ಸಹಕಾರಿ ವ್ಯವಸ್ಥೆಯೊಳಗೆ ವ್ಯಾಪಾರದಿಂದ ಲಾಭವಿದೆಯೇ?

ಸಹಕಾರಿ ವ್ಯವಸ್ಥೆಯೊಳಗೆ ವ್ಯಾಪಾರದಿಂದ ಲಾಭವಿದೆಯೇ?

ಗ್ರಾಮೀಣ ಭಾಗದಲ್ಲಿ ಬಹಳಷ್ಟು ಮಂದಿ ಸಹಕಾರಿ ವ್ಯವಸ್ಥೆಯಲ್ಲಿ ತಮ್ಮ ವ್ಯವಹಾರವನ್ನು ಕೈಗೊಳ್ಳುತ್ತಾರೆ. ಹಣವನ್ನು ಠೇವಣಿಯಾಗಿ ಇಡುವುದರಿಂದ ವಾಹನ, ಕೃಷಿ, ಮನೆ ಮುಂತಾದವುಗಳಿಗೆ ಸಾಲಕ್ಕೂ ಸಹಕಾರಿ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಾರೆ. ಬಹಳಷ್ಟು ಸಹಕಾರಿ ಸಂಸ್ಥೆಗಳೂ ಉತ್ತಮ ಹಾಗೂ ನ್ಯಾಯಯುತವಾಗಿ ವ್ಯವಹಾರ ನಡೆಸಿ ತಮ್ಮ ಲಾಭಾಂಶವನ್ನು ಗ್ರಾಹಕರಿಗೆ ನೀಡುವುದರಲ್ಲಿ ಹಿಂದೆ ಬಿದ್ದಿಲ್ಲ. ಕೆಲವು ಸಹಕಾರಿ ಸಂಸ್ಥೆಗಳು ಠೇವಣಿದಾರರಿಗೆ ಉತ್ತಮ ಬಡ್ಡಿಯನ್ನೂ ನೀಡುತ್ತವೆ. ಬಹಳಷ್ಟು ವ್ಯವಹಾರಗಳು ಹಲವಾರು ಬಾರಿ ನಂಬಿಕೆಯ ಆಧಾರದಲ್ಲೇ ನಡೆದರೂ, ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.  

ಕೃಷಿ ಸಹಕಾರಿ ಸಂಘಗಳು ಪೆಟ್ರೋಲ್ ಉತ್ಪನ್ನ ಮಾರಾಟ ಮಾಡಿ ಹೆಚ್ಚಿನ ಲಾಭ ಮಾಡಿಕೊಂಡರೆ ನಮಗೆ ಈಗ ಸಿಗುತ್ತಿರುವ ಪಾಲು ಬಂಡವಾಳದ ಮೊತ್ತ ಇನ್ನೂ ಹೆಚ್ಚಾಗಲಿದೆ. ನಾವು ಯಾವುದೇ ಕಡೆ ಹೂಡಿಕೆ ಮಾಡಿದರೂ ಸಿಗದಷ್ಟು ಲಾಭ ನಮ್ಮದೇ ಬ್ಯಾಂಕಿನ ಶೇರು ಬಂಡವಾಳದ ಮೂಲಕ ಸಿಗಲಿದೆ. ನಮ್ಮೂರಿನ ಸೊಸೈಟಿಯಲ್ಲಿ ಲಾಭ ಹೆಚ್ಚಾದರೆ ಅದರಿಂದ ನಮಗೇ ಭಾರೀ ಲಾಭ ಅಲ್ಲವೇ?

