ಸರ್ವಶಕ್ತ
ಎಲ್ಲರಿಗೆಲ್ಲವೂ ನೀಡುವುದಿಲ್ಲ ಆ ಸರ್ವಶಕ್ತ
ಖಾತ್ರಿಯವಗೆ ಎಲ್ಲ ನೀಡಿದರೆ ಮಾನವನಾಗನು ತನ್ನ ಭಕ್ತ
ಎಲ್ಲವಿರಲು ಮನುಜ ಸಡ್ಡು ಹೊಡೆದಾನೆಂಬ ಹೆದರಿಕೆ
ಆಗಾಗ ಇದ ತಿಳಿಸಿ ತೋರುವನು ಜೀವಕೆ ಬೆದರಿಕೆ
ಸಿರಿವಂತಿಕೆ ಇತ್ತವಗಿಲ್ಲ ಆರೋಗ್ಯ
ಆರೋಗ್ಯವಿದ್ದವಗಿಲ್ಲ ಬುದ್ಧಿಶಕ್ತಿ
ಬುದ್ಧಿ ಇದ್ದವಗಿಲ್ಲ ತಕ್ಕ ಕುಟುಂಬ
ತಕ್ಕ ಕುಟುಂಬ ಇದ್ದವಗಿಲ್ಲ ಸಮಾಜ ಮನ್ನಣೆ
ಮಹಲಿನಲ್ಲಿದ್ದವಗೆ ನಿದ್ದೆಯಿಲ್ಲ
ನಾಳೆಯ ಚಿಂತೆಯಿಲ್ಲದವಗೆ ನೆಲೆಯಿಲ್ಲ
ಎಲ್ಲ ಇದ್ದವಗಿಲ್ಲ ಮಾರುದ್ದದಾಯುಷ್ಯ
ಹೀಗೆ ಹತ್ತು ಕೊಟ್ಟವ ಕೊಡದಿರುವ ಇನ್ನೆರಡ
ಕಲ್ಲು ತಿಂದು ಜೀರ್ಣಿಸುವ ವಯಸು
ತಿನಿಸು ಕೊಳ್ಳಲಿಲ್ಲ ಕಿಲುಬು ಕಾಸು
ಹಲ್ಲಿದ್ದವಗೆ ಸಿಗಲಿಲ್ಲ ಜಗಿಯಲು ಕಡಲೆ
ಕಡಲೆ ಇದ್ದವಗೆ ಹಲ್ಲಿರುವುದಿಲ್ಲ ಎಂಬುದು ಸತ್ಯ
ಎಲ್ಲ ಇದ್ದವಗೆ ತಿನ್ನಲು ಮನಸಿಲ್ಲ
ಹದಿ ವಯಸಿನಲಿ ಕುದಿಯುತಿಹುದು ರಕ್ತ
ಆಗಾಗುವನು ಯಾರುಯಾರಿಗೋ ಭಕ್ತ
ಕಂಡುದ ಕೇಳಿದುದ ನಂಬದ ವಯಸು
ಬರುವುದು ಮುಂದೆ ಕಾಣದುದ ಕೇಳದುದ ನಂಬುವ ಕಾಲ
ಆಗ ಹಪಹಪಿಸುವನು ವ್ಯರ್ಥಿಸಿದೆ ಸುವರ್ಣ ಕಾಲ
ಇದಲ್ಲವೇ ಲೋಕದ ನೀತಿ
ವೈರಾಗ್ಯ ಬರುವುದದು ಅಭಾವದಾಗ
ಸರಾಗವಾಗುವುದು ಎಲ್ಲ ಇರುವಾಗ
ಹೀಗಾಗದಿರೆ ಆಸ್ವಾದಿಸುವೆ ಹೇಗೆ ಜೀವನದ ಪರಿಯ
ಇದಕಾಗಿ ನಂಬುವೆ ನಾ ಸರ್ವಶಕ್ತನ ಶಕ್ತಿಯ