ಸಸ್ಯಗಳ ಆರೋಗ್ಯ ರಕ್ಷಣೆಗೆ ‘ಟ್ರೀ ಹಾಸ್ಪಿಟಲ್'
ನಮಗೆ ಅನಾರೋಗ್ಯವಾದರೆ ನಾವು ವೈದ್ಯರ ಬಳಿ ಹೋಗುತ್ತೇವೆ. ಅನಾರೋಗ್ಯದ ಪ್ರಮಾಣ ಹೆಚ್ಚಿದ್ದರೆ ಆಸ್ಪತ್ರೆಗೆ ದಾಖಲಾಗುತ್ತೇವೆ. ಹಾಗೆಯೇ ನಾವು ಸಾಕುವ ಪ್ರಾಣಿಗಳಾದ ದನ, ನಾಯಿ, ಬೆಕ್ಕು ಮುಂತಾದುವುಗಳಿಗೆ ಆರೋಗ್ಯ ಸಮಸ್ಯೆಯಾದರೆ ನಾವು ಪಶು ವೈದ್ಯರೆಡೆಗೆ ಕರೆದುಕೊಂಡು ಹೋಗುತ್ತೇವೆ. ಪ್ರತಿಯೊಂದು ಚಲಿಸುವ ಜೀವ ಜಂತುಗಳಿಗಾಗಿ ವೈದ್ಯರು ಹಾಗೂ ಆಸ್ಪತೆಗಳು ಇವೆ. ಆದರೆ ಸಸ್ಯಗಳಿಗೆ ರೋಗ ಬಂದರೆ ಚಿಕಿತ್ಸೆ ಕೊಡುವ ಆಸ್ಪತ್ರೆ ಇದೆಯೇ? ಈ ಬಗೆಯ ಯೋಚನೆಯಲ್ಲಿ ಒಂದು ಕುತೂಹಲಕಾರಿ ಹಾಗೂ ಅಚ್ಚರಿಯ ‘ಟ್ರೀ ಹಾಸ್ಪಿಟಲ್' ನಿರ್ಮಿಸಿದ್ದಾರೆ ಈ ದಂಪತಿಗಳು.
ಪಂಜಾಬ್ ನ ಅಮೃತಸರ ಮೂಲದ ರೋಹಿತ್ ಮೆಹ್ರಾ ಹಾಗೂ ಗೀತಾಂಜಲಿ ಮೆಹ್ರಾ ದಂಪತಿಗಳು ಪ್ರಾರಂಭಿಸಿದ ಈ ಸಸ್ಯಗಳಿಗಾಗಿರುವ ಆಸ್ಪತ್ರೆ ಒಂದು ವಿನೂತನ ಯೋಜನೆ. ಇಲ್ಲಿ ನಿಮ್ಮ ಗಿಡ, ಮರಗಳಿಗೆ ತಗುಲಿದ ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಇಲ್ಲಿ ಬರುವ ಸಸ್ಯಗಳು ಹುಷಾರಾದ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡುವಾಗ ದುಬಾರಿ ಬಿಲ್ ಬರುವುದಿಲ್ಲ. ಏಕೆಂದರೆ ಇಲ್ಲಿ ಎಲ್ಲವೂ ಉಚಿತ.
