ಸಾಂಸ್ಕೃತಿಕ ಪ್ರತಿರೋಧ ಹೇಗಿರಬೇಕು...?

ಸಾಂಸ್ಕೃತಿಕ ಪ್ರತಿರೋಧ ಹೇಗಿರಬೇಕು...?

ದಲಿತ ಸಂಘಟನೆಗಳ ಐಕ್ಯತಾ ಸಮಾವೇಶ - ಡಿಸೆಂಬರ್ 6 - ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪರಿ ನಿರ್ವಾಣ ಹೊಂದಿದ ದಿನ. ಸಾಂಸ್ಕೃತಿಕ ಪ್ರತಿರೋಧ ಹೇಗಿರಬೇಕು? ಸಂಕುಚಿತ ಚಿಂತನೆಗೆ ಸಮಗ್ರ ವ್ಯಕ್ತಿತ್ವ ಒಂದು ಉತ್ತರ....

ಬಹುಶಃ ಇಂದಿನ ಸಂದರ್ಭದಲ್ಲಿ ಕರ್ನಾಟಕದ ಜಾಗೃತ ಮನಸ್ಥಿತಿಯ ಜನರು ಬಾಬಾ ಸಾಹೇಬರಿಗೆ ಈ ಒಗ್ಗಟ್ಟು ಪ್ರದರ್ಶಿಸುವ ಮೂಲಕ ನೀಡುತ್ತಿರುವ ಸ್ವಾತಂತ್ರ್ಯ ಅಮೃತ ಮಹೋತ್ಸವದ ಕಿರು ಕಾಣಿಕೆ ಎಂದು ಭಾವಿಸಬಹುದು. ಅದು ಪ್ರಾಮಾಣಿಕ, ನಿಸ್ವಾರ್ಥ, ನಿಷ್ಕಲ್ಮಶ ಮತ್ತು ದೀರ್ಘಕಾಲದ ವರೆಗೆ ಉಳಿದರೆ ಮಾತ್ರ. ಅಂಬೇಡ್ಕರ್ ಅವರ ಶಿಕ್ಷಣ - ಸಂಘಟನೆ - ಹೋರಾಟದ ಅರ್ಥವನ್ನು ಹೊಸ ರೂಪದಲ್ಲಿ ಕಟ್ಟಬೇಕಿದೆ. 

ದಲಿತ ಸಾಂಸ್ಕೃತಿಕ ಪ್ರತಿರೋಧ ಸಂಘರ್ಷದ ಹಾದಿಗಿಂತ ಸರ್ವೋದಯ  ಆಶಯದ " ಬಹುತ್ವ ಭಾರತ್ - ಬಲಿಷ್ಠ ಭಾರತ್ " ಉಳಿಸುವ ನಿಟ್ಟಿನಲ್ಲಿ ಎಲ್ಲರನ್ನೂ ಒಳಗೊಂಡ ಸಮನ್ವಯದ ಹಾದಿಯಲ್ಲಿ ಮುನ್ನಡೆಯುವಂತಾಗಲಿ. ಇಂದಿನ ಸಿನಿಕತನತ ಮನಸ್ಥಿತಿಯ ಸಮಾಜದಲ್ಲಿ ಶರಣರ ಆಶಯದ ನಡೆ ನುಡಿಯ ಅಂತರ ಹೆಚ್ವಾಗದಂತೆ ನೋಡಿಕೊಳ್ಳಬೇಕಿದೆ. ಸಾಂಸ್ಕೃತಿಕ ಮುಖವಾಡಗಳು ವಿಜೃಂಭಿಸುತ್ತಿರುವಾಗ, ನೆಲಮೂಲ ಸಂಸ್ಕೃತಿ ತಾತ್ಕಾಲಿಕವಾಗಿ ಹಿನ್ನೆಲೆಗೆ ಸರಿದಿರುವಾಗ ನಿಜ ವ್ಯಕ್ತಿತ್ವ ಜನ ಮನ್ನಣೆ ಪಡೆಯಲು ಸಾಕಷ್ಟು ಸಮಯ ಹಿಡಿಯುತ್ತದೆ.

