ಸರ್ವೇ ಜನೋ ಸುಖಿನೋ ಭವಂತು...
ನಮ್ಮ ನೆರೆಯ ದೇಶ ಮತ್ತು ಒಂದು ಕಾಲದ ನಮ್ಮದೇ ದೇಶದ ಭಾಗವಾಗಿದ್ದ ಪಾಕಿಸ್ತಾನ ಇತ್ತೀಚಿನ ಸುದ್ದಿಗಳ ಪ್ರಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಮತ್ತು ದಿವಾಳಿತನದ ಅಂಚಿನಲ್ಲಿದೆ. ದೇಶವೇ ಇರಲಿ, ವೈಯಕ್ತಿಕ ಬದುಕೇ ಇರಲಿ, ನಮ್ಮ ಕ್ರಿಯೆ ಪ್ರತಿಕ್ರಿಯೆಗಳು ನಮ್ಮ ಜೀವನಮಟ್ಟವನ್ನು ನಿರ್ಧರಿಸುತ್ತದೆ. ಅಪರೂಪದ ಕೆಲವು ಆಕಸ್ಮಿಕ ಸಂದರ್ಭಗಳಲ್ಲಿ ಮಾತ್ರ ಇದಕ್ಕೆ ಅಪವಾದ ಇರಬಹುದು.
ಧರ್ಮದ ಆಧಾರದ ಮೇಲೆ ದೇಶದ ನಿರ್ಮಾಣ, ಭಯೋತ್ಪಾದನೆಗೆ ಸಹಕಾರ, ಕೋವಿಡ್ ವೈರಸ್ ದಾಳಿ, ಅಮೆರಿಕ ದೇಶದ ವಿರೋಧದ ಕಾರಣದಿಂದ ಅವರ ನೆರವಿನ ಖೋತಾ, ದೇಶದ ರಾಜಕಾರಣಿಗಳ ಭ್ರಷ್ಟಾಚಾರ ಮುಂತಾದ ಅನೇಕ ಕಾರಣಗಳಿಗಾಗಿ ಅದು ಈ ಪರಿಸ್ಥಿತಿ ತಲುಪಿರಬಹುದು. ಇದು ಸಹ ಶಾಶ್ವತವೇನು ಅಲ್ಲ. ದೇಶ ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆದರೆ ಮತ್ತೆ ಕೆಲವೇ ವರ್ಷಗಳಲ್ಲಿ ಸುಸ್ಥಿತಿಗೆ ಮರಳಬಹುದು. ಹಾಗಾಗಲಿ ಎಂದು ಶುಭ ಹಾರೈಸುತ್ತಾ...
ಮುಖ್ಯವಾಗಿ ಭಾರತದ ಕೆಲವು ಎಲೆಕ್ಟ್ರಾನಿಕ್ ಸುದ್ದಿ ಮಾಧ್ಯಮಗಳು ಪಾಕಿಸ್ತಾನದ ಆ ದುಸ್ಥಿತಿಯನ್ನು ಸಂಭ್ರಮಸುವ ರೀತಿಯ ಸುದ್ದಿ ಪ್ರಸಾರ ಮಾಡುವುದು ಪತ್ರಿಕಾ ಧರ್ಮಕ್ಕೆ ವಿರುದ್ಧವಾಗಿದೆ. ಒಬ್ಬ ವ್ಯಕ್ತಿ ಅಥವಾ ಒಂದು ದೇಶ ಅವರು ನಮ್ಮ ವಿರೋಧಿಗಳೇ ಆಗಿರಲಿ ಅವರಿಗೆ ಕಷ್ಟ ಬಂದಾಗ ಸಹಾಯ ಮಾಡುವುದು - ಬಿಡುವುದು ಅವರವರ ಇಚ್ಚೆ. ಆದರೆ ಕಷ್ಟದಲ್ಲಿರುವವರನ್ನು ಅವರ ಪರಿಸ್ಥಿತಿ ಕಂಡು ಹಿಯಾಳಿಸುವುದು ತಪ್ಪಾಗುತ್ತದೆ. ಮಾನವೀಯ ಧರ್ಮದ ವಿರೋಧವಾಗುತ್ತದೆ. ಅದಕ್ಕೆ ಬದಲಾಗಿ ಭಾರತ ಪಾಕಿಸ್ತಾನಕ್ಕೆ ಮುಖ್ಯವಾಗಿ ಅದರ ಪುನಃಶ್ಚೇತನಕ್ಕೆ ಸ್ವಲ್ಪ ಸಹಾಯ ಮಾಡಿದರೆ ಖಂಡಿತ ಬಹಳಷ್ಟು ಪಾಕಿಸ್ತಾನಿಯರಲ್ಲಿ ಭಾರತದ ಬಗ್ಗೆ ಇರುವ ದ್ವೇಷ ಕಡಿಮೆಯಾಗಿ ಒಂದಷ್ಟು ಪ್ರೀತಿ ಅಭಿಮಾನ ಬೆಳೆಯಬಹುದು.
