ಸಲಿಂಗ ವಿವಾಹ: ಸಮಾಜ, ಸರಕಾರ ಮತ್ತು ನ್ಯಾಯಾಲಯ

ಸಲಿಂಗ ವಿವಾಹ: ಸಮಾಜ, ಸರಕಾರ ಮತ್ತು ನ್ಯಾಯಾಲಯ

ಸಲಿಂಗ ವಿವಾಹ - ಪ್ರಾಕೃತಿಕ ಸಹಜತೆ - ಸುಪ್ರೀಂ ಕೋರ್ಟ್ - ಕೇಂದ್ರ ಸರ್ಕಾರ - ಸಮಾಜ - ವ್ಯಕ್ತಿ. ಹೆಣ್ಣು ಹೆಣ್ಣು ಮತ್ತು ಗಂಡು ಗಂಡು ನಡುವಿನ ವೈವಾಹಿಕ ಸಂಬಂಧ ಕಾನೂನು ಬದ್ದ ಗೊಳಿಸುವ ಮನವಿಯೊಂದು ಸುಪ್ರೀಂ ಕೋರ್ಟ್ ಮುಂದಿದೆ. ಈಗಾಗಲೇ ಪರ ವಿರೋಧದ ಕೆಲವು ತೀರ್ಪಗಳು ಕೆಳ ಹಂತದಲ್ಲಿ ಪ್ರಕಟವಾಗಿ ‌ಅಂತಿಮವಾಗಿ ಸರ್ವೋಚ್ಚ ನ್ಯಾಯಾಲಯದ ಮುಂದಿದೆ. ವಾದ ಸರಣಿಗಳು ಮುಂದುವರಿಯುತ್ತಿವೆ.

ಈ ವಿಷಯದಲ್ಲಿ ಸೃಷ್ಟಿಯ ನಿಯಮ ಏನಿದೆಯೋ ಅದು ಸೃಷ್ಟಿಯ ರಹಸ್ಯ. ಕಾನೂನು ಮತ್ತು ಸಂಸತ್ತು ಎರಡೂ ಸೇರಿ ಸಂವಿಧಾನಾತ್ಮಕವಾಗಿ ಒಂದು ನಿರ್ಣಯ ತೆಗೆದುಕೊಳ್ಳಬಹುದು. ಆದರೆ  ಸಾಮಾನ್ಯ ಜನರಾದ ನಾವು ಈಗ ನಿಂತ ನೆಲೆಯಲ್ಲಿ ಯಾವ ಅಭಿಪ್ರಾಯ ಹೊಂದಬಹುದು. ಇಡೀ ಭಾರತದ ಒಟ್ಟು ಜನಸಂಖ್ಯೆಯಲ್ಲಿ ತೀವ್ರ ಮತ್ತು ಅಪೇಕ್ಷಿತ ಬಹಿರಂಗ ಸಲಿಂಗಕಾಮದ ಒತ್ತಡ ಅಂದಾಜು ಶೇಕಡಾ ‌1% ನಿಂದ 5 % ವರೆಗೆ ಇರಬಹುದು. ನಿರ್ಧಿಷ್ಟ ಮಾಹಿತಿ ಬಹಿರಂಗವಾಗುವುದು ತುಂಬಾ ಕಷ್ಟ. ಸಂಖ್ಯೆ ಎಷ್ಟೇ ಕಡಿಮೆಯಾಗಿದ್ದರು ಅದನ್ನು ನಿರ್ಲಕ್ಷಿಸದೆ ಸಲಿಂಗ ವಿವಾಹಕ್ಕೆ ಒಂದು ಸಮಾನ ಪರಿಹಾರ ಸೂತ್ರ ಕಂಡುಹಿಡಿಯವುದು ಸಮಾಜ ಮತ್ತು ಸರ್ಕಾರದ ಜವಾಬ್ದಾರಿ.

