ಸರ್ವ ಲೋಕಮಾನ್ಯ ಸರ್ವಜ್ಞ ಕವಿ
ಸರ್ವಜ್ಞನ ತ್ರಿಪದಿಗಳು ಲೋಕಮಾನ್ಯ. ಓರ್ವ ಆಧ್ಯಾತ್ಮಿಕ ವಿರಕ್ತ, ಪ್ರತಿಭಾವಂತ ಮಹಾಕವಿ, ಪಂಡಿತೋತ್ತಮರಿಗೆ ಅತಿಪ್ರಿಯ, ಪ್ರಾಪಂಚಿಕ ಸುಖ ಲವಲೇಶವೂ ಬೇಡದವ, ಜಾನಪದ ವಿದ್ವಾಂಸ. ತ್ರಿಪದಿಯಲ್ಲಿ ತನ್ನ ಮನದಾಳದ ಭಾವನೆಗಳನ್ನು ಹಾಡುತ್ತಾ ಊರಿಂದೂರಿಗೆ ಸಂಚರಿಸುತ್ತಿದ್ದ ಸಂತ ಮಹಾಯೋಗಿ, ಜೋಗಿ, ಹಾಡುಗಾರ. ಕೆಲವು ವಿದ್ವಾಂಸರು ಕೃಷ್ಣದೇವರಾಯನ ಕಾಲದಲ್ಲಿದ್ದವರೆಂದು ಅಭಿಪ್ರಾಯಪಟ್ಟಿದ್ದಾರೆ. ಇವರ ತ್ರಿಪದಿಯಲ್ಲಿ ವಿಡಂಬನೆ, ಹಾಸ್ಯ, ಕ್ರಾಂತಿಕಾರ ಮನೋಭಾವ, ಅದ್ಭುತ ಕೌಶಲ ಕಾಣಬಹುದು.
*ವಿದ್ಯೆ ಕಲಿಸದ ತಂದೆ ಬುದ್ಧಿ* *ಹೇಳದ ಗುರುವು*
*ಬಿದ್ದಿರಲು ಬಂದು ನೋಡದ* *ತಾಯಿಯು*
*ಶುದ್ಧ ವೈರಿಗಳು ಸರ್ವಜ್ಞ//*
ಹುಟ್ಟಿದ ಮಗುವಿಗೆ ವಿದ್ಯೆ ಕಲಿಸಿ ಅವನ ಕಾಲ ಮೇಲೆ ಅವನು ನಿಲ್ಲುವ ಹಾಗೆ ಮಾಡಬೇಕು. ಇಲ್ಲದಿದ್ದರೆ ಏನು ಪ್ರಯೋಜನ? ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳದ ಗುರುವಿದ್ದೂ ಪ್ರಯೋಜನವಿಲ್ಲ. ಅಸೌಖ್ಯದಿಂದ ಅಥವಾ ಬಿದ್ದಾಗ ಬಂದು ಎಬ್ಬಿಸದ, ನೋಡದ ತಾಯಿ, ತಾಯಿಯಾದರೂ ವೈರಿಯೇ ಸರಿ. ಹೀಗಿರುವವರು ಶತ್ರುಗಳಿಗೆ ಸಮಾನರು.
ಸಮಾಜದ ವ್ಯವಸ್ಥೆ, ಅವ್ಯವಸ್ಥೆಗಳ ಮೇಲೆ ಬೆಳಕು ಚೆಲ್ಲಿ ಎಚ್ಚರಿಸಿದ ಧೀಮಂತರು. ‘ನಾನು ನಾನು’ ಎನ್ನುವುದನು ಬಿಡು ಎಂದು ಕಿವಿಮಾತು ಹೇಳಿದರು. ಹಿಂದಿನ ಜನುಮದ ಕರ್ಮ ಈಗ ಇದೆ, ಈ ಜನುಮದ ಕರ್ಮ ಮುಂದೆ ಇದೆ ಎಂದವರು.
*ಕಣ್ಣು ನಾಲಗೆ ಮನವು ತನ್ನದೆಂದೆನಬೇಡ*
*ಅನ್ಯರು ಕೊಂದರೆನಬೇಡ ಇವು ಮೂರು*
*ತನ್ನ ಕೊಲ್ಲುವುವು ಸರ್ವಜ್ಞ*//
ಇಂದ್ರಿಯ ಚಪಲತೆ, ವ್ಯಾಮೋಹ ಎಂಬುದು ದೇಹವನ್ನು ಆವರಿಸಿದರೆ ಅನರ್ಥವೇ ಸರಿ. ಅದರ ದಾಸನಾಗಬೇಡ. ನಾಲಿಗೆ ಸರಿ ಇದ್ದರೆ ಲೋಕವನ್ನೇ ಗೆಲ್ಲಬಹುದು. ಎಲ್ಲಾ ಅನರ್ಥಗಳಿಗೂ ಹಿಡಿತವಿಲ್ಲದ ನಾಲಿಗೆ ಕಾರಣ. ಸಚ್ಚಾರಿತ್ರ್ಯದ ಶೀಲ ಮುಖ್ಯವೆಂದರು. ಮಾನವ ತನ್ನ ಬದುಕ ಹಾದಿಯಲ್ಲಿ ಶೀಲವನ್ನು ಕಾಪಾಡಿ, ಉತ್ತಮ ನೈತಿಕ ಮೌಲ್ಯಗಳ ಅಳವಡಿಸಬೇಕೆಂದರು.