ಇಡೀ ಪಾಕಿಸ್ತಾನದ ಜನರೆಲ್ಲಾ ಭಯೋತ್ಪಾದಕರಲ್ಲ. ಎಲ್ಲೋ ಕೆಲವು ಧರ್ಮಾಂಧರು ಮಾತ್ರ ದಾರಿ ತಪ್ಪಿದ್ದಾರೆ ಮತ್ತು ಭಾರತಕ್ಕೆ ಅಪಾಯಕಾರಿಯಾಗಿದ್ದಾರೆ. ಪಾಕಿಸ್ತಾನ ಸಹ ಭಯೋತ್ಪಾದನೆಯಿಂದ ಸಾಕಷ್ಟು ನಲುಗಿದೆ. ಪಾಕಿಸ್ತಾನದಲ್ಲಿಯೂ ಕುಟುಂಬ, ಪ್ರೀತಿ, ಸಂಬಂಧಗಳು, ಸಂಸ್ಕಾರಗಳು, ಭಾವನೆಗಳು ಎಲ್ಲವೂ ನಮ್ಮಂತೆಯೇ ಇರುತ್ತದೆ. ಎಲ್ಲಾ ನಾಗರಿಕತೆಗಳಲ್ಲು ಮನುಷ್ಯ ಭಾವನೆಗಳು ಬಹುತೇಕ ಒಂದೇ ರೀತಿಯಲ್ಲಿ ಇರುತ್ತದೆ. ಸ್ವಲ್ಪ ರೂಪ ಮತ್ತು ಭಾವ ತೀವ್ರತೆಯಲ್ಲಿ ವ್ಯತ್ಯಾಸ ಇರಬಹುದು.
ಕಷ್ಟದ ಸಮಯದ ಸಹಾಯ ಎಂತಹ ಕಲ್ಲು ಹೃದಯವನ್ನು ಕರಗಿಸಬಲ್ಲದು. ಆದರೆ ಮಾಧ್ಯಮಗಳು ಸಾಮಾನ್ಯ ಹೃದಯವನ್ನು ಕಲ್ಲು ಹೃದಯವಾಗಿ ಮಾರ್ಪಡಿಸುವ ದ್ವೇಷ ಅಸೂಯೆ ರೀತಿಯ ವಿಷಯಗಳನ್ನು ಪ್ರಸ್ತಾಪ ಮಾಡಿ ಸಾಮಾನ್ಯ ಜನರ ಉರಿಯುವ ಮನಸ್ಸುಗಳ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿರುವುದು ಅವರು ಬಹುತೇಕ ನಾಗರಿಕ ಸಮಾಜದಿಂದ ದೂರ ಸರಿಯುತ್ತಿರುವ ಲಕ್ಷಣಗಳು ಕಾಣಿಸುತ್ತವೆ. ಯಾವುದೇ ಪರಿಸ್ಥಿತಿಯಲ್ಲಿ ಕ್ರಿಯೆ ಪ್ರತಿಕ್ರಿಯೆಗಳು ನಮ್ಮ ಯೋಗ್ಯತೆಯನ್ನು ಸಹ ಅನಾವರಣ ಮಾಡುತ್ತವೆ. ಅದರ ಅರಿವು ಸದಾ ಜಾಗೃತಾವಸ್ಥೆಯಲ್ಲಿ ಇರಲಿ. ನಮ್ಮ ನೆರೆಹೊರೆಯವರು ಸಂಪೂರ್ಣ ದಿವಾಳಿಯಾದರೆ ಅದರ ದುಷ್ಪರಿಣಾಮ ನಮಗೂ ತಟ್ಟುತ್ತದೆ ಬೇರೆ ರೀತಿಯಲ್ಲಿ. ಮಾಧ್ಯಮಗಳ ಪ್ರೇರಿತ ಅಭಿಪ್ರಾಯಗಳು ಅತ್ಯಂತ ಅಪಾಯಕಾರಿಯಾಗುತ್ತಿರುವ ಸನ್ನಿವೇಶದಲ್ಲಿ ಬುದ್ದನ ಸಂದೇಶಗಳು ನಮ್ಮ ಎದೆಯೊಳಗೆ ಬೆಳಗುತ್ತಿರಲಿ......
-ವಿವೇಕಾನಂದ ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