ಭಾರತ ಸರಕಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರೀ ಸಂಘಗಳು (PACS Primary agricultural co operative society) ತಮ್ಮ ವ್ಯವಹಾರ ಕ್ಷೇತ್ರ ವಿಸ್ತರಿಸುವರೇ ಅನುಕೂಲವಾಗುವಂತೆ ಪೆಟ್ರೋಲಿಯಂ ಉತ್ಪನ್ನ ಮಾರಾಟ, ಆಸ್ಪತ್ರೆ, ಪ್ರವಾಸೋಧ್ಯಮ, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಅನುಕೂಲವಾಗುವಂತೆ ನಿಬಂಧನೆಗಳನ್ನು ತಿದ್ದುಪಡಿ ಮಾಡಹೊರಟಿದೆ. ಇನ್ನು ಮುಂದೆ ತಮ್ಮ ನಿರ್ಧರಿತ ಕಾರ್ಯಕ್ಷೇತ್ರವಲ್ಲದೆ ನಮ್ಮೂರಿನ ಸಹಕಾರೀ ಬ್ಯಾಂಕುಗಳು ಪೆಟ್ರೋಲ್ ಪಂಪೂ ನಡೆಸಬಹುದು. ಇಂಜಿನ್ ಆಯಿಲ್ ಹಾಗೆಯೇ ಇನ್ನಿತರ ಪೆಟ್ರೋಲಿಯಂ ಉತ್ಪನ್ನವನ್ನೂ ಮಾರಾಟ ಸಹ ಮಾಡಬಹುದು. ಸಹಕಾರೀ ಸಂಘದ ವತಿಯಿಂದ ಆಸ್ಪತ್ರೆ ತೆರೆಯಬಹುದು. ಶಾಲೆ ಕಾಲೇಜು ಸಹ ಪ್ರಾರಂಭಿಸಬಹುದು. ಇದು ಸದಸ್ಯ ರೈತರಿಗೆ ಭಾರೀ ಲಾಭ ತಂದು ಕೊಡುತ್ತದೆ.

ಕೆಲವು ಉತ್ತಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಈಗ ವಾರ್ಷಿಕವಾಗಿ ಸದಸ್ಯರಿಗೆ ೧೦-೧೫ % ಲಾಭಾಂಶ ಕೊಡುತ್ತವೆ. ಒಂದು ವೇಳೆ ಈ ಸೊಸೈಟಿಗಳು ಈಗಿನ ವ್ಯವಹಾರವನ್ನು ದುಪ್ಪಟ್ಟು ಮಾಡಿದರೆ ಅದರಲ್ಲಿ ಹೆಚ್ಚುವರಿ ಲಾಭವಾದರೆ ಇದರಿಂದ ಸದಸ್ಯರಿಗೆ ಲಾಭವೂ ಹೆಚ್ಚಾಗುತ್ತದೆ. ಪ್ರತಿಯೊಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕುಗಳಲ್ಲಿ ರೈತರು ೧-೨-೩ ಲಕ್ಷದಂತೆ ಬೆಳೆ ಸಾಲ ಪಡೆದುರುತ್ತಾರೆ. ಬೆಳೆ ಸಾಲದ ಮೊತ್ತಕ್ಕನುಗುಣವಾಗಿ ೧೦% ಪಾಲು ಬಂಡವಾಳವನ್ನು ಹೊಂದಿರುತ್ತಾರೆ. ಇದಕ್ಕೆಲ್ಲಾ ಈಗ ಸರಿಸುಮಾರು ೧೦% ಕ್ಕೂ ಹೆಚ್ಚು ಲಾಭಾಂಶ ಸಿಗುತ್ತಿದ್ದು, ಇನ್ನು ಮುಂದೆ ನಮ್ಮೂರಿನ ಸೊಸೈಟಿಗಳು ಪೆಟ್ರೋಲ್ ಪಂಪ್ ಮಾಡಿ, ಆಸ್ಪತ್ರೆ ಮಾಡಿ, ಶಾಲೆ ಮಾಡಿ ಹೆಚ್ಚು ಹೆಚ್ಚುಲಾಭ ಮಾಡಿದರೆ ಖಂಡಿತವಾಗಿಯೂ ನಮಗೆಲ್ಲಾ ೨೦% ಕ್ಕೂ ಹೆಚ್ಚು ಲಾಭಾಂಶ ದೊರೆಯಲಿದೆ. ನಮ್ಮದೇ ಊರಿನ ಸೊಸೈಟಿ ಅದಕ್ಕೆ ಎಷ್ಟು ಲಾಭವಾದರೂ ಅದರ ಪ್ರಯೋಜನ ನಮಗೆ ತಾನೇ?.

