ಸವೆಯದ ದಾರಿ -ಆತ್ಮ ವೃತ್ತಾಂತ

ಸವೆಯದ ದಾರಿ -ಆತ್ಮ ವೃತ್ತಾಂತ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ರಮಾನಂದ ಬನಾರಿ
ಪ್ರಕಾಶಕರು
ತಾರಾ ಪ್ರಿಂಟ್ಸ್, ಮೈಸೂರು
ಪುಸ್ತಕದ ಬೆಲೆ
ರೂ.250-00, ಮುದ್ರಣ :2017

*ಡಾ. ರಮಾನಂದ ಬನಾರಿಯವರ ಆತ್ಮ ವೃತ್ತಾಂತ "ಸವೆಯದ ದಾರಿ"*

 ಡಾ. ರಮಾನಂದ ಬನಾರಿಯವರ ಆತ್ಮ ವೃತ್ತಾಂತ " ಸವೆಯದ ದಾರಿ"ಯನ್ನು ಮೈಸೂರಿನ ತಾರಾ ಪ್ರಿಂಟ್ಸ್ 2017 ರಲ್ಲಿ ಪ್ರಕಾಶಿಸಿದೆ. 4 + 24 + 288 ಪುಟಗಳ, 250 ರೂಪಾಯಿ ಬೆಲೆಯ ಈ ಕೃತಿಗೆ ಎಡನೀರು ಮಠದ ಕೇಶವಾನಂದ ಭಾರತಿ ಸ್ವಾಮೀಜಿಯವರ ಶುಭನುಡಿ (ಮೌಲ್ಯದ ಹೃದಯವಂತಿಕೆಯ ಆತ್ಮ ವೃತ್ತಾಂತ), ಪ್ರೊ.ಹಂಪ ನಾಗರಾಜಯ್ಯರ ಮುನ್ನುಡಿ (ಸುಶೋಭಿತ ಆತ್ಮಕಥನ), ಕಾಲೇಜು ಉಪನ್ಯಾಸಕರಾದ ಟಿ. ಎ. ಎನ್. ಖಂಡುಗೆಯವರ ಒಳ ನುಡಿ ("ತಿಳಿ" ನೀರಿನಲ್ಲಿ ತೇಲಿ ಬಂದ ಬನಾರಿ "ನಾವೆ") ಮತ್ತು ಪ್ರೊ.ಡಾ. ಬಿ. ಎ. ವಿವೇಕ ರೈಗಳ ಬೆನ್ನುಡಿ ಇದೆ.

ಆತ್ಮ ವೃತ್ತಾಂತ ಕೃತಿಯ ಬರಹಗಳನ್ನು ಡಾ. ಬನಾರಿಯವರು ಮೊದಲ ಪರ್ವ, ಉದ್ಯೋಗ ಪರ್ವ, ಕುಟುಂಬ ಪರ್ವ, ಸಾಹಿತ್ಯ ಪರ್ವ, ಕಲಾ ಪರ್ವ, ಸಂಕೀರ್ಣ ಪರ್ವ ಎಂಬ ಆರು ಪರ್ವಗಳಲ್ಲಿ ಒಟ್ಟು 174 ಲೇಖನಗಳ ಮೂಲಕ ಕಟ್ಟಿ ಕೊಟ್ಟಿದ್ದಾರೆ. ಕೊನೆಗೆ ಅನುಬಂಧವೂ ಇದೆ.