ಗಂಡು ಹೆಣ್ಣಿನ ಸಮಾಗಮದಿಂದ ಮನುಷ್ಯ ಸಂತತಿ ಮುಂದುವರಿಯುತ್ತಿದೆ ಮತ್ತು ಅದಕ್ಕೆ ಕೌಟುಂಬಿಕ ಚೌಕಟ್ಟನ್ನು ರೂಪಿಸಲಾಗಿದೆ. ಅದು ಇಡೀ ವಿಶ್ವದ ನಾಗರಿಕ ಸಮಾಜದ ನಿಯಮ. ಇದರ ನಡುವೆ ವಿಚ್ಚೇದನ, ಮರು ಮದುವೆ, ಅನೈತಿಕ ಸಂಬಂಧ, ಸಲಿಂಗಕಾಮ ಮುಂತಾದವು ಸಹ ಒಂದಷ್ಟು ಪ್ರಮಾಣದಲ್ಲಿ ಸಮಾಜಕ್ಕೆ ಸವಾಲಾಗಿ‌ ಅಸ್ತಿತ್ವದಲ್ಲಿದೆ. ವಿಚ್ಚೇದನ ಮತ್ತು ಮರು ವಿವಾಹಕ್ಕೆ ಕಾನೂನಿನ ಮಾನ್ಯತೆ ಇದೆ. ಅನೈತಿಕತೆ ಗಂಡು ಹೆಣ್ಣಿನ ವೈಯಕ್ತಿಕ ನಡವಳಿಕೆ ಮತ್ತು ಅದರಿಂದ ಅನೇಕ ಅಪರಾಧ ಪ್ರಕರಣಗಳು‌ ನಡೆದು ಸಾಕಷ್ಟು ಹಾನಿಯಾಗುತ್ತಿದ್ದರು ಅದು ಅವರವರ ನೈತಿಕತೆ, ಮಾನಸಿಕತೆ ಮತ್ತು ಪರಿಸ್ಥಿತಿಗೆ ಸೇರಿದ್ದು. ಅದು‌ ಹಿಂಸಾತ್ಮಕವಾದಾಗ ಅಥವಾ ಇನ್ನೊಬ್ಬರ ಬಲವಂತದ ಪ್ರವೇಶವಾದಾಗ ಪೋಲೀಸ್ ಮತ್ತು ಕಾನೂನು ಅದನ್ನು ನಿಭಾಯಿಸುತ್ತದೆ. 

ಆದರೆ ಸಲಿಂಗ ವಿವಾಹ ಸ್ವಲ್ಪ ಸಂಕೀರ್ಣ ಸಮಸ್ಯೆಯಲ್ಲಿ‌ ಸಿಲುಕಿದೆ. ಗಂಡು ಗಂಡು - ಹೆಣ್ಣು ಹೆಣ್ಣು ಎಂಬ‌ ಸಂಬಂಧವನ್ನು ಕೌಟುಂಬಿಕ ಚೌಕಟ್ಟಿನಲ್ಲಿ ನೋಡಲು ಮತ್ತು ಅರ್ಥೈಸಲು ಬಹುತೇಕ ಸಂಪ್ರದಾಯವಾದಿ ಮನಸ್ಸುಗಳಿಗೆ ಸಾಧ್ಯವಾಗುತ್ತಿಲ್ಲ. ಮದುವೆಯಾಗದ ಯುವಕ ಯುವತಿಯರ ಪ್ರೀತಿ - ಪ್ರೇಮವನ್ನೇ ಸಹಿಸಲಾಗದ ಮನಸ್ಸುಗಳಿಗೆ ಇದು ದೊಡ್ಡ ಅಪರಾಧದಂತೆ ಭಾಸವಾಗುತ್ತದೆ. ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವುದರಿಂದ ಭವಿಷ್ಯದಲ್ಲಿ ಇಡೀ‌ ಸಾಮಾಜಿಕ ವ್ಯವಸ್ಥೆಯೇ ಕುಸಿದು ಬೀಳಬಹುದು ಎಂಬ ಆತಂಕ‌ ಮತ್ತು ಅನುಮಾನ ಅವರದು.