ಗ್ರಾಮೀಣ ಪ್ರದೇಶಗಳಲ್ಲಿ ಸಹಕಾರ ಬ್ಯಾಂಕಿಂಗ್ ವ್ಯವಸ್ಥೆಗಳು ಬಂದ ತರುವಾಯ ಜನಸಾಮಾನ್ಯರಿಗೆ ಬ್ಯಾಂಕಿಂಗ್ ವ್ಯವಹಾರದ ತುಂಬಾ ಸರಳವಾಯಿತು. ಸಹಕಾರಿ ಸಂಘಗಳು ಎಂಬ ವ್ಯವಸ್ಥೆ ಪ್ರಾರಂಭವಾಗಿ ೧೧೦ ವರ್ಷಗಳಾಗಿರಬಹುದು. (Kanjivaram co operative society 1904 Madras) ಮೊದಲ ಸಹಕಾರಿ ಚಳವಳಿ ಕರ್ನಾಟಕದ ಗದಗದ ಕನ್ನಗೇನಹಳ್ಳಿಯಿಂದ ೧೯೦೫ ರಲ್ಲಿ ಪ್ರಾರಂಭವಾಯಿತು. ಆ ನಂತರ ಅಲ್ಲಲ್ಲಿ ಸಹಕಾರಿ ಸಂಘಗಳು ಪ್ರಾರಂಭವಾದವು. ಉತ್ತರಕರ್ನಾಟಕ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ೧೯೨೫-೨೬ರಲ್ಲಿ ಹಲವಾರು ಸಹಕಾರ ಸಂಘಗಳು ಸ್ಥಾಪಿತವಾದವು. ಕೆಲವೇ ವರ್ಷಗಳಲ್ಲಿ ಭಾರತದ ಬಹುತೇಕ ಹಳ್ಳಿಗಳಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ತೆರೆಯಲ್ಪಟ್ಟು ಮಹಾನ್ ಕ್ರಾಂತಿಯೇ ಆಯಿತು. ಸಹಕಾರ ಸಂಘಗಳೆಂದರೆ ನಮ್ಮ ಮನೆ ವ್ಯವಸ್ಥೆಯಂತೇ ಎಂಬ ಭಾವನೆ ಎಲ್ಲಾ ಸದಸ್ಯರಲ್ಲಿ ಬೆಳೆಯಿತು. ಸ್ಥಳೀಯರೇ ನಡೆಸುವ ವ್ಯವಸ್ಥೆಯಾದ ಕಾರಣ ಅದಕ್ಕೆ ವಿಶೇಷ ಸ್ಥಾನಮಾನವೂ ಇದೆ.

ಭಾರತ ಸರಕಾರದ ಸಹಕಾರ ಮಂತ್ರಾಲಯವು ಈ ಬಗ್ಗೆ ಮಾದರಿ ಬೈಲಾ ತಯಾರಿಸಿದ್ದು, ರಾಜ್ಯ ಸರಕಾರಗಳ, ಸಾರ್ವಜನಿಕರ ಸಲಹೆ ಸೂಚನೆಗಳನ್ನು ಆಹ್ವಾನಿಸಿತ್ತು. ಜುಲೈ ೧೯ ರ ಒಳಗೆ ತಮ್ಮ ಸಲಹೆಗಳನ್ನು ನೀಡುವಂತೆ ಸೂಚಿಸಲಾಗಿತ್ತು. ರಾಜ್ಯ ಸರಕಾರಗಳು ಇದಕ್ಕೆ ತಮ್ಮ ಒಪ್ಪಿಗೆಯನ್ನು ಕೊಟ್ಟರೆ ನಮ್ಮ ಸೊಸೈಟಿಗಳು ಒಂದೇ ಸೂರಿನಡಿ ಎಲ್ಲಾ ವ್ಯವಸ್ಥೆಗಳನ್ನು ಹೊಂದುವಂತಾಗಬಹುದು. ಸಾರ್ವಜನಿಕರೂ ಇದಕ್ಕೆ ಬೆಂಬಲ ಸೂಚಿಸಬೇಕು.

