ಸಸ್ಯಬೆಳವಣಿಗೆ ಮತ್ತು ಇಳುವರಿ ಮೇಲೆ ಸೂರ್ಯನ ಬೆಳಕಿನ ಪರಿಣಾಮ
ಸೂರ್ಯನ ಬೆಳಕು ಪ್ರತಿಯೊಂದು ಸಸ್ಯಕ್ಕೂ ಅತೀ ಅಗತ್ಯ. ಸಸ್ಯಗಳು ತಮ್ಮ ಆಹಾರವನ್ನು ಉತ್ಪಾದಿಸಿಕೊಳ್ಳುವುದೇ ಸೂರ್ಯನ ಬೆಳಕಿನಿಂದ. ಈ ಬೆಳಕು ಸಸ್ಯದ ಬೆಳವಣಿಗೆ ಹಾಗೂ ಇಳುವರಿಯ ಮೇಲೂ ಅಪಾರ ಪರಿಣಾಮವನ್ನು ಬೀರುತ್ತದೆ. ಕಾಫಿಯ ನಾಡಾದ ಮಲೆನಾಡಿನ ಸಕಲೇಶಪುರದ ಸಮೀಪ ಕೆಲವರು ಏಕ ಬೆಳೆಯಾಗಿ (ಮೋನೋ ಕಲ್ಚರ್) ಕಾಫಿಯನ್ನು ಬೆಳೆಯುತ್ತಿದ್ದಾರೆ. ಈ ತನಕ ನಾವು ಕಾಫಿಯನ್ನು ಕಾಡು ಮರಗಳ ನೆರಳಿನ ಅಡಿಯಲ್ಲಿ ಬೆಳೆಸಿದವರು. ಆದರೆ ಕಾಫಿ ಮುಂತಾದ ಕೆಲವು ಬೆಳೆಗಳನ್ನು ಬೆಳೆಸುವ ಬೇರೆ ದೇಶಗಳಲ್ಲಿ ಇದನ್ನು ನೇರವಾಗಿ ಬಯಲಿನಲ್ಲಿ ನಾಟಿ ಮಾಡಿ ಗರಿಷ್ಟ ಇಳುವರಿ ಪಡೆಯುತ್ತಾರೆ. ಈ ತಂತ್ರಜ್ಞಾನದಲ್ಲಿ ಗರಿಷ್ಟ ಪ್ರಮಾಣದಲ್ಲಿ ಸೂರ್ಯನ ಬೆಳಕನ್ನು ಹಿಡಿದಿಟ್ಟು (ಟ್ರಾಪ್ ಮಾಡಿ), ನಾವು ಪಡೆಯುವ ಇಳುವರಿಗಿಂತ ದುಪ್ಪಟ್ಟು ಇಳುವರಿ ಪಡೆಯುತ್ತಾರೆ.
ಬೆಳೆ ಬೆಳೆಸುವಾಗ, ಉತ್ತಮ ಬೀಜ, ಹೊಲದ ಸಿದ್ದತೆ, ಗೊಬ್ಬರ, ಸಮರ್ಪಕ ಬೇಸಾಯ ಪದ್ದತಿ ಇವೆಲ್ಲಕ್ಕಿಂತ ಪ್ರಾಮುಖ್ಯವಾದುದು ಬೆಳಕು. ಸೂರ್ಯನ ಮೂಲಕ ಭೂಮಿಗೆ ಉಚಿತವಾಗಿ ದೊರೆಯುವ ಬೆಳಕು ಎಲ್ಲಾ ಜೀವ ರಾಶಿಗಳಿಗೂ ಜೀವ ಚೈತನ್ಯ ಕೊಡುವ ಪ್ರಾಮುಖ್ಯ ಆಹಾರ. ಇದನ್ನು ಪ್ರತೀಯೊಬ್ಬ ಕೃಷಿಕನೂ ತಿಳಿಯಬೇಕಿದೆ.