ಈ ದಂಪತಿಗಳು ಕೇವಲ ಸಸ್ಯಗಳಿಗೆ ಶುಶ್ರೂಷೆ ಮಾಡುವುದಷ್ಟೇ ಅಲ್ಲ ಪರಿಸರ ಸ್ನೇಹಿ ವರ್ಟಿಕಲ್ ಗಾರ್ಡನ್ ಸಹ ನಿರ್ಮಾಣ ಮಾಡುತ್ತಿದ್ದಾರೆ. ಈ ಉದ್ಯಾನ ಮಾಡಲು ಅವರು ಬಳಸುವುದು ಪ್ಲಾಸ್ಟಿಕ್ ತ್ಯಾಜ್ಯಗಳನ್ನು. ನಾವು ಕುಡಿದು ಬಿಸಾಡಿದ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ಅವರು ಸುಂದರವಾದ ವರ್ಟಿಕಲ್ ಗಾರ್ಡನ್ ನಿರ್ಮಾಣ ಮಾಡುತ್ತಾರೆ. ವರ್ಟಿಕಲ್ ಗಾರ್ಡನ್ ಎಂದರೆ ಒಂದು ರೀತಿಯಲ್ಲಿ ಗೋಡೆ ಉದ್ಯಾನವನ ಎಂದು ಹೇಳಬಹುದೇನೋ? ಏಕೆಂದರೆ ಈ ವಿಧಾನದಲ್ಲಿ ಪುಟ್ಟ ಪುಟ್ಟ ಗಿಡಗಳನ್ನು ದೊಡ್ಡ ದೊಡ್ದ ಕಟ್ಟಡಗಳ ಹೊರಾಂಗಣ ಸುತ್ತ ಇರುವಂತೆ ನಿರ್ಮಿಸುತ್ತಾರೆ. ಈ ಗಿಡಗಳನ್ನು ಪುಟ್ಟ ಕುಂಡದಲ್ಲಿ ನಿರ್ಮಿಸಿ ಗೋಡೆಯ ಸುತ್ತ ಲಗತ್ತಿಸುತ್ತಾರೆ. ದೊಡ್ಡ ದೊಡ್ದ ಕಟ್ಟಡಗಳ ಆವರಣದ ರಕ್ಷಣಾ ಗೋಡೆಗಳಲ್ಲೂ ಇದೇ ರೀತಿ ಉದ್ಯಾನವನ್ನು ಬೆಳೆಸುತ್ತಾರೆ. ಈ ಮೂಲಕ ಸಾವಿರಾರು ಸಸಿಗಳನ್ನು ಕಟ್ಟಡದ ಗೋಡೆಗಳಲ್ಲಿ, ರಕ್ಷಣಾ ಗೋಡೆಗಳಲ್ಲಿ ಲಗತ್ತಿಸುತ್ತಾ ಹೋಗಬಹುದು. ಇದರಿಂದ ಕಟ್ಟಡಗಳು ಸೌಂದರ್ಯಯುತವಾಗಿಯೂ, ಪರಿಸರವು ಆರೋಗ್ಯದಾಯಕವಾಗಿಯೂ ಬದಲಾಗುತ್ತಾ ಹೋಗುತ್ತದೆ. ಇದೆಲ್ಲಾ ಯೋಚನೆ ಮಾಡಲು ಇವರಿಗೆ ಪ್ರೇರಣೆಯಾದ ಅಂಶವಾದರೂ ಏನು?
ರೋಹಿತ್ ಮೆಹ್ರಾ ಅವರೇ ಹೇಳುವಂತೆ “ನಾನು ೨೦೦೪ರ ಭಾರತೀಯ ರೆವೆನ್ಯೂ ಸರ್ವಿಸ್ (IRS) ನ ಅಧಿಕಾರಿಯಾಗಿದ್ದೆ. ಪಂಜಾಬ್ ರಾಜ್ಯದಲ್ಲಿ ೨೦೧೭-೧೮ರಲ್ಲಿ ನಮ್ಮ ಮಕ್ಕಳ ಹೋಗುತ್ತಿದ್ದ ಶಾಲೆಗಳನ್ನು ವಾಯು ಮಾಲಿನ್ಯ ಅಧಿಕಗೊಂಡ ಕಾರಣದಿಂದಾಗಿ ಮುಚ್ಚಲಾಯಿತು. ಇದು ನನ್ನ ಕಣ್ಣು ತೆರೆಸಿತು. ನಮ್ಮ ಪರಿಸರವನ್ನು ಸಂರಕ್ಷಿಸಲು ಏನಾದರೂ ಮಾಡಲೇ ಬೇಕೆಂದು ಆಲೋಚನೆ ಮಾಡತೊಡಗಿದೆ.”