‘ಕಾಯಕದ ಮಹತ್ವ’ವನ್ನು ವಚನದ ಮೂಲಕ ಸಾರಿದ ಮಹಾತ್ಮರು. ಕೆಲಸವಿಲ್ಲದೆ ಕುಳಿತವನನ್ನು ಎಲ್ಲರೂ ಹಂಗಿಸುವರು. ದೇಹ ಮನಸ್ಸು ಆರೋಗ್ಯವಾಗಿರಲು ಕಾಯಕವೇ ಮುಖ್ಯ. ಸರಳತೆ, ಲೋಭವಿಲ್ಲದ ಮನಸ್ಸು, ಸತ್ಯ, ಪ್ರಾಮಾಣಿಕತೆ, ಗುರುಹಿರಿಯರಲ್ಲಿ ಗೌರವ ಭಕ್ತಿ, ಕಿರಿಯರಲ್ಲಿ ಪ್ರೀತಿ, ನಂಬಿಕೆ, ವಿಶ್ವಾಸ ಸರಳತೆಗೆ ರಹದಾರಿಗಳು. ಮತಿಹೀನರ ಸಂಗವ ಮಾಡದಿರಿ, ಅನ್ನದಾನ ಮಾಡಿ ಪುಣ್ಯ ಸಂಪಾದಿಸಿರಿ. ಸುಳ್ಳು ಮಾತನಾಡುವ ನಾಲಿಗೆಯ ಎಳ್ಳಷ್ಟೂ ನಂಬದಿರೆಂದರು. ನಡೆಯುವ ಭೂಮಿ, ಕುಡಿಯುವ ನೀರು, ಸುಡುವ ಅಗ್ನಿ ಎಲ್ಲರಿಗೂ ಒಂದೇ, ಕುಲಗೋತ್ರಗಳೇಕೆ ಎಂಬ ಸಂದೇಶವ ಸಾರಿದ ಘನ ಮಹಿಮ ಸರ್ವಜ್ಞರು.
ಸರ್ವಜ್ಞರ ಬಾಲ್ಯದ ಬಗ್ಗೆ ನಿಖರವಾದ ಮಾಹಿತಿಯಿಲ್ಲವಾದರೂ, ತಂದೆ ಮಾಸೂರಿನ ಬಸವರಸ ಅಥವಾ ಮಲ್ಲರಸ, ತಾಯಿ ಮಾಳಿ ಎಂದು ತಿಳಿದು ಬರುತ್ತದೆ. ಹುಟ್ಟಿದೂರು ಧಾರವಾಡದಲ್ಲಿರುವ ಅಂಬಲೂರು. ಬಾಲ್ಯದ ಹೆಸರಿನ ಬಗ್ಗೆಯೂ ನಿಖರ ಮಾಹಿತಿಯಿಲ್ಲ.
ಶಿವನ ಆರಾಧಕನೆಂಬುದು ವಚನಗಳಲ್ಲಿ ವ್ಯಕ್ತವಾಗುತ್ತದೆ. ‘ಮೂರು ಕಣ್ಣೀಶನೇ ದೇವರೆಂದು’ ಹೇಳಿದ್ದು ಕಂಡು ಬರುತ್ತದೆ. ಈ ಸೃಷ್ಟಿಗೆ ಆದಿಯಾದ ಚೈತನ್ಯಸ್ವರೂಪಿಯಾದ ಮುಕ್ಕಣ್ಣನೇ ಸ್ವಾಮಿಯೆಂದಿದ್ದಾನೆ. ‘ಆ ದೇವ ಈ ದೇವ ಯಾತಕೆ? ಸೃಷ್ಟಿಯ ಚಿತ್ರವಿಚಿತ್ರಗಳಿಗೆ ಮೂಲನಾದವ, ಬ್ರಹ್ಮಾಂಡವನ್ನೇ ತನ್ನ ದೃಷ್ಟಿಯಿಂದ ನೋಡುವವ, ರಸರುಚಿಗಳಿಗೆ ಕಾರಣನಾದವ, ವಿಲಾಸ ವೈಭವಗಳ ಆಸೆ ಹುಟ್ಟಿಸಿದ ಶಿಲ್ಪಿಯಾತ. ಸರ್ವಸಮರ್ಥನೂ ಆತ.