ನಾವೆಲ್ಲಾ ಶಾಲೆಯಲ್ಲಿ ಓದುವಾಗ ಸೂರ್ಯನ ಬೆಳಕು ಮತ್ತು ಇದರಿಂದ ಸಸ್ಯ ಬೆಳವಣಿಗೆ ಬಗ್ಗೆ ಸಾಕಷ್ಟು ಓದಿದವರು. ಸೂರ್ಯನ ಬೆಳಕಿನ ಸಹಾಯದಿಂದ ಸಸ್ಯಗಳು ಆಹಾರೋತ್ಪಾದನೆ ಕ್ರಿಯೆ (ದ್ಯುತಿಸಂಸ್ಲೇಷಣೆ) ನಡೆಸಿ ಆರೋಗ್ಯವಾಗಿ ಬದುಕುತ್ತವೆ. ಯಾವ ದಿಕ್ಕಿನಲ್ಲಿ ಸೂರ್ಯನ ಬೆಳಕು ದೊರೆಯುತ್ತದೆಯೋ ಆ ದಿಕ್ಕಿಗೆ ಸಸ್ಯದ ಬೆಳವಣಿಗೆ, ಬೇರಿನ ಬೆಳವಣಿಗೆ ಹೆಚ್ಚು ಇರುತ್ತದೆ.
ಕೃಷಿಕರಾದವರು ಬೆಳೆ ಪೋಷಣೆ ಮತ್ತು ನಿರ್ವಹಣೆಗೆ ನೀಡಿದಷ್ಟು ಮಹತ್ವವನ್ನು ಬೆಳಕಿಗೆ ನೀಡುವುದಿಲ್ಲ ಎಂಬುದು ಸತ್ಯ ಸಂಗತಿ. ಪ್ರತೀಯೊಂದು ಬೆಳೆಗೂ ಇಂತಿಷ್ಟೇ ಪ್ರಮಾಣದ ಬೆಳಕು ಬೇಕು ಎಂದು ಅಂದಾಜು ಮಾಡಲಾಗಿದೆ. ಅದನ್ನು ಲಕ್ಸ್ ಎಂಬ ಮಾಪನದಲ್ಲಿ ಅಳೆಯಲಾಗುತ್ತದೆ. ಕೆಲವು ಹೆಚ್ಚು ಬೆಳಕನ್ನು ಅಪೇಕ್ಷಿಸಿದರೆ ಮತ್ತೆ ಕೆಲವು ಆಂಶಿಕ ಬೆಳಕನ್ನು ಬಯಸುತ್ತವೆ. ಆದಾಗ್ಯೂ ಹೆಚ್ಚಿನೆಲ್ಲಾ ಸಸ್ಯಗಳು ಅಧಿಕ ಪ್ರಮಾಣದಲ್ಲಿ ಬೆಳಕನ್ನು ಬಯಸುತ್ತವೆ. ಬಿಸಿಲಿನ ಕೊರತೆಯಲ್ಲಿ ಬೆಳೆದ ಯಾವುದೇ ಸಸ್ಯವೂ ಆರೋಗ್ಯವಾಗಿರುವುದಿಲ್ಲ. ಸಸ್ಯಗಳಲ್ಲದೆ ಮನುಷ್ಯನಿಗೂ ಆರೋಗ್ಯಕರ ಬೆಳವಣಿಗೆಗೆ ಸೂರ್ಯನ ಬೆಳಕು ಅಗತ್ಯವಿದೆ.