ನಿಜಕ್ಕೂ ನಾವು ನಗರೀಕರಣದ ನೆಪದಲ್ಲಿ ಪ್ರತೀ ವರ್ಷ ಸಾವಿರಾರು ಮರಗಳನ್ನು ಕಡಿಯುತ್ತೇವೆ. ಮರಗಳ ಹಸಿರು ಕಾಡುಗಳನ್ನು ಕಡಿದು ಬೂದಿ ಬಣ್ಣದ ಕಾಂಕ್ರೀಟ್ ಕಾಡುಗಳನ್ನು ನಿರ್ಮಾಣ ಮಾಡುತ್ತೇವೆ. ಇದರಿಂದ ಪ್ರತೀ ವರ್ಷ ಸರಿಯಾದ ಪ್ರಮಾಣದಲ್ಲಿ ಮಳೆ ಬರುವುದಿಲ್ಲ, ಸ್ವಚ್ಛ ಗಾಳಿ ಉಸಿರಾಡಲು ದೊರೆಯುವುದಿಲ್ಲ, ಅಸ್ತಮಾದಂತಹ ರೋಗಗಳು ಅಧಿಕವಾಗುತ್ತಿದೆ ಎಂಬೆಲ್ಲಾ ಸಮಸ್ಯೆಗಳನ್ನು ಹೇಳಿಕೊಳ್ಳುತ್ತೇವೆ. ಆದರೆ ಅದಕ್ಕೆ ಪರಿಹಾರವನ್ನು ಹುಡುಕಲು ಹೋಗುವುದಿಲ್ಲ.
ರೋಹಿತ್ ಮೆಹ್ರಾ ಅವರು ಒಮ್ಮೆ ಸಿಂಗಾಪುರಕ್ಕೆ ಹೋಗಿದ್ದರು. ಅಲ್ಲಿ ಅವರು ವರ್ಟಿಕಲ್ ಗಾರ್ಡನ್ ಯೋಜನೆಯ ಬಗ್ಗೆ ತಿಳಿದುಕೊಂಡರು. ಸಿಂಗಾಪುರದ ಹಲವಾರು ಕಟ್ಟಡ ಅಥವಾ ಆವರಣದ ಗೋಡೆಗಳ ಮೇಲೆ ಪುಟ್ಟ ಪುಟ್ಟ ಕುಂಡದಲ್ಲಿ ಗಿಡಗಳನ್ನು ಅಳವಡಿಕೆ ಮಾಡಿರುವುದನ್ನು ಕಂಡರು. ಇದರಿಂದಾಗಿ ನಗರದ ಸೌಂದರ್ಯವೂ ಹೆಚ್ಚುವುದು ಮತ್ತು ಗಾಳಿಯಲ್ಲಿನ ಆಮ್ಲಜನಕದ ಪ್ರಮಾಣವೂ ಅಧಿಕಗೊಳ್ಳುವುದೆಂದು ಅರಿತರು.
ಭಾರತಕ್ಕೆ ಮರಳಿದ ರೋಹಿತ್ ಮೆಹ್ರಾ ಅವರು ಈ ಯೋಜನೆಯ ಬಗ್ಗೆ ತಮ್ಮ ಪತ್ನಿಯಾದ ಗೀತಾಂಜಲಿ ಜೊತೆ ಹೇಳಿದರು. “ರೋಹಿತ್ ಅವರ ಯೋಚನೆ ನನಗೆ ಬಹಳ ಹಿಡಿಸಿತು. ಆದರೆ ಅದಕ್ಕೆ ಬಹಳ ತಯಾರಿ ಬೇಕಿತ್ತು. ಮೊದಲಿಗೆ ನಾವು ಕುಂಡಗಳನ್ನು ತಯಾರಿಸುವವರನ್ನು ಭೇಟಿಯಾದೆವು. ಅವರೆಲ್ಲಾ ಪ್ಲಾಸ್ಟಿಕ್ ಕುಂಡಗಳನ್ನು ಖರೀದಿಸಲು ಒತ್ತಾಯ ಮಾಡಿದರು. ಆದರೆ ಈ ಯೋಜನೆಗೆ ಸಾವಿರಾರು ಕುಂಡಗಳು ಅಗತ್ಯವಿದ್ದುದರಿಂದ ಮತ್ತು ಇದಕ್ಕೆ ತಗಲುವ ದುಬಾರಿ ದರವನ್ನು ಗಮನಿಸಿ ನಾವು ಬೇರೆ ಪರ್ಯಾಯ ಯೋಜನೆಗಳ ಬಗ್ಗೆ ಆಲೋಚನೆ ಮಾಡಿದೆವು. ಆಗ ಹೊಳೆದದ್ದೇ ಪ್ಲಾಸ್ಟಿಕ್ ಬಾಟಲಿಗಳು. ಜನರು ಕುಡಿದು ಬಿಸಾಕುವ ಬಾಟಲಿಗಳು ನಮಗೆ ತುಂಬಾ ಸುಲಭವಾಗಿ ದೊರೆಯುವ ಸಾಧ್ಯತೆ ಇತ್ತು. ಅದಕ್ಕೆ ಗುಜುರಿಯವರ ಬಳಿ ಹೆಚ್ಚಿಗೆ ಬೆಲೆಯೂ ಇರುತ್ತಿರಲಿಲ್ಲ. ಹೋಟೇಲ್ ಹಾಗೂ ರೆಸಾರ್ಟ್ ಗಳಲ್ಲೂ ಸಿಗುತ್ತಿತ್ತು. ನಾವು ಅದನ್ನೇ ತೆಗೆದುಕೊಂಡು ಬಂದು ನಮಗೆ ಬೇಕಾದ ರೀತಿಯಲ್ಲಿ ಕತ್ತರಿಸಿ ಗೋಡೆಗೆ ಅಳವಡಿಸುತ್ತಾ ಬಂದೆವು" ಎನ್ನುತ್ತಾರೆ ಗೀತಾಂಜಲಿ ಮೆಹ್ರಾ.
