'ಸಲ್ಲಿ'

4.636365

ಅದೊಂದು ದಿನ ಮನಸ್ಸಿನಲ್ಲಿ ಮನೆಮಾಡಿದ್ದ ದುಗುಡ ಯಾವ ಕೆಲಸವನ್ನೂ ಮಾಡಗೊಡಲಿಲ್ಲ. ರಾತ್ರಿ ಹನ್ನೆರಡಾದರೂ ಕೆಲಸಗಳು ಮುಗಿದಿರಲಿಲ್ಲ. ಒಂದೈದು ನಿಮಿಷ ತಡೆದು ಮತ್ತೆ ಮುಂದುವರೆಸೋಣ ಎಂದು ಮೊಬೈಲ್ ಹಿಡಿದು ಕುಳಿತೆ. ಆಗ ಗೂಗಲ್ ಪ್ಲೇ ಸ್ಟೋರಿನಲ್ಲಿ “ಸಲ್ಲಿ” ಚಿತ್ರದ ಜಾಹೀರಾತು ಕಂಡಿತು. ನಿರ್ದೇಶಕನ ಹೆಸರು ಕ್ಲಿಂ ಟ್ ಈಸ್ಟ್ವುಡ್ ಎಂದು ಬರೆದಿತ್ತು. ಸಿನಿಮಾ ಖರೀದಿಸಿ ನೋಡುತ್ತ ಕುಳಿತುಬಿಟ್ಟೆ! ಮತ್ತೆ ಕೆಲಸ ಮಾಡಲು ಕುಳಿತಾಗ ಮುಂಜಾನೆ ಮೂರು ಗಂಟೆಯ ಆಸುಪಾಸು ಇದ್ದೀತು - ಮತ್ತೆ ಹೊಸ ಹುರುಪಿನಿಂದ ಕೆಲಸ ಮಾಡುತ್ತ ಕುಳಿತಿದ್ದೆ. ಹಾಗಿತ್ತು ಈ ಚಿತ್ರ! 
 
೨೦೦೯ರಲ್ಲಿ ಹಡ್ಸನ್ ನದಿಯ ಮೇಲೆ ತೇಲುತ್ತಿದ್ದ ವಿಮಾನದ ಚಿತ್ರ ಜಗತ್ತಿನಾದ್ಯಂತ ಸುದ್ದಿಪತ್ರಿಕೆಗಳ ಮುಖಪುಟದಲ್ಲಿ ಬಂದಿತ್ತು. ಆಗಬಹುದಾಗಿದ್ದ ಅವಘಡ ತಪ್ಪಿಸಿ ಸೀದಾ ಹಡ್ಸನ್ ನದಿಯ ಮೇಲೆಯೇ ಪ್ಲೇನನ್ನು ಇಳಿಸಿಬಿಟ್ಟಿದ್ದರು. ಆ ಸಮಯದಲ್ಲಿ ನಾನೂ ಮರುದಿನದ ಸುದ್ದಿಯಲ್ಲಿ ಇದರ ಬಗ್ಗೆ ವಿವರವಾಗಿ ಓದಿದ ನೆನಪು. ಅದಾದ ನಂತರ ಅದರ ಬಗ್ಗೆ ಮರೆತುಬಿಟ್ಟಿದ್ದೆ. ಈ ಸಿನಿಮಾ ಅದನ್ನೆಲ್ಲ ನೆನಪಿಸಿತು. ಅಷ್ಟೇ ಅಲ್ಲ, ಆ ಘಟನೆಯ ಹಿಂದೆ ಮುಂದೆ ನಡೆದ ಸಂಗತಿಗಳು, ಅದನ್ನು ಅನುಭವಿಸಿದ ಕೆಲವರ ವ್ಯಕ್ತಿ ಚಿತ್ರಣ - ಸಿನಿಮಾದಲ್ಲಿ ನಾಟಕೀಯ ರೂಪದಲ್ಲಿದ್ದರೂ ಸುದೃಡ ಮನಸ್ಸಿಗೆ ಕಾರಣವಾಗಬಲ್ಲ, ಧೈರ್ಯ ತುಂಬುವ ಚಿತ್ರಣಗಳಾಗಿದ್ದುವು. 
 
