ಸಸ್ಯಗಳು ಹೇಗೆ ಬೆಳೆಯುತ್ತವೆ ಗೊತ್ತೇ? (ರೈತರೇ ಬದುಕಲು ಕಲಿಯಿರಿ-೭)

ಸಸ್ಯಗಳು ಹೇಗೆ ಬೆಳೆಯುತ್ತವೆ ಗೊತ್ತೇ? (ರೈತರೇ ಬದುಕಲು ಕಲಿಯಿರಿ-೭)

ಬರಹ

(ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆ
ನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವ
ದಾರಿ ತೋರುವ ಕೈಪಿಡಿ)

ಸಸ್ಯಗಳು ಹೇಗೆ ಬೆಳೆಯುತ್ತವೆ?

ಕೃಷಿ ಮಾಡುತ್ತಿರುವ ಹಾಗೂ ಮಾಡಲು ಹೊರಟ ಎಲ್ಲರೂ ಮೊದಲು ಕೇಳಿಕೊಳ್ಳಬೇಕಾದ
ಪ್ರಶ್ನೆಯಿದು. ಇದಕ್ಕೆ ಸಾಮಾನ್ಯವಾಗಿ ದೊರೆಯುವ ಉತ್ತರ ಎಂದರೆ ’ಮಳೆ (ನೀರು), ಬಿಸಿಲು
ಹಾಗೂ ಗೊಬ್ಬರದ ಮೂಲಕ’.

ನಿಜ. ಒಂದು ಗಿಡ ಬೆಳೆಯಬೇಕೆಂದರೆ ಅದಕ್ಕೆ ಬಿಸಿಲು, ನೀರು, ಗಾಳಿ ಹಾಗೂ ಗೊಬ್ಬರ
ಬೇಕೇ ಬೇಕು. ಒಂದೇ ಮಾತಿನಲ್ಲಿ ಹೇಳುವುದಾದರೆ ಪಂಚಭೂತಗಳು ಎಂದು ನಾವು ಕರೆಯುವ ನೀರು,
ಗಾಳಿ, ಆಕಾಶ, ಸೂರ್ಯನ ಬಿಸಿಲು ಹಾಗೂ ಮಣ್ಣು- ಈ ಐದೂ ಪ್ರಮುಖ ಅಂಶಗಳು ಗಿಡಗಳ
ಬೆಳವಣಿಗೆಗೆ ಬೇಕೇ ಬೇಕು. ಆದರೆ ಎಷ್ಟು ಪ್ರಮಾಣದಲ್ಲಿ ಬೇಕು ಎಂಬುದೇ ಕೃಷಿಯಲ್ಲಿ
ಅಡಗಿರುವ ರಹಸ್ಯ.

ಸುಭಾಷ ಪಾಳೇಕರ ಅವರ ಮಾತಿನಲ್ಲೇ ಹೇಳುವುದಾದರೆ, ಈ ಪ್ರಮಾಣದ ಮಹತ್ವ ಅರಿತುಕೊಂಡರೆ ಕೃಷಿಯ ರಹಸ್ಯವನ್ನೇ ತಿಳಿದಂತೆ.

ಗೊಬ್ಬರ ಹೆಚ್ಚು ಕೊಟ್ಟಷ್ಟೂ ಇಳುವರಿ ಹೆಚ್ಚು ಎಂಬ ಭ್ರಮೆ ನಮ್ಮ ರೈತರಲ್ಲಿದೆ.
ಇದಕ್ಕೆ ಕಾರಣ ನಮ್ಮ ಕೃಷಿ ವಿಜ್ಞಾನಿಗಳು. ಪ್ರತಿ ಬಾರಿ ಬೆಳೆ ಪಡೆದಾಗಲೂ ಭೂಮಿಯಿಂದ
ಹೊರಹೋಗುವ ಸತ್ವದ ಪ್ರಮಾಣ ಹೆಚ್ಚಿರುವುದರಿಂದ ಗೊಬ್ಬರದ ರೂಪದಲ್ಲಿ ಅದನ್ನು ಭೂಮಿಗೆ
ಹಿಂತಿರುಗಿಸಬೇಕು ಎಂಬುದು ವಿಜ್ಞಾನಿಗಳ ಪ್ರತಿಪಾದನೆ. 

