ಸಲಿಂಗ ವಿವಾಹಕ್ಕೆ ಸೂಕ್ತ ಪರಾಮರ್ಶೆ ಅಗತ್ಯ

ಪುರುಷ-ಸ್ತ್ರೀ ಮದುವೆಯಾಗುವ ಸಾಂಪ್ರದಾಯಿಕ ವಿವಾಹ ಪದ್ಧತಿಯನ್ನು ಅನುಸರಿಸುತ್ತಿರುವ ಭಾರತದಲ್ಲಿ ಸಲಿಂಗ ವಿವಾಹ ವಿಚಾರ ಪುನಃ ಚರ್ಚೆ ಹುಟ್ಟುಹಾಕಿದೆ. ಭಾರತೀಯ ವೈವಾಹಿಕ ಸಂಸ್ಕೃತಿಗೆ ತದ್ವಿರುಧ್ಧವಾದ ಸಲಿಂಗ ವಿವಾಹಕ್ಕೆ ಸುಪ್ರೀಂ ಕೋರ್ಟ್ ಮನ್ನಣೆ ನೀಡಬಾರದು ಎಂದು ತಾನು ಸಲ್ಲಿಸಿದ ಅಫಿಡವಿಟ್ ನಲ್ಲಿ ಕೇಂದ್ರ ಸರಕಾರ ಬಲವಾಗಿ ಪ್ರತಿಪಾದಿಸಿದ ಬೆನ್ನಲ್ಲೇ ಘನ ನ್ಯಾಯಾಲಯವು ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವಂತೆ ಕೋರಿ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಳ್ಳುವ ಬದ್ಧತೆ ಪ್ರದರ್ಶಿಸಿದೆ. ಅಂತಿಮವಾಗಿ ಎಪ್ರಿಲ್ ೧೮ರಿಂದ ಸಾಂವಿಧಾನಿಕ ಪೀಠದಲ್ಲಿ ಸಲಿಂಗ ವಿವಾಹ ಭವಿಷ್ಯ ನಿರ್ಧರಿಸಲು ಕೋರ್ಟ್ ನಿರ್ಧರಿಸಿರುವುದು ನಿಜಕ್ಕೂ ಕೌತುಕ ನಡೆ.
ಐಪಿಸಿ ಸೆಕ್ಷನ್ ೩೭೭ರ ವಿಧಿಯಂತೆ ಸಲಿಂಗ ವಿವಾಹವನ್ನು ಕಾನೂನು ಬದ್ಧಗೊಳಿಸಿದರೂ, ಅರ್ಜಿದಾರರು ಕಾನೂನು ಅಡಿಯಲ್ಲಿ ಸಲಿಂಗ ವಿವಾಹದ ಮೂಲಭೂತ ಹಕ್ಕನ್ನು ಪಡೆಯಲು ಸಾಧ್ಯವಿಲ್ಲ ಎಂದು ಸರಕಾರ ಕಟುವಾಗಿ ಹೇಳಿರುವುದು ನ್ಯಾಯಾಂಗವನ್ನೂ ಮತ್ತು ನ್ಯಾಯದ ಬಾಗಿಲಲ್ಲಿ ನಿಂತವರನ್ನು ಕೊಂಚ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ವಿವಾಹವು ಸಾಮಾಜಿಕ ವ್ಯವಸ್ಥೆಯೇ ಆದರೂ ವಿವಿಧ ಶಾಸಕಾಂಗ ಕಾಯಿದೆ - ಕಟ್ಟಳೆಗಳ ಅಡಿಯಲ್ಲಿ ಹಲವು ಶಾಸನಬದ್ಧ ಪರಿಣಾಮಗಳನ್ನೂ ಹೊಂದಿದೆ ಎನ್ನುವುದು ಕೇಂದ್ರ ಸರಕಾರದ ವಾದ. ಅಂಥ ಮಾನವ ಸಂಬಂಧದ ಯಾವುದೇ ಔಪಚಾರಿಕ ಮನ್ನಣೆಯನ್ನು ಕೇವಲ ಇಬ್ಬರು ವಯಸ್ಕರ ನಡುವಿನ ಗೌಪ್ಯತೆಯ ವಿಷಯವೆಂದು ಪರಿಗಣಿಸುವುದು ಎಷ್ಟು ಸರಿ ಎನ್ನುವ ಸರಕಾರದ ಪ್ರಶ್ನೆಯ ಹಿಂದೆ ಸಾಮಾಜಿಕ ಕಳಕಳಿಯೂ ಅಡಗಿದೆ.