ಈ ತನಕ ಹೇಗಿತ್ತು?: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಬರುವಂತಹ ಸೇವೆ, ವ್ಯವಹಾರಗಳನ್ನು ಮಾಡಬಹುದಿತ್ತು. ಹಾಲಿನ ಸೊಸೈಟಿಗಳು ಹಾಲು ಮತ್ತು ಹಾಲಿನ ಉತ್ಪನ್ನವನ್ನೂ, ನೇಕಾರರ ಸೊಸೈಟಿಗಳು ನೇಯ್ಗೆ ಉತ್ಪನ್ನಗಳನ್ನು ಹೀಗೆ ಅವರವರ ಕ್ಷೇತ್ರಕ್ಕನುಗುಣವಾಗಿ ವ್ಯವಹರಿಸುತ್ತಿದ್ದವು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ವ್ಯವಹಾರಗಳಲ್ಲಿ ಮುಖ್ಯವಾದವುಗಳು, ಕೃಷಿಕರಿಗೆ ಬೇಕಾಗುವ ಬೆಳೆ ಒಳಸುರಿಗಳಾದ, ಯಂತ್ರೋಪಕರಣ, ಗೊಬ್ಬರ, ಕೀಟನಾಶಕಗಳ ಮಾರಾಟ, ಸಾಲ, ನ್ಯಾಯಬೆಲೆ ಅಂಗಡಿ ವ್ಯವಹಾರ ಮಾಡುತ್ತಿದ್ದವು. ಕೆಲವು ಸಹಕಾರಿ ಸಂಘಗಳು ಇದೇ ವ್ಯಾಪ್ತಿಯಲ್ಲಿ ತಮ್ಮ ವ್ಯವಹಾರವನ್ನು ವಿಸೃತವಾಗಿ ಬೆಳೆಸಿಕೊಂಡವುಗಳೂ (TSS

Sirsi, TMS Sirsi, Hulagola society Sirsi) ಇವೆ. ಕೆಲವು ಬರೇ ಸಾಲ ಕೊಡುವುದು, ಠೇವಣಿ ಸ್ವೀಕರಿಸುವುದನ್ನು ಮಾತ್ರವೇ ಮಾಡುತ್ತಾ ಇರುವವುಗಳೂ ಇವೆ. ಕೆಲವು ಉತ್ತಮ ಲಾಭಾಂಶವನ್ನು ಕೊಡುತ್ತಿವೆ. ಕೆಲವು ಅಲ್ಲಿಂದಲ್ಲಿಗೆ ನಡೆಯುವಂತವುಗಳೂ ಇವೆ. ಇದೆಲ್ಲವೂ ಇನ್ನು ಮೇಲ್ದರ್ಜೆಗೆ ಹೋದರೆ ಸಹಕಾರ ಸಂಘಗಳು ಅಥವಾ ಸಹಕಾರಿ ಬ್ಯಾಂಕುಗಳು ಹೆಮ್ಮರವಾಗಿ ಬೆಳೆಯುವ ಅವಕಾಶ ಇದೆ.

