ಸರ್ವಮಂಗಳ (ಕಾದಂಬರಿ)
ಎಂ ಸುಬ್ರಮಣ್ಯರಾಜೇ ಅರಸ್ ಅಥವಾ ಚದುರಂಗ ಅವರ ಖ್ಯಾತ ಕಾದಂಬರಿ ‘ಸರ್ವಮಂಗಳ'. ಚದುರಂಗ ಅವರು ತಮ್ಮ ಹಿಂದಿನ ಎರಡು ಕಾದಂಬರಿಗಳಲ್ಲಿ ಹೆಣ್ಣಿನ ಭಾವನೆಗಳನ್ನು ಬಹಳ ಚೆನ್ನಾಗಿ ಬರೆದಿದ್ದರು. ಇದರಲ್ಲಿಯೂ ಅವರ ಬರವಣಿಗೆ ಅಷ್ಟೇ ಚೆನ್ನಾಗಿದೆ, ಜೊತೆಗೆ ಗ್ರಾಮೀಣ ಭಾಷೆಯ ಊಪಯೋಗವೂ ಸುಂದರವಾಗಿದೆ. ಲೇಖಕ ಚದುರಂಗ ಅವರ ʻಸರ್ವಮಂಗಳʼ ಕೃತಿಯನ್ನು ಓದಿದ ಬಳಿಕ ನನಗೆ ಅನಿಸಿದ್ದು....
“ಸರ್ವಮಂಗಳ- ಚದುರಂಗ ಅವರ ಮತ್ತೊಂದು ಒಳ್ಳೆಯ ಕಾದಂಬರಿ. 1930ರ ಆಸುಪಾಸಿನಲ್ಲಿ ನಡೆಯುವ ಈ ಪುಸ್ತಕದ ಘಟನಾವಳಿಗಳು ಬಹಳ ಚೆನ್ನಾಗಿ ಬರೆದಿದ್ದಾರೆ ಚದುರಂಗ. ಒಂದು ವರ್ಷವಾಗಿದ್ದಾಗಲೇ ನಟರಾಜನ ತಂದೆ ತಾಯಿ ನದಿಯಲ್ಲಿ ಮುಳುಗಿ ಸತ್ತರು. ತಮ್ಮ ಉದಾರತನಕ್ಕೆ ಹೆಸರಾಗಿದ್ದ ಶಂಕರಯ್ಯ ಬಹಳ ವರ್ಷದ ಮೇಲೆ ದಂಪತಿಗೆ ಆಗಿದ್ದು ಈ ನಟರಾಜ. ಅವರಕ್ಕ ಪಾರ್ವತಮ್ಮಳ ಮನೆಯಲ್ಲಿ ಪ್ರೀತಿಯಿಂದ ಬೆಳೆದನು ನಟರಾಜ. ಭಾವನಾದ ವಿಷಕಂಠಯ್ಯನೂ ಹಾಗೆಯೇ ಗಂಡುಮಕ್ಕಳಿಲ್ಲದವನು ನಟರಾಜನೇ ತನ್ನ ಗಂಡುಮಗ ಅಂತ ತಿಳಿದಿರುತ್ತಾನೆ. ಅವರ ಮಗಳು ಸರ್ವಮಂಗಳ ಮಂಗಲಿಯಾಗಿ ನಟರಾಜನ ನಡುವೆ ಅವ್ಯಕ್ತ ಸಂಬಂಧ. ಇಬ್ಬರೂ ಚಿಕ್ಕಂದಿನಿಂದಲೇ ಕೂಡಿ ಬೆಳೆಯುತ್ತಾರೆ. ಒಬ್ಬರನ್ನು ಬಿಟ್ಟು ಇನ್ನೊಬ್ಬರಿಗೆ ಇರಲು ಆಗುತ್ತಿರಲಿಲ್ಲ. ಇವರು ಬೆಳೆಯುವ ರೀತಿ ನೋಡಿದರೆ ನಾಗಜ್ಜಿಗೆ ಮುಂದೆ ಇವರು ಗಂಡ ಹೆಂಡತಿಯಾಗುವ ಬಯಕೆಯನ್ನಿಟ್ಟುಕೊಂಡಿರುತ್ತಾರೆ. ಪಾರ್ವತಿ-ವಿಷಕಂಠಯ್ಯನಿಗೂ ಹಾಗೆಯೇ ಇರುತ್ತದೆ. ಆದರೆ ವಿಧಿಯಾಟವೇ ಬೇರೆಯಾಗಿರುತ್ತದೆ. ಉನ್ನತ ಅಭ್ಯಾಸಕ್ಕೆ ನಟರಾಜ ಮೈಸೂರಿಗೆ ಚಿಕ್ಕಪ್ಪನ ಮನೆಗೆ ಹೋಗುತ್ತಾನೆ. ಅಲ್ಲಿ ವಿದ್ಯಾಭ್ಯಾಸ ನಡೆದಾಗ ಈ ಕಡೆ ಮಂಗಲಿ ದೊಡ್ಡವಳಾಗುತ್ತಾ ಹೋಗುತ್ತಾಳೆ. ವಿದ್ಯಾಭ್ಯಾಸದ ಜೊತೆಗೆ ನಟರಾಜ ಸ್ವಾತಂತ್ರ್ಯದ ಹೋರಾಟಕ್ಕೆ ಸೇರಿಕೊಳ್ಳುತ್ತಾನೆ. ಅದರ ಪರಿಣಾಮವಾಗಿ ಜೈಲನ್ನು ಸೇರುತ್ತಾನೆ. ಇದು ವಿಷಕಂಠಯ್ಯನಿಗೆ ಸಹಿಸಲಾಗುವುದಿಲ್ಲ. ಅದಕ್ಕೆ ಹೇಗಾದರೂ ನಟರಾಜ ಮತ್ತು ಮಂಗಲಿ ನಡುವಿನ ಸಂಬಂಧವನ್ನು ಹೇಗಾದರೂ ಮಾಡಿ ಕಿತ್ತುಹಾಕಬೇಕೆಂದು ಯೋಜನೆಹಾಕುತ್ತಾನೆ.
ಒಂದು ದಿನ ನಾಗಜ್ಜಿ ಅನಾರೋಗ್ಯದಿಂದ ಹಾಸಿಗೆ ಹಿಡಿದು ಕೊನೆಯ ಘಳಿಗೆಯಲ್ಲಿ ಅವರಿಬ್ಬರೂ ಮದುವೆಯಾಗಬೇಕೆಂಬ ಹಂಬಲ ವ್ಯಕ್ತಪಡಿಸುತ್ತಾಳೆ. ನಾಗಜ್ಜಿಯ ಅಗಲಿಕೆ ಎಲ್ಲರನ್ನೂ ದುರ್ಬಲರನ್ನಾಗಿ ಮಾಡುತ್ತದೆ, ಪಾರ್ವತಿಗೆ ಅದು ನುಂಗಲಾರದ ತುತ್ತಾಗುತ್ತದೆ. ಇದರಿಂದ ಅವಳು ಹಾಸಿಗೆಯನ್ನೇ ಹಿಡಿಯುತ್ತಾಳೆ. ಅವಳ ಕೊನೆಘಳಿಗೆ ಸಮೀಪಿಸಬಹುದೇನೋ ಎನ್ನುವ ಘಳಿಗೆಯಲ್ಲಿ ಬೇಗ ಮದುವೆ ಮಾಡಿಬಿಟ್ಟರಾಯಿತು ಅಂತ ಯೋಚಿಸಿದಾಗ ನರಸಮ್ಮ ತನ್ನ ತಮ್ಮ ಸುಬ್ರಾಯನನ್ನೇ ಅವಳ ಜೊತೆಗೆ ಮದುವೆ ಮಾಡುವ ಪ್ರಸ್ತಾವನೆ ಮುಂದಿಡುತ್ತಾಳೆ. ಇದೇ ಒಳ್ಳೆಯ ಉಪಾಯ ಅಂತ ಪಾರ್ವತಿಯನ್ನು ಹೇಗೋ ಹೆದರಿಸಿ ಬೆದರಿಸಿ ಮದುವೆ ಮಾಡುತ್ತಾರೆ. ಸುಬ್ರಾಯನೇನೋ ಒಳ್ಳೆಯವನೇ ಆದರೆ ತಾಯಿಯ ಚಾಟಿಯ ಏಟು ಅವನನ್ನು ಬದಲಾಗುವಂತೆಯೇ ಮಾಡಿತ್ತು. ಆದರೂ ದಿಗ್ಬಂಧನ ಹಾಕಿದ ಮೇಲೆ ಬೇರೆ ಏನೂ ಉಪಾಯವಿಲ್ಲದೆ ಯಾಂತ್ರಿಕವಾಗಿ ಸಂಸಾರವನ್ನು ನಡೆಸಿದ್ದಳು.