ನಾವು ಕೆಲವೊಂದು ಬೆಳೆಯನ್ನು ಆಂಶಿಕ ಬಿಸಿಲು ಬಯಸುವ ಬೆಳೆಯೆಂದು ಪರಿಗಣಿಸಿ ಮಿಶ್ರ ಬೆಳೆಯಾಗಿ ಬೆಳೆಸುತ್ತೇವೆ. ಮುಖ್ಯವಾಗಿ ಕಾಫೀ, ಕರಿಮೆಣಸು, ಏಲಕ್ಕಿ, ಬಾಳೆ, ಕೊಕ್ಕೋ ಮುಂತಾದವುಗಳು. ಇವುಗಳು ನೇರ ಬಿಸಿಲನ್ನು ಅತಿಯಾಗಿ ಅಪೇಕ್ಷಿಸದೇ ಇದ್ದರೂ ಸಹ ಹೆಚ್ಚಿನ ಬಿಸಿಲನ್ನು ಬಯಸುತ್ತವೆ. ನಮ್ಮ ಹೆಚ್ಚಿನ ಬೆಳೆ ಕ್ರಮ ನಮ್ಮ ಹಿರಿಯರು ಮಾಡುತ್ತಿದ್ದ ವಿಧಾನಗಳನ್ನು ಯಥಾವತ್ ಅನುಸರಿಸಿ ಮುಂದುವರಿಯುವುದಾಗಿರುತ್ತದೆ. ಇದರಲ್ಲಿ ತಾರ್ಕಿಕ ಚಿಂತನೆ ಮಾಡಿ ಬದಲಾವಣೆ ಮಾಡುವ ಗೋಜಿಗೇ ನಾವು ಹೋಗುವುದಿಲ್ಲ.
ಸೂರ್ಯನ ಬಿಸಿಲು ಎಲ್ಲಾ ನಮೂನೆಯ ಬೆಳೆಗಳ ಆರೋಗ್ಯಕ್ಕೆ, ಇಳುವರಿಗೆ ಅತೀ ಅಗತ್ಯವಾಗಿದ್ದು, ನಾವು ನೆರಳಲ್ಲಿ ಮಾತ್ರವೇ ಬೆಳೆಯುವುದೆಂದು ತಿಳಿದಿರುವ ಬೆಳೆಗಳಿಗೂ ಸಹ ಪೂರ್ಣ ಸೂರ್ಯನ ಬೆಳಕು ದೊರೆತಲ್ಲಿ ಇಳುವರಿ ಗಣನೀಯವಾಗಿ ಹೆಚ್ಚಳವಾಗುವುದು. ಉದಾಹರಣೆಗೆ ಹೇಳಬೇಕೆಂದರೆ ನಾವು ಮಿಶ್ರ ಬೆಳೆಯಾಗಿ ಬೆಳೆಯುವ ಕರಿಮೆಣಸು, ಕಾಫಿ. ಇದೇ ಬೆಳೆಯನ್ನು ಇತರ ದೇಶಗಳಲ್ಲಿ ಮುಖ್ಯ ಬೆಳೆಯಾಗಿ ಪೂರ್ಣ ಬಿಸಿಲಿನಲ್ಲಿ ಬೆಳೆಯುತ್ತಾರೆ. ಮೋನೋ ಕಲ್ಚರ್ ಎಂಬ ಈ ಬೆಳೆ ಕ್ರಮದಲ್ಲಿ ಇವರು ನಾವು ೪ ಗಿಡದಲ್ಲಿ ಪಡೆಯುವ ಇಳುವರಿಯನ್ನು ೧ ಗಿಡದಲ್ಲಿ ಉತ್ಪಾದಿಸುತ್ತಾರೆ. ಬ್ರೆಜಿಲ್ ದೇಶದವರು ಒಂದು ಕಾಫೀ ಗಿಡದಲ್ಲಿ ಸರಾಸರಿ ೧೦ ಕಿಲೋಗೂ ಹೆಚ್ಚು ಕಾಫಿ ಬೀಜವನ್ನು ಪಡೆದರೆ, ನಾವು ಸರಾಸರಿ ೩ ಕಿಲೋ ಪಡೆಯುತ್ತೇವೆ. ಅದೇ ರೀತಿಯಲ್ಲಿ ಕರಿಮೆಣಸಿನಲ್ಲೂ ಒಂದು ಗಿಡದಲ್ಲಿ ಸರಾಸರಿ ೫ ಕಿಲೋ ಒಣ ಮೆಣಸಿನ ಇಳುವರಿ ಪಡೆಯುತ್ತಾರೆ. ನಾವು ಸರಾಸರಿ ೧ ಕಿಲೋ ಮೀರಿಲ್ಲ. ಇದಕ್ಕೆ ಕಾರಣ ಅವರು ಅದನ್ನು ಏಕ ಬೆಳೆಯಾಗಿ ಬೆಳೆಸುವುದು. ನಾವು ಮಿಶ್ರ ಬೆಳೆಯಾಗಿ ಬೆಳೆಸುವುದು. ಏಕ ಬೆಳೆಯಾಗಿ ಬೆಳೆಸುವಾಗ ಸಸ್ಯಕ್ಕೆ ಪ್ರಕೃತಿದತ್ತವಾಗಿ ದೊರೆಯುವ ಸೂರ್ಯನ ಬೆಳಕು ಯತೇಚ್ಚವಾಗಿ ದೊರೆತು ಅದರ ಇಳುವರಿ ಕೊಡುವ ಕ್ಷಮತೆ ಹೆಚ್ಚುತ್ತದೆ. ನಾವು ಇದನ್ನು ನಮ್ಮ ತೋಟದ ಇತರ ಬೆಳೆಗಳಲ್ಲೂ ಗಮನಿಸಬಹುದು.
