ಸರಿ ಯಾರು..?! - (ಪುಟ್ಕತೆ)

ಸರಿ ಯಾರು..?! - (ಪುಟ್ಕತೆ)

ನಾನು ಅವನು ಬಾಲ್ಯ ಸ್ನೇಹಿತರು. ಸ್ನೇಹಿತರು ಅನ್ನುವುದಕ್ಕಿಂತಲೂ ಚಡ್ಡಿ ದೋಸ್ತ್ ಅಂತಾರಲ್ಲ ಹಾಗೆ. ಬುತ್ತಿಯಲ್ಲಿನ ದೋಸೆಯಿಂದ ಹಿಡಿದು ಐಸ್ ಕ್ಯಾಂಡಿವರೆಗೂ ಹಂಚಿ ತಿನ್ನುವ ಸಲುಗೆಯಿತ್ತು. ನಮ್ಮಲ್ಲಿ ಒಬ್ಬರು ಶಾಲೆಗೆ ಬರುವುದಿಲ್ಲವೆಂದಾದರೆ ಇನ್ನೊಬ್ಬನು ಕೂಡ ರಜೆಯೆಂದೇ ಲೆಕ್ಕ. ಇನ್ನು ಆಟವಾಡುವಾಗಲೂ ನಾವು ವಿರುದ್ಧ ತಂಡದಲ್ಲಿ ಇದ್ದುದೇ ಕಡಿಮೆ. ಹಾಗೇನಾದರೂ ಸಂಭವಿಸಿದ್ದೇ ಆದರೆ ಅಂದಿನ ಜಯದಲ್ಲಿ ಸಂಭ್ರಮಕ್ಕೆ ಜಾಗವಿಲ್ಲ..! ಈಗ ನಿಮಗೆ ಅರಿವಾಗಿರಬೇಕು ನಮ್ಮ ಗೆಳೆತನವೆಷ್ಟು ಗಟ್ಟಿಯಾಗಿ ಅಂಟಿಕೊಂಡಿದ್ದಿತೆಂದು. ಅದೇನೇ ಇದ್ದರೂ ಬಾಲ್ಯದ ಗೆಳೆತನ ಮುಂದೆ ಅದೇ ಗಾಢತೆಯೊಂದಿಗೆ ಉಳಿಯುವುದು ಪುರಾಣ ಕಥೆಗಳಲ್ಲಷ್ಟೆ ಕಾಣಬಹುದು ಹೊರತು ಇಂದು ಅಂತಹದ್ದು ಅಪರೂಪದಲ್ಲಿ ಅಪರೂಪವೆಂದೇ ಹೇಳಬೇಕು. ಅವರವರ ಓದು, ಆಸಕ್ತಿಗೆ ಅನುಗುಣವಾಗಿ ಪಡೆದ ಉದ್ಯೋಗದೊಂದಿಗೆ ವರ್ತನೆಯು ಸಹಜವೆಂಬಂತೆ ಬದಲಾಗುತ್ತಿರುತ್ತದೆ. ಸಮಾಜವು ಅದನ್ನು ಹಾಗೆಯೆ ಬಯಸುತ್ತದೆ ಕೂಡ. ಒಟ್ಟಿಗೆ ಆಟವಾಡಿಕೊಂಡಿದ್ದವರಲ್ಲೊಬ್ಬ ಶ್ರೀಮಂತನಾಗು, ಇನ್ನೊಬ್ಬ ಬಡವನಾಗು ಜೀವನದ ಹಾದಿಯಲ್ಲಿ ಮುಂದೆ ಸಾಗಿದ್ದೇ ಆದರೆ ಅದೇ ಸಿರಿವಂತ ಗೆಳೆಯನ ಮನೆಯ ಚಾಕರಿಗೆ ಸೇರಿ 'ಧಣಿ' ಎಂದು ದನಿಗೂಡಿಸಬೇಕಾಗಿ ಬರುವುದೂ ಉಂಟು. ಇಲ್ಲಿ ಮೊದಲಿನ ಗೆಳೆತನ ಕೃಷ್ಣ-ಕುಚೇಲರಂತೆ ಉಳಿಯುವುದಿಲ್ಲ, ಅದು ಅಸಾಧ್ಯವೂ ಹೌದು, ಕಾರಣ ಇಬ್ಬರ ಗುರಿ ಉದ್ದೇಶಗಳೇ ಬೇರೆಯಾಗಿರುತ್ತದೆ. ಇನ್ನು ಕೆಲವೊಮ್ಮೆ ಗುರುತೇ ಇಲ್ಲದಂತೆ ಮುಖ ತಿರುಗಿಸಿ ಹೋಗುವ ಬಾಲ್ಯ ಸ್ನೇಹಿತರ ಸಂಖ್ಯೆ ಸ್ವಲ್ಪ ದೊಡ್ಡದೇ ಎನ್ನಬಹುದು. ಇದೇನೇ ಇದ್ದರೂ ನಮ್ಮಿಬ್ಬರ ಸ್ನೇಹ ಇದೆಲ್ಲದ್ದಕ್ಕಿಂತಲೂ ಭಿನ್ನ. ಇನ್ನೂ ಮುರಿದು ಬಿದ್ದಿಲ್ಲ ಎಂದು ಬಹಳ ವರ್ಷಗಳ ನಂತರ ಮೊನ್ನೆ ಮೊನ್ನೆ ಅವನು ಸಿಕ್ಕಿದಾಗ ಸಾಬೀತಾಯಿತು. ಪೋಲಿಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾನೆಂದು ಅವನೇ ತಿಳಿಸಿದಾಗ ನನಗಾದ ಸಂತೋಷ ಮಾತ್ರ ಅಷ್ಟಿಷ್ಟಲ್ಲ. ಇನ್ನು ನಮ್ಮ ಊರಿಗೆ ವರ್ಗಾವಣೆಯಾಗಿ ಬಂದು ವಾರವಾಯಿತಷ್ಟೆ ಎಂದಾಗ ಇನ್ನು ಬೇಕಾದಷ್ಟು ಬಾರಿ ಭೇಟಿ, ಹರಟೆಗೆ ಅವಕಾಶವಾಯಿತೆಂದು  ಖುಷಿಯೋ ಖುಷಿ. ಇದು ನನಗೊಬ್ಬನಿಗಾದ ಅನುಭವವಲ್ಲ ಅವನದ್ದು ಅದೇ ಭಾವ. ಅವನು ಮತ್ತೆ ಮತ್ತೆ ಹಿಂದಿನ ದಿನಗಳನ್ನು ನೆನಪಿಸಿ ಬಹಳ ಹೊತ್ತು ಹರಟೆ ಹೊಡೆದು ಸಂಭ್ರಮಿಸಿದೆವು. ಕಾಫಿ ಕುಡಿದು ಬಂದೆವು. ಮಾತಿನ ನಡುವೆ, ನಾನೊಬ್ಬ ಖಾಸಗಿ ಗುಮಾಸ್ತನಾಗಿದ್ದೇನೆ ಎಂದು ಒತ್ತಿ ಒತ್ತಿ ಹೇಳಿದೆ.  ಆದರೂ ಆತನ ಹಾವ ಭಾವದಲ್ಲಿ ಯಾವುದೇ ಬದಲಾವಣೆ ಇಲ್ಲದ್ದನ್ನು ಸೂಕ್ಷ್ಮವಾಗಿಯೇ ಗಮನಿಸಿ ಹರ್ಷಿಸಿದೆ.

