ಸರ್ವಮಾನ್ಯ ಕವಿ ಕೆ ಎಸ್ ನಿಸಾರ್ ಅಹಮದ್

ಸರ್ವಮಾನ್ಯ ಕವಿ ಕೆ ಎಸ್ ನಿಸಾರ್ ಅಹಮದ್

ಬರಹ

ಅವನ ಆ ತುಟಿಯ ಬೆಣ್ಣೆಯಂಥ ನಗು ಕಾಯಲಿ ಜಗದವರ, ಸಂತತ ನಗಿಸಲಿ ನಗದವರ ಎಂದು ಕೃಷ್ಣನ ಬಾಲ ಲೀಲೆಗಳ ಕುರಿತು ಕವನ ಬರೆದವರು ಒಬ್ಬ ಮುಸಲ್ಮಾನ್ ಕವಿ. ಗೋಕುಲಾಷ್ಟಮಿಗೂ ಇಮಾಮ್ ಸಾಬಿಗೂ ಏನು ಸಂಬಂಧ ಎಂಬಂತಿದೆ ಈ ಪರಿ. ಆ ಕವಿ ಬೇರೆ ಯಾರೋ ಅಲ್ಲ, ಇಂದು ನಮ್ಮೆಲ್ಲರ ಸಮಕಾಲೀನರಾಗಿ ನಮ್ಮೊಂದಿಗಿರುವ ಶ್ರೀ ಕೆ ಎಸ್ ನಿಸಾರ್ ಅಹಮದ್‌ರವರು.

ನಿಸಾರ್ ಅಹಮದ್‌ರವರು ವ್ಲತ್ತಿಯಲ್ಲಿ ಭೂವಿಜ್ಞಾನಿ. ಭೂಮಿಯ ಒಳಪದರಗಳು, ಖನಿಜಗಳು, ಜಲದ ಸೆಲೆಗಳು ಇವುಗಳ ಅಧ್ಯಯನ ಮಾಡುವುದಕ್ಕಷ್ಟೇ ಸೀಮಿತಗೊಳ್ಳದೆ ಕನ್ನಡ ಸಾಹಿತ್ಯದ ಒಂದು ಪ್ರಕಾರಕ್ಕೇ ಪ್ರಜ್ವಲ ಬೆಳಕು ಬೀರಿದ ಉಜ್ವಲ ತಾರೆ.

ಇವರ ನಿತ್ಯೋತ್ಸವ ಗೀತೆಯನ್ನು ಹಾಡಿ ತಣಿಯದ ಮೆಲುಕು ಹಾಕದ, ಪುಳಕಗೊಳ್ಳದ ಮನವಿಲ್ಲ. ಕನ್ನಡ ಭಾವಗೀತೆಗಳ ಕೆಸೆಟ್ ಪ್ರಪಂಚದಲ್ಲಿ ಮೊತ್ತ ಮೊದಲು ಮಾರುಕಟ್ಟೆಗೆ ಬಂದ ಧ್ವನಿಸುರುಳಿ 'ನಿತ್ಯೋತ್ಸವ', 'ಕುರಿಗಳು ಸಾರ್ ಕುರಿಗಳು', 'ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ', 'ಬೆಣ್ಣೆ ಕದ್ದ ನಮ್ಮ ಕೃಷ್ಣ' ಇವೂ ಅದೇ ಸೊಬಗಿನ ಕವನಗಳು. ನಿತ್ಯೋತ್ಸವ ಗೀತೆಯಂತೂ ನಾಡಗೀತೆಯಷ್ಟೇ ಮಹತ್ತಾದರೂ ಯಾವುದೇ ವಿವಾದಕ್ಕೆ ಸಿಲುಕದ ಸಾಹಿತ್ಯ ಅದರಲ್ಲಿದೆ.