ಇಂದು ಹೆಚ್ಚಾಗಿ ಯಾರಿಗೂ ತಿಳಿವಳಿಕೆಯ ಕೊರತೆ ಇಲ್ಲ. ನಡವಳಿಕೆಯ ಕೊರತೆಯೇ ವ್ಯಕ್ತಿ ಮತ್ತು ಸಂಘಟನೆಗಳ ವಿಶ್ವಾಸಕ್ಕೆ ಧಕ್ಕೆ ಉಂಟು ಮಾಡಿದೆ. ಅದನ್ನು ಪುನರ್ ಸ್ಥಾಪಿಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ಪ್ರತಿರೋಧ ಕೆಲಸ ಮಾಡಬೇಕಾಗುತ್ತದೆ. ಜಾಗತೀಕರಣದ ನಂತರ ಸೃಷ್ಟಿಯಾಗಿರು ಆರ್ಥಿಕ ಅನಿವಾರ್ಯತೆ ಬದುಕನ್ನು ಸಂಪೂರ್ಣ ಕೊಳ್ಳುಬಾಕ ಸಂಸ್ಕೃತಿ ಬಲೆಯಲ್ಲಿ ಸಿಲುಕಿಸಿದೆ. ಅದರಿಂದ ಹೊರಬರುವುದು ಅಷ್ಟು ಸುಲಭವಲ್ಲ. ಅದಕ್ಕಾಗಿ ಹೋರಾಟಗಳು ನೂರು ಪಟ್ಟು ಹೆಚ್ಚು ಪ್ರಾಮಾಣಿಕವಾಗಿ ಕೆಲಸ ಮಾಡಬೇಕಾಗುತ್ತದೆ. ಕೇವಲ ನಾಯಕತ್ವಕ್ಕಾಗಿ ಅಥವಾ ಯಾವುದೋ ಪಕ್ಷದ ಬೆಂಬಲಕ್ಕಾಗಿ ಅಥವಾ ಚುನಾವಣಾ ಗಿಮಿಕ್ ಆಗಿ ಹೋರಾಟ ರೂಪಿಸಿದರೆ ಅದು ಯಶಸ್ವಿಯಾಗುವುದಿಲ್ಲ.

ಗೌತಮ ಬುದ್ದರ ಅಹಿಂಸೆ ಮತ್ತು ಧ್ಯಾನಸ್ಥ ಮನಸ್ಥಿತಿ, ಬಸವಣ್ಣನವರ ಕಾಯಕದ ಅನುಭಾವ ಮತ್ತು ಸಂಪೂರ್ಣ ಸಮಾನತೆಯ ಕ್ರಾಂತಿಯ ಮಾರ್ಗ, ಸ್ವಾಮಿ ವಿವೇಕಾನಂದರ ಭಾರತದ ವಾಸ್ತವ ಸಾಂಸ್ಕೃತಿಕ ಮತ್ತು ಧಾರ್ಮಿಕ ಚಿಂತನೆಗಳು, ಮಹಾತ್ಮ ಗಾಂಧಿಯವರ ನೈತಿಕ ಮತ್ತು ಸತ್ಯ ಸರಳತೆಯ ಹೋರಾಟ ಹಾಗು ಬದುಕಿನ ಸಂದೇಶಗಳು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಧ್ಯಯನ, ಚಿಂತನೆ ಮತ್ತು ಮಾರ್ಗದರ್ಶನಗಳು, ರಾಮ್ ಮನೋಹರ್ ಲೋಹಿಯಾ ಮತ್ತು ಜಯಪ್ರಕಾಶ್ ನಾರಾಯಣ್ ಅವರು ರೂಪಿಸಿದ ಚಿಂತನಾತ್ಮಕ ಚಳವಳಿಗಳು ಈಗಿನ ಸಾಂಸ್ಕೃತಿಕ ಪ್ರತಿರೋಧದ ಎಲ್ಲರೂ ಅಧ್ಯಯನ ಮಾಡಿ ಅರ್ಥಮಾಡಿಕೊಂಡು ಹೋರಾಟ ರೂಪಿಸಿದರೆ ಈ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ.

