"ಸಹಸ್ರ ಚಂದ್ರದರ್ಶನ ಶಾಂತಿ "
ತಮ್ಮ ಜೀವಿತಾವಧಿಯಲ್ಲಿ ಸಾವಿರ ಬಾರಿ ಪೂರ್ಣ ಚಂದಿರನನ್ನು ಕಾಣುವ ಭಾಗ್ಯ ಪಡೆದವರಿಗೆ ಅಂದರೆ ಎಂಬತ್ತೊಂದು ವರ್ಷ ಪೂರೈಸಿದ ಹಿರಿಯರಿಗೆ ಸಾಮಾನ್ಯವಾಗಿ ಅವರ ಮಕ್ಕಳು "ಸಹಸ್ರ ಚಂದ್ರದರ್ಶನ ಶಾಂತಿ"ಯನ್ನು ಮಾಡಿಸಿ ಅವರಿಗೆ ಗೌರವಿಸುವುದರೊಂದಿಗೆ, ಅವರು ಶತಾಯುಷಿಗಳಾಗಿ ಬದುಕಿ ನಮ್ಮ ಬದುಕಿಗೆ ದಾರಿದೀಪವಾಗಲಿ ಎಂದು ಆಶಿಸುವ ಒಂದು ಕಾರ್ಯಕ್ರಮವಿದು.ಇದು ಎಲ್ಲರ ಜೀವಿತದಲ್ಲೂ ಒದಗಿ ಬರುವುದಿಲ್ಲ.ಪುಣ್ಯವಂತರಿಗೆ ಮಾತ್ರ ಈ ಸೌಭಾಗ್ಯ ದೊರೆಯುತ್ತದೆ ಎಂಬುದು ನನ್ನ ಅಭಿಪ್ರಾಯ.
ಇತ್ತೀಚೆಗೆ ಈ ಅಪೂರ್ವವಾದ ಕಾರ್ಯಕ್ರಮವನ್ನು ವೀಕ್ಷಿಸುವ ಅವಕಾಶ ನನಗೆ ಒದಗಿ ಬಂದಿತ್ತು.ವಯೋವೃದ್ಧರೂ,ಜ್ಞಾನವೃದ್ದರೂ,ಲೇಖಕರೂ ಮತ್ತು ಶಿವಮೊಗ್ಗದ ಸಾಂಸ್ಕೃತಿಕ
ವೇದಿಕೆ "ಅಭಿರುಚಿ"ಯ ಗೌರವಾಧ್ಯಕ್ಷರೂ ಆದ ಶ್ರೀಯುತರಾದ ಕೂಡಲಿ ಜಗನ್ನಾಥಶಾಸ್ತ್ರಿಯವರಿಗೆ ಈ ಶಾಂತಿ ಸಮಾರಂಭವನ್ನು ಏರ್ಪಡಿಸಲಾಗಿತ್ತು.ಇದು ನನ್ನಂತೆ ಅನೇಕರಿಗೆ ಬಹು ಅಪರೂಪದ ಕಾರ್ಯಕ್ರಮವೆನ್ನಿಸಿತ್ತು. ಶ್ರೀಯುತ ಶಾಸ್ತ್ರಿಯವರು ತಮ್ಮ ಧರ್ಮಪತ್ನಿಯೊಂದಿಗೆ ನೆರವೇರಿಸಿಕೊಂಡ ಈ ಶಾಂತಿ ಸಮಾರಂಭ ಸ್ತ್ರೀಯರಲ್ಲಿ ಒಂದು ರೀತಿಯ ಭಾವನಾತ್ಮಕವಾದ ಅನುಭೂತಿಯನ್ನು ಸೃಷ್ಠಿಸಿತ್ತು.ಹಾಗಾಗಿ ಈ ಶಾಂತಿ ಸಮಾರಂಭದಲ್ಲಿ ಶ್ರೀಮತಿ ಕಾಮಾಕ್ಷಮ್ಮನವರ ಶಿಷ್ಯೆಯರ ದೊಡ್ಡ ಬಳಗವೇ ಸೇರಿ ಸಹಸ್ರ ಚಂದ್ರದರ್ಶನ ಶಾಂತಿ ಸಮಾರಂಭಕ್ಕೆ ನೂತನ ಕಳೆಯನ್ನು ತಂದಿದ್ದರು.

