ಸರ್ವಜ್ಞನ ಕೆಲವು ವಚನಗಳು
ಬರಹ
ಉತ್ತಮದ ವರ್ಣಿಗಳನುತ್ತಮರೆನಬೇಡ
ಮತ್ತೆ ತನ್ನಂತೆ ಬಗೆವರನೆಲ್ಲರ
ನುತ್ತಮರೆನ್ನು ಸರ್ವಜ್ಞ ||
ಸತ್ತದನು ತಿಂಬಾತ ಎತ್ತಣದ ಹೊಲೆಯನು
ಒತ್ತಿ ಜೀವವನು ಕೊಱೆಕೊಱೆದು ತಿಂಬಾತ
ನುತ್ತಮದ ಹೊಲೆಯ ಸರ್ವಜ್ಞ ||
ಜಾತಿಹೀನರ ಮನೆಯ ಜೋತಿ ತಾ ಹೀನವೇ
ಜಾತಿವಿಜಾತಿಯೆನಬೇಡ ದೇವನೊಲಿ
ದಾತನೇ ಜಾತ ಸರ್ವಜ್ಞ ||
ಯಾತಱಾ ಹೂವೇನು ನಾತರದು ಸಾಲದೇ
ಜಾತಿವಿಜಾತಿಯೆನಬೇಡ ದೇವನೊಲಿ
ದಾತನೇ ಜಾತ ಸರ್ವಜ್ಞ ||
ನಡೆವುದೊಂದೇ ಭೂಮಿ ಸುಡುವುದೊಂದೇ ಅಗ್ನಿ
ಕುಡಿವುದೊಂದೇ ನೀರಿರುತಿರಲು
ನಡುವೆ ಕುಲಗೋತ್ರ ಎತ್ತಣದು ಸರ್ವಜ್ಞ ||
ಎಲವಿಲ್ಲ ನಾಲಗೆಗೆ ಬಲವಿಲ್ಲ ಬಡವಂಗೆ
ತೊಲೆಕಂಬವಿಲ್ಲ ಗಗನಕ್ಕೆ; ದೇವರಲಿ
ಕುಲಭೇದವಿಲ್ಲ ಸರ್ವಜ್ಞ ||
ಕೊಲುವ ಧರ್ಮವನೊಯ್ದು ಒಲೆಯೊಳಗೆ ಇಕ್ಕು! ಆ
ಕೊಲಲಾಗದೆಂಬ ಜೈನನ ಮತವೆನ್ನ
ತಲೆಯ ಮೇಲಿರಲಿ ಸರ್ವಜ್ಞ ||
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಸರ್ವಜ್ಞನ ಕೆಲವು ವಚನಗಳು