"ತನ್ನ ಜೀವನದ ಘಟನೆಗಳೆಂದು ಪರೋಕ್ಷವಾಗಿ ಆತ್ಮ ಪ್ರಶಂಸೆ ಮಾಡುತ್ತಾ ಪುಸ್ತಕ ಪ್ರಕಾಶನ ಮಾಡುವ ಸಂಪ್ರದಾಯ ಹಲವು ಕಡೆ ಕಾಣಿಸಿಕೊಳ್ಳುವುದು ಇದೆ. ಆದರೆ ಶ್ರೀಯುತರು ತಮ್ಮ ಜೀವನ ಗಾಥೆಗಿಂತ ಹೆಚ್ಚಾಗಿ ಉಳಿದವರ ಗುಣಗಳನ್ನು ಅರಿಸಿ - ಅರಸಿ ಬರೆದಿದ್ದಾರೆ‌. ಯಕ್ಷಗಾನ - ಸಾಹಿತ್ಯ - ಸಂಗೀತ - ಸಾಮಾಜಿಕ - ಶೈಕ್ಷಣಿಕ - ಧಾರ್ಮಿಕ - ವೈದ್ಯಕೀಯ ಕ್ಷೇತ್ರಗಳಲ್ಲಿರುವ ಹಿರಿ - ಕಿರಿಯರನ್ನೆಲ್ಲ ನೆನಪಿಸಿಕೊಂಡಿದ್ದಾರೆ. ಕೆಲವು ಕಡೆ ಸ್ವಲ್ಪ  ಸ್ವಲ್ಪ ಅತಿಯಾಯಿತೋ ಎಂಬ ಸಂದೇಹ ಬರುವಷ್ಟೂ ಪ್ರಶಂಸಿಸಿದ್ದಾರೆ. 'ಪರಗುಣ ಪರಮಾಣೊನ್ ಪರ್ವತೀ ಕೃತ್ವನಿತ್ಯಂ' ಎಂಬ ಭರ್ತೃಹರಿಯ ಆದರ್ಶ ವಚನವನ್ನೂ ಅನುಸರಿಸಿದ್ದಾರೆ ಎಂಬುದರಲ್ಲಿ ಮಾತೆರಡಿಲ್ಲ" ಎಂದು ಶುಭನುಡಿಯಲ್ಲಿ ಕೇಶವಾನಂದ ಭಾರತೀ ಸ್ವಾಮೀಜಿಯವರು "ಸವೆಯದ ದಾರಿ"ಯ ಒಳಗನ್ನು ಸರಿಯಾಗಿಯೇ ಗುರುತಿಸಿದ್ದಾರೆ.

ಈ ಕೃತಿಯಲ್ಲಿ ಲೇಖಕರಾದ ಡಾ. ರಮಾನಂದ ಬನಾರಿಯವರು ಹೊಗಳಬೇಕು ಅನಿಸಿದವರನ್ನು ಹೊಗಳಿದ್ದಾರೆ, ನಿಜ. ಅದೇ ರೀತಿ ಕೆಲವರನ್ನು, ಕೆಲವು ನಿರ್ಧಿಷ್ಟ ವಿಷಯಗಳಿಗೆ ಸಂಬಂಧಿಸಿ ನೇರನೇರಾ ವಿಮರ್ಶಿಸುವ, ಟೀಕಿಸುವ, ಖಡಕ್ ಆಗಿಯೇ ಪ್ರಶ್ನಿಸುವ ಕೆಲಸವನ್ನೂ ದಿಟ್ಟತನದಿಂದಲೇ ಮಾಡಿದ್ದಾರೆ.

ಕಾಂತಾವರ ಕನ್ನಡ ಸಂಘವು ಸಂಪಾದಿಸಿ ಪ್ರಕಟಿಸಲಿರುವ ವಿವಿಧ ಕವಿಗಳ ಕವನ ಸಂಕಲನಕ್ಕೆ ತಮ್ಮ ಕವನಗಳು ಬೇಕು ಎಂದು ಸ್ವತಹಾ ಕಾಂತಾವರ ಕನ್ನಡ ಸಂಘದ ಅಧ್ಯಕ್ಷರಾಗಿದ್ದ ಡಾ. ನಾ. ಮೊಗಸಾಲೆಯವರು ಕೇಳಿ ಪಡೆದುಕೊಂಡು ಹೋಗಿ ಎರಡು ವರ್ಷಗಳ ಬಳಿಕ, "ಸಂಪಾದಕ ಮಂಡಳಿಯವರು ನಿಮ್ಮ ಕವನಗಳ ಆಯ್ಕೆಯನ್ನು ನಿರಾಕರಿಸಿದ್ದಾರೆ" ಎಂದು ಹೇಳಿ ಕವನಗಳನ್ನು ಹಿಂತಿರುಗಿಸಿದ ಘಟನೆಯನ್ನು 'ಅನ್ಯಾಯ'ವೆಂದು ಹೇಳಿ ನೇರವಾಗಿಯೇ ಕವಿ ಡಾ. ಬನಾರಿಯವರು ಖಂಡಿಸಿದ್ದಾರೆ. ಮಾತ್ರವಲ್ಲ, ಹೀಗೆ ಮಾಡುವುದು ಒಬ್ಬ ಕವಿಗೆ ಮಾತ್ರವಲ್ಲ, ಎಲ್ಲಾ  ಕವಿಗಳಿಗೂ ಮಾಡುವ ಅಪಚಾರವೆಂಬ ತಮ್ಮ ಖಡಕ್ ಅಭಿಪ್ರಾಯವನ್ನು ನೇರವಾಗಿಯೇ ದಾಖಲಿಸಿದ್ದಾರೆ.