ಇಲ್ಲ ಇಲ್ಲ, ಗಂಡು ಹೆಣ್ಣು ಮಾತ್ರ ಕುಟುಂಬ ಎಂಬುದು ಧಾರ್ಮಿಕ, ಸಾಮಾಜಿಕ ಕಟ್ಟುಪಾಡುಗಳಲ್ಲಿ ಬೆಳೆದುಬಂದ ವ್ಯವಸ್ಥೆ. ಪ್ರಾಕೃತಿಕವಾಗಿ ಗಂಡು ಗಂಡು ಮತ್ತು  ಹೆಣ್ಣು ಹೆಣ್ಣು ಜೊತೆಯಾಗಿ ವಾಸಿಸಲು ಸಹ  ಯಾವುದೇ ನಿರ್ಬಂಧವಿಲ್ಲ.‌ ಅದರಿಂದ ಬೇರೆಯವರಿಗೆ ತೊಂದರೆಯೂ ಇಲ್ಲ. ವಿರುದ್ಧ ಲಿಂಗಿಗಳ ನಡುವೆ ಮಾತ್ರ ದೈಹಿಕ ಆಕರ್ಷಣೆ ಇರುವುದಿಲ್ಲ. ಅದು ಒಂದು ಅನುಕೂಲಕರ ಒಪ್ಪಂದ ಮಾತ್ರ. ಸ್ವ ಲಿಂಗಿಗಳ ನಡುವೆ ಸಹ ಆಕರ್ಷಣೆ ಒಂದು ಪ್ರಾಕೃತಿಕ ನಿಯಮ. ನಮ್ಮ ಸ್ವಾತಂತ್ರ್ಯ ಮತ್ತು ಹಕ್ಕನ್ನು ಸಹ ಗೌರವಿಸಬೇಕು. ಅದು ಸಮಾಜದ ಕರ್ತವ್ಯ ಎಂಬುದು ಸಲಿಂಗಿಗಳ ವಾದ ಸರಣಿ...

2023 ರ ಈ‌ ಆಧುನಿಕ ಕಾಲದಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಾಸ್ತವ ಏನು? ಈ‌ ವಿಷಯದಲ್ಲಿ ಕಡ್ಡಿ ತುಂಡು ಮಾಡಿದಂತೆ ನಿರ್ಧಿಷ್ಟವಾಗಿ ಒಂದು ನ್ಯಾಯ ತೀರ್ಮಾನ ಮಾಡುವುದು ತುಂಬಾ ಕಷ್ಟ. ಭವಿಷ್ಯದ ಸಾಧ್ಯತೆ, ಪರಿಣಾಮ, ಫಲಿತಾಂಶಗಳು ಮತ್ತು ಜನರ ಮಾನಸಿಕ ಸ್ಥಿತಿಯು ಸಂಕೀರ್ಣವಾಗಿರುವುದರಿಂದ ಸಿದ್ದ ಸೂತ್ರ ಇರುವುದಿಲ್ಲ. ಆದರೆ, ವ್ಯವಸ್ಥೆಯ ಸಮತೋಲನದ ದೃಷ್ಟಿಯಿಂದ ಏನಾದರೂ ಒಂದು ತೀರ್ಮಾನ ತೆಗೆದುಕೊಳ್ಳಲೇ ಬೇಕಾಗುತ್ತದೆ. ಆ ನಿಟ್ಟಿನಲ್ಲಿ....

