ಸಹಜ ಕೃಷಿ ಹರಿಕಾರ ಮಸನೊಬು ಫುಕುಓಕಾ ಮರಳಿ ಮಣ್ಣಿಗೆ.

ಸಹಜ ಕೃಷಿ ಹರಿಕಾರ ಮಸನೊಬು ಫುಕುಓಕಾ ಮರಳಿ ಮಣ್ಣಿಗೆ.

ಬರಹ

ಭಾರತ ಕೃಷಿ ಸಂಸ್ಕೃತಿ ರಾಷ್ಟ್ರ. ನಮ್ಮಲ್ಲಿ ಕೃಷಿ ‘ಸಂಸ್ಕೃತಿ’ ‘ವ್ಯವಹಾರ’ ಅಲ್ಲ. ‘ಅಗ್ರಿಕಲ್ಚರ್’ ಅದು ‘ಅಗ್ರಿ ಬಿಸಿನೆಸ್’ (ಉಳಿದ ದೇಶಗಳಲ್ಲಿ ಪ್ರಚಲಿತವಿರುವಂತೆ) ಅಲ್ಲ!

ಎತ್ತು, ಆಕಳು ಮತ್ತು ಎಮ್ಮೆ ಮೊದಲಾದವನ್ನು ಸಾಕಿಕೊಂಡು ಶ್ರಮ ನಂಬಿ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದ ನಮ್ಮ ನೇಗಿಲಯೋಗಿ. ಹಣವಿರದಿದ್ದರೂ ಹಾಲು, ಮೊಸರು, ಬೆಣ್ಣೆ, ತುಪ್ಪ ಹೀಗೆ ಹೈನಿಗೆ, ಜಾನುವಾರುಗಳ ಸಗಣಿ, ಮೂತ್ರ ಹೀಗೆ ಸಾವಯವ ಗೊಬ್ಬರಕ್ಕೆ, ಅಡುಗೆಗೆ ಗೋಬರ್ ಗ್ಯಾಸ್, ಧಾನ್ಯ ಲಕ್ಷ್ಮಿಯ ಕೃಪಾಕಟಾಕ್ಷ ಊಳುವಯೋಗಿಯ ನೆರಳಾಗಿತ್ತು. ಹಳ್ಳಿಗಳು ಸಮೃದ್ಧವಾಗಿದ್ದವು. ಅನ್ನದ ಬಟ್ಟಲು ಅರಿವಿನ ಮುಗಿಲಿಗಿಂತ ಶ್ರೇಷ್ಠವಾಗಿತ್ತು.

ಕ್ರಮೇಣ ಆಧುನಿಕ ಕೃಷಿ ಉಪಕರಣಗಳು ನಮ್ಮ ಭೂಮಿಗೆ ಕಾಲಿಟ್ಟವು. ಮಾನವ ಶ್ರಮ ಪೂರಕ, ಪ್ರೇರಕವಾಗಿದ್ದ ಕೃಷಿ ಸಂಸ್ಕೃತಿ ಯಂತ್ರ ಅವಲಂಬಿತ ಕೃಷಿ ವ್ಯವಹಾರವಾಗಿ ಚಾಲನೆ ಪಡೆಯಿತು. ಊಳುವ ಒಡೆಯ ಆಳಾದ. ಕೃಷಿ ಕೂಲಿಯಾದ. ಕ್ರಮೇಣ ಉದ್ಯೋಗ ಅರಸಿ ಪಟ್ಟಣಗಳಿಗೆ ಅನಿವಾರ್ಯವಾಗಿ ಉಳ್ಳವರ ಗುಲಾಮನಾಗಿ ಬಂದ. ಕೃಷಿ ನಿರಾಶ್ರಿತ ಎಂಬ ಹೊಸ ಹಣೆಪಟ್ಟಿ ಅಂಟಿಸಲಾಯಿತು. ಟ್ರ್ಯಾಕ್ಟರ್ ಭೂಮಿಗೆ ಕಾಲಿಟ್ಟಿದ್ದೇ ತಡ ಕೃಷಿಕರ ಬೆನ್ನೆಲುಬಾಗಿದ್ದ ಜಾನುವಾರು ಕಟುಕರ ಮನೆ ಸೇರಿದವು. ರೈತನ ಮಕ್ಕಳು ಹಾಲು-ಹೈನಿನಿಂದ ವಂಚಿತರಾಗಿ ದಾರಿ ತಪ್ಪಿದ ಮಕ್ಕಳಾದರು. ಇದನ್ನೇ ಅಭಿವೃದ್ಧಿ ಎಂದು ಮಾಧ್ಯಮಗಳು ಜಾಹಿರಾತುಗಳ ಮೂಲಕ ಸಾರಿದವು. ರೈತ ಅಭಿವೃದ್ಧಿ ರಥದ ಚಕ್ರದಡಿಯಲ್ಲಿ ಸಿಲುಕಿ ಹಣ್ಣುಗಾಯಿ-ನೀರುಗಾಯಿಯಾದ.