ಗೀತಾಂಜಲಿಯವರ ಮಾತು ನೂರಕ್ಕೆ ನೂರು ಸತ್ಯ. ಪ್ಲಾಸ್ಟಿಕ್ ಬಾಟಲಿಗಳು ನಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ ಎಲ್ಲೆಂದರಲ್ಲಿ ಹರಡಿಕೊಂಡಿರುತ್ತದೆ. ನೀರು, ಸೋಡಾ, ಕೋಕ್ ತುಂಬಿರುವ ಬಾಟಲಿಗಳು ಖಾಲಿಯಾಗುತ್ತಲೇ ರಸ್ತೆ ಬದಿಗಳಲ್ಲಿ, ಕಸದ ತೊಟ್ಟಿಗಳಲ್ಲಿ ಬಿದ್ದುಕೊಂಡಿರುತ್ತವೆ. ಇವುಗಳು ನೂರಾರು ವರ್ಷಗಳಾದರೂ ಮಣ್ಣಿನಲ್ಲಿ ಕರಗುವುದಿಲ್ಲ. ಹೀಗೆ ಎಲ್ಲೆಡೆ ತುಂಬಿಕೊಂಡ ಬಾಟಲಿಗಳ ತ್ಯಾಜ್ಯದಿಂದ ನಗರದ ಸೌಂದರ್ಯವೂ ಕೆಡುತ್ತದೆ. ಈ ಕಾರಣದಿಂದ ಮೆಹ್ರಾ ದಂಪತಿಗಳು ಈ ರೀತಿಯ ಬಾಟಲಿಗಳನ್ನೇ ತಮ್ಮ ವರ್ಟಿಕಲ್ ಗಾರ್ಡನ್ ತಯಾರಿಕೆಗೆ ಬಳಸಿಕೊಂಡರು.
ಇವರು ಹಲವಾರು ಹೋಟೇಲ್ ಗಳು, ರೆಸಾರ್ಟ್ ಗಳನ್ನು ಸಂಪರ್ಕಿಸಿ ಅವರಲ್ಲಿ ಉಪಯೋಗವಾಗುವ ಬಾಟಲಿಗಳನ್ನು ತಮಗೆ ನೀಡಲು ಮನವಿ ಮಾಡಿಕೊಂಡರು. ಇವರ ಸದುದ್ದೇಶವನ್ನು ತಿಳಿದ ಅವರೂ ಸಂತೋಷದಿಂದಲೇ ಇವರಿಗೆ ಬಾಟಲಿಗಳನ್ನು ನೀಡಿದರು. ಬಾಟಲಿಗಳನ್ನು ಜೋಡಿಸುವ ಸಮಸ್ಯೆ ಎದುರಾಯಿತು. ಜೋಡನೆಯಾದ ಬಳಿಕ ಬಾಟಲಿನಲ್ಲಿ ನೆಟ್ಟ ಗಿಡಗಳಿಗೆ ನೀರು ಪೂರೈಕೆಯ ಸಮಸ್ಯೆ ಇತ್ತು. ಅವೆಲ್ಲವನ್ನೂ ಈ ದಂಪತಿಗಳು ನಿವಾರಣೆ ಮಾಡಿಕೊಂಡರು. ಬಾಟಲಿಯನ್ನು ಒಂದರ ಒಳಗೊಂದು