ಸಹಸ್ರಮಾನದ ವ್ಯಕ್ತಿ - ಪಾಲಮ್ ಕಲ್ಯಾಣಸುಂದರಮ್

ಸಹಸ್ರಮಾನದ ವ್ಯಕ್ತಿ - ಪಾಲಮ್ ಕಲ್ಯಾಣಸುಂದರಮ್

ವಿಶ್ವಸಂಸ್ಥೆ ಈ ವ್ಯಕ್ತಿಯನ್ನು '20ನೆಯ ಶತಮಾನದ ಪ್ರಮುಖ ವ್ಯಕ್ತಿಗಳಲ್ಲೊಬ್ಬರು' ಎಂದು ಪರಿಗಣಿಸಿದೆ. ಅಮೆರಿಕಾ ಸರ್ಕಾರ ಇವರನ್ನು 'ಸಹಸ್ರಮಾನದ ಪುರುಷ'ನೆಂದು ಗೌರವಿಸಿದೆ. ಭಾರತ ಸರ್ಕಾರ ಇವರನ್ನು 'ಭಾರತದ ಅತ್ಯುತ್ತಮ ಗ್ರಂಥಪಾಲಕ'ರೆಂದು ಸನ್ಮಾನಿಸಿದೆ. ಇವರನ್ನು ಪ್ರಪಂಚದ ಅತ್ಯುಚ್ಛ ಹತ್ತು ಗ್ರಂಥಪಾಲಕರುಗಳಲ್ಲೊಬ್ಬರು ಎಂದು ಗುರುತಿಸಲಾಗಿದೆ. ಕೇಂಬ್ರಿಡ್ಜಿನ ಇಂಟರ್ ನ್ಯಾಶನಲ್ ಬಯೋಗ್ರಾಫಿಕಲ್ ಸೆಂಟರ್ ಇವರನ್ನು 'ಪ್ರಪಂಚದ ಅತ್ಯುಚ್ಛ ಗೌರವಾನ್ವಿತರಲ್ಲೊಬ್ಬರು' ಎಂದು ಅಭಿದಾನವಿತ್ತು ಗೌರವಿಸಿದೆ. ತೂತ್ತುಕುಡಿ ಜಿಲ್ಲೆಯ ಶೀವೈಕುಂಠಮ್‌ನಲ್ಲಿನ ಕಲಾಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಮಾಡುತ್ತಿದ್ದ ಕೆಲಸದಿಂದ ಬರುತ್ತಿದ್ದ ಸಂಬಳದ ಹಣವನ್ನು ಪೂರ್ಣವಾಗಿ ದೀನದಲಿತರ ಸೇವೆಗಾಗಿ ಖರ್ಚು ಮಾಡಿದ ವ್ಯಕ್ತಿ ಬಹುಷಃ ಇವರೊಬ್ಬರೇ ಇರಬೇಕು. ಮದುವೆಯಾಗದೆ ಬ್ರಹ್ಮಚಾರಿಯಾಗಿಯೇ ಉಳಿದಿದ್ದ ಇವರು ತಮ್ಮ ವೈಯಕ್ತಿಕ ಖರ್ಚುವೆಚ್ಚಗಳಿಗಾಗಿ ಹೋಟೆಲು ಮಾಣಿಯಾಗಿಯೂ ಸೇರಿದಂತೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದರೆಂದರೆ ನಂಬಲು ಕಷ್ಟವಾದರೂ ಸತ್ಯವಾದ ಸಂಗತಿ. 'ಸಹಸ್ರಮಾನದ ಪುರುಷ'ರೆಂಬ ಗೌರವದ ಜೊತೆಗೆ ಬಂದ 30 ಕೋಟಿ ರೂ. ಹಣವನ್ನೂ ಸಹ ಬಿಡುಗಾಸೂ ಉಳಿಸಿಕೊಳ್ಳದೆ ಎಂದಿನಂತೆ ಸಮಾಜಕ್ಕೇ ಧಾರೆಯೆರೆದ ಪುಣ್ಯಾತ್ಮರಿವರು. ಇವರಿಗೆ ಇವರೇ ಸಾಟಿ, ಅನ್ಯರಿಲ್ಲ. ಇವರೇ ಪಾಲಮ್ ಕಲ್ಯಾಣ ಸುಂದರಮ್. ದಕ್ಷಿಣದ ಸೂಪರ್ ಸ್ಟಾರ್ ರಜನಿಕಾಂತ್ ಇವರನ್ನು ತಮ್ಮ ದತ್ತು ತಂದೆಯನ್ನಾಗಿಸಿಕೊಂಡಿದ್ದಾರೆ.

