ್ನು (೨೮-೦೭-೧೯೪೫) ಕಂಡ ಅಮೇರಿಕಾದ ಅಧ್ಯಕ್ಷ ಹ್ಯಾರಿ ಟ್ರುಮನ್ ಕೋಪಗೊಂಡು ಅಣುಬಾಂಬ್ ದಾಳಿ ಮಾಡುವಂತೆ ಆದೇಶ ನೀಡಿದ. ಜಪಾನ್ ದೇಶದ ಹಿರೋಶಿಮಾ ಮತ್ತು ನಾಗಾಸಾಕಿ ನಗರಗಳ ಮೇಲೆ ಆಗಸ್ಟ್ ೬, ೧೯೪೫ರಲ್ಲಿ ಅಣು ಬಾಂಬ್ ದಾಳಿಯಾಯಿತು. ಎರಡೂ ನಗರಗಳಲ್ಲಿ ಲಕ್ಷಾಂತರ ಜನ ಸತ್ತುಹೋದರು. ಆ ವಿಕಿರಣದ ಬಾಧೆಯಿಂದ ಈಗಲೂ ಜಪಾನ್ ನರಳುತ್ತಿದೆ. ಇದಕ್ಕೆಲ್ಲಾ ಕಾರಣವಾದದ್ದು ಆ ಒಂದು ‘ಪದ'.

ಈ ಕಾರಣದಿಂದಲೇ ಪತ್ರಕರ್ತರು ಅತ್ಯಂತ ಜಾಗರೂಕರಾಗಿ ಪದಗಳನ್ನು ಬಳಕೆ ಮಾಡಬೇಕು, ಬಳಸುವ ಪದಗಳ ಪರ್ಯಾಯ ಅರ್ಥಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡಿರಬೇಕು ಎಂದು ಲೇಖಕರು ಹೇಳುತ್ತಾರೆ. ಪದಗಳ ಬಗ್ಗೆ ಮಾಹಿತಿಯಿಲ್ಲದ ರಾಜಕಾರಣಿಗಳೂ ಹಲವಾರು ಬಾರಿ ಎಡವಟ್ಟುಗಳನ್ನು ಮಾಡುತ್ತಲೇ ಇರುತ್ತಾರೆ. ಈ ಬಗ್ಗೆಯೂ ಹಲವಾರು ಉದಾಹರಣೆಗಳನ್ನು ನೀಡಿದ್ದಾರೆ. 

ಮೂರನೇ ಅಧ್ಯಾಯ ಸರಿಗಮ ‘ಪದ' : ಪದ ಪ್ರಯೋಗಕ್ಕೆ ಪಲ್ಲವಿ. ಈ ಅಧ್ಯಾಯದಲ್ಲಿ ಸವಿವರವಾಗಿ ಪತ್ರಿಕೋದ್ಯಮದ ಪಾಠವನ್ನು ವಿವರಿಸಿದ್ದಾರೆ. ಈ ಪುಸ್ತಕವನ್ನು ಓದಿದ ಶಾಲಿವಾಹನ ಎಂಬ ಪತ್ರಿಕೋದ್ಯಮದ ವಿದ್ಯಾರ್ಥಿ ಹೇಳುವುದು ಹೀಗೆ “ಕನ್ನಡ ಪತ್ರಿಕೋದ್ಯಮದಲಿ ಪುಸ್ತಕಗಳೇ ಇಲ್ಲ. ಇದ್ದರೂ ಕೆಲವೇ ಕೆಲವು. ಇಂಗ್ಲಿಷ್ ಪುಸ್ತಕಗಳನ್ನೇ ಓದಬೇಕು. ಇನ್ನು ಭಾಷೆ ಹಾಗೂ ಪದ ಪ್ರಯೋಗಕ್ಕೆ ಸಂಬಂಧಿಸಿದ ಕೃತಿಗಳು ಇಲ್ಲವೇ ಇಲ್ಲ. ಪತ್ರಿಕೋದ್ಯಮ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ಬರೆದ ಈ ಕೃತಿ ಗಾತ್ರದಲ್ಲಿ (೬೦ ಪುಟಗಳು) ಚಿಕ್ಕದಾಗಿರಬಹುದು. ಆದರೆ ಪತ್ರಕರ್ತನಾಗುವುದಕ್ಕೆ ಬೇಕಾದ ಮೂಲ ಅರ್ಹತೆಯ ಪ್ರಾಥಮಿಕ ಅಗತ್ಯಗಳ ಒಳನೋಟವನ್ನು ತೆರೆದಿಟ್ಟಿದೆ. ಪತ್ರಕರ್ತ ಭಾಷಾ ಪಂಡಿತನಾಗಿರಬೇಕಿಲ್ಲ. ಆದರೆ ಭಾಷೆಯ ಸರಳ ಸ್ವರೂಪವೂ ಗೊತ್ತಿರದಿದ್ದರೆ ಪತ್ರಕರ್ತನಾಗಲಾರ. ಅಷ್ಟಕ್ಕೂ ಪತ್ರಕರ್ತ ವ್ಯವಹರಿಸುವುದು ಭಾಷೆ ಮೂಲಕ. ಅದು ಹೇಗಿರಬೇಕೆಂಬುದನ್ನು ವಿಶ್ವೇಶ್ವರ ಭಟ್ ರು ಇಲ್ಲಿ ಹೇಳಿದ್ದಾರೆ. ಇಂಥದ್ದೊಂದು ಕೃತಿ ಬೇಕಿತ್ತೆಂಬ ಕಾರಣಕ್ಕೆ ಇದು ಮಹತ್ವ ಪಡೆಯುತ್ತದೆ.” ಎಂದಿದ್ದಾರೆ. ವಿಶ್ವೇಶ್ವರ ಭಟ್ ಇವರು ಈ ಕೃತಿಯನ್ನು ತಮ್ಮ ಸ್ನೇಹಿತರಾದ ಬಸಂತ ಕುಮಾರ ಪಾಟೀಲ ಇವರಿಗೆ ಅರ್ಪಣೆ ಮಾಡಿದ್ದಾರೆ.