ಸರ್ಪ್ರೈಸ್

ಸರ್ಪ್ರೈಸ್

ಬರಹ

ಆ ದಿನ ನಾನು ತುಂಬ ಖುಷಿಯಲ್ಲಿದ್ದೆ.ಇವತ್ತಿನಿಂದ ಪಾತ್ರೆ ತೊಳೆಯೊ ರಗಳೆ ಇರೋಲ್ಲ,ನಾಳೆ ಬೆಳಗ್ಗೆ ಲೇಟಾಗಿ ಏಳ್ಬಹುದು,ಅಮ್ಮ ಮಾಡೊ ರುಚಿಯಾದ ಅನ್ನ ಸಾಂಬಾರ್ ತಿನ್ನಬಹುದು.. ಇನ್ನು ಏನೇನೋ.. ಯಾಕಂದ್ರೆ ಊರಿಗೆಂದು ಹೋಗಿದ್ದ ಅಮ್ಮ ಇವತ್ತು ವಾಪಸ್ ಬರ್ತಿದ್ದಾಳೆ.ಬೆಳಿಗ್ಗೆ ಏಳ್ತಾನೆ ಬಂದ ಆಲೋಚನೆ ಅಂದ್ರೆ ಇವತ್ತು ನಾನು ಕಾಲೇಜಿಗೆ ಹೋಗದೆ, ಒಂದು ವಾರದಿಂದ ದಿನಾಲು ಕಾಲೇಜಿಗೆ ಹೋಗುವ ಗಡಿಬಿಡಿಯಲ್ಲಿ ಚೆಲ್ಲಾಪಿಲ್ಲಿ ಮಾಡಿರುವ ಮನೆಯನ್ನು ಒಪ್ಪವಾಗಿ ಇಟ್ಟು, ಅಮ್ಮ ಬಂದ ತಕ್ಷ್ಣಣ ಅವಳಿಗೆ ಸರ್ಪ್ರೈಸ್ ಕೊಡಬೇಕೆಂದು.ಅದನ್ನು ಆಫೀಸಿಗೆ ಹೋಗಿದ್ದ ಅಪ್ಪನಿಗೆ ಕಾಲ್ ಮಾಡಿ ತಿಳಿಸಿದೆ.ಅಪ್ಪ ಸಹ ಒಪ್ಪಿದರು.ಅಮ್ಮನಿಗೆ ಮನೆ ಯಾವಗಲು ಕ್ಲೀನ್ ಅಗಿರಬೇಕು.ಅಂದುಕೊಂಡ ಹಾಗೇನೆ, ನಾನು ಕಾಲೇಜಿಗೆ ಚಕ್ಕರ್ ಹಾಕಿ ಎಲ್ಲ ಪಾತ್ರೆ ತೊಳೆದು,ಬಟ್ಟೆ ಬರೆ ಎತ್ತಿಟ್ಟು, ಮನೆಯನ್ನು ಚೊಕ್ಕವಾಗಿಟ್ಟೆ.ಅಮ್ಮ ಬರೋಕೆ ಇನ್ನ ಸ್ವಲ್ಪ ಹೊತ್ತಿತ್ತು.ನಾನು ಸ್ನಾನ ಮುಗಿಸಿ ರೆಡಿಯಾದೆ.ಅಮ್ಮ ಪಾಪ ಹಸಿದು ಬರ್ತಾಳೆ ಅಂತ ನಾನೆ ಅನ್ನಕ್ಕಿಟ್ಟೆ.ತಿಳಿಸಾರು ಮಾಡಿದೆ.ಇನ್ನು ಅಮ್ಮ ಬರಲೇ ಇಲ್ಲ.ಅದಾಗಲೇ ಘಂಟೆ ಒಂದಾಗಿತ್ತು. ಅಮ್ಮ ಹನ್ನೆರಡಕ್ಕೆ ಬರಬೇಕಿತ್ತು.ಬಸ್ಸು ಸಿಕ್ಕಿಲ್ಲವೇನೊ ಅಥವ, ಲೇಟಾಗಿ ಹೊರಟಳೇನೋ ಅಥವಾ.. ನನ್ನ ಯೋಚನೆಗಳು ನಿಲ್ತಾನೆ ಇರಲಿಲ್ಲ.ನನಗೆ ಅಮ್ಮನನ್ನು ಬಿಟ್ಟರೆ,ಈ ಊರಿನಲ್ಲಿ ಬೇರೆ ಯಾರು ಹತ್ತಿರದವರಿಲ್ಲ.ಶಾಲೆಯ ಗೆಳತಿಯರೆಲ್ಲ,ವರ್ಗವಾಗಿ,ಹೆಚ್ಚಿನ ಓದಿಗಾಗಿ, ಬೇರೆ ಬೇರೆ ಊರುಗಳಿಗೆ ಹೊರಟು ಹೋಗಿದ್ದಾರೆ. ಕಾಲೇಜಿನಲ್ಲಿ ಈಗೀಗ ಸ್ನೇಹಿತೆಯರ ಪರಿಚಯವಾಗುತ್ತಿದೆ.