ಪೆಟ್ರೋಲಿಯಂ ಉತ್ಪನ್ನಗಳು ಆದಾಯದ ಘನಿ: ಸಹಕಾರಿ ಸಂಘಗಳು ಪೆಟ್ರೋಲಿಯಂ ಉತ್ಪನ್ನಗಳನ್ನು ಮಾರಾಟ ಮಾಡುವ ಕೌಂಟರ್ ಹಾಕಿದರೆ ಜನ ನಂಬಿಕೆಯ ಮೇಲೆ ಅಲ್ಲಿ ವ್ಯವಹರಿಸುತ್ತಾರೆ. ಈಗಲೂ ರೈತರು ಸೊಸೈಟಿಗಳಲ್ಲಿ ಲಭ್ಯವಾಗುವ ಗೊಬ್ಬರ ಇತ್ಯಾದಿ ಖರೀದಿಗೆ ಮೊದಲ ಪ್ರಾಶಸ್ತ್ಯ ನೀಡುತ್ತಾರೆ. ಉದಾಹರಣೆಗೆ ಶಿರಸಿಯ TSS ಸಂಸ್ಥೆಯ ಶಿರಸಿಯಲ್ಲಿ, ಸಿದ್ದಾಪುರದಲ್ಲಿ ಪೆಟ್ರೋಲ್ ಪಂಪನ್ನು ಹೊಂದಿದೆ. ಜನ ಅಲ್ಲಿ ನಂಬಿಕೆಯಲ್ಲಿ ಇಂಧನ ಹಾಕಿಕೊಳ್ಳುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಸೊಸೈಟಿಗಳಿಂದ ಇಂತದ್ದು ಆದರೆ ಲಾಭವಾಗುತ್ತದೆ. ಅವು ವಿತ್ತೀಯವಾಗಿ ಸಧೃಢವಾಗುತ್ತವೆ. ಇದೆಲ್ಲವೂ ಸದಸ್ಯರಿಗೆ ಲಾಭ ತಂದು ಕೊಡುತ್ತದೆ.

ಲಾಭಿ ಸಾಧ್ಯತೆ ಇಲ್ಲದಿಲ್ಲ: ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿ ಪೆಟ್ರೋಲಿಯಂ ಉತ್ಪನ್ನ ಮಾರಾಟ ಮಾಡುವ ಖಾಸಗಿ ರಿಟೈಲರ್ ಗಳು ಸಾಕಷ್ಟು ಇದ್ದಾರೆ. ಸಹಕಾರ ವ್ಯವಸ್ಥೆಗಳೂ ಇದಕ್ಕೆ ಇಳಿದರೆ ವ್ಯವಹಾರ ಕಡಿಮೆಯಾಗುವ ಸಾಧ್ಯತೆ ಇರುವ ಕಾರಣ ಇವರು ಈ ವಿಷಯದಲ್ಲಿ ರಾಜ್ಯ ಸರಕಾರಗಳ ಮೇಲೆ ಒತ್ತಡ ಹೇರುವ ಸಾಧ್ಯತೆಯೂ ಇಲ್ಲದಿಲ್ಲ. ರಾಜಕೀಯ ಮುಖಂಡರೂ ಈ ವ್ಯವಹಾರದಲ್ಲಿ ಇರುವ ಕಾರಣ ಇದಕ್ಕೆ ಬೆಂಬಲ ಸಿಗಲೂಬಹುದು.