     ಅದು ಭಾರತ-ಚೀನಾ ಯುದ್ಧದ ಸಂದರ್ಭ. ಇಡೀ ದೇಶವೇ ಒಂದಾಗಿ ಎದ್ದು ನಿಂತಿದ್ದ ಸಮಯ. ಜನರು ನಾಮುಂದು-ತಾಮುಂದು ಎಂಬಂತೆ ತಮ್ಮ ತನು-ಮನ-ಧನಗಳನ್ನು ಅರ್ಪಿಸುತ್ತಿದ್ದ ಸಮಯ. ಆಗ ರಾಜಕಾರಣಿಗಳ ನೈತಿಕತೆ ಇಷ್ಟೊಂದು ಪಾತಾಳ ಕಂಡಿರಲಿಲ್ಲ. ರಾಜಕಾರಣಿಗಳನ್ನು ಜನರು ನಂಬುತ್ತಿದ್ದ ಕಾಲ. ಅವರುಗಳಲ್ಲೂ ನಂಬಿಕೆ ಉಳಿಸಿಕೊಂಡಿದ್ದವರಿದ್ದರು. ತಮಿಳುನಾಡಿನ ಮುಖ್ಯಮಂತ್ರಿಗಳಾಗಿದ್ದ ಕಾಮರಾಜರು ಜನರಿಂದ ದೇಣಿಗೆ ಸಂಗ್ರಹಿಸುತ್ತಿದ್ದಾಗ ಕಲ್ಯಾಣಸುಂದರಮ್ ಆಗಿನ್ನೂ ಕಾಲೇಜು ವಿದ್ಯಾರ್ಥಿ. ದೇಶಭಕ್ತಿ ಪ್ರೇರಿತ ಹುಡುಗ ತನ್ನ ಕೊರಳಲ್ಲಿದ್ದ ಚಿನ್ನದ ಸರವನ್ನೇ ತೆಗೆದು ಕಾಮರಾಜರಿಗೆ ಯುದ್ಧ ಸಂತ್ರಸ್ತರ ನಿಧಿಗೆ ಅರ್ಪಿಸಿದ. ನಂತರದಲ್ಲಿ ಆನಂದವಿಕಟನ್ ಪತ್ರಿಕೆ ಸಂಪಾದಕರಾಗಿದ್ದ ಬಾಲಸುಬ್ರಹ್ಮಣ್ಯಮ್‌ರವರನ್ನು ಕಂಡು ವಿಷಯ ತಿಳಿಸಿದಾಗ ಅವರು, "ನೀನು ಸ್ವತಃ ದುಡಿದು ದಾನ ಮಾಡಿದಾಗ ಹೇಳು, ಪ್ರಕಟಿಸುವೆ" ಎಂದು ಹೇಳಿ ವಾಪಸು  ಕಳಿಸಿದ್ದು ಪವಾಡವನ್ನೇ ಮಾಡಿತು. ಆ ಹುಡುಗ ಅದನ್ನು ಸವಾಲಾಗಿ ಸ್ವೀಕರಿಸಿದ, ದಿಟ್ಟ ನಿರ್ಧಾರ ಮಾಡಿದ. ಅದೇ ಮುಂದೆ ಅವನನ್ನು ಗ್ರಂಥಪಾಲಕನಾಗಿ ಕೆಲಸಕ್ಕೆ ಸೇರಿದ ನಂತರ ಬಂದ ಪ್ರತಿ ತಿಂಗಳ ಪೂರ್ಣ ಹಣವನ್ನು ಸಮಾಜೋಪಯೋಗೀ ಕಾರ್ಯಕ್ಕೆ ವಿನಿಯೋಗಿಸುವಂತೆ ಮಾಡಿದ್ದು. ಸುಮಾರು 30 ವರ್ಷಗಳ ಕಾಲ ಸಲ್ಲಿಸಿದ ಸೇವೆಯಲ್ಲಿ ಗಳಿಸಿದ ಎಲ್ಲಾ ಹಣವೂ ಸಮಾಜಕ್ಕೆ ಅರ್ಪಿಸಿದ ಆ ಪುಣ್ಯಾತ್ಮ ಅಸಾಮಾನ್ಯ ಸಾಮಾನ್ಯನಾಗೇ ಉಳಿದುದು ವಿವರಣೆಗೆ ನಿಲುಕದ ಸಂಗತಿ. 1990ರಲ್ಲಿ ಪೆನ್ಶನ್ ಮತ್ತು ನಿವೃತ್ತಿ ಸಂಬಂಧದ ಹಣ ಸುಮಾರು 10 ಲಕ್ಷ ರೂ.ಗಳು ಬಂದಾಗ ಆ ಎಲ್ಲಾ ಹಣವನ್ನೂ ತಿರುನಲ್ವೇಲಿಯ ಕಲೆಕ್ಟರರ ನಿಧಿಗೆ ಕೊಟ್ಟು ನಿರಾಳರಾದ ಅವರನ್ನು, ಕಲೆಕ್ಟರರು ಅವರ ವಿರೋಧವನ್ನೂ ಲೆಕ್ಕಿಸದೆ ಸನ್ಮಾನಿಸಿದ್ದರು. ತಿರುನಲ್ವೇಲಿಯ ವೈದ್ಯಕೀಯ ಕಾಲೇಜಿಗೆ ಸತ್ತ ನಂತರದಲ್ಲಿ ತಮ್ಮ ಕಣ್ಣು ಮತ್ತು ದೇಹದಾನ ಪಡೆಯಲು ಅನುಮತಿಸಿ ಬರೆದುಕೊಟ್ಟಿರುವವರಿವರು. ಪಾಲಮ್ ಎಂಬ ಹೆಸರಿನ ಸಮಾಜ ಕಲ್ಯಾಣ ಸಂಸ್ಥೆ ಸ್ಥಾಪಿಸಿರುವ ಅವರು ಅದರ ಮೂಲಕ ಸಮಾಜಸೇವೆ ಮಾಡುತ್ತಿದ್ದಾರೆ. ಈ ಸಂಸ್ಥೆ ದಾನಿಗಳು ಮತ್ತು ಫಲಾನುಭವಿಗಳ ನಡುವಿನ ಕೊಂಡಿಯಂತೆ ಕೆಲಸ ಮಾಡುತ್ತಿದ್ದು, ದಾನಿಗಳು ಕೊಡುವ ವಸ್ತುಗಳು ಮತ್ತು ಹಣ ಯೋಗ್ಯರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ತಮಿಳುನಾಡು, ಆಂಧ್ರಪ್ರದೇಶ ಮತ್ತು ಒರಿಸ್ಸಾದ ಚಂಡಮಾರುತ ಸಂತ್ರಸ್ತರಿಗೆ, ಮಹಾರಾಷ್ಟ್ರ ಮತ್ತು ಗುಜರಾತಿನ ಭೂಕಂಪ ಪೀಡಿತರಿಗೆ ಈ ಸಂಸ್ಥೆ ಸಹಾಯಹಸ್ತ ಚಾಚಿದೆ. 