ಇವರ ’ಸಹಸ್ರಚಂದ್ರ ದರ್ಶನ ಶಾಂತಿ’ಸಮಾರಂಭ ಶ್ರೀ ಕೂಡಲಿ-ಶೃಂಗೇರಿ ಜಗದ್ಗುರು ಮಹಾಸಂಸ್ಥಾನದ ಉಭಯ ಮಹಾಸನ್ನಿಧಾನಂಗಳವರ ಕೃಪಾನುಗ್ರಹಗಳಿಂದ ವಿಜೃಂಭಣೆಯಿಂದ ನೆರವೇರಿತು.ವಿಘ್ನ ನಿವಾರಕ ಗಣಪತಿ ಹೋಮದಿಂದ ಪ್ರಾರಂಭವಾದ ಕಾರ್ಯಕ್ರಮ ಪಾರಾಯಣ,ರುದ್ರಾಭಿಷೇಕ,ಮೃತ್ಯುಂಜಯ ಹೋಮ ಮುಂತಾದ ಹೋಮ-ಹವನಗಳೊಂದಿಗೆ ಸಹಸ್ರ ಚಂದ್ರದರ್ಶನ ಶಾಂತಿಯನ್ನು ಮೂರುದಿನಗಳ ಕಾಲ ನೆರೆವೇರಿಸಲಾಯಿತು.


ನೂರಾರು ಸಂಖ್ಯೆಯಲ್ಲಿ ಸೇರಿದ್ದ ಹೆಣ್ಣುಮಕ್ಕಳು ಈ ಕಾರ್ಯಕ್ರಮದುದ್ದಕ್ಕೂ ಸೌಂದರ್ಯಲಹರಿ,ಲಲಿತಾಸಹಸ್ರನಾಮ ವನ್ನು ಸ್ವಪ್ರೇರಣೆಯಿಂದ ಪಠಣ ಮಾಡಿದ್ದು ಮಹತ್ವದ್ದೆನ್ನಿಸಿತು.ಕೊನೆಯದಾಗಿ ದಂಪತಿಗಳನ್ನು ಮಂಟಪದಲ್ಲಿ ಕೂರಿಸಿ ಜರಡಿಯಂತಿರುವ ಪಾತ್ರೆಯಲ್ಲಿ ಚಿನ್ನಾಭರಣವನ್ನು ಹಾಕಿ ಮಕ್ಕಳು, ಸೊಸೆಯಂದಿರು ಅವರಿಗೆ ಕನಕಾಭಿಷೇಕ ಮಾಡಿದರು.ಆಗಮಿಸಿದ ಬಂಧುಗಳೂ ಈ ಕನಕಾಭಿಷೇಕದಲ್ಲಿ ಪಾಲ್ಗೊಂಡು ಆನಂದಿಸಿದರು.ನಂತರ ದಂಪತಿಗಳು ಹೊಸ ವಸ್ತ್ರವನ್ನುಟ್ಟು ಪೂಜ್ಯ ಗುರುಗಳಿಂದ ಆಶೀರ್ವಚನವನ್ನು ಪಡೆದರು.ಗುರುಗಳು ಮಠದಿಂದ ಉಡುಗೊರೆಯಾಗಿ ಬಂದ ಶಾಲನ್ನು ಹೊದಿಸಿ, ಫಲತಾಂಬೂಲ ನೀಡಿ ದಂಪತಿಗಳನ್ನು ಗೌರವಿಸಿ,ಆಶೀರ್ವಾದ ಮಾಡಿದರು. ವಿಶೇಷ ಕಳೆ ಸೂಸುತ್ತಿದ್ದ ಹಿರಿಯ ದಂಪತಿಗಳಿಗೆ ನಮಸ್ಕರಿಸಿ ಕಾರ್ಯಕ್ರಮಕ್ಕೆ ಬಂದವರೆಲ್ಲ ಧನ್ಯರಾದರು.ಆಗಮಿಸಿದವರೆಲ್ಲರಿಗೂ ಭೂರಿ ಭೋಜನದ ವ್ಯವಸ್ಥೆಯೂ ಇತ್ತು. ಒಟ್ಟಿನಲ್ಲಿ ಒಂದು ಅಪೂರ್ವವಾದ ಕಾರ್ಯಕ್ರಮವನ್ನು ವೀಕ್ಷಿಸಲು ಅವಕಾಶ ಸಿಕ್ಕಿದ್ದು ನನಗೆ ಸಂತಸ ನೀಡಿತು.