ಸ್ವತಃ ಕೆ ಎಸ್ ನಿಸಾರ್ ಅಹಮದ್‌ರವರೇ ಒಬ್ಬ ವಿವಾದಾತೀತ ವ್ಯಕ್ತಿ. ಕನ್ನಡ ಸಾಹಿತ್ಯ ಲೋಕದಲ್ಲಿ ಜಾತಿಯ, ರಾಜಕಾರಣದ, ಪ್ರಾದೇಶಿಕತೆಯ ಲಾಬಿಗಳೇ ರಾರಾಜಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಯಾವ ಲಾಬಿಗೂ ಇಳಿಯದೆ ಸ್ವಯಂ ತೇಜೋಮಾನರಾಗಿರುವ ಯುಗದ ಕವಿ ಕೆ ಎಸ್ ನಿಸಾರ್ ಅಹಮದ್.

ಅವರೊಮ್ಮೆ ಯಾವುದೋ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಜೊತೆಯಲ್ಲಿ ತಮ್ಮ ಪತ್ನಿಯನ್ನೂ ಕರೆದೊಯ್ಯಬೇಕಿತ್ತು. ಸರಿ ಶುರುವಾಯಿತು ಅವರ ಪತ್ನಿಯ ಮೇಕಪ್ಪು. ವಸ್ತ್ರಾಲಂಕಾರ, ಪ್ರಸಾಧನ, ಒಡವೆಗಳ ಭೂಷಣ ಎಲ್ಲವೂ ಆದವು. ನಮ್ಮ ಕವಿಯೂ ಪತ್ನಿಯ ಸರ್ವಾಲಂಕಾರ ಸೊಬಗನ್ನು ಕಣ್ತಣಿಯೆ ನೋಡಿ ಹೆಮ್ಮೆಪಟ್ಟುಕೊಂಡರು. ಇನ್ನೇನು ಹೊರಡಬೇಕು ಆಗ ಅವರ ಪತ್ನಿ ಬುರ್ಖಾ ತೊಟ್ಟುಕೊಂಡರಂತೆ. ಎಲ್ಲ ಅಲಂಕಾರವನ್ನೂ ಆ ಬುರ್ಖಾ ಮರೆ ಮಾಡಿದ ಬಗೆಯನ್ನು ಕಂಡು ವಿಷಾದಿಸುತ್ತಾ ಅವರು ಕವನ ಬರೆದರು. ನವಿರು ಹಾಸ್ಯ ಮತ್ತು ವಿಚಾರವಂತಿಕೆಯಿಂದ ಕೂಡಿದ ಆ ಕವನಕ್ಕೆ ಮುಸ್ಲಿಂ ಬಾಂಧವರು ಕೋಪಗೊಳ್ಳಲಿಲ್ಲ, ಫತ್ವಾ ಹೊರಡಿಸಲಿಲ್ಲ. ಇದು ಕವಿ ಕೆ ಎಸ್ ನಿಸಾರ್ ಅಹಮದರ ಸರ್ವವಂದ್ಯ ವರ್ಚಸ್ಸಿಗೆ ಸಾಕ್ಷಿ.

ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನ ಒಡನಾಟ, ಅಲ್ಲಿನ ಪ್ರಕೃತಿಯ ಸೊಬಗು, ಕವಿಗಳಿಗೆಂದೇ ಹೇಳಿ ಮಾಡಿಸಿದ ಹವಾಗುಣ, ಇವೆಲ್ಲ ನಿಸಾರ್ ಅಹಮದರ ಕವಿತಾ ಹೃದಯವನ್ನು ಪಕ್ವಗೊಳಿಸಿರಬಹುದು. ಅಷ್ಟಲ್ಲದೆ ಒಬ್ಬ Geology Professor ಕನ್ನಡ ಕವನಗಳನ್ನು ರಚಿಸಿ ಕವಿಹೃದಯ ಮೆರೆಯುವುದೆಂದರೇನು?
ಅವರ ಸಿರಿ ಲೆಕ್ಕಣಿಕೆಯಿಂದ ಹಲವಾರು ಕವನಸಂಕಲನಗಳು ಮೂಡಿಬಂದಿವೆ. 'ಮನಸು ಗಾಂಧಿಬಜಾರು', 'ನೆನೆದವರ ಮನದಲ್ಲಿ', 'ಸುಮುಹೂರ್ತ', 'ಸಂಜೆ ಐದರ ಮಳೆ', 'ನಾನೆಂಬ ಪರಕೀಯ', 'ನಿತ್ಯೋತ್ಸವ', 'ಸ್ವಯಂ ಸೇವೆಯ ಗಿಳಿಗಳು', 'ಅನಾಮಿಕ ಆಂಗ್ಲರು' - ಹೀಗೆ ಪ್ರತಿಯೊಂದೂ ಸಾರಸ್ವತ ಸಂಪದವೇ ಆಗಿದೆ. ಯಾವುದೇ ಕವನವು ನಮ್ಮನ್ನು ಕ್ಷೆಬೆಗೀಡು ಮಾಡದೇ, ಮನವನ್ನು ಖತಿಗೊಳಿಸದೇ ಯಾವುದೇ ಸಂದರ್ಭದಲ್ಲೂ ಮುದನೀಡುವ ರಸೋನ್ನತಿಯನ್ನೂ ಭಾವಸಂಚಾರವನ್ನೂ ಹೊಂದಿವೆ.

ಅವರ 'ಇದು ಬರಿ ಬೆಡಗಲ್ಲೋ ಅಣ್ಣ' ಎಂಬ ವಿಮರ್ಶಾ ಕೃತಿ ಇತರ ವಿಮರ್ಶೆಗಳಂತೆ ಕಹಿಯೂ ಆಗದೆ ತೇಲಿಕೆಯೂ ಆಗದೆ ಅತ್ಯಂತ ಭಾವಪೂರ್ಣವೂ ತೂಕವುಳ್ಳದ್ದೂ ಆಗಿ ವಿಮರ್ಶಾಲೋಕದಲ್ಲಿ ಕುವೆಂಪುರವರ ಸಮಾನರಾಗಿ ನಿಲ್ಲುವ ಶಕ್ತಿಯನ್ನು ಅವರಿಗೆ ದೊರಕಿಸಿದೆ.

ಕೆ ಎಸ್ ನಿಸಾರ್ ಅಹಮದರ ಕವಿತೆಗಳು ಬರೀ ಹೆಣ್ಣನ್ನೇ ಅಥವಾ ಬರೀ ಪ್ರೇಮವನ್ನೇ ಮುಖ್ಯ ವಸ್ತುವಾಗಿಸಿಲ್ಲ. ಅವರ ಕವಿತೆಗಳು ಮಾಸ್ತಿಯವರ ವಾಕಿಂಗನ್ನು, ಕಾಲೇಜು ಯೂನಿಯನ್ನು ಪ್ರೆಸಿಡೆಂಟನ ತಳಮಳವನ್ನು, ಬುರ್ಖಾ ಎಂಬ ಸಾಮಾಜಿಕ ಮೌಢ್ಯವನ್ನು, ವಿಮರ್ಶಕರ ಕಿರಿಕಿರಿಯನ್ನು, ರಾಜಕಾರಣಿಗಳ ದೊಂಬರಾಟವನ್ನು, ಸೋಗಲಾಡಿ ಶಿಕ್ಷಣವನ್ನು ಬಿಂಬಿಸುತ್ತದೆ.