     ತಿರುನಲ್ವೇಲಿ ಜಿಲ್ಲೆಯ ಮೇಲಕರಿವೇಲಾಂಕುಲಂನಲ್ಲಿ 1953ರ ಆಗಸ್ಟ್ ತಿಂಗಳಿನಲ್ಲಿ ಜನಿಸಿದ ಕಲ್ಯಾಣಸುಂದರಮ್ ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದು, ಅವರಿಗೆ ಬಡವರ ಸೇವೆ ಮಾಡಲು ಪ್ರೇರಿಸಿದ್ದು ಅವರ ತಾಯಿ. ಲೈಬ್ರರಿ ಸೈನ್ಸಿನಲ್ಲಿ ಚಿನ್ನದ ಪದಕ ಗಳಿಸಿದ್ದ ಅವರು ಕೆಲಸ ಮಾಡುತ್ತಿದ್ದ ಕ್ಷೇತ್ರದಲ್ಲೂ ಅನುಪಮ ಸೇವೆ ಸಲ್ಲಿಸಿದವರು. ಮದ್ರಾಸ್ ವಿಶ್ವವಿದ್ಯಾಲಯದ ಸಾಹಿತ್ಯ ಮತ್ತು ಇತಿಹಾಸ ವಿಷಯಗಳಲ್ಲಿ ಮಾಸ್ಟರ್ ಪದವಿ ಹೊಂದಿದ್ದಾರೆ. ಗ್ರಂಥಪಾಲನೆ ಮಾಡುವ ಕ್ರಮದ ಅಭಿವೃದ್ಧಿಗೆ ಮಾರ್ಗಸೂಚಿಗಳನ್ನು ತೋರಿದವರು. ಅವರು ಖಾದಿ ತೊಡಲು ಪ್ರಾರಂಭಿಸಿದ ಹಿನ್ನೆಲೆ ಸ್ವಾರಸ್ಯಕರವಾಗಿದೆ. ಗಾಂಧೀಜಿ ವಿಚಾರಗಳ ಕುರಿತು ಅವರು ಕಾಲೇಜಿನಲ್ಲಿ ತರಗತಿಗಳನ್ನು ತೆಗೆದುಕೊಳ್ಳಬೇಕಿತ್ತಂತೆ. ಗಾಂಧಿ ಕುರಿತು ಮಾತನಾಡುವಾಗ ಬೆಲೆ ಬಾಳುವ ಬಟ್ಟೆ ಧರಿಸಿ ಮಾತನಾಡುವುದು ಸರಿಕಾಣದೆ ಅವರು ಖಾದಿ ತೊಡಲು ಆರಂಭಿಸಿದರು. ಕಾಲೇಜಿನ ವಿದ್ಯಾರ್ಥಿಗಳಿಗೆ ಅವರು ಅಚ್ಚುಮೆಚ್ಚಿನವರಾಗಿದ್ದು, ಅವರಲ್ಲಿ ಅನೇಕರು ಪಾಲಮ್ ಸಂಸ್ಥೆಗೆ ಸೇರಿದ್ದಾರೆ. ರಾಷ್ಟ್ರೀಕೃತ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಿ ಎಲ್ಲಾ ಸ್ತರದ ಜನರಿಗೆ ಅದರ ಉಪಯೋಗ ಕಲ್ಪಿಸುವ ಒಂದು ಗುರಿಯನ್ನೂ ಸಹ ಅವರ ಸಂಸ್ಥೆ ಹೊಂದಿದೆ. "ಕ್ರಿಯಾಸಿದ್ಧಿಃ ಸತ್ವೇಭವತಿ ಮಹತಾಂ ನೋಪಕರಣೇ" ಎಂಬ ವಾಕ್ಯದ ಅರ್ಥ ಇವರ ನಡೆ ನುಡಿಯಲ್ಲಿ ವ್ಯಕ್ತವಾಗಿದೆ.