ಸುಮಾರು ಮೂವತ್ತು ವರ್ಷಗಳ ಅನುಭವ ಇರುವ ಪೈಲಟ್ ಚೆಸ್ಲಿ ಸಲ್ಲೆನ್ಬರ್ಗರ್ ಅಥವಾ ॑ಸಲ್ಲಿ' ಮೂವತ್ತೈದು ಸೆಕೆಂಡುಗಳಲ್ಲಿ ಎಲ್ಲ ದುಗುಡಗಳ ನಡುವೆ ತೆಗೆದುಕೊಳ್ಳುವ ಎಚ್ಚರಿಕೆಯ ಕ್ರಮ ಪ್ಲೇನಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ ಪ್ರಯಾಣಿಕರ ಜೀವ ಉಳಿಸುತ್ತದೆ. ಹೀಗಾದರೂ ತಾನು ತೆಗೆದುಕೊಂಡ ನಿರ್ಧಾರ ತಪ್ಪಾಗಿತ್ತೇನೋ ಎಂಬ ಕಳವಳ  ಅವನದು. ಅದಲ್ಲದೆ ಘಟನೆಯ ತನಿಖೆ ನಡೆಸುವ ಸಮಿತಿ ಕಂಪ್ಯೂಟರ್ ಸಿಮ್ಯುಲೇಶನ್ನುಗಳನ್ನಾಧರಿಸಿದ ವರದಿ ಇಟ್ಟುಕೊಂಡು “ಪ್ಲೇನು ಹತ್ತಿರದ ಏರ್ಪೋರ್ಟಿನಲ್ಲಿ ಲ್ಯಾಂಡ್ ಆಗುವ ಸಾಧ್ಯತೆ ಇತ್ತು” ಎಂದು ಹೇಳಿಬಿಡುತ್ತದೆ. ತನ್ನನ್ನು ತಾನು ಪ್ರಶ್ನಿಸಿಕೊಳ್ಳುತ್ತಲೇ ತನ್ನ ನಿರ್ಧಾರವನ್ನು ಪ್ರಶ್ನಿಸುವವರನ್ನು ಆತ ಪ್ರಶ್ನಿಸುವ ರೀತಿ, ಸಂಪೂರ್ಣ ಘಟನೆಯನ್ನು ಅವ ನಿರ್ವಹಿಸುವ ರೀತಿ ಬದುಕಿಗೆ ಪಾಠ ಹೇಳಿಕೊಡುವ ಜೀವನದ ಪ್ರತಿಬಿಂಬ ಇದ್ದಹಾಗಿದೆ. ಕೆಲವರು ಇವನನ್ನು “ಅಷ್ಟೂ ಜನರ ಜೀವ ಉಳಿಸಿದವ” ಎಂದು ಹೊಗಳಿ ಎತ್ತಿಕಟ್ಟಿದರೆ ಕೆಲವರು ಇವನನ್ನು “ತಪ್ಪು ಮಾಡಿದ” ಎಂ ಬಂತೆ ನೋಡುತ್ತಾರೆ. ಇದೆಲ್ಲದರ ನಡುವೆ ತನ್ನ ಮನ್ನಸ್ಸಿನ ಸಮತೋಲನ ಕಳೆದುಕೊಳ್ಳದೆಯೇ ಈತ ವೈಯಕ್ತಿಕ ಸಮಸ್ಯೆಗಳನ್ನೂ ಎದುರಿಸುತ್ತಾನೆ. 
 
ತೀರ ಕಷ್ಟದ ಸಮಯದಲ್ಲಿ ವಿಶ್ವಾಸ ತುಂಬಬಲ್ಲ ಸಿನಿಮಾ ॑ಸಲ್ಲಿ'.  ಸಿನಿಮಾ ನೋಡಿ  ತಿಂಗಳುಗಳೇ ಕಳೆದುಹೋಗಿದ್ದವು. ಸಮಯವಿಲ್ಲದ ಸಮಯದಲ್ಲಿ ಏನೋ ನೋಡುತ್ತ ಕುಳಿತುಬಿಟ್ಟೆ ಎಂದು ಮೊದಲು ಅನಿಸಿದರೂ ಸಿನಿಮಾ ನೋಡಿದ ಮೇಲೆ ಇದೊಮ್ಮೆ ಜೀವನದಲ್ಲಿ ನೋಡಲೇಬೇಕಾದ ಸಿನಿಮಾ ಎಂದನಿಸಿತು. ಆ ದಿನ ಆ ಹೊತ್ತಿಗೆ ಅದು ನನಗೆ ಕಂಡದ್ದು ಎಷ್ಟು ಒಳ್ಳೆಯದಾಯಿತು ಎಂದು ಕೂಡ ಅನಿಸಿತು! 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.