ಕೊಡುಗೈ ದೊರೆಯಾಗಿದ್ದ ಅನ್ನದಾತ ಒಕ್ಕಿದ. ಜಗದ ಒಡಲು ತುಂಬಿಸಿದ. ಕೃಷಿ ಪಂಡಿತರು- ‘ಜ್ನಾನಿ’ಗಳು ಅವನನ್ನು ದಾರಿ ತಪ್ಪಿಸಿದರು. ಸ್ವತ: ಬಿಕ್ಕುವ ಹಂತಕ್ಕೆ ಬಂದು ನಿಂತ. ಅನ್ನದ ಬಟ್ಟಲಿನ ಒಡೆಯ ಭಿಕ್ಷಾಪಾತ್ರೆ ಹಿಡಿದು ಒಂದೊಪ್ಪತ್ತಿನ ಊಟಕ್ಕೆ ಅಂಗಲಾಚುವಂತಾಯಿತು. ಗ್ರಾಮ ಭಾರತವನ್ನು ಸಧೃಢ ಗೊಳಿಸುವ ಛಲ ತೊಟ್ಟಿದ್ದ ಗಾಂಧೀಜಿಗೆ ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ರೂಪದಲ್ಲಿ ಜವಾರಲಾಲ ನೆಹರೂ ದಕ್ಕಿದರು. ನಗರಗಳಲ್ಲಿ ಕೈಗಾರಿಕೆಯ ಯಂತ್ರಗಳು ನಿತ್ಯ ೨೪ ಗಂಟೆ ಸಪ್ಪಳ ಮಾಡುವಂತೆ ಮಾಡುತ್ತೇನೆ ಎಂದರು. ಇಬ್ಬರಿಗೂ ಭಿನ್ನಾಭಿಪ್ರಾಯ ಇದೇ ವಿಷಯಕ್ಕೆ ಬಂತು. ಸರ್ದಾರ್ ಪಟೇಲ್ ಭಾರತದ ಪ್ರಧಾನಿ ಆಗಬೇಕಿತ್ತು ಅಂತ ಮಹಾತ್ಮರ ಒಳ ಮನಸ್ಸು ಹೇಳಿತು. ರೈತ ಇಂದು ಹಳ್ಳಿಯಿಂದ ಎಲ್ಲದಕ್ಕೂ ದಿಲ್ಲಿಯ ದೊರೆಗಳ ಕಡೆಗೆ ಮುಖ ಮಾಡಿ ನಿಲ್ಲುವಂತಾದದ್ದು ಈ ಮುಂದಾಲೋಚನೆಯಿಲ್ಲದ ಮುಂದಾಳುಗಳಿಂದ.

