ಸರ್ವೆ ನಂಬರ್ - 97
ಅನಿಲ್ ಗುನ್ನಾಪೂರ ಅವರ ನೂತನ ಕಥಾ ಸಂಕಲನ ಸರ್ವೆ ನಂಬರ್ ೯೭. ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ ಪತ್ರಕರ್ತರಾದ ರಘುನಾಥ ಚ.ಹ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳು ನಿಮ್ಮ ಓದಿಗಾಗಿ…
“ಏನನ್ನೋ ಹಂಬಲಿಸುತ್ತ ಯಾವುದರ ಹುಡುಕಾಟದಲ್ಲೋ ನಿರತನಾಗಿರುವುದು ಎಲ್ಲ ಕಾಲದ ಮನುಷ್ಯ ಜೀವನದ ಪ್ರಮುಖ ಲಕ್ಷಣವಾಗಿದೆ. ಆ ಹುಡುಕಾಟವೇ ಬದುಕಿನ ಗುರಿಯೂ ಆಗಿರುತ್ತದೆ. ಹಾಗೆ ಹುಡುಕುವುದು ಸಿಗಬಹುದು ಇಲ್ಲವೇ ಸಿಗದಿರಬಹುದು. ಹುಡುಕುತ್ತಿದ್ದುದು ದೊರೆತಾಗ, ಕೆಲವರಿಗೆ ಸಂತೋಷವಾಗಬಹುದು; ಮತ್ತೆ ಕೆಲವರಿಗೆ, ಈವರೆಗೂ ನಾವು ಹುಡುಕುತ್ತಿದ್ದುದು ಅರ್ಥಹೀನವಾಗಿ ಕಾಣಿಸಿ, ಹುಡುಕಾಟವೇ ನಿರರ್ಥಕವೆನ್ನಿಸಿ ನಿರಾಶೆಯಾಗಬಹುದು. ಹಲವರಿಗೆ ತಾವು ಏನನ್ನು ಹುಡುಕುತ್ತಿದ್ದೇವೆ ಎನ್ನುವುದು ತಿಳಿಯದೆಯೇ ಹುಡುಕಾಟದಲ್ಲಿ ನಿರತವಾಗಿರಬಹುದು. ಹುಡುಕಾಟವಿಲ್ಲದೆ ಬದುಕೂ ಇಲ್ಲ, ಬದುಕಿನ ಕಥೆಗಳೂ ಇಲ್ಲ. ಅನಿಲ್ ಗುನ್ನಾಪೂರ ಅವರ 'ಸರ್ವೆ ನಂಬರ್- 97' ಸಂಕಲನದ ಕಥೆಗಳು ನಮ್ಮ ಮುಂದಿಡುವುದು ಭಿನ್ನ ರೂಪದ ಹುಡುಕಾಟಗಳನ್ನೇ, ಬದುಕಿನ ಕುರಿತ ಜಿಜ್ಞಾಸೆಗಳನ್ನೇ. ಬೆಳಕಿನ ಕಿಟಕಿಗಳೇ ಮುಚ್ಚಿಹೋದ ಬದುಕುಗಳು ನಡೆಸುವ ಹೋರಾಟದಂತೆ ಕಾಣಿಸುವ ಅನಿಲ್‌ರ ಕಥೆಗಳಲ್ಲಿನ ಹುಡುಕಾಟಗಳು, ಜೀವನಕ್ಕೆ ಅಗತ್ಯವಾದ ನಂಬಿಕೆ, ಅಂತಃಕರಣಗಳ ಶೋಧದಂತೆಯೂ ಕಾಣಿಸುತ್ತವೆ. ಸಂಕಷ್ಟಗಳ ಮರಳುಗಾಡಿನಲ್ಲಿ ಓಯಸಿಸ್‌ಗಳ ಹುಡುಕಾಟ ನಡೆಸುವ ಬದುಕುಗಳನ್ನು ಚಿತ್ರಿಸುತ್ತ, ನೀರಿನ ಒರತೆಗಳು ಸಿಗದೆಹೋದರೂ ಬೊಗಸೆಯಷ್ಟಾದರೂ ಜೀವಜಲವನ್ನು ಕಾಣಿಸುವುದರಿಂದಾಗಿ ಅನಿಲ್‌ರ ಕಥೆಗಳು 'ಮಾನವೀಯತೆಯ ಹುಡುಕಾಟ'ದ ಪ್ರಯತ್ನಗಳಾಗಿ ಮುಖ್ಯವೆನ್ನಿಸುತ್ತವೆ. ಬರಹಗಾರನನ್ನೂ ಮೀರಿ ಬರವಣಿಗೆ ರೂಪುಗೊಳ್ಳುವ ಮಾಂತ್ರಿಕ ಕ್ಷಣಗಳ ಬಗ್ಗೆ ಕುತೂಹಲ ಹಾಗೂ ಸಾಹಿತ್ಯದ ಬಗ್ಗೆ ಬದ್ಧತೆಯುಳ್ಳ ಬರಹಗಾರನೊಬ್ಬ ಕಥೆಗಳನ್ನು ಕಟ್ಟುವ ನಿಟ್ಟಿನಲ್ಲಿ ನಡೆಸಿದ ಪ್ರಯೋಗದ ರೂಪದಲ್ಲೂ ನೋಡಬಹುದಾದ ಕಥೆಗಳಿವು.