     ಸರಳ ಜೀವನ, ಉನ್ನತ ಚಿಂತನೆಯ ಸಾಕಾರ ರೂಪ ಕಲ್ಯಾಣಸುಂದರಮ್. ಸಮಾಜಕ್ಕೆ ನಾವು ಏನನ್ನಾದರೂ ಕೊಡಬೇಕು. ಸಾಮಾಜಿಕ ಒಳಿತಿಗೆ ಪ್ರತಿಯೊಬ್ಬರೂ ತಮ್ಮ ಪಾಲಿನ ಕಾಣಿಕೆ ಕೊಟ್ಟರೆ ಬದಲಾವಣೆ ಸಾಧ್ಯವೆಂದು ನಂಬಿರುವ ಅವರು ಈ ವಿಷಯದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಹೆಸರಿಗೆ ತಕ್ಕಂತೆ ಲೋಕಕಲ್ಯಾಣಕಾರಿಯಾಗಿರುವ, ಸುಂದರ ವಿಚಾರಗಳನ್ನು ಕಾರ್ಯರೂಪಕ್ಕಿಳಿಸಿರುವ ಕಲ್ಯಾಣಸುಂದರಮ್ ನಮ್ಮೆಲ್ಲರಿಗೆ ಆದರ್ಶವಾಗಲಿ. ಕೋಟಿ ಕೋಟಿ ಹಣ ಬಾಚುವ, ದೋಚುವ ರಾಜಕಾರಣಿಗಳು, ನುಂಗಣ್ಣರನ್ನು ವೈಭವೀಕರಿಸುವ ಜನರು ಮತ್ತು ಮಾಧ್ಯಮಗಳು ಇಂತಹವರ ಕಾರ್ಯಗಳ ಮೇಲೆ ಬೆಳಕು ಚೆಲ್ಲಲಿ, ಗೌರವಿಸಲಿ.  ಸಹಸ್ಯಮಾನದ ಈ ಅಪರೂಪದ ವ್ಯಕ್ತಿತ್ವಕ್ಕೆ ನಮೋನಮಃ. 

