ಸರಿಯಾದ ಪಾದರಕ್ಷೆಗಳನ್ನು ಆಯ್ಕೆ ಮಾಡುವುದು ಹೇಗೆ?

ಸರಿಯಾದ ಪಾದರಕ್ಷೆಗಳನ್ನು ಆಯ್ಕೆ ಮಾಡುವುದು ಹೇಗೆ?

ಬಹಳಷ್ಟು ಜನರು ತಮಗೆ ಸರಿ ಹೊಂದುವ ಪಾದರಕ್ಷೆಗಳನ್ನು ಆಯ್ದುಕೊಳ್ಳುವುದೇ ಇಲ್ಲ. ತಮಗೆ ಬೇಕಾದ ಉಡುಪುಗಳನ್ನು ಆರಿಸುವಾಗ ತೆಗೆದುಕೊಳ್ಳುವ ಕಾಳಜಿ ಮತ್ತು ಸಮಯವನ್ನು ಪಾದರಕ್ಷೆಯನ್ನು ಖರೀದಿಸುವಾಗ ತೆಗೆದುಕೊಳ್ಳುವುದೇ ಇಲ್ಲ. ಕಾಲಿಗೆ ಹಾಕುವುದಲ್ಲಾ, ಯಾವುದಾದರೇನು? ಎನ್ನುವ ನಿರ್ಲಕ್ಷ್ಯ ಭಾವನೆ ಎಲ್ಲರಲ್ಲಿ. ಇದು ತಪ್ಪು. ನಾವು ಕಾಲಿಗೆ ಧರಿಸಿ ನಡೆದಾಡುವ ಪಾದರಕ್ಷೆಗಳು ನಮ್ಮ ಕಾಲಿಗೆ ಹೊಂದುವಂತೆ ಇರಬೇಕು. ಸರಿಯಾದ ಆಕಾರ ಇರಬೇಕು. ಈ ಬಗ್ಗೆ ಸೂಕ್ತವಾಗಿ ಗಮನ ಹರಿಸದೇ ಇದ್ದರೆ ಕಾಲಕ್ರಮೇಣ ಕಾಲು ನೋವು, ಗಂಟು ನೋವು, ಬೆನ್ನು ನೋವು ಪ್ರಾರಂಭವಾಗುತ್ತದೆ.

ಇತೀಚೆಗೆ ದೇಶದಲ್ಲಿ ಕ್ರೀಡೆಗೆ ತಕ್ಕಮಟ್ಟಿನ ಪ್ರೋತ್ಸಾಹ ದೊರೆಯುತ್ತಿರುವುದರಿಂದ ಕ್ರೀಡಾಳುಗಳಿಗೆ ಅವರ ಆಯ್ಕೆಯ ಶೂ, ಚಪ್ಪಲಿ ದೊರೆಯುತ್ತಿದೆ. ವಾಕಿಂಗ್, ಜಾಗಿಂಗ್, ಓಟ, ಜಿಮ್ ನಲ್ಲಿನ ಚಟುವಟಿಕೆಗಳಿಗೆ ಸರಿಯಾದ ಪಾದರಕ್ಷೆಯನ್ನು ಧರಿಸಲೇ ಬೇಕು. ಆದರೆ ಇವರೆಲ್ಲಾ ಒಂದೇ ಪ್ರಕಾರದ ಪಾದರಕ್ಷೆಗಳನ್ನು ಧರಿಸುತ್ತಾರೆ. ಕ್ರೀಡಾ ಬಯೋಮೆಕಾನಿಕ್ಸ್ ಪ್ರಕಾರ ಇವೆಲ್ಲಾ ಚಟುವಟಿಕೆಗಳಿಗೆ ಬೇರೆ ಬೇರೆ ರೀತಿಯ ಶೂಗಳನ್ನು ನಾವು ಧರಿಸಬೇಕಾಗುತ್ತದೆ. ಸರಿಯಾದ ವಾಕಿಂಗ್ ಶೂಗಳು ಸರಿಯಾದ ವಾಕಿಂಗ್ ತಂತ್ರವನ್ನು ನಿರ್ವಹಿಸುವಲ್ಲಿ ಪರಿಣಾಮ ಬೀರುತ್ತದೆ. ಜೊತೆಗೆ ಕಾಲಿಗೆ ಗಾಯವಾಗುವುದನ್ನು ತಪ್ಪಿಸುತ್ತದೆ. ಇದನ್ನು ಧರಿಸುವುದರಿಂದ ಪಾದದ ಸರಿಯಾದ ಬಯೋಮೆಕಾನಿಕ್ಸನ್ನು ನಿರ್ವಹಿಸುತ್ತದೆ ಮತ್ತು ನಡೆಯುವಾಗ ಪಾದಕ್ಕೆ ಸಂಪರ್ಕಗೊಂಡಿರುವ ಎಲ್ಲ ಇತರ ಸ್ನಾಯುಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತದೆ.

ಮಸ್ಕ್ಯೂಲೋಸ್ಕೆಲಿಟಸ್ ಸಮಸ್ಯೆಗಳಿಂದ ಬರುವ ಬೆನ್ನು ನೋವು, ಮೊಣಕಾಲು ನೋವು, ಕಾಲು ನೋವು, ಕುತ್ತಿಗೆ ನೋವು ಮತ್ತು ತಲೆನೋವು ಇತ್ಯಾದಿಗಳು ನಮ್ಮನ್ನು ಕಾಡಲು ಬಹಳ ಸಂದರ್ಭದಲ್ಲಿ ನಾವು ಸರಿಯಾದ ಪಾದರಕ್ಷೆಯನ್ನು ಧರಿಸದೇ ಇರುವುದೇ ಕಾರಣವಾಗಿರುತ್ತದೆ. ಸರಿಯಾದ ಪಾದರಕ್ಷೆಯನ್ನು ಆಯ್ಕೆ ಮಾಡುವಾಗ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಸ್ಥಿರತೆ: ನಡೆಯುವಾಗ ಉತ್ತಮ ಸ್ಥಿರತೆ ಮತ್ತು ಕಾಲಿಗೆ ಮೆತ್ತನೆಯ ಅನುಭವ ದೊರೆಯಬೇಕು.