ದೇಸಿ ಸಂಸ್ಕೃತಿ, ಆಚರಣೆಗಳ ಬಗ್ಗೆ ಹೆಚ್ಚು ಒಲವು ಹೊಂದಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕೂಡ ಸಲಿಂಗ ವಿವಾಹದ ಮಾನ್ಯತೆಗೆ ಮೊದಲಿನಿಂದಲೂ ವಿರೋಧವನ್ನು ಸೂಚಿಸುತ್ತಲೇ ಬಂದಿದೆ. ಸಂಘ ಪರಿವಾರದ ಒಂದು ಭಾಗವೇ ಆಗಿರುವ ಬಿಜೆಪಿ ನೇತೃತ್ವದ ಆಡಳಿತದಿಂದ ಈ ವಿವಾಹ ಪದ್ಧತಿಗೆ ಸಮ್ಮತಿ ನಿರೀಕ್ಷಿಸುವುದೂ ತಮಾಷೆಯ ವಿಚಾರವೂ ಹೌದು. ವಿವಾಹದ ಬಳಿಕ ಜೋಡಿಗಳು ಪಡೆಯುವ ಮಕ್ಕಳಿಗೆ (ಕೃತಕ, ಜೈವಿಕ ಅಥವಾ ದತ್ತು ವಿಧಾನ) ಭವಿಷ್ಯದಲ್ಲಿ ಎದುರಾಗುವ ಕಾನೂನು ಸಮಸ್ಯೆಗಳ ಬಗ್ಗೆಯೂ ಸರಕಾರ ಎಚ್ಚರಿಸಿರುವುದು ಚರ್ಚೆಗೆ ಒಳಪಡುವ ಸಂಗತಿಯೂ ಹೌದು.
ಒಂದು ವೇಳೆ ಈ ವಿವಾಹ ಕಾನೂನುಬದ್ಧಗೊಂಡರೂ ಭವಿಷ್ಯದ ತೊಡಕುಗಳು ಹಲವಾರು. ಹಿಂದೂ ಉತ್ತರಾಧಿಕಾರ ಕಾಯಿದೆ - ೧೯೫೫, ಹಿಂದೂ ದತ್ತು ಮತ್ತು ನಿರ್ವಹಣೆ ಕಾಯಿದೆ - ೧೯೫೬, ಹಿಂದೂ ವಿವಾಹ ಕಾಯಿದೆ - ೧೯೫೫ ಸೇರಿದಂತೆ ಹಲವು ಪ್ರಮುಖ ಕಾಯಿದೆಗಳಲ್ಲೂ ನಿರ್ದಿಷ್ಟ ಬದಲಾವಣೆ ತರಬೇಕಾಗುತ್ತದೆ. ಇತರೆ ಧರ್ಮಗಳ ವೈವಾಹಿಕ ಕಾನೂನುಗಳಲ್ಲೂ ಇಂಥದ್ದೇ ಮಾರ್ಪಾಡು ಮಾಡಬೇಕಾಗುತ್ತದೆ. ಉದಾ: ಇಸ್ಲಾಂ ಧರ್ಮದಲ್ಲಿ ಸಲಿಂಗಕಾಮಕ್ಕೆ ಆಸ್ಪದವೇ ಇಲ್ಲ, ಇಂಥ ಪರಿಸ್ಥಿತಿಯಲ್ಲಿ ಈ ನಿರ್ಧಾರವು ಧಾರ್ಮಿಕ ಸಂಘರ್ಷಕ್ಕೂ ಕಾರಣವಾಗಬಹುದು. ಅಲ್ಲದೆ, ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದರೆ ಮೊದಲು ಆಸ್ತಿ, ದತ್ತು, ನಿರ್ವಹಣೆ ಮತ್ತು ಉಯಿಲಿಗೆ ಸಂಬಂಧಿಸಿದ ಕಾನೂನುಗಳಲ್ಲಿ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಇಷ್ಟು ದೊಡ್ಡ ಬದಲಾವಣೆಗೆ ವ್ಯವಸ್ಥೆ ಏಕಾಏಕಿ ಸಿದ್ಧವಾಗುವುದು ಕಷ್ಟದ ಕೆಲಸ. ನ್ಯಾಯಾಲಯ, ಸರಕಾರ ಈ ಬಗ್ಗೆ ಸೂಕ್ತ ಸಮಾಲೋಚಿಸಿ ಮುಂದಡಿ ಇಡಲಿ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೧೫-೦೩-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