ಸರ್ಕಾರಿ ಸಿಬ್ಬಂದಿಯ ವ್ಯವಸ್ಥಿತ ನಿಯೋಜನೆ ಮುಖ್ಯ

ವಿಧಾನ ಸಭೆ ಚುನಾವಣೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ಮಾಚ್ ೨೯ರಿಂದಲೇ ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಲಾಗಿದೆ. ಮೇ ೧೦ರಂದು ಮತದಾನ, ತದನಂತರ ಮೇ ೧೩ರಂದು ಮತ ಎಣಿಕೆ ಸೇರಿದಂತೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಇದು ಜಾರಿಯಲ್ಲಿರಲಿದೆ. ಈ ನೀತಿ ಸಂಹಿತೆ ಹಾಗೂ ಚುನಾವಣೆ ಕಾರ್ಯಗಳಿಗಾಗಿ ಚುನಾವಣೆ ಆಯೋಗವು ಬಹುತೇಕವಾಗಿ ಸರ್ಕಾರಿ ಸಿಬ್ಬಂದಿಯನ್ನೇ ಬಳಸಿಕೊಳ್ಳುತ್ತಿರುವ ಪರಿಣಾಮವಾಗಿ ಸಾರ್ವಜನಿಕರು ಸಾಕಷ್ಟು ಅಡಚಣೆಗಳನ್ನು ಎದುರಿಸುವಂತಾಗಿದೆ. ನ್ಯಾಯಸಮ್ಮತವಾಗಿ ಮತ್ತು ಶಾಂತಿಯುತವಾಗಿ ಚುನಾವಣೆಗಳು ನಡೆಯಬೇಕೆಂಬ ಉದ್ದೇಶದಿಂದ ಚುನಾವಣೆ ಆಯೋಗವು ಚುನಾವಣೆ ಘೋಷಿತ ಪ್ರದೇಶದಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೊಳಿಸುತ್ತದೆ. ಪ್ರಜಾಪ್ರಭುತ್ವದ ಯಶಸ್ಸಿನ ಬುನಾದಿಯಾದ ಚುನಾವಣೆಗಳನ್ನು ನ್ಯಾಯಯುತವಾಗಿ ಆಯೋಜಿಸುವ ನಿಟ್ಟಿನಲ್ಲಿ ಇದು ಅಗತ್ಯವೇ ಹೌದು. ಚುನಾವಣೆ ಸಂದರ್ಭದಲ್ಲಿ ಅಪರಾಧ, ದುಷ್ಕೃತ್ಯಗಳು ಜರುಗಬಾರದು; ಲಂಚ ನೀಡುವ ಮೂಲಕ ಅಭ್ಯರ್ಥಿಗಳು ಮತದಾರರನ್ನು ಪ್ರೇರೇಪಿಸಬಾರದು ; ಮತದಾರರಿಗೆ ಬೆದರಿಕೆ ಒಡ್ಡಬಾರದು ಎಂಬುದು ಸೇರಿದಂತೆ ಅನೇಕ ಭ್ರಷ್ಟ ಅಭ್ಯಾಸಗಳನ್ನು ತಡೆಯುವ ಸದುದ್ದೇಶ ನೀತಿ ಸಂಹಿತೆಯದ್ದಾಗಿದೆ. ಚುನಾವಣೆ ಉದ್ದೇಶಗಳಿಗಾಗಿ ಸರ್ಕಾರಿ ಯಂತ್ರದ ದುರ್ಬಳಕೆಯಾಗಬಾರದು; ಕೇಂದ್ರ ಮತ್ತು ರಾಜ್ಯಗಳಲ್ಲಿ ಆಡಳಿತ ಪಕ್ಷಗಳು ಚುನಾವಣೆಯಲ್ಲಿ ಜಯ ಗಳಿಸಲು ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳಬಾರದು ಎಂಬ ಉದ್ದೇಶದಿಂದ ಕೆಲವೊಂದು ಕಟ್ಟುಪಾಡುಗಳನ್ನು ನೀತಿ ಸಂಹಿತೆ ಮೂಲಕ ಜಾರಿಗೊಳಿಸಲಾಗುತ್ತದೆ. ಆಡಳಿತದಲ್ಲಿರುವ ಪಕ್ಷವು ಮತದಾರರನ್ನು ಓಲೈಸುವ ಹೊಸ ಯೋಜನೆಗಳ ಬಗ್ಗೆ ಭರವಸೆಗಳನ್ನು ನೀಡುವುದನ್ನು ನೀತಿ ಸಂಹಿತೆ ನಿಷೇಧಿಸುತ್ತದೆ. ಯಾವುದೇ ಹಣಕಾಸಿನ ಅನುದಾನವನ್ನು ಘೋಷಿಸಬಾರದು; ಯಾವುದೇ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಬಾರದು ಎಂಬುದು ಸೇರಿದಂತೆ ಅಧಿಕಾರದಲ್ಲಿರುವ ಪಕ್ಷವು ಮತದಾರರ ಮೇಲೆ ಪ್ರಭಾವ ಬೀರುವಂತಹ ಕ್ರಮಗಳನ್ನು ಕೈಗೊಳ್ಳುವುದನ್ನು ಕೂಡ ನಿರ್ಭಂಧಿಸಲಾಗುತ್ತದೆ.
ಸದುದ್ದೇಶದಿಂದ ಕೈಗೊಳ್ಳಲಾದ ಇಂತಹ ಕ್ರಮಗಳಿಂದಾಗಿ ಸಾರ್ವಜನಿಕರಿಗೆ ಒಂದಿಷ್ಟು ಅಡಚಣೆಗಳೂ ಉಂಟಾಗುತ್ತವೆ. ತುರ್ತು ಸಾರ್ವಜನಿಕ ಯೋಜನೆ, ಕಾಮಗಾರಿಗಳಿಗೂ ಹಿನ್ನಡೆಯಾಗುತ್ತದೆ. ಅಗತ್ಯ ಔಷಧಿಗಳನ್ನು ಖರೀದಿಸುವ ಟೆಂಡರ್ ಪ್ರಕ್ರಿಯೆಗೆ ಅನುಮತಿ ನೀಡಲು ವಿಳಂಬವಾಗಿರುವುದರಿಂದ ಈಗ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ ತಲೆದೋರಿರುವುದು ಇಂತಹ ಸಮಸ್ಯೆಗಳಿಗೊಂದು ಜ್ವಲಂತ ಉದಾಹರಣೆಯಾಗಿದೆ. ಇದರಿಂದಾಗಿ ಬಡ ರೋಗಿಗಳು ಹಣ ತೆತ್ತು ಔಷಧಿ ಖರೀದಿಸುವ ಅನಿವಾರ್ಯತೆ ತಲೆದೋರಿದೆ. ಇಂತಹ ತುರ್ತು ಹಾಗೂ ಅನಿವಾರ್ಯ ಸಂದರ್ಭಗಳಲ್ಲಿ ಆದ್ಯತೆಯನುಸಾರ ಅನುಮತಿ ನೀಡಲು ಸೂಕ್ತ ವ್ಯವಸ್ಥೆಯನ್ನು ಚುನಾವಣೆ ಆಯೋಗ ರೂಪಿಸಬೇಕು. ಇದೇ ವೇಳೆ, ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಚುನಾವಣಾ ಕೆಲಸಕ್ಕೆ ನಿಯೋಜಿಸಿರುವುದರಿಂದ ಬಹುತೇಕ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಸೇವೆಗಳು ಲಭ್ಯವಾಗುತ್ತಿಲ್ಲ. ಚುನಾವಣೆ ಕೆಲಸ ಮುಗಿದ ನಂತರ ಖಾಲಿ ಇರುವ ಅವಧಿಯಲ್ಲಾದರೂ ಕಚೇರಿ ಕಾರ್ಯದತ್ತ ಗಮನವನ್ನು ಸಿಬ್ಬಂದಿ ನೀಡುತ್ತಿಲ್ಲ ಹಾಗೂ ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಳ್ಳದವರೂ ಕೂಡ ಇದೇ ನೆಪವನ್ನಾಗಿಸಿಕೊಂಡು ಕಚೇರಿಗಳಿಂದ ಮಾಯವಾಗುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಹೀಗಾಗಿ, ಚುನಾವಣಾ ನಿರ್ಬಂಧಗಳ ಬಗ್ಗೆಯೇ ಜನರಲ್ಲಿ ಅಸಮಾಧಾನ ಮೂಡುವುದಕ್ಕೆ ಆಸ್ಪದವಾಗದ ರೀತಿಯಲ್ಲಿ ಸಾರ್ವಜನಿಕ ಸೇವೆಗಳಿಗೆ ತೀವ್ರತರಹದ ಅಡಚಣೆಯಾಗದಂತೆ ಚುನಾವಣಾ ಆಯೋಗವು ವ್ಯವಸ್ಥಿತವಾಗಿ ಸಿಬ್ಬಂದಿಯನ್ನು ಬಳಸಿಕೊಳ್ಳಬೇಕಿದೆ. ಪ್ರಮುಖ ಇಲಾಖೆ, ಕಚೇರಿಗಳಲ್ಲಿ ಕನಿಷ್ಟ ಅಗತ್ಯದ ಸಿಬ್ಬಂದಿ ಲಭ್ಯವಿರುವಂತೆ ನೋಡಿಕೊಳ್ಳಬೇಕು.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೨೪-೦೪-೨೦೨೩
ಚಿತ್ರ ಕೃಪೆ: ಇಂಟರ್ನೆಟ್ ತಾಣ