ನಟರಾಜನು ತನ್ನ ಅಕ್ಕನ ಬಲವಂತಕ್ಕೆ ದುರ್ಗಿಯನ್ನು ಮದುವೆಯಾಗುತ್ತಾನೆ. ಅದುವೂ ಮನಸ್ಸಿಲ್ಲದ ಮದುವೆ. ಚಿಕ್ಕಪ್ಪನ ಸಹಾಯದಿಂದ ನಟರಾಜನಿಗೆ ರೇಲ್ವೆಯಲ್ಲಿ ಕೆಲಸ ಸಿಕ್ಕಿತು. ಮದುವೆಯ ತರುವಾಯ ಅವನು ಹೆಚ್ಚು ಸಮಯ ಕೆಲಸದಲ್ಲೇ ಕಳೆಯತೊಡಗಿದನು. ಅದನ್ನು ಬಿಟ್ಟರೆ ಅನಂತೂನ ಜೊತೆ ಕಳೆಯತೊಡಗಿದ್ದ. ದುರ್ಗಿ ಮುಂದಿದ್ದರೆ ಚೇಳು ಕಡಿದಂತಾಗುತ್ತಿತ್ತು ನಟರಾಜನಿಗೆ. ಸದಾ ಅವಳಿಗೆ ಹೊಡೆಯುತ್ತಾ ಅವಳಿಗೆ ತೊಂದರೆ ಕೊಡಲು ಪ್ರಾರಂಭಿಸುತ್ತಾನೆ. ಅಕ್ಕ, ಗೆಳೆಯ ಎಲ್ಲರೂ ಹೇಳಿದರೂ ಕೇಳದೆ ಅದನ್ನೇ ಮುಂದುವರೆಸುತ್ತಾನೆ. ಒಂದು ದಿನ ಮಂಗಲಿ ಬಂದಾಗ ದುರ್ಗಿಯ ಅವಸ್ಥೆಯನ್ನು ಕಂಡು ನಟರಾಜನಿಗೆ ಬುದ್ಧಿಮಾತನ್ನು ಹೇಳುತ್ತಾಳೆ. ನಂತರ ಅವನ ನಡವಳಿಕೆಯಲ್ಲಿ ಕೊಂಚವಾಗಿ ವ್ಯತ್ಯಾಸವಾಗುತ್ತದೆ.