ಸಾಮಾಜಿಕ ಅಸ್ಪೃಶ್ಯತೆ, ಧಾರ್ಮಿಕ ಅಸ್ಪೃಶ್ಯತೆ, ಶೈಕ್ಷಣಿಕ ಅಸ್ಪೃಶ್ಯತೆ ಮೇಲ್ನೋಟಕ್ಕೆ ಕಡಿಮೆಯಾಗಿರುವಂತೆ ಭಾಸವಾದರು ಆರ್ಥಿಕ ಅಸ್ಪೃಶ್ಯತೆ ಸಾಮಾನ್ಯ ಜನರ ಗಮನಕ್ಕೆ ಬಾರದಷ್ಟು ಗುಲಾಮಿತನವನ್ನು ಸೃಷ್ಟಿಸಿದೆ.  ಹಣದ ಅನಿವಾರ್ಯತೆ ಸೃಷ್ಟಿ ಮಾಡಿ ಇದನ್ನು ‌ಸಾಧಿಸಲಾಗಿದೆ. ಪದವೀದರರು, ಇಂಜಿನಿಯರುಗಳು, ಡಾಕ್ಟರುಗಳು, ವಿಜ್ಞಾನಿಗಳು, ಎಂಬಿಎ ಓದಿದ ಮ್ಯಾನೇಜರುಗಳು, ಐಎಎಸ್ - ಕೆಎಎಸ್ ಗಳು, ಸಾಫ್ಟ್ ವೇರ್ ಗಳು, ಪತ್ರಕರ್ತರು ಮುಂತಾದ ವಿದ್ಯಾವಂತ ಎಲ್ಲರೂ ಈ ಆರ್ಥಿಕ ಗುಲಾಮಿತನದಲ್ಲಿ ತಮಗರಿವಿಲ್ಲದೆ ಸಿಕ್ಕಿ ಹಾಕಿಕೊಂಡಿದ್ದಾರೆ ಮತ್ತು ಅದನ್ನು ಒಪ್ಪಿಕೊಂಡು ಸಮರ್ಥಿಸಿಕೊಳ್ಳುತ್ತಾರೆ. ಕಾರ್ಪೊರೇಟ್ ಸಂಸ್ಕೃತಿ ಎಲ್ಲವನ್ನೂ ಅಪೋಶನ ತೆಗೆದುಕೊಂಡಿದೆ.

ಪ್ರಜಾಪ್ರಭುತ್ವ, ಮಾನವೀಯ ಮೌಲ್ಯಗಳು, ನೈತಿಕ ಪ್ರಜ್ಞೆ, ಸಾಂವಿಧಾನಿಕ ಹಕ್ಕು ಮತ್ತು ಕರ್ತವ್ಯಗಳು ಎಲ್ಲವೂ ಹಣದ ಅಥವಾ ಸಂಬಳದ ಮೋಹದಲ್ಲಿ ಮರೆಯಾಗಿ ಮನೆ ಕಾರು ಆಸ್ತಿ ಉದ್ಯೋಗ ಅಧಿಕಾರ ಪ್ರಶಸ್ತಿ ಪ್ರಚಾರ ದುಬಾರಿ ವಸ್ತುಗಳು ಪ್ರತಿ ಸಾಮಾನ್ಯ ವ್ಯಕ್ತಿಗೆ ಮುಖ್ಯವಾಗಿರುವಾಗ ಸಾಂಸ್ಕೃತಿಕ ಪ್ರತಿರೋಧ ಯಶಸ್ವಿಯಾಗಲು ಅತ್ಯಂತ ಶುದ್ಧ ಪ್ರೀತಿ ಸಹನೆ ಕರುಣೆ ಕ್ಷಮಾಗುಣ ನಿರಂತರ ಹೋರಾಟ ಅನಿವಾರ್ಯವಾಗಿದೆ. 