ಆದರೆ ಇದು ಎಷ್ಟೊಂದು ಸುಳ್ಳು ಎನ್ನುವುದನ್ನು ಪಾಳೇಕರ್ ಅವರು ಕೆಳಗಿನ ಪ್ರಯೋಗದ ಮೂಲಕ ವಿವರಿಸುತ್ತಾರೆ.

ಒಂದು ಕ್ವಿಂಟಲ್ ಕಬ್ಬು ತೆಗೆದುಕೊಳ್ಳಿ. ಒಂದು ವಾರದ ಕಾಲ ಆ ಕಬ್ಬನ್ನು ತೀವ್ರ
ಬಿಸಿಲಿನಲ್ಲಿ ಒಣಗಿಸಿ. ಅದರೊಳಗೆ ಏನೂ ಹಸಿ ಉಳಿಯದಂತೆ ಒಣಗಿಸಿದ ನಂತರ ಕಬ್ಬನ್ನು
ಮತ್ತೆ ತೂಕ ಮಾಡಿ. ಈಗ ಅದರ ತೂಕ ಕೇವಲ ೨೨ ಕೆ.ಜಿ. ಮಾತ್ರ. ಅಂದರೆ ನೂರು ಕೆ.ಜಿ.
ಕಬ್ಬು ಒಣಗಿದ ನಂತರ ೨೨ ಕೆ.ಜಿ.ಗೆ ಇಳಿಯಿತು. ಉಳಿದ ೭೮ ಕೆ.ಜಿ. ಏನಿತ್ತು? ಮತ್ತು ಅದು
ಎಲ್ಲಿಗೆ ಹೋಯಿತು?

ಅದಕ್ಕೆ ಉತ್ತರ ಇಲ್ಲಿದೆ.

ಕಬ್ಬಿನಲ್ಲಿದ್ದ ನೀರು ಬಿಸಿಲಿಗೆ ಸಿಕ್ಕು ಆವಿಯಾಗಿ ವಾಪಸ್ ಪ್ರಕೃತಿಯನ್ನು ಸೇರಿಕೊಂಡಿತು. ಅಂದರೆ ಕಬ್ಬಿನ ಮೈಯಲ್ಲಿದ್ದ ಶೇ.೭೮ ಪಾಲು ನೀರು.

ಈಗ ಬಾಕಿ ಉಳಿದ ೨೨ ಕೆ.ಜಿ. ಕಬ್ಬಿಗೆ ಬೆಂಕಿ ಹಚ್ಚಿ. ಕೊನೆಗೆ ಉಳಿಯುವ ಬೂದಿಯನ್ನು
ತೂಕ ಹಾಕಿ. ಅದು ಸುಮಾರು ೧.೫ ಕೆಜಿ ಇರುತ್ತದೆ. ಅಂದರೆ ೨೦.೫ ಕೆ.ಜಿ. ತೂಕದಷ್ಟು
ಶಕ್ತಿ ಬೆಂಕಿ ಮತ್ತು ಗಾಳಿಯ ರೂಪದಲ್ಲಿ ವಾಪಸ್ ಪ್ರಕೃತಿಗೆ ಹಿಂತಿರುಗಿತು.

ಇದರರ್ಥ: ಒಂದು ಕ್ವಿಂಟಲ್ ಕಬ್ಬಿನಲ್ಲಿ ಇದ್ದುದು ನೀರಿನ ರೂಪದಲ್ಲಿ ೭೮ ಕೆ.ಜಿ.
ಮತ್ತು ಗಾಳಿ ಮತ್ತು ಸೂರ್ಯನ ಬೆಳಕಿನ ಶಕ್ತಿಯ ರೂಪದಲ್ಲಿ ಬಂದುದು ೨೦.೫ ಕೆ.ಜಿ. ಬಾಕಿ
ಉಳಿದ ೧.೫ ಕೆ.ಜಿ. ಬಂದಿದ್ದು ಭೂಮಿಯ ಮೂಲಕ. ಅಂದರೆ ಭೂಮಿಯ ಸತ್ವದ ಪ್ರಮಾಣ ಬೆಳೆಯ
ಶೇ.೧.೫ ಮಾತ್ರ.