ಇನ್ನೊಂದು ಪ್ರಕರಣ ಮತ್ತು ಡಾ. ಬನಾರಿಯವರ ನೇರವಂತಿಕೆಗೆ, ಸಾಮಾಜಿಕ ನ್ಯಾಯ ಪ್ರತಿಪಾದನೆಯ ವ್ಯಕ್ತಿತ್ವಕ್ಕೆ ಸಾಕ್ಷಿಯಾಗುವುದು ಪಾದೆಕಲ್ಲು ಪಕ್ಷಪಾತದ ಅನಾವರಣ ಪ್ರಸಂಗ. ಅದು ಹೀಗಿದೆ:

ಮಂಗಳೂರಿನಲ್ಲಿ ನಡೆದ 66ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ದಕ್ಷಿಣ ಕನ್ನಡದ ಬರಹಗಾರರ ಕುರಿತು ಪಾದೆಕಲ್ಲು ವಿಷ್ಟು ಭಟ್ಟರು ಬರೆದ ಒಂದು ಲೇಖನ. ಈ ಲೇಖನದಲ್ಲಿ ಪಾದೆಕಲ್ಲು ವಿಷ್ಟು ಭಟ್ಟರಿಂದ ಸಾಮಾಜಿಕ ನ್ಯಾಯಕ್ಕೆ ಅನ್ಯಾಯವಾಗಿದೆ, ಲೇಖನದಲ್ಲಿ ಹೆಸರುಗಳ ದಾಖಲೀಕರಣ ಪ್ರಕ್ರೀಯೆಯಲ್ಲಿ ಪಾದೆಕಲ್ಲು ವಿಷ್ಣು ಭಟ್ಟರಿಂದಾದ ನ್ಯೂನತೆ ಮತ್ತು ಅಸಮತೋಲನದ ಲೇಖನದ ವಿರುದ್ಧ ಡಾ‌. ಬನಾರಿಯವರು ಸ್ಪಷ್ಟವಾಗಿಯೇ, ಮುಲಾಜಿಲ್ಲದೇ ಪ್ರಶ್ನಿಸಿದ್ದಾರೆ.

ಬನಾರಿಯವರದು ಬಹಳ ಸಾತ್ವಿಕ ಪ್ರತಿಭಟನೆ. ಒಂದು ಪ್ರತಿಭಟನೆ ಹೀಗಿದೆ ನೋಡಿ:

"..... ಆ ಸೀರಿಯಸ್ ನೆಸ್ ಗೆ ಒಂದು ವಿನೋದದ ಆಯಾಮವನ್ನು ಕೊಡುವುದಕ್ಕಾಗಿ ನಾಲ್ಕು ಸಾಲುಗಳ ಚುಟುಕವೊಂದನ್ನು ಓದುವುದಕ್ಕೆ ನಾನು ಸಿದ್ಧನಾದಾಗ ಅಧ್ಯಕ್ಷರು ಹಿಂದಿನಿಂದ ಅಪಸ್ವರ ಹೊರಡಿಸಿದ್ದರಿಂದ ಅಲ್ಲಿಗೆ ನಿಲ್ಲಿಸಿದೆ. ಅದಕ್ಕೂ ಮೊದಲು ಒಂದು ಕವಿತೆ, ಎರಡು ಚುಟುಕುಗಳನ್ನು ಕೆಲವರು ಓದಿದಾಗ ಉಸಿರು ಹೊರ ಹಾಕದವರು ನನ್ನನ್ನು ಮಾತ್ರ ಏಕೆ ಆಕ್ಷೇಪಿಸಬೇಕು ? ಒಂದು ಕ್ಷಣ ವೇದಿಕೆಯಲ್ಲೇ ಪ್ರತಿಭಟಿಸಬೇಕೆನ್ನುವ ರೊಚ್ಚು ಮನಸ್ಸಿನಲ್ಲಿ ಮೂಡಿತಾದರೂ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ನಮ್ಮವರೇ ಆದ ಪುನರೂರು ಎಂಬುದರಿಂದ ಅವರ ಮುಖವನ್ನು ನೋಡಿ ಸುಮ್ಮನಾದೆ. ಆದರೂ ಅಧ್ಯಕ್ಷರು ಭಾಷಣಕ್ಕೆ ಎದ್ದು ನಿಂತಾಗ ವೇದಿಕೆಯಿಂದ ಹೊರ ನಡೆದು ನನ್ನ ಅಸಂತೋಷವನ್ನು ಸೌಮ್ಯವಾಗಿ ಸೂಚಿಸುವುದಕ್ಕೆ ಹಿಂಜರಿಯಲಿಲ್ಲ." ಇದು, ಬೆಳಗಾವಿ ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಯಲ್ಲಿನ ಪ್ರಸಂಗ.

ಇಂಥ ಸೌಮ್ಯ ನಡೆಗಳು ಸಾತ್ವಿಕ ಪ್ರತಿಭಟನೆಗಳಾದರೂ ಸಂಬಂಧಿಸಿದವರಿಗೆ ರವಾನಿಸುವ ಸಂದೇಶ ಮಾತ್ರ ಪರಿಣಾಮಕಾರಿಯೇ. ಬನಾರಿಯವರ ಇಂಥ ಮಾದರಿಗಳು ಕೆಲವು "ಸವೆಯದ ದಾರಿಯಲ್ಲಿ" ಉಲ್ಲೇಖಿಸಲ್ಪಟ್ಟಿರುವುದರಿಂದ ಇದೊಂದು ರೀತಿಯಲ್ಲಿ ಜಾಗೃತಿಗೂ ಪೂರಕವಾಗಿದೆ. 

ಡಾ. ರಮಾನಂದ ಬನಾರಿಯವರು ಒಬ್ಬರು ಪ್ರಸಿದ್ಧ ಕವಿಗಳು, ಲೇಖಕರು, ಯಕ್ಷಗಾನ ತಾಳಮದ್ದಲೆಯ ಅರ್ಥಧಾರಿಗಳು, ಹಿರಿಯ - ಜನ ಪ್ರೀತಿಯ ಕುಟುಂಬ ವೈದ್ಯರು, ಸಂಘಟಕರು ಎಂಬುದು ಎಲ್ಲರಿಗೂ ಗೊತ್ತಿರುವುದೇ. ಆದರೆ, ಡಾ. ಬನಾರಿಯವರು ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರಗಳಲ್ಲಿನ ಸಾಮಾಜಿಕ ನ್ಯಾಯದ ಪ್ರತಿಪಾದಕರು, ಇಲ್ಲಾಗುವ ಅನ್ಯಾಯಗಳ ವಿರುದ್ಧದ ಹೋರಾಟಗಾರರು ಎಂಬುದು ಹೆಚ್ಚಿನ ಜನರಿಗೆ ತಿಳಿದಿರಲಾರದು. "ಸವೆಯದ ದಾರಿ" ಓದುವಾಗ ಬಾನಾರಿಯವರ ಬಹಿರಂಗಕ್ಕೆ ಬಾರದ ಇನ್ನೊಂದು ಮುಖದ ಅನಾವರಣವೂ ಪ್ರಖರವಾಗಿ ಆಗಿಬಿಡುತ್ತದೆ.