ಈಗಿನ ಪರಿಸ್ಥಿತಿಯಲ್ಲಿ ಸಾಂಪ್ರದಾಯಿಕ ಮದುವೆಗಳ ಯಶಸ್ಸನ್ನು ಮದುವೆಯಾದ ಹತ್ತು ವರ್ಷಗಳ ಕಾಲಾವಧಿಯನ್ನು ಪರಿಗಣಿಸಿ ಹೇಳುವುದಾದರೆ ಸುಮಾರು ಶೇಕಡಾ 50% ಮಾತ್ರ ಯಶಸ್ವಿಯಾಗುತ್ತಿದೆ. ಉಳಿದು ಮದುವೆಗಳು ದೀರ್ಘಕಾಲ ಉಳಿಯುತ್ತಿಲ್ಲ. ಆಂತರಿಕವಾಗಿ ಇನ್ನೂ ಹೆಚ್ಚು ವೈಫಲ್ಯ ಇರಬಹುದು. ಹಾಗೆಯೇ ಒಪ್ಪಂದದ ಜೊತೆಗೆ ವಾಸ ( Living together ) ಸಂಖ್ಯೆ ಹೆಚ್ಚಾಗುತ್ತಿದೆ. ಅದು ಸಹ ತಾತ್ಕಾಲಿಕ. ಅನೈತಿಕ ಸಂಬಂಧಗಳು ಸಹ ಅಧೀಕೃತ ಮಾನ್ಯತೆ ಪಡೆಯುತ್ತಿವೆ ಎಂಬುದಕ್ಕೆ ದೇಶದಲ್ಲಿ ಪ್ರಸಾರವಾಗುತ್ತಿರುವ ಬಹುತೇಕ ಧಾರವಾಹಿಗಳ ಈ ರೀತಿಯ ಕಥೆಗಳ ಯಶಸ್ಸೇ ಒಂದು ಸಾಕ್ಷಿ.

ಇಂತಹ ಸಂದರ್ಭಗಳಲ್ಲಿ ಹೆಣ್ಣು ಹೆಣ್ಣು - ಗಂಡು ಗಂಡು ನಡುವಿನ ಸಲಿಂಗ ಸಂಬಂಧಗಳು ದೀರ್ಘಕಾಲ ಉಳಿಯುವುದು ಅನುಮಾನ. ಜೊತೆಗೆ ಮಕ್ಕಳು, ಆಸ್ತಿ ಹಂಚಿಕೆ, ಇತರ ಸಂಬಂಧಗಳ ಜೊತೆ ಒಡನಾಟ, ಸಮಾಜದ ವಕ್ರದೃಷ್ಟಿ ಹೀಗೆ ನಾನಾ ತಾಂತ್ರಿಕ ಸಮಸ್ಯೆಗಳು ಸಹ ಇವೆ. ಇದೆಲ್ಲವನ್ನೂ ಮೀರಿ ಸಹಜ ಸಂಸಾರ ನಡೆಸುವುದು ತುಂಬಾ ಕಷ್ಟ. ಈ ಎಲ್ಲ ಕೋನಗಳಿಂದ ಈ ವಿಷಯವನ್ನು ಪರಿಶೀಲಿಸಿದ ನಂತರ ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಮತ್ತು ವೈದ್ಯಕೀಯ ದೃಷ್ಟಿಕೋನವನ್ನು ಸಹ ಮನಸ್ಸಿನಲ್ಲಿಟ್ಟುಕೊಂಡು ನೋಡಿದಾಗ ಭಾರತ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವುದರಿಂದ ನಮ್ಮ ಸಮಾಜದ, ದೇಶದ ಮತ್ತು ಸಂವಿಧಾನದ ವರ್ಚಸ್ಸು ಹೆಚ್ಚಾಗುತ್ತದೆ. ಉದಾರವಾದಿ ನಿಲುವಿನಲ್ಲಿ ವಿಶ್ವಕ್ಕೆ ಮಾದರಿಯಾಗುತ್ತದೆ. ವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸಿದಂತಾಗುತ್ತದೆ. ಧಾರ್ಮಿಕ ಸಂಕುಚಿತ ಮನೋಭಾವ ಕಡಿಮೆಯಾಗಿ ಮಾನವ ಧರ್ಮದ ವಿಶಾಲತೆ ಮತ್ತು ಶ್ರೇಷ್ಠತೆ ಎತ್ತಿ ಹಿಡಿದಂತಾಗುತ್ತದೆ. 