ಸೊಸೈಟಿಗಳ ಘನತೆ ಉಳಿಸಿಕೊಳ್ಳುವುದು ಅಗತ್ಯ: ಒಂದು ಕಾಲದಲ್ಲಿ ಸೊಸೈಟಿ ಎಂದರೆ ಅದು ನಮ್ಮ ಮನೆ ಎಂದು ಭಾವಿಸಿ ಅದರ ಎಳಿಗೆಗೆ ಅಹರ್ನಿಶಿ ದುಡಿಯುತ್ತಿದ್ದ ಆಡಳಿತ ವರ್ಗ, ಮತ್ತು ಸಿಬ್ಬಂದಿಗಳು ಕಾಲ ಬದಲಾದಂತೆ ಸ್ವಲ್ಪ ಸ್ವಲ್ಪ ಬದಲಾಗತೊಡಗಿದರು. ಕೆಲವು ಸಹಕಾರಿ ಸಂಘಗಳಲ್ಲಿ ಅವ್ಯವಹಾರದ ವಾಸನೆಯೂ ಹೊರ ಬಂದದ್ದು ಇದೆ. ಆಡಳಿತ ಮಂಡಳಿಯಲ್ಲಿ ರಾಜಕೀಯದ ಬಣ್ಣ ಲೇಪನವಾಗಲಾರಂಭಿಸಿದೆ. ಎಂ ಎಲ್ ಎ ಚುನಾವಣೆಯಂತೆ ಇಲ್ಲಿಯೂ ಮತ ಕೊಂಡುಕೊಳ್ಳುವವರೂ ಇದ್ದಾರೆ. ತಮ್ಮ ಲಾಭಕ್ಕಾಗಿ ಆಡಳಿತ ಮಂಡಳಿ ಸೇರುವವರು ಹೆಚ್ಚಾಗುತ್ತಿದ್ದಾರೆ. ಅನುತ್ಪಾದಕ ಸಾಲಗಳು, ಕಮಿಷನ್ ವ್ಯವಹಾರಗಳು ಕೆಲವು ಕಡೆ ಇದೆ ಎಂಬ ಸುದ್ದಿಗಳಿವೆ. ಇದೆಲ್ಲವೂ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವುದಿಲ್ಲ. ರಾಜಕಾರಣಿಗಳು, ಸರಕಾರಿ ಉದ್ಯೋಗಿಗಳು ಭ್ರಷ್ಟಾಚಾರದಲ್ಲಿ ತೊಡಗಿದಂದಿನಿಂದ ಸಮಾಜದ ನಡೆ ಬದಲಾಗಲಾರಂಭಿಸಿತು. ಸಮಾಜದಲ್ಲಿ ಸತ್ಯ ಪ್ರಾಮಾಣಿಕತೆ, ನಂಬಿಕೆ ಇತ್ಯಾದಿಗಳಿಗೆ ಅರ್ಥ ಇಲ್ಲದ ಸ್ಥಿತಿ ಉಂಟಾಯಿತು. ಈ ಸ್ಥಿತಿ ನಮ್ಮ ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳಿಗೆ ಬಾರದೆ ಇದ್ದರೆ ಒಳ್ಳೆಯದು. ಉತ್ತಮ ಸಚ್ಚಾರಿತ್ರ್ಯ ಉಳ್ಳ ವ್ಯಕ್ತಿಗಳನ್ನು ಆಡಳಿತ ಮಂಡಳಿಗೆ ಆಯ್ಕೆ ಮಾಡಿ ಸೊಸೈಟಿಗಳ ಘನತೆಯನ್ನು ಉಳಿಸಿಕೊಂಡರೆ ಎಷ್ಟೇ ದೊಡ್ಡ ವ್ಯವಹಾರಕ್ಕೆ ಇಳಿದರೂ ನಷ್ಟ ಆಗದು.

ಪ್ರಾಥಮಿಕ ಸಹಕಾರಿ ಬ್ಯಾಂಕುಗಳು ಬೆಳೆಯುವುದರಿಂದ ಗ್ರಾಮೀಣ ಪ್ರದೇಶದ ಸದಸ್ಯರಿಗೆ ಲಾಭವಿದೆ. ಹಾಗಾಗಿ ಅವುಗಳ ಕಾರ್ಯವ್ಯಾಪ್ತಿ ವಿಸ್ತರಣೆಗೆ ನಾವು ಬೆಂಬಲಿಸಬೇಕು. ಒಂದು ಸಹಕಾರಿ ಸಂಘ ಎಂದರೆ ನಮ್ಮ ಮನೆಯ ಒಂದು ಮಳಿಗೆ ಇದ್ದಂತೆ ಆಗಬೇಕು.ಇಂತಹ ದಿನಗಳು ಬರಲಿ ಎಂದು ಆಶಿಸೋಣ.

ಚಿತ್ರದಲ್ಲಿ ಲಾಭದ ವ್ಯವಹಾರ ಮಾಡುತ್ತಿರುವ ತೋಟಗಾರ್ಸ್ ಸೊಸೈಟಿಯ (TSS) ಸೂಪರ್ ಮಾರ್ಕೆಟ್ ನ ಹೊರ ಹಾಗೂ ಒಳ ನೋಟಗಳು

ಮಾಹಿತಿ ಮತ್ತು ಚಿತ್ರಗಳು: ರಾಧಾಕೃಷ್ಣ ಹೊಳ್ಳ