ಬರುವಂತೆ ಕತ್ತರಿಸಿ ಜೋಡನೆ ಮಾಡಿ ಗೋಡೆಗೆ ಲಂಬವಾಗಿ ಅಳವಡಿಸಿದರು. ಮೇಲೆ ಇರುವ ಬಾಟಲಿಗೆ ಡ್ರಿಪ್ ಪೈಪ್ (ಹನಿ ನೀರಾವರಿ ವಿಧಾನ) ಜೋಡಣೆ ಮಾಡಿದರು. ಇದರಿಂದ ನೀರು ಹೆಚ್ಚು ವ್ಯರ್ಥವಾಗದೇ ಮೇಲಿನ ಬಾಟಲಿಯಿಂದ ಕೆಳಗಿನ ಬಾಟಲಿಗೆ ಹರಿಯುತ್ತಿತ್ತು. ಕೇವಲ ಮೂರು ನಿಮಿಷಗಳ ಒಳಗಾಗಿ ಮೇಲಿನಿಂದ ನೀರು ಕೆಳಗಡೆಗೆ ಇಳಿಯುತ್ತಿತ್ತು. ಇದರಿಂದಾಗಿ ಶೇ.೯೦ ರಷ್ಟು ನೀರಿನ ಉಳಿತಾಯವಾಗುತ್ತಿತ್ತು.
ಪಂಜಾಬಿನ ಲುಧಿಯಾನಾ ನಗರದಲ್ಲಿ ಅತ್ಯಂತ ಅಧಿಕ ಪ್ರಮಾಣದಲ್ಲಿದ್ದ ವಾಯು ಮಾಲಿನ್ಯದ ಪ್ರಮಾಣವು ಇವರು ಗಿಡಗಳನ್ನು ಅಳವಡಿಸಿದ ಪ್ರದೇಶದಲ್ಲಿ ತುಂಬಾನೇ ಕಮ್ಮಿ ಇತ್ತು. ಈ ಮೆಹ್ರಾ ದಂಪತಿಗಳು ಈಗಾಗಲೇ ಸುಮಾರು ಹತ್ತು ರಾಜ್ಯಗಳಲ್ಲಿ ತಮ್ಮ ಈ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಇವರು ೭ ಲಕ್ಷಕ್ಕೂ ಅಧಿಕ ಪ್ಲಾಸ್ಟಿಕ್ ಬಾಟಲಿಗಳನ್ನು ಉಪಯೋಗಿಸಿ ೫೦೦ ಕ್ಕೂ ಅಧಿಕ ವರ್ಟಿಕಲ್ ಗಾರ್ಡನ್ ನಿರ್ಮಾಣ ಮಾಡಿದ್ದಾರೆ. ಮೆಹ್ರಾ ದಂಪತಿಗಳ ಯೋಜನೆ ಜನ ಮನ್ನಣೆ ಪಡೆಯುತ್ತಿದ್ದಂತೆ ಹಲವಾರು ಮಂದಿ ಈ ರೀತಿಯ ಅಳವಡಿಕೆ ಮಾಡಲು ಮುಂದೆ ಬಂದರು. ಇವರನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಂಡರು.