ಅಮ್ಮ ಯಾಕಿಷ್ಟು ಲೇಟ್ ಮಾಡ್ತಿದಾಳೆ? ಅವಳಿಗೊತ್ತಿಲ್ವ ಇಲ್ಲಿ ನಾನೊಬ್ಬಳೆ ಇರ್ತೀನಿ ಅಂತ.. ಓ.. ಅಮ್ಮನಿಗೇನು ಗೊತ್ತು ನಾನು ಮನೆಯಲ್ಲಿರೊದು? ನಾನು ಕಾಲೇಜಿಗೆ ಹೋಗಿರ್ತೀನಿ ಅಂತ ಲೇಟಾಗೇನೇ ಹೊರ್ಟಿರ್ತಾಳೆ.ನಾನು ಸರ್ ಪ್ರೈ ಸ್ ಕೊಡಬೇಕು ಅಂತ ಅಂದುಕೊಂಡ ದಿವಸಾನೆ ಅಮ್ಮ ಲೇಟಾಗಿ ಹೊರ್ಡ್ಬೇಕಾ. ಛೆ.. ಮನೆ ಬೀಗ ಹಾಕಿದೀನ ನೋಡಿಬಿಡೋಣ,ಹಾಗೆ ಮಶಿನಿಗೆ ಬಟ್ಟೆ ಹಾಕಿಬಿಡೋದು,ಅಮ್ಮ ಬರೊವರೆಗೆ ಬಟ್ಟೆನು ಒಗೆದು ಮುಗಿದಿರುತ್ತೆ. ವ್ಹಾ.. ಇವತ್ತು ಅಮ್ಮ ತುಂಬಾನೆ ಸರ್ಪ್ರೈಸ್ ಆಗ್ತಾಳೆ.

ಘಂಟೆ ಎರಡಾಯಿತು.ಗೇಟು ತೆಗೆಯೊ ಶಬ್ದ.ಅಮ್ಮ ಬಂದ್ಲು ಅನ್ನಿಸುತ್ತದೆ.ನಾನು ರೂಮಿನ್ನಲ್ಲೆ ಬಚ್ಚಿಟ್ಟುಕೋಬೇಕು.ಅಮ್ಮ ಮುಖ ತೊಳೆದು ರೂಮಿಗೆ ಬಂದ ತಕ್ಷಣ ...ಸರ್ ಪ್ರೈ ಸ್..ಬಾಗಿಲಿನ ಬೀಗ ತೆಗಿಯೊ ಸದ್ದು..ಅಮ್ಮನ ದನಿ,ನನಗೆ ಒಳಗೊಳಗೆ ಸಂಭ್ರಮ.ಅರೆ ಇದೇನಿದು? ಅಮ್ಮ ಯಾರ ಜೊತೆ ಮಾತಾಡುತ್ತಿರೋದು? ಈ ಗಂಡು ದನಿ ಯಾರದ್ದು? ಮೋಸ್ಟ್ಲಿ, ಕಂಠಿ ಮಾಮ ಇರಬೇಕು.ಹೊರಗೆ ಹೋಗಿ ನೋಡೋದ? ಅವಾಗ ಏನ್ ಸರ್ಪ್ರೈಸ್ ಉಳಿಯುತ್ತೆ?ಇಲ್ಲೇ ಕಾಯೋದು. ಅಮ್ಮ ಹೇಗಿದ್ರು ರೂಮಿಗೆ ಬಂದೇ ಬರ್ತಾಳೆ,ಇನ್ನ ಸಲ್ಪ ಹೊತ್ತು ಇಲ್ಲೆ ಇರೋದು. . .ಇದು ಯಾಕೋ ಕಂಠಿ ಮಾಮನ ದನಿ ಥರ ಇಲ್ವಲ್ಲ.ಅಮ್ಮ ರೂಮಿಗು ಬರ್ತಿಲ್ಲ.ನನಗ್ಯಾಕೊ ಒಂಥರಾ ಅನ್ನಿಸ್ತಾ ಇದೆ.ಹೊರಗೆ ಹೊಗೋದೆ ಉತ್ತಮ.ನಿಧಾನಕ್ಕೆ ಆಚೆ ಬಂದೆ.