ಸರ್ವಜ್ಞನ ದೃಷ್ಟಿಯಲ್ಲಿ ಸಜ್ಜನ - ದುರ್ಜನ

ಸರ್ವಜ್ಞನ ದೃಷ್ಟಿಯಲ್ಲಿ ಸಜ್ಜನ - ದುರ್ಜನ

ಮಾನವ ಜನ್ಮ ಬಹಳ ದೊಡ್ಡದು. ನಮ್ಮ ಹಿಂದಿನ ಜನ್ಮದ ಪಾಪ ಪುಣ್ಯಗಳಿಗನುಸಾರವಾಗಿ, ಈ ಜನ್ಮವೆತ್ತಿದವರು ನಾವುಗಳು. ನಮ್ಮ ಗುಣಾವಗುಣಗಳಿಗೂ, ನಾವೆಸಗಿದ ಕಾರ್ಯಗಳೇ ಕಾರಣ. ವಿವೇಕಿಗಳಾದವರು, ಜ್ಞಾನವಂತರು, ಉತ್ತಮರು, ವಿದ್ಯಾವಂತರು ತಮ್ಮ ತಮ್ಮ ಗುಣದೋಷಗಳನ್ನು ಅರಿತು, ಇನ್ನೂ ಒಳ್ಳೆಯವರಾಗಲು ಪ್ರಯತ್ನಿಸಬೇಕು. *ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ* ಅವರ ಸಹವಾಸವು ನಮ್ಮಲ್ಲಿ ಪರಿವರ್ತನೆಯನ್ನು ಮಾಡಬಹುದು. ಸತ್ಸಂಗದಿಂದ ನಾವು ಪರಿಶುದ್ಧ ಬದುಕನ್ನು ಕಟ್ಟಿಕೊಳ್ಳಬಹುದು.

ಸತ್ಯರಾ ನುಡಿ ತೀರ್ಥ ನಿತ್ತರಾ ನಡೆ ತೀರ್ಥ

ಉತ್ತಮರ ಸಂಗವದು ತೀರ್ಥ ಹರಿವ ನೀರೆತ್ತಣದು ತೀರ್ಥ ಸರ್ವಜ್ಞ//

ಸಜ್ಜನರಿಗೆ ಎಲ್ಲೇ ಹೋದರೂ ಮನ್ನಣೆಯಿದೆ.

ಕೆಟ್ಟವರ ಸಹವಾಸದಿಂದ ನಾವು ಹಾಳಾಗುವುದು ಹೊರತು, ಒಳ್ಳೆಯವರಾಗಲು ಸಾಧ್ಯವಿಲ್ಲ.

ಒಳ್ಳಿದರನೊಡನಾಡಿ ಕಳ್ಳನೊಳ್ಳಿದನಕ್ಕು

ಒಳ್ಳಿದ ಕಳ್ಳರೊಡನಾಡಿ ಅವ ಶುದ್ಧ ಕಳ್ಳ ತಾನಕ್ಕು ಸರ್ವಜ್ಞ//

*ಈಚಲು ಮರ*ಗೊತ್ತಿಲ್ಲದವರಾರಿಲ್ಲ. ಈಚಲ ಮರದಡಿಯಲ್ಲಿ ಕುಳಿತು *ಮಜ್ಜಿಗೆ* ಕುಡಿದರೆ ನೋಡಿದ ಜನ ಏನು ಹೇಳಿಯಾರು? ಅದು ಮುಳ್ಳುಗಿಡ, ಹತ್ತಿರ ಹೋದರೆ ಚುಚ್ಚುವ ಸ್ವಭಾವ ಅದರದು. ಆದರೆ ಆ ಮರದ ಬಳಿ ಹೋಗಲೇ ಬೇಕು, ಅದರಿಂದಲೂ ಉಪಕಾರವಿದೆ. ನೀಚರಿಂದ ಪ್ರಾಣಹಾನಿ, ಮಾನಹಾನಿ ಎರಡೂ ಇದೆ. ದುರ್ಜನರು ಎಂದರೆ *ದೇಹದ ಮೇಲಿನ ಕಜ್ಜಿಯಂತೆ* ತುರಿಸಿದಷ್ಟೂ, ಕೆರೆತ ಹೆಚ್ಚಾಗಿ, ಕೀವಾಗಿ ವ್ರಣವಾದೀತು. *ದುಷ್ಟರಿಂದ ಆದಷ್ಟೂ ದೂರವಿರೋಣ*. ಇಂಥವರು *ನೊಣ*ಗಳಂತೆ. ಕೊಚ್ಚೆ, ಕೆಸರು ಬಹಳ ಇಷ್ಟ, ಒಳ್ಳೆಯದು ಯಾವುದೂ ಬೇಡ ಇವರಿಗೆ.

ನಾವು *ಶ್ರೀಗಂಧ*ದ ಹಾಗೆ ಆಗೋಣ, ನೊಣದ ಹಾಗೆ ಬೇಡ. ಒಳ್ಳೆಯವರ ಸಹವಾಸ, ಒಳ್ಳೆಯ ಚಿಂತನೆಗಳನ್ನು ಮಾಡೋಣ.

-ರತ್ನಾಭಟ್ ತಲಂಜೇರಿ

(ಸರ್ವಜ್ಞನ ವಚನಗಳು--ಆಧಾರ)