ಅನಂತನ ಹೆಂಡತಿ ವೈಶಾಲಿ ಮೊದಲಿನಿಂದಲೂ ಕಪಟದ ಹೆಂಗಸು. ಅನಂತುವಿನ ಊಟದಲ್ಲಿ ವಿಷ ಹಾಕಿಬಿಡುತ್ತಾಳೆ. ಅದರ ತರುವಾಯ ನಟರಾಜನ ಅಕ್ಕ ಪಾರ್ವತಮ್ಮ ಅನಾರೋಗ್ಯ ಅತಿಯಾಗಿ ಕೊನೆಯುಸಿರೆಳೆಯುತ್ತಾಳೆ. ಇವೆರಡು ಸಾವಿನಿಂದ ನಟರಾಜ ತತ್ತರಿಸಿ ಹೋಗುತ್ತಾನೆ. ನಿಧಾನವಾಗಿ ಅವನಿಗೆ ಕ್ಷಯರೋಗ ದಾಳಿಮಾಡುತ್ತದೆ. ಮಂಗಲಿ ಟೊಂಕಕಟ್ಟಿ ನಟರಾಜನ ಸೇವೆಗೆ ನಿಲ್ಲುತ್ತಾಳೆ. ದುರ್ಗಿ ಮನೆಕೆಲಸ ಮಾಡಿಕೊಂಡಿದ್ದರೆ ಮಂಗಲಿ ಸಂಪೂರ್ಣವಾಗಿ ನಟರಾಜನ ಜವಾಬ್ದಾರಿ ತೆಗೆದುಕೊಳ್ಳುತ್ತಾಳೆ. ಹೀಗಿರುವಾಗ ಜನರು ಬಂದು ನಟರಾಜನನ್ನು ನೋಡಿಕೊಂಡು ಹೋದಾಗ ಮಂಗಲಿ ಮತ್ತು ನಟರಾಜನ ಜೋಡಿ ಬೇರೆ ಅರ್ಥವನ್ನು ಬಿಂಬಿಸುತ್ತದೆ. ಅದಕ್ಕಾಗಿ ಅವರಿಗೆ ತಿಳುವಳಿಕೆ ಹೇಳಿದರೂ ಮಂಗಲಿ ಯಾರ ಮಾತಿಗೂ ಜಗ್ಗದೆ ನಟರಾಜನ ಸೇವೆ ಮುಂದುವರೆಸುತ್ತಾಳೆ. ನಟರಾಜನ ಅರೋಗ್ಯ ಸ್ಥಿತಿಯಲ್ಲಿ ಬದಲಾಗದೆ ಕಣ್ಣು ಮುಚ್ಚುತ್ತಾನೆ. ಅವನ ಸಾವು ಮಂಗಲಿಯ ಮನಸ್ಸಿನ ಮೇಲೆ ಅತ್ಯಂತ ಪ್ರಭಾವ ಬೀರುತ್ತದೆ. ಮುಂದೆ ಮಂಗಲಿಯೂ ಬಹಳ ದಿನ ಬದುಕಿರದೆ ಬಾಳಿಗೆ ನಮಸ್ಕಾರ ಹೇಳುತ್ತಾಳೆ.
ಎಂದಿನಂತೆ ಚದುರಂಗ ಅವರು ಬಹಳ ಚೆನ್ನಾಗಿ ಕಾದಂಬರಿಯನ್ನು ರೂಪಿಸಿದ್ದಾರೆ. ಅವರ ಹಿಂದಿನ ಎರಡು ಕಾದಂಬರಿಗಳನ್ನು ಓದಿದಾಗ ಹೆಣ್ಣಿನ ಭಾವನೆಗಳನ್ನು ಬಹಳ ಚೆನ್ನಾಗಿ ಬರೆದಿದ್ದರು. ಇದರಲ್ಲಿಯೂ ಅವರ ಬರವಣಿಗೆ ಅಷ್ಟೇ ಚೆನ್ನಾಗಿದೆ. ಅದರ ಜೊತೆಗೆ ಗ್ರಾಮೀಣ ಭಾಷೆಯ ಊಪಯೋಗವೂ ಸುಂದರವಾಗಿದೆ. 280 ಪುಟಗಳ ಈ ಕಾದಂಬರಿಯನ್ನು ಓದಿದರೆ ನಿಮಗೆ ಗಾಮ್ಯ ಭಾಷೆಯ ಸೊಗಡಿನ ಅನುಭವವಾಗುತ್ತದೆ.
-”ಸುಶಾಂತ್”