ಹೊಂದಿಕೊಳ್ಳುವಿಕೆ: ಶೂಗಳು ಸುಲಭವಾದ ಪುಶ್-ಆಫ್ ಹಂತವನ್ನು ಒದಗಿಸಬೇಕು.

ಆರಾಮದಾಯಕ: ಪಾದರಕ್ಷೆ ಸಮರ್ಪಕವಾಗಿ ಹೊಂದಿಕೆಯಾಗಬೇಕು. ವಿಶೇಷವಾಗಿ ಹಿಮ್ಮಡಿ ಮತ್ತು ಮಧ್ಯ ಪಾದದ ಸುತ್ತಲೂ ಟೋ ಆಫ್ ಮಾಡಲು ಸ್ವಲ್ಪ ಸ್ಥಳಾವಕಾಶವಿರಬೇಕು. ಫ್ಯಾಷನ್ ಎಂದು ಹೈಹೀಲ್ಡ್ ಚಪ್ಪಲಿಗಳನ್ನು ಧರಿಸುವುದರಿಂದ ಬೆನ್ನು ನೋವು, ತಲೆನೋವು, ಪಾದದ ಉಳುಕು, ಪಾದದ ಗಾಯಗಳ ಸಮಸ್ಯೆಗಳು ಕಾಡಬಹುದು. 

ನೀವು ಪಾದರಕ್ಷೆಗಳನ್ನು ಆಯ್ದುಕೊಳ್ಳುವಾಗ ನೀವು ಸಾಮಾನ್ಯವಾಗಿ ಧರಿಸುವ ಸಾಕ್ಸ್ ಗಳ ಪ್ರಕಾರ ತೆಗೆದುಕೊಳ್ಳಬೇಕು. ಇ ಕಾಮರ್ಸ್ ಶಾಪಿಂಗ್ ಎಂದು ಅಗ್ಗದ ಪಾದರಕ್ಷೆಗಳಿಗೆ ಮಾರುಹೋಗದೇ ಉತ್ತಮ ಗುಣಮಟ್ಟದ ಪಾದರಕ್ಷೆಗಳನ್ನು ತೆಗೆದುಕೊಳ್ಳಬೇಕು. ಚಪ್ಪಲಿ ಅಂಗಡಿಗೆ ಭೇಟಿ ನೀಡಿ ಅಲ್ಲಿ ಕಾಲಿಗೆ ಧರಿಸಿ ನೋಡಿ ತೆಗೆದುಕೊಳ್ಳುವುದು ಜಾಣತನ. ಪಾದಗಳ ವಿಷಯಕ್ಕೆ ಬಂದಾಗ ಅದಕ್ಕೆ ಸರಿಹೊಂದುವ ಸೈಜ್ ಅನ್ನು ತೆಗೆದುಕೊಳ್ಳಬೇಕು. ಪಾದರಕ್ಷೆಗಳ ಅಳತೆ ಪಾದಕ್ಕಿಂತ ದೊಡ್ದದು ಅಥವಾ ಸಣ್ಣದು ಆದರೆ ಅದು ನಿಮ್ಮ ಪಾದದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ.

ಶೂಗಳನ್ನು ಖರೀದಿಸುವಾಗ ನಿಂತುಕೊಂಡು ನಿಮ್ಮ ಪಾದದ ಅಳತೆಯನ್ನು ಪರಿಶೀಲಿಸಿ, ಏಕೆಂದರೆ ನಿಮ್ಮ ಪಾದವು ಈ ಸ್ಥಿತಿಯಲ್ಲಿ ಗರಿಷ್ಟ ಹಿಗ್ಗುವಿಕೆಗೆ ತಲುಪುತ್ತದೆ. ನಿಮ್ಮ ಪಾದವನ್ನು ಮೇಲಕ್ಕೆ/ಕೆಳಕ್ಕೆ, ಒಳಗೆ ಮತ್ತು ಹೊರಗೆ ಚಲಿಸಿದಾಗ ಶೂ ಜಾರಿ ಬೀಳ ಬಾರದು. ನಿಮ್ಮ ಕಾಲಿನ ಬೆರಳನ್ನು ಮೇಲಕ್ಕೆ ಮತ್ತು ಕೆಳಕ್ಕೆ ಚಲಿಸಲು ನಿಮಗೆ ಸಾಧ್ಯವಾಗಬೇಕು. ಸಾಕಷ್ಟು ದೂರ ನಡೆದಾಗ ನಿಮ್ಮ ಕಾಲಿಗೆ ನೋವಾಗದೇ ಆರಾಮವಾಗಿ ನಡೆಯುವಂತೆ ಆಗಬೇಕು. ಕಾಲಿಗೆ ಸುಸ್ತು ಅನಿಸಬಾರದು. ಈ ರೀತಿ ಪರೀಕ್ಷೆಯನ್ನು ಮಾಡುವುದರ ಮೂಲಕ ನಿಮ್ಮ ಪಾದಕ್ಕೆ ಅನುಕೂಲವೆನಿಸುವ ಪಾದರಕ್ಷೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