ಕರಿಮೆಣಸಿನ ಬೆಳೆಗೆ ಎಲ್ಲಿ ಸಾಕಷ್ಟು ಬೆಳಕು ದೊರೆಯುತ್ತದೆಯೋ ಅಲ್ಲಿ ಇಳುವರಿ ದುಪ್ಪಟ್ಟು. ಎಲ್ಲಿ ಕಡಿಮೆಯೋ ಅಲ್ಲಿ ಇಳುವರಿ ಇಲ್ಲ. ಅದೇ ರೀತಿ ಕಾಫಿಯಲ್ಲಿ, ಮರಗಸಿ, ಗೆಲ್ಲು ಕಸಿ ಮಾಡದೇ ಬಿಟ್ಟ ಸಸ್ಯ, ತೋಟದ ಮಟ್ಟದಿಂದ ಮೇಲೆ ಬೆಳೆದು ಅದಕ್ಕೆ ಬಿಸಿಲು ಗಾಳಿ ಯತೇಚ್ಚವಾಗಿ ಬಿದ್ದಲ್ಲಿ ಇತರ ಗಿಡಗಳಿಗಿಂತ ಇಳುವರಿ ಹೆಚ್ಚು ಕೊಡುತ್ತದೆ. ಏಲಕ್ಕಿಯೂ ಇದಕ್ಕೆ ಹೊರತಲ್ಲ. ತೆಂಗು, ಅಡಿಕೆ, ಮಾವು ಎಲ್ಲವೂ ಬೆಳಕು ಯತೇಚ್ಚ ಬೀಳುವಲ್ಲಿ ಇಳುವರಿ ಜಾಸ್ತಿ. ಸಸ್ಯಗಳಿಗೆ ಬರೇ ಬೆಳವಣಿಗೆಗೆ ಮತ್ತು ಇಳುವರಿಗೆ ಮಾತ್ರ ಬೆಳಕು-ಗಾಳಿ ಅವಶ್ಯಕವಲ್ಲ. ಇದು ಸಸ್ಯ ಆರೋಗ್ಯಕ್ಕೂ ಅಗತ್ಯ. ಎಲ್ಲಿ ಗಾಳಿ ಬೆಳಕು ಯತೇಚ್ಚವಾಗಿ ದೊರೆಯುವುದೋ ಅಲ್ಲಿ ರೋಗ, ಕೀಟಗಳೂ ಕಡಿಮೆ ಇರುತ್ತದೆ.