ಇತ್ತೀಚೆಗೆ ಹಾವೇರಿಯಲ್ಲಿ ಸರಕಾರಿ ರಸಗೊಬ್ಬರಕ್ಕಾಗಿ ನಡೆದ ರೈತರ ಹೋರಾಟ, ಧರಣಿ, ಪ್ರತಿಭಟನೆ, ಸಾರ್ವಜನಿಕ ಆಸ್ತಿಪಾಸ್ತಿಗೆ ಧಕ್ಕೆ, ಪೊಲೀಸ್ ಗೋಲಿಬಾರ್, ನೋವು..ಸಾವು. ನಂತರ ಮಾಧ್ಯಮಗಳ ಗೋಳಾಟ. ರೈತ ಸಂಘಟನೆಗಳ ಧಿಕ್ಕಾರ, ಜೈಕಾರ. ಈ ಉರಿಯುವ ಮನೆಯ ಗಳ ಹಿರಿಯಲು ಸಹ ಹಿಂಜರಿಯದೇ ಹೋದ ವಿರೋಧ ಪಕ್ಷಗಳು. ತಿಪ್ಪೆ ಸಾರಿಸಿದ ಆಳುವ ಪಕ್ಷ. ನಾವೆಲ್ಲ ರೆಮೋನ್ ಮ್ಯಾಗ್ಸೆಸ್ಸೆ ಪುರಸ್ಕೃತ ಪಿ.ಸಾಯಿನಾಥ ಅವರು ಬರೆದಿರುವ ‘ಎವರಿ ಬಡಿ ಲವ್ಸ್ ಅ ಗುಡ್ ಡ್ರಾಟ್’ ಕೃತಿ ಓದಬೇಕು. ರಂಗ ನಟರಂತಿರುವ ನಮ್ಮ ನಾಯಕರ ಜನಪರ ಕಾಳಜಿ ಬೆತ್ತಲಾಗಿ ಬೋರಲು ಬೀಳುತ್ತದೆ. ಓಲಿಂಪಿಕ್ಸ್ ನಲ್ಲಿ ಉದ್ದ ಜಿಗಿತ ಜಿಗಿದು ೩ ಬಾರಿ ‘ಫೌಲ್’ ಮಾಡಿದ ಅಂಜು ಅವರಿಂದ ‘ಜಿಗಿದು ಬಿದ್ದ ಪದಕದ ಆಸೆ’ಯಂತೆ ನ್ಯಾಯಕ್ಕಾಗಿ ಮೊರೆ ಇಡುತ್ತಿರುವ ರೈತನ ಆಕಾಂಕ್ಷೆಗಳು ಮಾರುದ್ದ ಜಿಗಿಯುವಲ್ಲಿ ಸಂಶಯವಿಲ್ಲ. ಅವನ ಉದ್ಧಾರ ಅವನ ಕೈಯಲ್ಲಿದೆ. ಸರಕಾರ ತನ್ನ ಉದ್ಧಾರದಲ್ಲಿ ತೊಡಗಿಕೊಂಡಿದೆ. ಸರಕಾರದ ಕೆಲಸ ಅವರಿಗೆ ದೇವರ ಕೆಲಸವಾಗಿರಲಿ. ಜನರ ಕೆಲಸ ಮಾಡಿದ ಫುಕುಓಕಾ ಅಂತಹವರಿಂದ ನಮ್ಮ ರೈತರು ಕಲಿಯಬೇಕಿದೆ.

