ಸಹಕಾರ ತತ್ವ
ಗುಟ್ಟನೊಂದು ಹೇಳುವೆ ಮಕ್ಕಳೆಲ್ಲ ಕೇಳಿರಿ
ಒಂದಾಗಿ ಬಾಳಿರಿ ಸಹಬಾಳ್ವೆ ನಡೆಸಿರಿ
ಕಲಿಕೆ ಕಹಿ-ಫಲವು ಸಿಹಿ ಎಂಬುದನು ತಿಳಿಯಿರಿ
ಹಿರಿಯರ ಮಾತನ್ನು ಕಿವಿಗೊಟ್ಟು ಕೇಳಿರಿ
ನೀಡಿದ ಕೆಲಸವನು ಶ್ರದ್ಧೆಯಲಿ ಮಾಡಿರಿ
ಗುರುಗಳ ಮಾತನು ಧಿಕ್ಕರಿಸ ಬೇಡಿರಿ
ಅಜ್ಜನ ಜೊತೆಸೇರಿ ತೋಟಕೆ ಹೋಗೋಣ
ಅಜ್ಜಿಯ ಮಡಿಲಲಿ ಕುಳಿತು ಕಥೆಯನ್ನು ಕೇಳೋಣ
ಅಪ್ಪನ ಬೆನ್ನೇರಿ ಉಪ್ಪು ಮೂಟೆ ಎನ್ನೋಣ
ಅಮ್ಮ ಕೊಡುವ ಬಿಸಿಬಿಸಿ ದೋಸೆಯನ್ನು ತಿನ್ನೋಣ
ಕಪಿಲೆಯ ಹಾಲನ್ನು ಕುಡಿಯುತ ನಲಿಯೋಣ
ಟಾಮಿ ಬಿಲ್ಲಿ ಜೊತೆಯಲ್ಲಿ ನಗುತಲಿ ಆಡೋಣ
ಅಣ್ಣ ಅಕ್ಕನ ಕೂಡಿಕೊಂಡು ಶಾಲೆಯನು ಸೇರೋಣ
ಜಾತಿ ಮತ ಭೇದವಿಲ್ಲ ಒಟ್ಟಾಗಿ ಕೂರೋಣ
ಸ್ವಚ್ಛತೆಯ ಕೆಲಸವ ಸೇರಿಕೊಂಡು ಮಾಡೋಣ
ಸಹಜೀವನ ಸಹತತ್ವ ಕಲಿತು ಜಾಣರಾಗೋಣ
ಆಟದೊಟನೆ ಪಾಠವಿರಲಿ ಕೂಗಿಕೂಗಿ ಹೇಳೋಣ
ನಾಟಕವ ಮಾಡುತಲಿ ಸಂತಸವ ಹೊಂದೋಣ
ಪ್ರಾಣಿಪಕ್ಷಿ ಕ್ರಿಮಿಕೀಟ ಜೀವನವ ನೋಡೋಣ
ಅವರಂತೆ ಬದುಕಲು ನಾವಿಂದು ಕಲಿಯೋಣ
ಸಹಕಾರ ತತ್ವದಲಿ ಪ್ರೀತಿಯಿದೆ ಎನ್ನೋಣ
ಎಲ್ಲರೊಡನೆ ಸ್ನೇಹದಲಿ ನಕ್ಕುನಲಿದು ಬೆರೆಯೋಣ
ಹೆತ್ತವರ ಮಮಕಾರವು ಸದಾ ಬೇಕು ಎನ್ನೋಣ
ದೇವರ ಪಾದಗಳಿಗೆ ಶಿರಬಾಗಿ ನಮಿಸೋಣ
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ಗಾಣ