ನಾವು ಕೃಷಿ ಮಾಡುವಾಗ ಎಲ್ಲವನ್ನೂ ಗಮನಿಸುತ್ತೇವೆ. ಆದರೆ ಉಚಿತವಾಗಿ ದೊರೆಯುವ ಈ ಎರಡು ಅವಶ್ಯಕತೆಯ ಕಡೆಗೆ ಹೆಚ್ಚು ಗಮನ ನೀಡುವುದಿಲ್ಲ. ಒಂದು ಬೆಳೆ ಅದು ಯಾವುದೇ ಇರಲಿ ಅದಕ್ಕೆ ನಾಟಿ ಮಾಡಿದಾಗಿನಿಂದ ಪ್ರಾರಂಭವಾಗಿ ಇಳುವರಿ ಕೊಡುವವರೆಗೂ ಸಾಕಷ್ಟು ಬೆಳಕು ಬೇಕು. ಬೆಳಕು ದೊರೆಯುವುದರಿಂದ ಸಸ್ಯದ ಬೆಳವಣಿಗೆಯ ಗತಿ ಭಿನ್ನವಾಗಿರುತ್ತದೆ. ಬೇಗ ಮತ್ತು ಅಧಿಕ ಇಳುವರಿಯನ್ನೂ ಕೊಡುತ್ತದೆ. ಸಾಮಾನ್ಯವಾಗಿ ಹಣ್ಣಿನ ಬೆಳೆಗಳಲ್ಲಿ TSS (Total Soluble Sugar) ಅಂಶದ ಮೇಲೆ ಅದರ ರುಚಿ ನಿಂತಿರುತ್ತದೆ. TSS ಹೆಚ್ಚು ಇದ್ದರೆ ಆ ಹಣ್ಣು ಸಿಹಿ ಅಥವಾ ರುಚಿ ಹೊಂದಿರುತ್ತದೆ. ಕಡಿಮೆಯಾದರೆ ಹುಳಿ ಅಥವಾ ರುಚಿ ಉತ್ತಮವಾಗಿರುವುದಿಲ್ಲ. TSS ಅಂಶವನ್ನು ಹೆಚ್ಚು ಕಡಿಮೆ ಮಾಡುವಂತದ್ದೇ ಬೆಳಕು ಮತ್ತು ಗಾಳಿ. ಕಲ್ಲಂಗಡಿ, ಮೂಸಂಬಿ, ದ್ರಾಕ್ಷಿ, ಮಾವು, ಸೀಬೆ, ಸಪೊಟಾ, ಬಾಳೆ ಹಣ್ಣುಗಳೂ ಸಿಹಿಯಾಗಿ ರುಚಿಕಟ್ಟಾಗಿರಬೇಕಾದರೆ ಅದಕ್ಕೆ ಬೆಳಕು ಮತ್ತು ಗಾಳಿ ಯತೇಚ್ಚವಾಗಿ ದೊರೆತಿರಬೇಕು. ಯಾವುದೇ ಒಂದು ಬೆಳೆ ಪೂರ್ಣವಾಗಿ ಬಲಿತು ಪಕ್ವತೆಗೆ ಬರಲು ಸೂರ್ಯನ ಬೆಳಕು ಅತ್ಯಗತ್ಯ. ಬೆಳೆ ನಿರ್ವಹಣೆ ಎಂದು ನಾವು ಕೊಡುವ ಗೊಬ್ಬರ ಎಲ್ಲವೂ ಈ ಬೆಳಕು ಮತ್ತು ಗಾಳಿಯ ಮೇಲೆಯೇ ತನ್ನ ಫಲಿತಾಂಶವನ್ನು ಕೊಡುತ್ತದೆ.
ನಮ್ಮ ಸಾಂಪ್ರದಾಯಿಕ ಬೆಳೆ ಕ್ರಮ ಏನೇ ಇರಲಿ. ಅದು ಆ ಕಾಲಕ್ಕೆ ಸೂಕ್ತ. ಈಗ ಕಡಿಮೆ ಪ್ರದೇಶದಲ್ಲಿ ಅಧಿಕ ಇಳುವರಿ ಪಡೆಯುವುದಕ್ಕೇ ಆದ್ಯತೆ. ಪರಿಸ್ಥಿತಿಯೂ ಹಾಗೆಯೇ ಇದೆ. ಆದ ಕಾರಣ ನಾವೂ ಬದಲಾವಣೆಗೆ ಸಿದ್ದರಾಗಬೇಕಿದೆ.
ಚಿತ್ರ ಕೃಪೆ : ಅಂತರ್ಜಾಲ ತಾಣ