ಜೊತೆಗೆ ಕೇವಲ ದಲಿತ ಸಂಘಟನೆಗಳು ಮಾತ್ರವಲ್ಲದೆ ಬಹುತ್ವ ಭಾರತವನ್ನು ಪ್ರತಿನಿಧಿಸುವ ರೈತ ಕಾರ್ಮಿಕ ಮಹಿಳಾ ಭಾಷಾ ವೈಚಾರಿಕ ಪ್ರಗತಿಪರ ಮುಂತಾದ ಎಲ್ಲರ ಒಗ್ಗೂಡುವಿಕೆ ಸಾಧ್ಯವಾಗಬೇಕು. ಏಕೆಂದರೆ ನಾವಿರುವುದು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ. ಅದಕ್ಕಾಗಿ ಬಹು ಜನರ ನಂಬಿಕೆ ಮತ್ತು ವಿಶ್ವಾಸ ಗಳಿಸಬೇಕು. ಕೇವಲ ಸೈದ್ಧಾಂತಿಕ ಬದ್ದತೆ ಮಾತ್ರ ಒಂದು ಚಳವಳಿ ಯಶಸ್ವಿಯಾಗಲು ಸಾಧ್ಯವಾಗುವುದಿಲ್ಲ. ಸಾಮಾನ್ಯ ಜನರ ಎಲ್ಲಾ ರೀತಿಯ ಬೇಡಿಕೆ ಮತ್ತು ಪೂರೈಕೆಗಳ ನಡುವೆ ಸಮನ್ವಯ ಸಾಧಿಸಬೇಕು. ಅವರ ಮಾನಸಿಕ ಮತ್ತು ಸಾಮಾಜಿಕ ಪರಿಸ್ಥಿತಿಯ ಅರಿವು ಹೋರಾಟಗಾರರಿಗೆ ಇರಬೇಕು. ಭಾವನಾತ್ಮಕತೆ ಮತ್ತು ವಾಸ್ತವತೆಯನ್ನು ಸಹ ಸಮನ್ವಯ ಗೊಳಿಸಿಯೇ ಹೋರಾಟ ರೂಪಿಸಬೇಕು. ಸತ್ಯ ಮತ್ತು ವಾಸ್ತವದ ನಡುವೆ ಪ್ರೀತಿಯ ಪ್ರವಾಹ ಹರಿಸಬೇಕು. ಆಗ ಮಾತ್ರ ಸಾಂಸ್ಕೃತಿಕ ಪ್ರತಿರೋಧ ಪರ್ಯಾಯ ಮಾರ್ಗವಾಗಿ ಮತ್ತು ಸರಳವಾಗಿ ಜನಪ್ರಿಯ ಆಗುವ ಸಾಧ್ಯತೆ ಇರುತ್ತದೆ. ಆ ನಿಟ್ಟಿನಲ್ಲಿ ನಿನ್ನೆ ನಡೆದ ಕಾರ್ಯಕ್ರಮ ಒಂದು ದಿಟ್ಟ ಹೆಜ್ಜೆ. ಅದಕ್ಕೆ ಶುಭ ಹಾರೈಸುತ್ತಾ.....

ಕೊನೆಯದಾಗಿ, ಒಣ ಪ್ರತಿಷ್ಠೆ ಬದಿಗಿಟ್ಟು ಬಾಬಾ ಸಾಹೇಬರು ನೀಡಿದ ಬದುಕಿಗೆ ಪ್ರತಿಯಾಗಿ ಶೋಷಿತ ಜನರಿಗಾಗಿ ಒಂದಷ್ಟು ತ್ಯಾಗ ಮಾಡುವ ಮನೋಭಾವ ಬೆಳೆಸಿಕೊಂಡಲ್ಲಿ, ಅಧಿಕಾರ, ಪ್ರಶಸ್ತಿ, ಪ್ರಚಾರಗಳನ್ನು ತಿರಸ್ಕರಿಸಿ, ಮಾಧ್ಯಮಗಳ ನಿರೂಪಕರ ನಿರ್ದೇಶಿತ ಜನಾಭಿಪ್ರಾಯಕ್ಕೆ ಪರ್ಯಾಯವಾಗಿ ಪ್ರೀತಿ ಪ್ರಾಮಾಣಿಕತೆಯ ಜನಾಭಿಪ್ರಾಯ ರೂಪಿಸುವ ಹೊಣೆಗಾರಿಕೆಯಿಂದ ನಾಯಕತ್ವ ವರ್ತಿಸಿದಲ್ಲಿ ನಿಜಕ್ಕೂ ಸಮೂಹ ಸಂಪರ್ಕ ಕ್ರಾಂತಿಯ ಈ‌ ಸನ್ನಿವೇಶದಲ್ಲಿ ಯಶಸ್ಸು ಸಾಧ್ಯ ಎಂಬ ಭರವಸೆಯೊಂದಿಗೆ...

-ವಿವೇಕಾನಂದ ಹೆಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