'ಕಲ್ಲು ಹೂವಿನ ನೆರಳು' (೨೦೨೧) ಕಥಾಸಂಕಲನ ಪ್ರಕಟಗೊಂಡ ಮೂರು ವರ್ಷಗಳ ನಂತರ ಅನಿಲ್ ಅವರ ಎರಡನೇ ಸಂಕಲನ ಪ್ರಕಟಗೊಳ್ಳುತ್ತಿದೆ. ಮೊದಲ ಸಂಕಲನದಲ್ಲಿ ಹುಟ್ಟಿಸಿದ್ದ ಭರವಸೆಯನ್ನು ಈ ಸಂಕಲನದ ಕಥೆಗಳು ಸುಳ್ಳು ಮಾಡುವುದಿಲ್ಲ ಎನ್ನುವುದು ಕಥೆಗಾರರಾಗಿ ಅನಿಲ್‌ರ ಬೆಳವಣಿಗೆಯನ್ನು ಸೂಚಿಸುವಂತಿದೆ. ಸಮಾಜದ ಕೆಡುಕುಗಳನ್ನು,
ಅನಾರೋಗ್ಯ ಸ್ಥಿತಿಯನ್ನು ಹೇಳುವಲ್ಲಿ ಅನಿಲ್ ಹಿಂಜರಿಯುವುದಿಲ್ಲವಾದರೂ, ಬದುಕು ಹಾಗೂ ಸಮಾಜದಲ್ಲಿ ಉಳಿದಿರಬಹುದಾದ ಒಳಿತಿನ ಬಿತ್ತಗಳನ್ನು ಕಾಣಿಸುದರಲ್ಲಿ ಅವರಿಗೆ ವಿಶೇಷ ಆಸಕ್ತಿ, ಮನುಷ್ಯನಲ್ಲಿ ಇನ್ನೂ ಉಳಿದಿರಬಹುದಾದ ಒಳ್ಳೆಯತನಲ್ಲಿ ಸರ್ವೆ ನಡೆಸುವ ಪ್ರಯತ್ನದಂತೆ ಈ ಸಂಕಲನದ ಕಥೆಗಳು ಕಾಣಿಸುತ್ತವೆ. ಇದಕ್ಕೆ ನಿದರ್ಶನದ ರೂಪದಲ್ಲಿ ಸಂಕಲನ ಶೀರ್ಷಿಕೆಯೂ ಆದ 'ಸರ್ವೆ ನಂಬರ್-9 ಹಾಗೂ 'ಆತ್ಮಸಾಕ್ಷಿ' ಕಥೆಗಳನ್ನು ಗಮನಿಸಬಹುದು.
ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಪೀರಪ್ಪ, ಬಡೇಸಾಬ್ ಎನ್ನುವ ವ್ಯಕ್ತಿಯ ಕೆಲಸವನ್ನು ವೈಯಕ್ತಿಕ ಮುತುವರ್ಜಿಯಿಂದ ಮಾಡಿಕೊಡುತ್ತಾನೆ. ಪ್ರತಿಫಲಾಪೇಕ್ಷೆಯಿಲ್ಲದೆ ಕೆಲಸ ಮಾಡಿಕೊಟ್ಟರೂ ಪೀರಪ್ಪನ ಜೇಬಿಗೆ ಬಡೇಸಾಬ್ ಎರಡು ಸಾವಿರ ರೂಪಾಯಿ ತುರುಕಿಹೋಗುತ್ತಾನೆ. ಅನಿರೀಕ್ಷಿತ ಘಟನೆಯಿಂದ ತಬ್ಬಿಬ್ಬಾಗುವ ಪೀರಪ್ಪನನ್ನು ಅಳುಕು ಹಾಗೂ ಪಾಪಪ್ರಜ್ಞೆ ಕಾಡತೊಡಗುತ್ತದೆ. ಗಂಡ-ಹೆಂಡತಿ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ. ಕಚೇರಿಯಲ್ಲೂ ಪೀರಪ್ಪ ಒಡಕು ಮಾತನಾಡುತ್ತಾನೆ. ಹೆಂಡತಿ-ಮಗ ಅವನಿಂದ ದೂರವಾಗುತ್ತಾರೆ. ಹಟಕ್ಕೆ ಬೀಳುವ ಪೀರಪ್ಪ ಹೆಂಡತಿಗೆ ವಿಚ್ಚೇದನ ಕೊಡಲು ಮುಂದಾಗುತ್ತಾನೆ. ಕೋರ್ಟ್ ಪರಿಸರದಲ್ಲಿ ತಳ್ಳುಗಾಡಿ ಹೋಟೆಲ್ ನಡೆಸುವ ಬಡೇಸಾಬ್‌ನ ಕುಟುಂಬವನ್ನು ಕಂಡು, ಅವರ ಆತಿಥ್ಯವನ್ನು ಸವಿದು, ಪೀರಪ್ಪನ ಮನಸ್ಸು ತಿಳಿಯಾಗುತ್ತದೆ. ವಿಚ್ಛೇದನದ ಪತ್ರ ಹರಿದೆಸೆಯುತ್ತಾನೆ. ಬಡೇಸಾಬ್ ಮಗನಿಗೆ ಹಣ ಕೊಡುವುದರೊಂದಿಗೆ ಮಾನಸಿಕ ತೊಳಲಾಟದಿಂದ ಮುಕ್ತನಾಗುತ್ತಾನೆ. ಮಧ್ಯಮ ವರ್ಗದ ಜಾಗೃತ ಆತ್ಮಸಾಕ್ಷಿಯಂತೆ ಕಾಣಿಸುವ 'ಆತ್ಮಸಾಕ್ಷಿಗೆ ಹೋಲಿಸಿದರೆ 'ಸರ್ವೆ ನಂಬರ್- 97 ಹೆಚ್ಚು ಸಂಕೀರ್ಣವಾದ ರಚನೆ. ಪೀರಪ್ಪನ ಸ್ತ್ರೀರೂಪದಂತೆ ಕಾಣಿಸುವ ಪ್ರಭಾ ಎನ್ನುವ ಅಧಿಕಾರಿ ಈ ಕಥೆಯಲ್ಲಿದ್ದಾಳೆ. ಸರ್ವೆ ಕಚೇರಿಯಲ್ಲಿ ನಡೆಯುವ ಈ ಕಥೆಯಲ್ಲಿ, ಲ್ಯಾಂಬ್ಲಿನ್ ಎನ್ನುವ ವ್ಯಕ್ತಿ, 'ನಮ್ಮ ಹೊಲ ಅಳ್ಳು ಕೊಡ್ಲಾಕ ಯಾವಾಗ ಬರ್ತೀರಿ ಮೇಡಂ?' ಎಂದು ಪದೇ ಪದೇ ಮುಖಾಮುಖಿಯಾಗುತ್ತಾನೆ. ಪ್ರಭಾ ಹುಮ್ಮಸ್ಸಿನಿಂದ ಲ್ಯಾಂಬ್ಲಿನ್ ಜಮೀನಿನ ಇತಿಹಾಸ ಕೆದಕುತ್ತಾ ಹೋದಾಗ, ಬ್ರಿಟಿಷರ ಅವಧಿಯಲ್ಲಿ ನಡೆದ 'ಗ್ರೇಟ್ ಟ್ರಿಗ್ನಾಮಿಟ್ರಿಕಲ್ ಸರ್ವೆ'ಯ ರೋಚಕ ವಿವರಗಳು ತೆರೆದುಕೊಳ್ಳುತ್ತವೆ. ಆ ಸರ್ವೆಯಲ್ಲಿ ಭಾಗವಹಿಸಿ, ಬ್ರಿಟಿಷ್ ಅಧಿಕಾರಿಯಿಂದ ಚಿನ್ನದ ನಾಣ್ಯಗಳ ಇನಾಮು ಪಡೆದಿದ್ದ ವ್ಯಕ್ತಿಯೊಬ್ಬ, ತಾನು ಕಾರ್ಯ ನಿರ್ವಹಿಸಿದ್ದ ವಿಲಿಯಂ ಲ್ಯಾ೦ಬ್ಬನ್ ಅಧಿಕಾರಿಯ ಹೆಸರನ್ನು ಮಗನಿಗೆ ಇರಿಸಿದ್ದಾನೆ. ಆ ಲ್ಯಾಂಬ್ಬನ್ ಈಗ ತನ್ನ ಜಮೀನಿನ ನಕ್ಷೆಯನ್ನು ಸ್ಪಷ್ಟಪಡಿಸಿಕೊಳ್ಳಲು ಹೆಣಗುತ್ತಿರುವ ವ್ಯಕ್ತಿ. ನಿಧಿಯ ಆಸೆಗೆ ಕೆಲಸದ ಆಳುಗಳಿಂದಲೇ ಲ್ಯಾಂಬ್ಬನ್ ಕೊಲೆಯಾಗುವುದು ಹಾಗೂ ಆ ಕೆಲಸದಾಳುಗಳಿಗೇ 'ಸರ್ವೆ ನಂಬರ್- 97ನ್ನು ಆತ ಉಯಿಲು ಬರೆದಿಟ್ಟಿದ್ದ ಎನ್ನುವ ವಿವರದೊಂದಿಗೆ ಕಥೆ ಕೊನೆಗೊಳ್ಳುತ್ತದೆ. 'ಆತ್ಮಸಾಕ್ಷಿ'ಯ ಪೀರಪ್ಪನ ಮಾನಸಿಕ ಶೋಭೆಯೇನೋ ನಿವಾರಣೆಗೊಂಡಿತು. ಆದರೆ ಪ್ರಭಾಳ ಸ್ಥಿತಿ? ಲ್ಯಾಂಬ್ಬನ್‌ನ ಸಾವು ಅವಳ ಮೇಲೆ ಯಾವ ಪರಿಣಾಮ ಉಂಟುಮಾಡಬಹುದು?
ಮನುಷ್ಯನ ಒಳಿತು-ಕೆಡುಕು ಪ್ರವೃತ್ತಿಗಳ ಬಗ್ಗೆ ಗಮನಸೆಳೆಯುವ 'ಆತ್ಮಸಾಕ್ಷಿ' ಹಾಗೂ 'ಸರ್ವೆ ನಂಬರ್-97' ಕಥೆಗಳು, ಬದುಕು ಹಾಗೂ ಸಮಾಜಕ್ಕೆ ಯಾವುದು ಮುಖ್ಯ ಎನ್ನುವುದನ್ನು ಧ್ವನಿಸುವಂತಿವೆ. ಆದರೆ, ಇವೆರಡು ಕಥೆಗಳಿಗಿಂತಲೂ, ಕಟ್ಟುವಿಕೆ ಹಾಗೂ ಪರಿಣಾಮದ ದೃಷ್ಟಿಯಿಂದ 'ಲಿಂಗಾಯತ ಖಾನಾವಳಿ' ಹಾಗೂ 'ಕಸ್ತೂರಿ ಕ್ಯಾಂಟೀನ್' ಹೆಚ್ಚು ಯಶಸ್ಸು ಕಂಡಿರುವ ರಚನೆಗಳು. ವ್ಯಕ್ತಿ ಹಾಗೂ ಸಮಷ್ಟಿಯ ಅಂತಃಕರಣದ ಪಸೆಯನ್ನು ಹಂಬಲಿಸಿ ಕಥೆಗಾರರು ನಡೆಸುವ ಹುಡುಕಾಟಕ್ಕೆ ನಿದರ್ಶನದ ರೂಪದಲ್ಲಿ ಒಟ್ಟಿಗೆ ಗಮನಿಸಬಹುದಾದ ಕಥೆಗಳಿವು. ಕಾಕತಾಳೀಯ ಎನ್ನುವಂತೆ ಎರಡೂ ಕಥೆಗಳಲ್ಲಿ ಹೋಟೆಲ್‌ಗಳಿವೆ. 'ಲಿಂಗಾಯತ ಖಾನಾವಳಿ'ಯ ನಾಯಕ ಮಾದೇವ ಹಾಗೂ 'ಕಸ್ತೂರಿ ಕ್ಯಾಂಟೀನ್'ನ ಕಸ್ತೂರಿ ಇಬ್ಬರೂ ಬದುಕಿನ ಓಟದಲ್ಲಿ ಒಂಟಿಯಾಗಿ ದಿಕ್ಕೆಟ್ಟವರು. ಜಾತಿ ಕಾರಣದಿಂದಾಗಿ ಮಾದೇವ ಸಂಕಟ ಅನುಭವಿಸಿದರೆ, ಹೆಣ್ಣಾದ ಕಾರಣದಿಂದಲೇ ಕಸ್ತೂರಿ ನೋವುಣ್ಣುತ್ತಿದ್ದಾಳೆ.
