ಸರ್ವಜ್ಞ ಕವಿ

ಸರ್ವಜ್ಞ ಕವಿ

‘ಸರ್ವಜ್ಞ’ ಓರ್ವ ಆಧ್ಯಾತ್ಮಿಕ ವಿರಕ್ತ, ಪ್ರತಿಭಾವಂತ ಮಹಾಕವಿ. ಪಂಡಿತೋತ್ತಮರಿಗೆ ಅತಿಪ್ರಿಯ. ಪ್ರಾಪಂಚಿಕ ಸುಖ ಲವಲೇಶವೂ ಬೇಡದವ. ಓರ್ವ ಜಾನಪದ ವಿದ್ವಾಂಸ. ತ್ರಿಪದಿಯಲ್ಲಿ ತನ್ನ ಮನದಾಳದ ಭಾವನೆಗಳನ್ನು ಹಾಡುತ್ತಾ ಊರಿಂದೂರಿಗೆ ಸಂಚರಿಸುತ್ತಿದ್ದ ಮಹಾಯೋಗಿ, ಜೋಗಿ, ಹಾಡುಗಾರ. ಕೆಲವು ವಿದ್ವಾಂಸರು ಕೃಷ್ಣದೇವರಾಯನ ಕಾಲದಲ್ಲಿದ್ದವರೆಂದು ಅಭಿಪ್ರಾಯಪಟ್ಟಿದ್ದಾರೆ. ಇವರ ತ್ರಿಪದಿಯಲ್ಲಿ ವಿಡಂಬನೆ, ಹಾಸ್ಯ, ಕ್ರಾಂತಿಕಾರ ಮನೋಭಾವ, ಅದ್ಭುತ ಕೌಶಲ ಕಾಣಬಹುದು.

*ವಿದ್ಯೆ ಕಲಿಸದ ತಂದೆ ಬುದ್ಧಿ* *ಹೇಳದ ಗುರುವು*

*ಬಿದ್ದಿರಲು ಬಂದು ನೋಡದ* *ತಾಯಿಯು*

*ಶುದ್ಧ ವೈರಿಗಳು ಸರ್ವಜ್ಞ//*

ಹುಟ್ಟಿದ ಮಗುವಿಗೆ ವಿದ್ಯೆ ಕಲಿಸಿ ಅವನ ಕಾಲಮೇಲೆ ಅವನು ನಿಲ್ಲುವ ಹಾಗೆ ಮಾಡಬೇಕು. ಇಲ್ಲದಿದ್ದರೆ ಏನು ಪ್ರಯೋಜನ? ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳದ ಗುರುವಿದ್ದೂ ಪ್ರಯೋಜನವಿಲ್ಲ. ಅಸೌಖ್ಯದಿಂದ ಅಥವಾ ಬಿದ್ದಾಗ ಬಂದು ಎಬ್ಬಿಸದ  ತಾಯಿ ವೈರಿಯೇ ಸರಿ. ಹೀಗಿರುವವರು ಶತ್ರುಗಳಿಗೆ ಸಮಾನರು. ಸಮಾಜದ ವ್ಯವಸ್ಥೆ, ಅವ್ಯವಸ್ಥೆಗಳ ಮೇಲೆ ಬೆಳಕು ಚೆಲ್ಲಿ ಎಚ್ಚರಿಸಿದ ಧೀಮಂತರು. ‘ನಾನು ನಾನು’  ಎನ್ನುವುದನ್ನು ಬಿಡು ಎಂದು ಕಿವಿಮಾತು ಹೇಳಿದರು. ಹಿಂದಿನ ಜನುಮದ ಕರ್ಮ ಈಗ ಇದೆ, ಈ ಜನುಮದ ಕರ್ಮ ಮುಂದೆ ಇದೆ ಎಂದವರು. ಹೆಣ್ಣುಮಗಳೊಬ್ಬಳಿಗೆ ಸಚ್ಚಾರಿತ್ರ್ಯದ ಶೀಲ ಮುಖ್ಯವೆಂದರು ಮಾನವ ತನ್ನ ಬದುಕ ಹಾದಿಯಲ್ಲಿ ಶೀಲವನ್ನು ಕಾಪಾಡಿ, ಉತ್ತಮ ನೈತಿಕ ಮೌಲ್ಯಗಳ ಅಳವಡಿಸಬೇಕೆಂದರು. ಮತಿಹೀನರ ಸಂಗವ ಮಾಡದಿರಿ, ಅನ್ನದಾನ ಮಾಡಿ ಪುಣ್ಯ ಸಂಪಾದಿಸಿರಿ. ಸುಳ್ಳು ಮಾತನಾಡುವ ನಾಲಿಗೆಯ ಎಳ್ಳಷ್ಟೂ ನಂಬದಿರೆಂದರು.

ನಡೆಯುವ ಭೂಮಿ, ಕುಡಿಯುವ ನೀರು, ಸುಡುವ ಅಗ್ನಿ ಎಲ್ಲರಿಗೂ ಒಂದೇ, ಕುಲಗೋತ್ರಗಳೇಕೆ ಎಂಬ ಸಂದೇಶವ ಸಾರಿದ ಘನ ಮಹಿಮ ಸರ್ವಜ್ಞರು.

-ರತ್ನಾ ಕೆ ಭಟ್ ತಲಂಜೇರಿ

(ಸರ್ವಜ್ಞ ಕವಿಗಳ ಜನ್ಮ ದಿನಕ್ಕೆ ಕಿರು ಲೇಖನ)

ಚಿತ್ರ ಕೃಪೆ: ಇಂಟರ್ನೆಟ್ ತಾಣ