ಇಲ್ಲಿ ನಾನು ಕೂಡಲಿ ಜಗನ್ನಾಥಶಾಸ್ತ್ರಿ ದಂಪತಿಗಳ ಸಾಧನೆಯ ಬಗ್ಗೆ ಒಂದೆರಡು ಮಾತುಗಳನ್ನು ತಿಳಿಸಲು ಆಶಿಸುತ್ತೇನೆ.ಈ ದಂಪತಿಗಳಿಬ್ಬರೂ ತಮಗೆ ತಿಳಿದದ್ದನ್ನು ಹಲವರಿಗೆ ತಿಳಿಸಿಕೊಡುವ ದೊಡ್ಡತನ ಪಡೆದವರು. ಸದ್ಗುಣಶೀಲರು. ಸರಳ ನಡೆನುಡಿಯ ಸಜ್ಜನರು.ಅನ್ಯೋನ್ಯವಾಗಿ ಬಾಳಿ ಆದರ್ಶ ದಂಪತಿಗಳು ಎನಿಸಿಕೊಂಡವರು.ಬದುಕಿನಲ್ಲಿ ಬಂದ ಕಷ್ಟಗಳಿಗೆ ಹೆದರದೆ ಸಾಧಿಸಿ ತೋರಿಸಿದ ಮಾರ್ಗದರ್ಶಕರು. ಕೂಡಲಿ ಜಗನ್ನಾಥಶಾಸ್ತ್ರಿಯವರು ಬಡತನದಲ್ಲಿಯೇ ತಮ್ಮ ಬಾಲ್ಯವನ್ನು ಕಳೆದವರು.ಓದಿ ಏನನ್ನಾದರೂ ಸಾಧಿಸಬೇಕೆಂಬ ಹಂಬಲದಿಂದ ಕೂಡಲಿ ಕ್ಷೇತ್ರದಿಂದ ಶಿವಮೊಗ್ಗಕ್ಕೆ ಬಂದು,ವಾರಾನ್ನ ಮಾಡಿ ವಿದ್ಯಾಭ್ಯಾಸ ಮುಂದುವರಿಸಿದರು.ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸರಕಾರಿ ಸೇವೆಗೆ ಸೇರಿದ ಮೇಲೂ ಕನ್ನಡ, ಹಿಂದಿ ಎಂಎ ಪದವಿಯನ್ನು ಪಡೆದು ತಮ್ಮ ಭಾಷಾ ಜ್ಞಾನವನ್ನು ಹೆಚ್ಚಿಸಿಕೊಂಡರು.ಹಂತಹಂತವಾಗಿ ತಮ್ಮ ಸೇವೆಯಲ್ಲಿ ಮೇಲೇರುತ್ತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ೧೯೮೭ ರಲ್ಲಿ ಸರಕಾರಿ ಸೇವೆಯಿಂದ ನಿವೃತ್ತರಾದರು."ಸಾಹಿತ್ಯ ವಿದ್ಯಾರತ್ನ" ಎಂಬ ಬಿರುದಿಗೆ ಪಾತ್ರರಾದ ಇವರು "ತುರಂಗ ಭಾರತ" "ಶರಾವತಿ ಮಹಾತ್ಮೆ" "ಶಿವನ ಭಿಕ್ಷಾಟನೆ" ಗ್ರಂಥಗಳನ್ನು ಸಂಪಾದಿಸಿದ್ದಾರಲ್ಲದೆ ,ಶ್ರೀ ಪರಮದೇವ ಕೀರ್ತನೆಗಳು ಮತ್ತು ಇತಿಹಾಸಕ್ಕೆ ಸಂಬಂಧಿಸಿದ ಕೃತಿಗಳನ್ನೂ ಸಹ ಸಂಪಾದಿಸಿದ್ದಾರೆ.ಶಬರಿ ದರ್ಶನ,ಕವಿ ಪರಮದೇವ,ಚಿದಾನಂದಾವಧೂತರು ಮುಂತಾದ ಕೃತಿಗಳನ್ನು ರಚಿಸಿ ತಮ್ಮ ಪಾಂಡಿತ್ಯವನ್ನು ಮೆರೆದಿದ್ದಾರೆ.