ಕೊರೊನಾ ಸೋಂಕಿನಿಂದ ಅಜ್ಜಿಯನ್ನು ಕಳೆದುಕೊಂಡು ಅನಾಥನಾಗಿ ಊರು ಬಿಡುವ ಮಾದೇವನಿಗೆ ಬಾಗಲಕೋಟೆಯಲ್ಲಿ ಅನ್ನ-ನೆಲೆ ದೊರೆತಿದೆ. ಒಳ್ಳೆಯತನದಿಂದಾಗಿ ಖಾನಾವಳಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಅವನು, ಧರೆಪ್ಪನ ಮಾನಸಪುತ್ರನಂತೆ ಪ್ರಾಮಾಣಿಕವಾಗಿ ದುಡಿಯುತ್ತಾನೆ. ಹೋಟೆಲ್‌ಗೆ ಬರುವ ಅಧಿಕಾರಿಯೊಬ್ಬನಿಗೆ ಮಾದೇವನ ಪರಿಚಯ ಸಿಕ್ಕುವುದರೊಂದಿಗೆ ಕಥೆ ಬೇರೊಂದು ಮಜಲಿಗೆ ಹೊರಳುತ್ತದೆ. ಬಾಲ್ಯದಲ್ಲಿ ಟೀವಿ ನೋಡಲು ಸಾಹುಕಾರರ ಮನೆಗೆ ಹೋಗುತ್ತಿದ್ದ ಮಾದೇವ, ಒಂದು ದಿನ ಚಪ್ಪಲಿ ಹಾಕಿಕೊಂಡಿರುವುದು ಸಾಹುಕಾರನ ಕಣ್ಣಿಗೆ ಕಳ್ಳತನವಾಗಿ ಕಾಣಿಸಿ, ಪೆಟ್ಟು ತಿಂದಿದ್ದಾನೆ. ಈಗ ಹೋಟೆಲ್‌ನಲ್ಲಿ ಬಾಲ್ಯದ ಮಾಯದ ಗಾಯ ಮತ್ತೆ ಹಸಿಯಾಗಿದೆ ಹಾಗೂ ಜಾತಿಯ ವಿಷವನ್ನು ಮಾದೇವ ಮತ್ತೆ ಎದುರಿಸಬೇಕಾಗಿದೆ. ಆದರೆ, ಕಥೆಯ ಕೊನೆಯಲ್ಲಿ ಧರೆಪ್ಪ ತೆಗೆದುಕೊಳ್ಳುವ 'ನಮ್ಮ ನೆಮ್ಮದಿ ಕೆಡಸ್ಲಾಕ ಯಾಕ ಬರ್ತೀರಿ… ನಿಮ್ಮಂಥವರು ನಮ್ಮ ಖಾನಾವಳಿಗೆ ಬರೋದೆ ಬ್ಯಾಡ... ಹೋಗು ಮೊದ್ದ' ಎನ್ನುವ ನಿರ್ಧಾರ ಮಾದೇವನ ಬದುಕಿಗೆ ಸಂದ ಪ್ರಮಾಣಪತ್ರದಂತೆ ಕಾಣಿಸುತ್ತದೆ. ವ್ಯಾಪಾರಕ್ಕಿಂತಲೂ ಅಂತಃಕರಣವೇ ಮುಖ್ಯ ಎಂದು ಧರೆಪ್ಪ ಭಾವಿಸುವುದು ಹಾಗೂ ಅವನ ಬಾಯಲ್ಲಿ ಮಾದ್ಯಾ ಮಾದೇವ ಆಗುವುದು, ಮನುಷ್ಯ ಮನುಷ್ಯನ ನಡುವಿನ ನಂಬಿಕೆ ಉಳಿಸುವ ನಡೆಗಳಾಗಿ ಮುಖ್ಯವೆನ್ನಿಸುತ್ತವೆ. ಆದರೆ, ಧರೆಪ್ಪನ ಒಳ್ಳೆಯತನ ಮಾದೇವನ ನಾಳೆಗಳಿಗೆ ಆಸರೆಯಾಗುತ್ತದೆಂದು ಹೇಳಲಾಗದು. ಅಂಥ ಹುಸಿ ಭರವಸೆಯನ್ನು ಕಥೆಯೂ ಕಟ್ಟಿಕೊಡುವುದಿಲ್ಲ. ಹೊರಗಿನ ವ್ಯಕ್ತಿಯ ಸಂದರ್ಭದಲ್ಲಿ ಮಾದೇವನ ಪರವಾಗಿ ಧರೆಪ್ಪ ನಿಂತರೂ, ಮಗನ ಸಂದರ್ಭದಲ್ಲಿ ಮೌನವಾಗುಳಿಯುತ್ತಾನೆ ಮಾದೇವನ ಬದುಕು ಪ್ರಶ್ನಾರ್ಥಕ ಚಿಹ್ನೆಯಾಗಿಯೇ ಉಳಿಯುತ್ತದೆ.
ಬದುಕಿನ ವಿಶೇಷ ಇಲ್ಲವೇ ವಿಲಕ್ಷಣ ಕ್ಷಣಗಳ ವಿನ್ಯಾಸವನ್ನು ನಿರೂಪಿಸಿ. ಓದುಗರನ್ನು ಬೆರಗುಗೊಳಿಸುವ ಬೆಚ್ಚಿಬೀಳಿಸುವ ಜನಪ್ರಿಯ ಕಥನಕ್ರಮದಿಂದ, ಬದುಕಿನ ಹಲವು ಮಗ್ಗುಲುಗಳನ್ನೂ ವಿರೋಧಾಭಾಸಗಳನ್ನೂ ಕಾಣಿಸುವ ಸಾಧ್ಯತೆಯತ್ತ ಅನಿಲ್ ಗುನ್ನಾಪೂರ ಸಾಗುತ್ತಿರುವುದಕ್ಕೆ ಈ ಸಂಕಲನದ ಕಥೆಗಳು ಉದಾಹರಣೆಯಂತಿವೆ. ಶ್ರಮ ಹಾಗೂ ಕಸುಬುದಾರಿಕೆಯನ್ನು ಅಪೇಕ್ಷಿಸುವ 'ಕಾಣಿಸುವ ಕಥನ' ಮಾರ್ಗದಲ್ಲಿ ಅನಿಲ್ ನಡೆಯುತ್ತಿದ್ದಾರೆ. ತಾವೇ ಆಯ್ದುಕೊಂಡಿರುವ ಸವಾಲಿನ ಮಾರ್ಗದಲ್ಲಿ ಅವರು ಬಹುದೂರ ನಡೆಯಲಿ, ಆ ನಡಿಗೆಯ ನೋಟಗಳು ಸಹೃದಯರಿಗೆ ದೊರೆಯಲಿ ಎಂದು ಆಶಿಸುವೆ. 'ಕಲ್ಲು ಹೂವಿನ ನೆರಳು' ಸಂಕಲನದ ಮೂಲಕ ಓದುಗರ ಮೆಚ್ಚುಗೆ ಪಡೆದಿರುವ ಯುವಮಿತ್ರ ಅನಿಲ್‌ಗೆ, 'ಸರ್ವೆ ನಂಬರ್- 97' ಎಲ್ಲ ರೀತಿಯ ಯಶಸ್ಸನ್ನು ತರಲಿ ಎಂದು ಪ್ರೀತಿಯಿಂದ ಹಾರೈಸುವೆ.”