ಆದರೆ ಈ ಒಂದು ಕ್ವಿಂಟಲ್ ಬೆಳೆ ಪಡೆಯಲು ನಾವು ಭೂಮಿಗೆ ಸುರಿಯುತ್ತಿರುವ ಗೊಬ್ಬರದ
ಪ್ರಮಾಣ ನೆನೆಸಿಕೊಂಡರೆ ಮೈ ನಡುಗುತ್ತದೆ. ಕೃಷಿ ವಿಜ್ಞಾನಿಗಳು ಹೇಳುತ್ತಿರುವುದು
ಮಹಾಸುಳ್ಳು ಎಂಬುದು ಗೊತ್ತಾಗುತ್ತದೆ. ಏಕೆಂದರೆ ನೀರು, ಗಾಳಿ ಮತ್ತು ಸೂರ್ಯನ ಶಕ್ತಿ
ನಿಸರ್ಗದಿಂದ ನಮಗೆ ಉಚಿತವಾಗಿ ದೊರೆಯುತ್ತಿದೆ. ನಾವು ನೀಡಬಹುದಾಗಿದ್ದು ಕೇವಲ ಶೇ.೧.೫
ಪ್ರಮಾಣದ ಸತ್ವ ಮಾತ್ರ. ಅಂದರೆ ಒಂದು ಕ್ವಿಂಟಲ್ ಕಬ್ಬು ಬೆಳೆಯಲು ಭೂಮಿಗೆ ಬೇಕಾದ
ಗೊಬ್ಬರದ ಪ್ರಮಾಣ ೧.೫ ಕೆಜಿ ಮಾತ್ರ.

ಆದರೆ ಈ ಗೊಬ್ಬರವನ್ನು ಕೂಡ ನಾವು ಹೊರಗಿನಿಂದ ತರಬೇಕಿಲ್ಲ. ಅದು ಭೂಮಿಯಲ್ಲಿಯೇ
ದೊರೆಯುತ್ತದೆ ಎನ್ನುತ್ತಾರೆ ಸುಭಾಷ ಪಾಳೇಕರ್. ಆಶ್ಚರ್ಯವೆನಿಸಿದರೂ ಈ ಮಾತು ಸತ್ಯ.
ಹೇಗೆಂದರೆ ಈ ಒಂದೂವರೆ ಕೆ.ಜಿ. ಸತ್ವದಲ್ಲಿ ಮುಕ್ಕಾಲು ಪಾಲಿಗಿಂತ ಹೆಚ್ಚು ಭಾಗ
ಭೂಮಿಯೊಳಗಿನ ಕೃಷಿತ್ಯಾಜ್ಯಗಳಿಂದಲೇ ದೊರಕುತ್ತದೆ. ಬಾಕಿ ಉಳಿದ ಕಾಲು ಭಾಗವನ್ನು
ಜೀವಾಮೃತದ ರೂಪದಲ್ಲಿ ನಾವು ಒದಗಿಸಬೇಕಷ್ಟೇ. (ಜೀವಾಮೃತದ ಬಗ್ಗೆ ಮುಂದಿನ ಅಧ್ಯಾಯದಲ್ಲಿ
ಹೆಚ್ಚಿನ ವಿವರಗಳಿವೆ).

ಸುಭಾಷ ಪಾಳೇಕರ ಅವರು ನೈಸರ್ಗಿಕ ಕೃಷಿಯನ್ನು ಶೂನ್ಯ ಬಂಡವಾಳದ ಕೃಷಿ ಎಂದು ಕರೆದಿರುವುದು ಈ ಹಿನ್ನೆಲೆಯಲ್ಲಿ.

(ಮುಂದುವರಿಯುವುದು)

- ಚಾಮರಾಜ ಸವಡಿ