ಹಲವಾರು ಮಂದಿ ತಾವು ಬೆಳೆಸಿದ ಗಿಡಗಳ ಬಗ್ಗೆ, ಅದಕ್ಕೆ ತಗಲುವ ರೋಗಗಳ ಬಗ್ಗೆ ಕೇಳಲು ಶುರು ಮಾಡಿದರು. ಇದನ್ನು ಗಮನಿಸಿದ ಮೆಹ್ರಾ ದಂಪತಿಗಳು ಚಂಡೀಗಢದಲ್ಲಿ ಪುಟ್ಟದಾದ ಒಂದು ಸ್ಥಳವನ್ನು ಖರೀದಿಸಿ ಅಲ್ಲಿ ದೇಶದ ಮೊದಲ ‘ಟ್ರೀ ಹಾಸ್ಪಿಟಲ್' ನಿರ್ಮಾಣ ಮಾಡಿದರು. ಅದರ ಹೆಸರು ‘ಶ್ರೀಮತಿ ಪುಷ್ಪಾ ಟ್ರೀ ಆಂಡ್ ಪ್ಲಾಂಟ್ ಹಾಸ್ಪಿಟಲ್’. ಇವರಿಬ್ಬರು ಈ ಆಸ್ಪತ್ರೆಗೆ ತಂದ ಸಸ್ಯಗಳ ಆರೈಕೆಯನ್ನು ಮಾಡುತ್ತಾರೆ. ಗಿಡಗಳಿದ್ದ ಜಾಗಕ್ಕೇ ತೆರಳಿ ಆರೈಕೆ ಮಾಡಲು ಒಂದು ಆಂಬುಲೆನ್ಸ್ ತಯಾರು ಮಾಡಿದ್ದಾರೆ. ಈ ಆಂಬುಲೆನ್ಸ್ ಇ-ರಿಕ್ಷಾ ಆಗಿದ್ದು, ಇಲ್ಲೂ ಪರಿಸರ ಸಂರಕ್ಷಣೆಯ ಕಾಳಜಿಯನ್ನು ಮರೆತಿಲ್ಲ. ಈ ವಾಹನದಲ್ಲಿ ಸಸ್ಯಗಳ ಆರೈಕೆಗೆ ಬೇಕಾದ ವಸ್ತುಗಳನ್ನು ಇಡಲಾಗಿದೆ.
ರೋಹಿತ್ ಮೆಹ್ರಾ ಅವರು ಹೇಳುವಂತೆ “ ನಾನು ಯಾವತ್ತೂ ಸಸ್ಯಗಳನ್ನು ನಮ್ಮಂತೆಯೇ ಇರುವ ಜೀವ ಇರುವ ವಸ್ತುವೆಂದೇ ಪರಿಗಣಿಸುತ್ತೇನೆ. ನಮ್ಮಲ್ಲಿ ಮನುಷ್ಯರಿಗೆ ಹಾಗೂ ಪ್ರಾಣಿಗಳಿಗೆ ಆಸ್ಪತ್ರೆಗಳಿವೆ. ಆದರೆ ಸಸ್ಯಗಳಿಗೆ ಏಕಿಲ್ಲ? ಈ ಕಾರಣದಿಂದಲೇ ನಾವು ‘ಟ್ರೀ ಹಾಸ್ಪಿಟಲ್' ಪ್ರಾರಂಭ ಮಾಡಿದೆವು. ಪರಿಸರ ರಕ್ಷಣೆ ಮಾಡಲು, ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸಲು ಸಾಧ್ಯವಿರುವುದು ಗಿಡ ಮರಗಳಿಗೆ ಮಾತ್ರ. ಆದುದರಿಂದ ಅವುಗಳನ್ನು ಎಷ್ಟು ಸಾಧ್ಯವಿದೆಯೋ ಅಷ್ಟು ಉಳಿಸೋಣ ಮತ್ತು ಬೆಳೆಸೋಣ".
ರೋಹಿತ್ ಮೆಹ್ರಾ ಮತ್ತು ಗೀತಾಂಜಲಿ ಮೆಹ್ರಾ ಅವರಿಗೆ ದೇಶದ ಪ್ರತಿಯೊಂದು ಊರಿನಲ್ಲಿ ಒಂದು ಟ್ರೀ ಹಾಸ್ಪಿಟಲ್ ಇರಬೇಕೆಂದು ಕನಸಿದೆ. ಈ ಕನಸಿಗೆ ನಾವು ಬೆಂಬಲ ನೀಡಬೇಕಾಗಿದೆ. ಗಿಡ ಮರಗಳು ಉಳಿದರೆ ಮಾತ್ರ ಜೀವ ಸಂಕುಲ ಉಳಿದೀತು ಅಲ್ಲವೇ?
(ಆಧಾರ)
ಚಿತ್ರದಲ್ಲಿ: ರೋಹಿತ್ ಹಾಗೂ ಗೀತಾಂಜಲಿ ಮೆಹ್ರಾ ಮತ್ತು ಅವರು ನಿರ್ಮಾಣ ಮಾಡಿದ ವರ್ಟಿಕಲ್ ಗಾರ್ಡನ್
೨. ತಮ್ಮ ಟ್ರೀ ಹಾಸ್ಪಿಟಲ್ ನಲ್ಲಿ ಮೆಹ್ರಾ ದಂಪತಿಗಳು
ಚಿತ್ರ ಕೃಪೆ: ಅಂತರ್ಜಾಲ ತಾಣಗಳು