ಇದಾಗಿ ಒಂದು ವಾರವಾಗಿದೆಯಷ್ಟೆ. ಯಾರೋ ಹೇಳಿದ್ದು ಕೇಳಿಸಿತು ಹೊಸ ಎಸ್. ಐ. ಜೋರಿದ್ದಾರಂತೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದುದು. ಮನಸ್ಸಿನಲ್ಲಿಯೆ ಗೆಳೆಯನ ಕರ್ತವ್ಯಪರತೆ ಬಗ್ಗೆ ಹೆಮ್ಮೆ ಪಟ್ಟೆ. ಇದಾಗಿ ತುಂಬಾ ಹೊತ್ತು ಕಳೆದಿರಲಿಲ್ಲ. ಆ ಮಾರ್ಗದ ಇನ್ನೊಂದು ತುದಿಯಲ್ಲಿ ಅವನೇ ಕರ್ತವ್ಯದಲ್ಲಿ ಇದ್ದ. ಮಾರ್ಗ ಏಕಮುಖವಾಗಿದ್ದರೂ ನಿಧಾನವಾಗಿ ಅಭಿಮುಖವಾಗಿ ಚಲಿಸಬೇಕಾದ್ದರಿಂದ ಬದಿಯಿಂದ ಆತನಿದ್ದೆಡೆಗೆ ಬೈಕನ್ನು ನಡೆಸಿದೆ. ಹೌದು ಅವನೂ ನನ್ನನ್ನು ಗಮನಿಸಿರಬೇಕು, ಆತನೆ ಈ ಕಡೆಗೆ ಓಡಿ ಬಂದ. ನನ್ನ ಮುಖ ಅರಳಿತು. ಆದರೆ ಆತ ಹತ್ತಿರ ಬಂದಾಗ ಮಾತ್ರ ನನಗೆ ಶಾಕ್... ನನ್ನನ್ನು ಕಂಡವನೆ ಬೈಕನ್ನು ಬದಿಗೆ ಹಾಕಿಸಿ ಪಿ.ಸಿ ಹತ್ತಿರ ಫೈನ್ ಬರೆಸಿದ. ಗುರುತು ಸಿಗಲಿಲ್ಲವೇನೋ ಎಂದೆನಿಸಿತು, ಹೆಲ್ಮೆಟ್ ತೆಗೆದೆ. ಊಹ್ಮ್... ಅವನು ಅಚ್ಚ ಕನ್ನಡದಲ್ಲೆ ಸಹಸ್ರಾರ್ಪಣೆ ಮಾಡಿ ಮುಂದೆ ನಡೆದೇ ಬಿಟ್ಟ. ಆತನ ಮುಖದಲ್ಲಿ ಕೋಪಕ್ಕಿಂತಲೂ ಅಸಹನೆ ಇದ್ದಿದ್ದನ್ನು ನಾನು ಸ್ಪಷ್ಟವಾಗಿ ಗಮನಿಸಿದೆ..

-ಜನಾರ್ದನ ದುರ್ಗ

ಚಿತ್ರ ಕೃಪೆ: ಇಂಟರ್ನೆಟ್ ತಾಣ