ಹಲವಾರು ಸಿಹಿ ಅನುಭವಗಳ ಜೊತೆಗೆ ಕೆಲವೊಂದು ಕಹಿ ಅನುಭವಗಳನ್ನು ಲೇಖಕರು ಇಲ್ಲಿ ಹಂಚಿಕೊಂಡಿದ್ದಾರೆ. ಸಾಹಿತ್ಯ, ಮಕ್ಕಳ ಸಾಹಿತ್ಯ, ಕಾವ್ಯ, ಕೆಳದರ್ಜೆಗೆ ಇಳಿಸಲ್ಪಟ್ಟ ಕವಿಗೋಷ್ಟಿಗಳ ಬಗ್ಗೆ, ಗದ್ಯವಾಗುತ್ತಿರುವ ಪದ್ಯಗಳ ಬಗ್ಗೆ, ಸಂಘಟನೆ, ಸಾಹಿತಿಗಳ ಮತ್ತು ಕನ್ನಡ ಪರ ಹೋರಾಟಗಾರರ ನಡುವಿನ ಗುಂಪುಗಾರಿಕೆ, ಯಕ್ಷಗಾನ ಇತ್ಯಾದಿ ವಿವಿಧ ವಿಷಯಗಳ ಬಗ್ಗೆ ತಮ್ಮ ನಿಲುವು ಒಲವುಗಳನ್ನು ಡಾ. ಬನಾರಿಯವರು ಕೃತಿಯುದ್ಧಕ್ಕೂ ಅಲ್ಲಲ್ಲಿ ದಾಖಲಿಸಿದ್ದಾರೆ.

ಗುರುತಿಸುವಿಕೆಯಲ್ಲಾಗುತ್ತಿರುವ ಏರುಪಾರುಗಳ ಬಗ್ಗೆ ಗಮನಸೆಳೆಯುವ ಕೆಲಸ ಮಾಡಿರುವ ಡಾ. ರಮಾನಂದ ಬನಾರಿಯವರು, ಲೈಂಗಿಕ ಶಿಕ್ಷಣ ಎಂಬ ಹೆಸರಿನಲ್ಲಿ ಪತ್ರಿಕೆಗಳು ಅಶ್ಲೀಲ ಬರಹಗಳನ್ನು ಪ್ರಕಟಿಸುವ ಬಗ್ಗೆ ಮತ್ತು ವೈದ್ಯರಲ್ಲದವರು ವೈದ್ಯಕೀಯ ಪ್ರಶ್ನೆಗಳಿಗೆ ಉತ್ತರಿಸುವುದು ಹಾಗೂ ವೈದ್ಯರು ಸಹ ಪತ್ರಿಕೆಗಳ ಮೂಲಕ ಔಷಧಿಗಳನ್ನು ಬರೆದು ತಿಳಿಸುವುದು ಇತ್ಯಾದಿಗಳನ್ನು ಖಂಡಿಸುವ ಮೂಲಕ ಡಾ. ಬನಾರಿಯವರು ತಮ್ಮ ಕರ್ತವ್ಯವನ್ನು ಮೆರೆದಿದ್ದಾರೆ.

ಒಬ್ಬರು ಹಿರಿಯ ಯಕ್ಷಗಾನ ಅರ್ಥಧಾರಿಯಾಗಿರುವ ಡಾ. ಬನಾರಿಯವರು ಈ ಪುರಾಣಗಳನ್ನು ಸರಿಯಾಗಿ ಅರ್ಥೈಸಿಕೊಂಡಿದ್ದಾರೆ ಎಂಬುದೂ ಪುಟ 150ರಲ್ಲಿ ಸ್ಪಷ್ಟವಾಗುತ್ತದೆ, ಬನಾರಿಯವರ ಜ್ಞಾನಚಕ್ಷುವಿನ ನಿಖರ ಪರಿಚಯವಾಗುತ್ತದೆ.

 ಹಿರಿಯರೂ, ಗೌರವಾನ್ವಿತರೂ, ಗಡಿನಾಡಿನ ಕಾಸರಗೋಡಿನ ಸಾಕ್ಷಿ ಪ್ರಜ್ಞೆಯೂ, ಕನ್ನಡ ಸಾಹಿತ್ಯ ಲೋಕದ ಧೀಮಂತ ಶಕ್ತಿಯೂ ಆಗಿರುವ ಡಾ. ರಮಾನಂದ ಬನಾರಿಯವರ "ಸವೆಯದ ದಾರಿಯಲ್ಲಿ"  ಆತ್ಮ ವೃತ್ತಾಂತವನ್ನು ಕಾಸರಗೋಡಿನ ಪ್ರತಿಯೊಬ್ಬ ಕನ್ನಡಿಗನೂ, ಕಾಸರಗೋಡಿನ ಬಗ್ಗೆ ಆಸಕ್ತಿ ಇರುವ ಕರ್ನಾಟಕದ ಕನ್ನಡಿಗರೂ ಓದಬೇಕು.

- ಶ್ರೀರಾಮ ದಿವಾಣ