ಇವರ ಧರ್ಮಪತ್ನಿ ಶ್ರೀಮತಿ ಕಾಮಾಕ್ಷಮ್ಮನವರು ಶಿವಮೊಗ್ಗದ ಹೆಂಗಳೆಯರಿಗೆ ಮಾಮಿ ಎಂದೇ ಪರಿಚಿತರು .ಇವರು ಉತ್ತಮ ಗೃಹಿಣಿ ಎನ್ನಿಸುವುದರ ಜೊತೆಗೆ ತಮ್ಮ ಪತಿಯ ಸಂಶೋಧನೆ ಮತ್ತು ಗ್ರಂಥ ಸಂಪಾದನೆ ಕಾರ್ಯಗಳಲ್ಲಿ ನೆರವಾಗಿದ್ದಾರೆ. ಮಾಧುರ್ಯವಾದ ಕಂಠಸಿರಿಯನ್ನು ಪಡೆದ ಇವರು ಸುಶ್ರಾವ್ಯವಾಗಿ ಕಾವ್ಯವಾಚನವನ್ನು ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.ದೇವರಲ್ಲಿ ಅಪಾರವಾದ ನಂಬಿಕೆ ಇಟ್ಟವರು.ಶಿವಮೊಗ್ಗ ನಗರದ ಎಲ್ಲಾ ಬಡಾವಣೆ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಆಸಕ್ತ ಮಹಿಳೆಯರಿಗೆ ಶ್ರೀ ಲಲಿತಾಸಹಸ್ರನಾಮ, ಸೌಂದರ್ಯಲಹರಿ ಸ್ತ್ರೋತ್ರಗಳನ್ನು ರಾಗವಾಗಿ ಹಾಡುವುದನ್ನು ಕಲಿಸಿದ ಕೀರ್ತಿ ಇವರದು.ಮಹಿಳೆಯರಿಂದ ಕೋಟಿ ಕೋಟಿ ಸಂಖ್ಯೆಯಲ್ಲಿ ಪುನಶ್ಚರಣೆ ಮಾಡಿಸಿ ಹೋಮ-ಹವನಗಳನ್ನು ಮಾಡಿಸಿ ಧನ್ಯರಾಗಿದ್ದಾರೆ.ಇವರ ಈ ಪರಿಶ್ರಮದಿಂದಾಗಿ ನಮ್ಮ ನಗರದ ಅನೇಕ ದೇವಸ್ಥಾನಗಳಲ್ಲಿ ಮಹಿಳೆಯರಿಂದ ನೆಡೆಯುವ ಈ ಸ್ತ್ರೋತ್ರಗಳ ಸುಮಧುರ ಗಾಯನ ಕರ್ಣಾನಂದಕರವಾಗಿರುವುದರೊಂದಿಗೆ ಮನಶ್ಯಾಂತಿಯನ್ನು ನೀಡುತ್ತಿದೆ.ಅನೇಕ ಹೆಂಗಸರು ಕಾಡುಹರಟೆಯಲ್ಲಿ ಕಾಲಕಳೆಯುವ ಬದಲು ಈ ಕಲಿಕೆಯಲ್ಲಿ ಭಾಗಿಗಳಾಗಿ ಒಂದು ಒಳ್ಳೆ ಕೆಲಸ ಮಾಡುತ್ತಿದ್ದಾರೆ.ಇದರ ಪ್ರೇರಕಶಕ್ತಿ ಶ್ರೀಮತಿ ಕಾಮಾಕ್ಷಮ್ಮನವರು.
ಈ ಹಿರಿಯರ ಸಾಧನೆಯ ಬಗ್ಗೆ ಹೇಳುತ್ತಾ ಹೋದರೆ ಪುಟಗಟ್ಟಲೆ ಆಗಬಹುದು.
ಎಲೆಮರೆಯ ಕಾಯಿಯಂತೆ ಇವರು ತಮ್ಮ ಬದುಕನ್ನು ಸಾರ್ಥಕಪಡಿಸಿಕೊಂಡವರು.ಬಾಳಿನಲ್ಲಿ ನೆಮ್ಮದಿ ಸಿಕ್ಕಿದೆ,ಬದುಕು ಸಾರ್ಥಕವಾಯಿತು ಎಂಬ ತೃಪ್ತಿಯ ಭಾವ ಈ ಹಿರಿಯ ದಂಪತಿಗಳದು. ಇಂತಹ ಪುಣ್ಯವಂತರು ಶತಾಯುಷಿಗಳಾಗಿ ನಮ್ಮಂತಹ ಕಿರಿಯರಿಗೆ ಮಾರ್ಗದರ್ಶನ ಮಾಡಲಿ ಎನ್ನುವುದು ನಮ್ಮ ಆಶಯ.ಜಗನ್ನಾಥ ಶಾಸ್ತ್ರಿಯವರಿಂದ ಸಾಹಿತ್ಯ ಸೇವೆ ನಿರಂತರವಾಗಿ ನೆಡೆಯಲಿ. ಮನೆಮನೆಯಲ್ಲಿಯೂ "ಸೌಂದರ್ಯಲಹರಿ" ಯು ಮೊಳಗಲಿ. ಇವರು ಶತಾಯುಷಿಗಳಾಗಲಿ ಮತ್ತು ಇವರ ಮಕ್ಕಳು, ಮೊಮ್ಮಕ್ಕಳ ಬಾಳು ಬಂಗಾರವಾಗಲಿ ಎಂಬುದು ನನ್ನ ಮನೋಬಯಕೆ.
Comments
ಉ: "ಸಹಸ್ರ ಚಂದ್ರದರ್ಶನ ಶಾಂತಿ "
In reply to ಉ: "ಸಹಸ್ರ ಚಂದ್ರದರ್ಶನ ಶಾಂತಿ " by basho aras
ಉ: "ಸಹಸ್ರ ಚಂದ್ರದರ್ಶನ ಶಾಂತಿ "