ನಮ್ಮ ಮನೆ ಸೋಫ ಮೇಲೆ ಯಾರೋ ವ್ಯಕ್ತಿ, ಹಿಂದೆಂದು ಅವನನ್ನ ನಾನು ನೋಡಿಲ್ಲ. ಅಮ್ಮ, ಇದೇನು ಕಾಲೇಜಿಗೆ ಹೋಗಿಲ್ಲ್ವ ಅಂತ ಅದೇನೊ ವಿಚಿತ್ರ ರೀತಿಯಲ್ಲಿ ಕೇಳಿದಳು.ತನಗೆ ನಾನು ಮನೆಯಲ್ಲಿ ಇರೋದು ಅವಳಿಗೆ ಸರ್ಪ್ರೈಸ್ ಆಗೇ ಇಲ್ಲವೇನೋ ಅನ್ನುವಂತೆ.ನಾನು ಇಲ್ಲ ಹೋಗಿಲ್ಲ ಅಂತಷ್ಟೆ ಹೇಳಿ ಆ ವ್ಯಕ್ತಿಯ ಕಡೆ ನೋಡಿದೆ,ಆತ ತನಗೆ ನನ್ನ ಇರುವಿನ ಅರಿವೇ ಇಲ್ಲವೇನೊ ಎಂಬಂತೆ ಟಿ.ವಿ ಹಾಕುವುದರಲ್ಲಿ ಮಗ್ನನಾಗಿದ್ದ.ಏನೊ ಇರುಸು ಮುರುಸು ನನಗೆ ಮಾತ್ರ.ನಾನು ಸ್ನೇಹಿತೆಯ ಮನೆಗೆ ಹೋಗಿ ಬರುತ್ತೆನೆಂದು ಹೇಳಿ ಮನೆಯಿಂದ ಹೋರಬಿದ್ದೆ. ಅಮ್ಮ ಯಾವ ಸ್ನೇಹಿತೆ ಅಂತ ಕೇಳಲೇ ಇಲ್ಲ.ನನಗೆ ಯಾವ ಸ್ನೇಹಿತೆಯ ಮನೆಯು ಗೊತ್ತೂ ಇರಲಿಲ್ಲ.
ಹೋಗೋದಾದ್ರು ಎಲ್ಲಿಗೆ? ಅಲ್ಲೇ ಇರುವ ಬಸ್ ಸ್ಟಾಪಿನಲ್ಲಿ ಕುಳಿತೆ. ಯಾರಾತ? ಗೊತ್ತಿಲ್ಲ..ನಮ್ಮಗ್ಯಾಕೆ ಬಂದ? ಗೊತ್ತಿಲ್ಲ.. ಇರಲಿ, ನಾನ್ಯಾಕೆ ಮನೆ ಇಂದ ಬಂದ್ಬಿಟ್ಟೆ? ಗೊತ್ತಾಗ್ತಾನೆ ಇಲ್ಲ.. ಹಾಗೆ ಎಷ್ಟು ಹೊತ್ತು ಯೋಚಿಸುತ್ತ ಕುಳಿತ್ತಿದ್ದೆನೋ?ಸಣ್ಣಗೆ ಮಳೆ ಹನಿಯಶುರುವಾದ್ದರಿಂದ ಮನೆ ಕಡೆ ಹೊರಟೆ. ಅ ವ್ಯಕ್ತಿ ಇರಲ್ಲಿಲ್ಲ. ಅಮ್ಮ ಊಟ ಮಾಡುತ್ತಿದ್ದಳು. ನಾನು ಆತ ಯಾರೆಂದು ಕೇಳಲಿಲ್ಲ. ಅಮ್ಮ ಹೇಳಲಿಲ್ಲ. ಆದ್ರೆ ಅಮ್ಮ ಆತ ಬಂದಿದ್ದ ಅಂತ ಅಪ್ಪನಿಗೆ ತಿಳಿಸಬೇಡ ಅಂದ್ಲು. ಯಾಕೆ ಅಂತ ನಾನು ಕೇಳಲಿಲ್ಲ. ಅವಳು ಹೇಳಲಿಲ್ಲ.