ನಮ್ಮ ರಚನೆಗಳು ಮೊಸರನ್ನು ಮಥಿಸಿದಾಗ ಸಿಗುವ ಬೆಣ್ಣೆಯಂತಿರಬೇಕು, ಸಾರವಿರಬೇಕು, ಸಮಾಜಕ್ಕೊಂದು ಸಂದೇಶ ನೀಡುವಂತಿರಬೇಕು. ತೆಂಗಿನಕಾಯಿಯೊಳಗಿನ ಸಿಹಿನೀರು ಎಸಳಿನಂತಿರಬೇಕು. ಬಾಹ್ಯ ಆಡಂಬರ ತ್ಯಜಿಸಬೇಕು. ಮನಸ್ಸಿನೊಳಗಣ ಪ್ರಾರ್ಥನೆಯಿರಲಿ. ಭ್ರಾಂತಿಯನ್ನು ಬಿಟ್ಟು ಬದುಕಿರಿ ಎಂಬ ಸಂದೇಶ ಸಾರಿದರು. ತಾನೇ ದೊಡ್ಡ ಜ್ಞಾನಿಯೆಂಬ ಅಹಂ ಬೇಡ. ವೇದ, ಶಾಸ್ತ್ರ,ಪುರಾಣ ಓದಿ ಸನ್ಯಾಸತ್ವ ಪಡೆದವನು, ಕಾಮಕ್ರೋಧಗಳನ್ನು ಬಿಟ್ಟು, ಸಮಾಜಮುಖಿಯಾಗಿ, ಸಂಯಮದಿಂದಿರಬೇಕು. ಸಮಾಜವನ್ನು ತಿದ್ದುವ ಕಾರ್ಯ ಮಾಡಬೇಕು. ಆದರ್ಶನಾಗಿರಬೇಕು. ನೀಚರ ಸ್ನೇಹದಿಂದ ಮಾನಹಾನಿಯೇ ಸರಿ, ಸಾಧ್ಯವಾದರೆ ಸರಿಪಡಿಸಿ, ಇಲ್ಲವಾದರೆ ದೂರವೇ ಇರಲಿ. ಈಚಲ ಮರದಡಿ ಕುಳಿತು ಯಾರಾದರೂ ಮಜ್ಜಿಗೆ ಕುಡಿಯುತ್ತಾರೆಯೇ? ಎಂದು ಸಾರಿದರು.
‘ದಾನ ಮಾಡಿದರೆ ಮುಂದೆ ಶಿವನಲ್ಲಿ ಕಟ್ಟಿಹುದು ಬುತ್ತಿ’ ಕಿವಿಮಾತು ಹೇಳಿದರು. ಈ ರೀತಿಯಾಗಿ ನೀತಿವಾಕ್ಯಗಳನ್ನು ತನ್ನ ವಚನಗಳ ಮೂಲಕ ಸಾರಿದ ಮೇರು ಶಿಖರವಾದ ಸರ್ವಜ್ಞರನ್ನು ನೆನೆಯೋಣ. ಸುಮಾರು ಎರಡು ಸಾವಿರದವರೆಗಿದೆ ಎಂಬ ದಾಖಲೆ. ಹಾಡಲೂ ಕೇಳಲೂ ಉತ್ತಮ ಶೈಲಿಯ ಪ್ರಾಸದಿಂದ ಕೂಡಿದ ವಚನಗಳು ನಮ್ಮ ಸಾಹಿತ್ಯಕ್ಕೆ ಅಮೂಲ್ಯ ನವರತ್ನಗಳಂತೆ ಎನ್ನಬಹುದು. ಅತ್ಯಂತ ವಿಶೇಷ ಸ್ಥಾನಮಾನದ ಸಾಲಿನಲ್ಲಿ ನಿಲ್ಲುವವರು ಸರ್ವಜ್ಞರು.
-ರತ್ನಾ ಕೆ ಭಟ್ ತಲಂಜೇರಿ
(ಸರ್ವಜ್ಞ ಕವಿಗಳ ಜನ್ಮ ದಿನಕ್ಕೆ ಕಿರು ಲೇಖನ. ಮಾಹಿತಿ ಸಂಗ್ರಹ: ಸರ್ವಜ್ಞ ತ್ರಿಪದಿಗಳು)
ಚಿತ್ರ ಕೃಪೆ: ಇಂಟರ್ನೆಟ್ ತಾಣ