     ಈ ಲೇಖನಕ್ಕೆ ದಿ ಹಿಂದೂ ಪತ್ರಿಕೆಯ ಆನ್ ಲೈನ್ ಪ್ರತಿಯಲ್ಲಿರುವ ಲೇಖನ ಆಧಾರವಾಗಿದೆ. ಬಳಸಿರುವ ಚಿತ್ರ ಸಹ ಇಲ್ಲಿಯದೇ. ಲಿಂಕ್ ಇಲ್ಲಿದೆ:

 http://www.hindu.com/lf/2004/08/22/stories/2004082209260200.htm. ಯು ಟ್ಯೂಬಿನ ಸರ್ಚ್ ಅಂಕಣದಲ್ಲಿ ಇವರ ಹೆಸರು ನಮೂದಿಸಿ ಹುಡುಕಿದರೆ ಇವರ ಕುರಿತು ಕೆಲವು ವಿಡಿಯೋಗಳನ್ನು ವೀಕ್ಷಿಸಬಹುದಾಗಿದೆ.

 

Comments

Submitted by sathishnasa Thu, 02/21/2013 - 16:41

"ಹೆಸರಿಗೆ ತಕ್ಕಂತೆ ಲೋಕಕಲ್ಯಾಣಕಾರಿಯಾಗಿರುವ, ಸುಂದರ ವಿಚಾರಗಳನ್ನು ಕಾರ್ಯರೂಪಕ್ಕಿಳಿಸಿರುವ ಕಲ್ಯಾಣಸುಂದರಮ್ ನಮ್ಮೆಲ್ಲರಿಗೆ ಆದರ್ಶವಾಗಲಿ. ಕೋಟಿ ಕೋಟಿ ಹಣ ಬಾಚುವ, ದೋಚುವ ರಾಜಕಾರಣಿಗಳು, ನುಂಗಣ್ಣರನ್ನು ವೈಭವೀಕರಿಸುವ ಜನರು ಮತ್ತು ಮಾಧ್ಯಮಗಳು ಇಂತಹವರ ಕಾರ್ಯಗಳ ಮೇಲೆ ಬೆಳಕು ಚೆಲ್ಲಲಿ, ಗೌರವಿಸಲಿ. ಸಹಸ್ಯಮಾನದ ಈ ಅಪರೂಪದ ವ್ಯಕ್ತಿತ್ವಕ್ಕೆ ನಮೋನಮಃ. " ++1 ಒಬ್ಬ ದೀಮಂತ ವ್ಯಕ್ತಿಯನ್ನು ಪರಿಚಯಿಸಿದ ಲೇಖನಕ್ಕೆ ಧನ್ಯವಾಗಳು ನಾಗರಾಜ್ ರವರೇ ......ಸತೀಶ್
Submitted by kavinagaraj Thu, 02/21/2013 - 20:02

In reply to by sathishnasa

ಇಂತಹ ವ್ಯಕ್ತಿಗಳ ಬಗ್ಗೆ ತಿಳಿದಾಗ ಹೃದಯ ತುಂಬಿ ಬರುತ್ತದೆ. ಇಂತಹವರ ಬಗ್ಗೆ, ಇಂತಹ ಸಂಗತಿಗಳ ಬಗ್ಗೆ ನಾವು-ನೀವು ಬೆಳಕು ಚೆಲ್ಲುವ ಪ್ರಯತ್ನ ಮಾಡೋಣ. ಧನ್ಯವಾದಗಳು, ಸತೀಶರೇ.
Submitted by swara kamath Fri, 02/22/2013 - 11:44