"ಅಭಿವೃದ್ಧಿಯ ಸೋಗಿನಲ್ಲಿ ಸಾವಿರಾರು ಕನಸುಗಳ ಹಿಂದೆ ಓಡಿ ಓಡಿ ಸುಸ್ತಾದ ರೈತರಿಗೆ ಮಸನೊಬೊ ಫುಕುವೊಕ ಒಬ್ಬರೇ ಆಶಾಕಿರಣ" ಮೂಡಿಗೆರೆಯ ವಿಸ್ಮಯ, ಕರ್ವಾಲೋ ಪೂರ್ಣಚಂದ್ರ ತೇಜಸ್ವಿ ಹೇಳಿದ್ದು ಸತ್ಯ. ಮೊನ್ನೆ ೧೯ನೇ ತಾರೀಖು ಜಪಾನ್ ದೇಶದ ಯುಕೋಹಾಮಾ ಪ್ರಾಂತದಲ್ಲಿ ತಮ್ಮ ೯೫ನೇ ಜ್ನಾನವೃದ್ಧ ವಯಸ್ಸಿನಲ್ಲಿ ಇಹ ತ್ಯಜಿಸಿದರು. ಅವರು ಹೇಳಿಕೊಟ್ಟ ೪ ಕೃಷಿ ತತ್ವಗಳು ಇಂದಿಗೂ ಜಗತ್ತಿನ ಪರಿಸರ ಪ್ರೇಮಿ ಕೃಷಿಕರ ಮನಗಳನ್ನು ತಟ್ಟಿದ್ದು ಪಾಲಿಸುವ ವಿಶ್ವ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದಾರೆ. ಸಾಗುವಳಿ ಮಾಡದೇ ಕೃಷಿ ಕಾಯಕ ಕೈಗೊಳ್ಳುವುದು. ರಸಗೊಭ್ಭರಗಳ ಬಳಕೆ ಮಾಡದಿರುವುದು. ಕಳೆ ತೆಗೆಯದಿರುವುದು ಹಾಗು ಕೀಟನಾಶಕ ಸಂಪಡಿಸದೇ ಇರುವುದು ಅವರ ಸಹಜ ಕೃಷಿಯ ಮೂಲಪಾಠ. ೧೯೭೫ರಲ್ಲಿ ಅವರು ಬರೆದ ’ದ ಒನ್ ಸ್ತ್ರಾ ರೆವೊಲುಶನ್’ ಕನ್ನಡಕ್ಕೆ ಸಂತೋಷ ಕೌಲಗಿ ತಂದ ‘ಒಂದು ಹುಲ್ಲಿನ ಕ್ರಾಂತಿ’ ನಾವೆಲ್ಲ ಓದಬೇಕು.

ತೇಜಸ್ವಿ ಅವರು ಬರೆದ ‘ಸಹಜ ಕೃಷಿ’ ಕೂಡ ಈ ಮಾದರಿಯ ಪ್ರಯೋಗಗಳನ್ನೇ ತಿಳಿಸುತ್ತದೆ. ಸ್ವತ: ಪ್ರಾಯೋಗಿಕ ಕೃಷಿಕರಾಗಿದ್ದ ತೇಜಸ್ವಿ ತಮ್ಮ ತೋಟದಲ್ಲಿ ಈ ಪ್ರಯೋಗ ಕೈಗೊಂಡು ದಾಖಲಿಸಿರುವುದು ಇಲ್ಲಿ ಗಮನಾರ್ಹ. "ಕೃಷಿಯ ಅಂತಿಮ ಉದ್ದೇಶ ಬೆಳೆ ಬೆಳೆಯುವುದಲ್ಲ, ಬದಲಾಗಿ ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಅಡಿಪಾಯ ಹಾಕುವುದು" ಎಂದ ಫುಕುವೊಕ ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಬದುಕು, ಬರಹ ಹಾಗು ಪ್ರಯೋಗಗಳು ನಮ್ಮ ಕೃಷಿ ಸಂಸ್ಕೃತಿ ನಾಡಿನ ಜನರ ಕಣ್ಣು ತೆರೆಸಬೇಕಿದೆ. ಕರ್ನಾಟಕಕಕ್ಕೂ ಅವರು ಭೇಟಿ ನೀಡಿದ್ದರು. ಇಲ್ಲಿನ ಸಾವಯವ ಕೃಷಿಕ ಎಲ್.ನಾರಾಯಣ ರೆಡ್ಡಿ ಅವರ ತೋಟದಲ್ಲಿ ವಿಹರಿಸಿ ಸಂತಸ ಪಟ್ಟಿದ್ದರು ಎಂದು ಅಭ್ಯುದಯ ಪತ್ರಕರ್ತ ಆನಂದತೀರ್ಥ ಪ್ಯಾಟಿ ಉಲ್ಲೇಖಿಸಿದ್ದಾರೆ.