ಇದೇ ಕಾರಣದಿಂದಾಗಿಯೇ 'ಉತ್ತನೆಲದ ಗೆರೆ' 'ಆಗಷ್ಟೇ ಕೊಂದ ಕುರಿಮರಿಯ ರಕ್ತದ ಬಿಸುಪು', 'ಕೊಯ್ದ ಹಸಿಮರದ ಕಂಪು', 'ಸಮಾಜವಾದದ ರೊಟ್ಟಿಯ ತುಣುಕು' ಇಂಥ ಸಾಮಾನ್ಯ ವಿಷಯಗಳ ಮೇಲೆ ಕವನ ಬರೆದ ಪಾಬ್ಲೊ ನೆರೂಡ ಇವರಿಗೆ ಅತ್ಯಂತ ಪ್ರಿಯರಾಗುತ್ತಾರೆ. ನೆರುಡನನ್ನು ಆಳವಾಗಿ ಅಭ್ಯಸಿಸಿರುವ ಇವರು ಅವನನ್ನು ಸುಮ್ಮನೇ ಕೋಟ್ ಮಾಡುವವರ ವಿರುದ್ಧ ಸಹಜವಾಗಿ ಕೋಪಗೊಳ್ಳುತ್ತಾರೆ.

ನಿಸಾರರ ಕವನಗಳಲ್ಲಿ ಮಷಾಲು, ನಾಚು, ಖುಲ್ಲಾ ಮುಂತಾದ ಅರಬ್ಬೀ ಪದಗಳ ಹಾಸುಹೊಕ್ಕು ಹೇರಳವಾಗಿದೆ. 'ಇಪ್ಪತ್ತೆಂಟನಾಡುವುದು ನಡುವೆ ಅದೂ ಇದೂ ಇಪ್ಪತ್ತೆಂಟನಾಡುವುದು' ಎಂಬಂಥ ಪದಚಮತ್ಕಾರಗಳೂ ಇವೆ. 'ನಾಡಿದ್ದು ನಾಳೆಯ, ನಾಳೆ ಇವೊತ್ತಿನ, ಇಂದು ನಿನ್ನೆಯ ಪುನರಾವರ್ತನೆಯ ಏಕತಾನತೆಯಲ್ಲಿ’ ಎಂಬಂಥ ತರ್ಕ ಜಿಜ್ಞಾಸೆಯೂ ಇದೆ.

ಕೆ ಎಸ್ ನಿಸಾರ್ ಅಹಮದರ ಕೃತಿಗಳಿಗೆ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ, ಎನ್‌ಸಿಇಆರ್‌ಟಿ ರಾಷ್ಟ್ರೀಯ ಪ್ರಶಸ್ತಿ, ೧೯೮೧ರ ರಾಜ್ಯೋತ್ಸವ ಪ್ರಶಸ್ತಿಗಳು ಸಂದಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಮೂರು ವರ್ಷ ಅಧ್ಯಕ್ಷರಾಗಿದ್ದ ಇವರು ಸಿನಿಮಾ ಸೆನ್ಸಾರ್ ಮಂಡಳಿಯ ಸದಸ್ಯರೂ ಆಗಿದ್ದರು. ಬೆಂಗಳೂರು ಬಾನುಲಿ ಕೇಂದ್ರದ ಸಲಹಾ ಮಂಡಳಿಯ ಸದಸ್ಯರಾಗಿದ್ದರಲ್ಲದೆ ಕರ್ನಾಟಕ ಸರ್ಕಾರದ ಕನ್ನಡ ಭಾಷಾನುಷ್ಠಾನ ಸಮಿತಿ ಹಾಗೂ ಗಡಿ ಸಲಹಾ ಸಮಿತಿಯ ಸದಸ್ಯರೂ ಆಗಿದ್ದರು. ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕವಿ ಸಮ್ಮೇಳನದಲ್ಲಿ ಕನ್ನಡವನ್ನು ಪ್ರತಿನಿಧಿಸಿದ್ದರು.

ಇಂಥ ಸರ್ವಮಾನ್ಯ ಕವಿ ಕೆ ಎಸ್ ನಿಸಾರ್ ಅಹಮದ್‌ರವರು ನೂರ್ಕಾಲ ಬಾಳಲೆಂದು ಹಾರೈಸೋಣ.