ಕವಿ ನಾಗರಾಜರಿಗೆ ನಮಸ್ಕಾರಗಳು. ಪಾಲಮ್ ಕಲ್ಯಾಣಸುಂದರಮ್ ಕುರಿತ ತಮ್ಮ ಲೇಖನ ಸಂಕ್ಷಿಪ್ತವಾಗಿ ಮನಮುಟ್ಟುವಂತೆ ವಿವರಿಸಿದ್ದೀರಿ. ಗಳಿಸಿದ್ದನ್ನು, ದುಡಿದದ್ದನ್ನು, ಹಾಗು ಪಡೆದದ್ದನ್ನು ಸಹ ಸಂಪೂರ್ಣ ಸಮಾಜ ಕಲ್ಯಾಣಕ್ಕಾಗಿ ವಿನಿಯೋಗಿಸುವ ಇಂಥಹ ವ್ಯಕ್ತಿ ಕೋಟಿಗೊಬ್ಬರಿರಬಹುದು. ಅಂಥಹ ಈ ಸಹಸ್ರಮಾನದ ವ್ಯಕ್ತಿಗೆ ನಾನು ಶಿರ ಬಾಗಿ ನಮಿಸುವೆ.
Submitted by RAMAMOHANA Fri, 02/22/2013 - 15:36

ಉತ್ತಮ‌ ಮಾಹಿತಿಯೊ0ದಿಗೆ `ಮಹಾ ವ್ಯಕ್ತಿ` ಯೊಬ್ಬರನ್ನು ಪರಿಚಯಿಸಿದ‌ ತಮಗೆ ಧನ್ಯವಾದಗಳು ನಾಗರಾಜ್ ಸಾರ್. ಈ ಪ್ರಪ0ಚದ‌ ಬಗ್ಗೆ ಇನ್ನೂ ಸ್ವಲ್ಪ ಭರವಸೆ ಇಟ್ಟುಕೊಳ್ಳಬಹುದೇನೋ ಎ0ಬ‌ ಆಸೆ ಉಳಿಸಿಕೊಳ್ಳುವ0ತೆ ಮಾಡುವ‌ ‍ ವ್ಯಕ್ತಿತ್ವ ಮಾನ್ಯ ಪಾಲಮ್ ಕಲ್ಯಾಣ‌ ಸು0ದರ0 ಅವರದು. ಅ0ಥವರ‌ ಸ0ತತಿ ಕೋಟಿಯಾಗಲಿ. ರಾಮೋ.
Submitted by makara Sat, 02/23/2013 - 10:19

"ನೀನು ಸ್ವತಃ ದುಡಿದು ದಾನ ಮಾಡಿದಾಗ ಹೇಳು, ಪ್ರಕಟಿಸುವೆ" ಎಂದು ಹೇಳಿ ವಾಪಸು ಕಳಿಸಿದ್ದು ಪವಾಡವನ್ನೇ ಮಾಡಿತು.>> +೧೦೦. ಅಪ್ಪ-ಅಮ್ಮಂದಿರಿಂದ ಪಡೆದದ್ದನ್ನು ಅಥವಾ ಇತರರಿಂದ ಪಡೆದದ್ದನ್ನ ದಾನ ಮಾಡುವುದು ಸಹ ಶ್ರೇಷ್ಠವಾದದ್ದೇ ಆದರೆ ತಾನೇ ಸ್ವತಃ ಗಳಿಸಿ ಅದನ್ನು ಇತರರ ಒಳಿತಿಗೆ ದಾನ ಮಾಡುವ ಪಾಲಮ್ ಕಲ್ಯಾಣ ಸುಂದರಮ್ ಅವರು ಶ್ರೇಷ್ಠರಲ್ಲಿ ಶ್ರೇಷ್ಠರು. ಇಂತಹ ಮಹನೀಯರನ್ನು ಬೆಳಕಿಗೆ ತರುವ ಕಾರ್ಯ ಮಾಡಿದ್ದಕ್ಕೆ ತಾವೂ ಸಹ ಅಭಿನಂದಾರ್ಹರು ಕವಿಗಳೆ.
Submitted by kavinagaraj Sat, 02/23/2013 - 14:50