ಆಗಸ್ಟ್, ೨೦, ೨೦೦೮ ಅಂದರೆ ಬುಧವಾರ (ನಿನ್ನೆ) ಟೈಮ್ಸ್ ಆಫ್ ಇಂಡಿಯಾ ತನ್ನ ಎರಡನೇ ಸಂಪಾದಕೀಯದಲ್ಲಿ ಆಘಾತಕಾರಿ ವಿಷಯ ಅರುಹಿದೆ. ನೊಬೆಲ್ ಪ್ರಶಸ್ತಿ ಪುರಸ್ಕೃತ ಪರಿಸರ ವಿಜ್ನಾನಿ ಡಾ.ರಾಜೇಂದ್ರಕುಮಾರ ಪಚೋರಿ ವಿಶ್ವ ಸಂಸ್ಥೆಗೆ ಸಲ್ಲಿಸಿದ ಅಧ್ಯಯನ ವರದಿ ಪ್ರಕಾರ ಬರುವ ೪ ದಶಕಗಳಲ್ಲಿ ಜಾಗತಿಕ ತಾಪಮಾನ ೪ ಡಿಗ್ರಿ ಸೆಲ್ಸಿಯಸ್ ಏರಲಿದೆ. ಪರಿಣಾಮದ ಭೀಕರತೆ ಕಣ್ಣ ಮುಂದಿದೆ. ನಮ್ಮ ಬದುಕು ಸಹ್ಯ ಮಾಡಿಕೊಂಡು, ಮುಂದಿನ ಪೀಳಿಗೆಗೂ ಸಹ್ಯವಾಗಿಯೇ ಬಿಟ್ಟಿ ಕೊಡಬೇಕಿದೆ. ಅದು ಮುಂದಿನ ಪೀಳಿಗೆಗೆ ಅಸಹ್ಯವಾದರೆ ಮಸನೊಬು ಫುಕುವೊಕಾ ಅವರ ಆಶಯಗಳಿಗೆ ನಾವಿ ತಿಲಾಂಜಲಿ ಎತ್ತಿದಂತೆಯೇ.

‘ಮಾನವ ಪರಿಸರ ವಿರೋಧಿಯಾದರೆ, ಪರಿಸರ ಮಾನವ ವಿರೋಧಿಯಾಗುತ್ತದೆ.’ ಜೊತೆಗೆ ‘ನಾಗರಿಕತೆಗಳು ಬೆಳೆದಂತೆ ಮರಭೂಮಿಗಳು ಹಿಂಬಾಲಿಸುತ್ತವೆ’ ಎಂಬುದನ್ನು ಸಾಬೀತು ಪಡಿಸಲು ನಾವು ವಿಶೇಷ ಶ್ರಮ ಪಡಬೇಕಾದ ಅವಶ್ಯಕತೆ ಇಲ್ಲ. ಒಂದು ಹುಲ್ಲಿನ ಕ್ರಾಂತಿ ಮಾಡಿದ ನಿಂಬೆ ತೋಟದ ಫುಕುವೊಕಾಗೆ, ಅವರ ಬದುಕಿಗೆ, ಬರಹಕ್ಕೆ ಲಕ್ಷಾಂತರ ಜನ ಕೃಷಿಕರಿಗೆ ನೀಡಿದ ಪ್ರೇರಣೆಗೆ ಇದು ಕೃತಜ್ನತಾ ಶ್ರದ್ಧಾಂಜಲಿ.