ಇದರಿಂದ ಆಗಬಹುದಾದ ಸಾಮಾಜಿಕ ದುಷ್ಪರಿಣಾಮಗಳ ಬಗ್ಗೆ ಯೋಚಿಸಿದರೆ ಅಂತಹ ಗಂಭೀರ ಸಮಸ್ಯೆ ಎದುರಾಗುವುದಿಲ್ಲ. ಮಾನ್ಯತೆ ಸಿಕ್ಕ ತಕ್ಷಣ ಸಾಮಾನ್ಯ ಮನಸ್ಥಿತಿಯ ಯಾರೂ ಈ ರೀತಿಯ ವಿವಾಹವಾಗಲು ಇಷ್ಟಪಡುವುದಿಲ್ಲ. ಅಷ್ಟೇ ಏಕೆ ಅತಿಹೆಚ್ಚು ಸಾಮಾನ್ಯ ಜನರಿಗೆ ಸಲಿಂಗಕಾಮ ಒಂದು ಅಸಹ್ಯ ಕ್ರಿಯೆ ಎಂದೇ ಪರಿಗಣಿಸುತ್ತಾರೆ.‌ ( ಸಲಿಂಗಿಗಳ ಕ್ಷಮೆ ಕೋರುತ್ತಾ.... ) 

ಆದ್ದರಿಂದ ಇದು ಒಂದು ಸಾಂಕ್ರಾಮಿಕ ಆಕರ್ಷಣೆ ಆಗುವ ಸಾಧ್ಯತೆ ತುಂಬಾ ಕಡಿಮೆ. ಇದನ್ನು ನಿರ್ಲಕ್ಷಿಸಿದರೆ ಒಳಿತು. ಇದರಲ್ಲಿ ಏನಾದರೂ ಅಪರಾಧ ಪ್ರಕರಣಗಳು ನಡೆದರೆ ಎಂದಿನಂತೆ ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ. ಇದರ ಒಟ್ಟು ಸಾರಾಂಶ ನಮ್ಮದೇ ಜನರ ಒಂದು ಸಣ್ಣ ದೈಹಿಕ ಮತ್ತು ಮಾನಸಿಕ ನ್ಯೂನ್ಯತೆಯನ್ನು (ಸಮಾಜದ ದೃಷ್ಟಿಯಿಂದ ) ಪ್ರೀತಿಯಿಂದ ಒಪ್ಪಿಕೊಳ್ಳೋಣ. ಹೆಚ್ಚು ಕಠಿಣವಾಗುವುದು ಬೇಡ. ನಾವು ನಮ್ಮಂತೆಯೇ ಇರೋಣ. ಮುಂದೆ ಅದರಿಂದ ಏನಾದರೂ ದೊಡ್ಡ ಮಟ್ಟದ ಸಮಸ್ಯೆ ತಲೆದೋರಿದರೆ ಆಗಿನ ಸಂದರ್ಭದಲ್ಲಿ ಕಾನೂನು ಬಿಗಿ ನಿಲುವು ತಳೆಯಬಹುದು. ಈ ಕ್ಷಣದಲ್ಲಿ  ಒಪ್ಪಿತ ಸಲಿಂಗವಿವಾಹ ನಮಗೆ ಯಾವುದೇ ಸಮಸ್ಯೆಯಲ್ಲ. ಸಮಾಜದಲ್ಲಿ ದುರ್ಬಲ ವರ್ಗದವರ ಪರವಾಗಿ ಸಹಾನುಭೂತಿ ತೋರಿಸುವುದು ನಾಗರಿಕ ಜನರ ಧರ್ಮ. ಇಲ್ಲ ಅದನ್ನು ಕಟ್ಟುನಿಟ್ಟಾಗಿ ನಿಷೇಧಿಸಲೇ ಬೇಕು ಅದೊಂದು ಅನಿಷ್ಟ ಎನ್ನುವ ಸ್ವಾತಂತ್ರ್ಯವೂ ನಿಮಗಿದೆ. ಅಭಿಪ್ರಾಯಗಳು ಅವರವರ ವಿವೇಚನೆಗೆ ಸೇರಿದ್ದು.

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