In reply to by makara

ಕಲ್ಯಾಣಸುಂದರಮ್ ಶ್ರೇಷ್ಠರಲ್ಲಿ ಶ್ರೇಷ್ಠರು ಎಂಬುದರಲ್ಲಿ ಅನುಮಾನವೇ ಇಲ್ಲ. ಅವರು ಒಳ್ಳೆಯದನ್ನು ಬಯಸುವವರಿಗೆ ಆಶಾಕಿರಣ, ಮಾರ್ಗದರ್ಶಿ. ಧನ್ಯವಾದ, ಮಿತ್ರ ಶ್ರೀಧರರೇ.
Submitted by kavinagaraj Mon, 02/25/2013 - 15:15

In reply to by Premashri

:)
Submitted by Channakeshava.C Mon, 03/04/2013 - 00:14

ಕವಿ ನಾಗರಾಜ್ ಸರ್, ತುಂಬಾ ದಿನಗಳ ನಂತರ ಸಂಪದವನ್ನು ಓದಿದೆ, ನಿಮ್ಮ ಈ ಬರಹ ಯುವಕರಲ್ಲಿ ಸ್ಪೂರ್ತಿಯನ್ನುಂಟು ಮಾಡುವುದಲ್ಲದೆ, ಸಮಾಜದಲ್ಲಿ ಇರುವ ಬಡವರಿಗೆ ನಮ್ಮಲ್ಲಿ ಆಗುವಷ್ಟು ಸಹಾಯ ಮಾಡಬೇಕೆನಿಸುತ್ತದೆ. ಪ್ರೀತಿಯಿಂದ ಸಿ ಕೆ (ಚನ್ನಕೇಶವ)
Submitted by venkatb83 Thu, 04/04/2013 - 17:03

ಹಿರಿಯರೇ ಈ ಬರಹವನ್ನು ನಾ ಭಲೇ ತಡವಾಗಿ ನೋಡಿ ಓದಿ ಪ್ರತಿಕ್ರಿಯಿಸುತ್ತಿರುವೆ....!! ಆದರೆ ಒಳ್ಳೆಯದ್ದು ಉತ್ತಮವಾದದ್ದು ಸದಾ ಸಲ್ಲುವುದು ತಡವಾದರೂ ಅದು ನಮ್ಮ ಕಣ್ಣಿ0ದ‌ ತಪ್ಪಿಸಿಕೊಳ್ಳದು..!! ಸಧ್ಯದ‌ ಪ‌ರಿಸ್ತಿತಿಯಲ್ಲಿ ಇ0ತ‌ ಮಹನೀಯರ‌ ಪರಿಛ್ಯದ‌ ಅಗತ್ಯವಿದೆ... ಈ ತರ್ಹದ‌ ಹತ್ತು ಹಲವು ಜನ‌ (ಹಿ0ದೆ ಮ0ಗಳೂರ್ ಕಡೆ ಒಬ್ಬರು ಮುಸಲ್ಮಾನ‌ ವ್ಯಕ್ತಿ ಹೀಗೆ ಹಣ‌ ಹೊ0ದಿಸಿ ಶ್ಹಾಲೆ ನಿರ್ಮಿಸಿದ‌ ಸುದ್ಧಿ ಓದಿದ್ದೆ..) ಇರುವರು ಆದರೆ ಅ0ತವರ‌ ಬಗ್ಗೆ ಪ್ರಛಾರ‌ ಮಾಡದ‌ ಮಾಧ್ಯಮಗಳು ಹತ್ಯೆ ‍ರಾಜಕೀಯ‌ ಇತ್ಯಾದಿ ಬಗ್ಗೆ ಪ್ರಕಟಿಸುವರು,,;(( ಇ0ತವರ‌ ಸನ್ಖ್ಯೆ ಅಗಣಿತವಾಗಲಿ.. >>> ಈ ವಿಶ್ಹೇಷ‌ ಸುದ್ಧಿ ಬಗ್ಗೆ ನಮ್ ಗಮನ‌ ಸೆಳೆದ‌ ನಿಮಗೆ ನನ್ನಿ... ಶ್ಹುಭವಾಗಲಿ.. \|