ಸಾಕೆಂದರೆ ಅದುವೆ ಸಿರಿ!

ಸಾಕೆಂದರೆ ಅದುವೆ ಸಿರಿ!

ಬಯಕೆಗಳಿರೆ ಬಡವ ಸಾಕೆಂದರದುವೆ ಸಿರಿ

ನಾನೆಂಬುದು ಅಜ್ಞಾನ ನನದೇನೆನಲು ಜ್ಞಾನ |

ದಾಸನಾದರೆ ಹಾಳು ಒಡೆಯನಾದರೆ ಬಾಳು

ಮನದೊಡೆಯನಾದವನೆ  ಮಾನ್ಯ ಮೂಢ ||

     ಮನಸ್ಸಿನಲ್ಲಿ ಏನೋ ಒಂದು ಆಸೆ ಇರುತ್ತದೆ. ಅದು ಈಡೇರಿದಾಗ ಸಂತೋಷವಾಗುತ್ತದೆ. ಆದರೆ ಅಲ್ಲಿಗೆ ಮುಗಿಯುತ್ತದೆಯೇ? ಇಲ್ಲ, ಇನ್ನೂ ಮುಂದಿನದನ್ನು ಪಡೆಯುವ ಆಸೆ ಹುಟ್ಟುತ್ತದೆ. ಅತೃಪ್ತಿ ಸಂತೋಷದ ಜಾಗವನ್ನು ಕಬಳಿಸಿಬಿಡುತ್ತದೆ. ನಾವು ಪುನಃ ಹೆಚ್ಚಿನದಕ್ಕಾಗಿ ಕಷ್ಟಪಡತೊಡುತ್ತೇವೆ. ಇದು ಮುಗಿಯುವುದೆಂದು? ಎಲ್ಲಿಯವರೆಗೆ ನಮಗೆ ಸಾಕು ಅನ್ನಿಸುವುದಿಲ್ಲವೋ ಅಲ್ಲಿಯವರೆಗೆ ಇದು ಇದ್ದೇ ಇರುತ್ತದೆ. ಸಾಕು ಅನ್ನಿಸಿದಾಗ ತೃಪ್ತಿ ನೆಲೆಸುತ್ತದೆ. ಇಂದಿನ ಆಧುನಿಕ ಪ್ರಪಂಚದಲ್ಲಿ ಸಂತೋಷ, ತೃಪ್ತಿ, ಆಂತರಿಕ ಶಾಂತಿ ಮತ್ತು ಜೀವನದ ಆನಂದಗಳನ್ನು ಅನುಭವಿಸುವುದು ದುಸ್ತರವೇನೋ ಅನ್ನಿಸುವ ಸ್ಥಿತಿ ಇದೆ. ಆಂತರಿಕ ಶಾಂತಿ, ಸಂತೋಷಗಳನ್ನು ಹುಡುಕುವುದೇ ಮಾನವರು ಎಂದಿನಿಂದಲೂ ಮಾಡಿಕೊಂಡು ಬರುತ್ತಿರುವ ಕೆಲಸವಾಗಿದ್ದು, ಸುಯೋಗ್ಯವಾದ ದಾರಿಯಲ್ಲಿ ಸಾಗಿ ಸಫಲರಾಗುವವರು ಕೆಲವರು ಮಾತ್ರ.

     ಸಾಕು ಅನ್ನಿಸಿದರೆ ತೃಪ್ತಿಯ ಹಂತ ತಲುಪಿದಂತೆ ಅನ್ನುವುದು ಸರಿ. ಈ ಸಾಕು ಅನ್ನುವ ಭಾವನೆ ಬೆಳೆಸಿಕೊಳ್ಳಲು ಅನುಸರಿಸಬೇಕಾದ ಒಂದು ನೈತಿಕ ಗುಣ ಮತ್ತು ಆಂತರಿಕ ಕಟ್ಟುಪಾಡು ಎಂದರೆ ಅದೇ  'ಅಪರಿಗ್ರಹ'. ಅಪರಿಗ್ರಹವೆಂದರೆ ಅಸಂಗ್ರಹ, ತನ್ನದೆಂಬ ಭಾವರಾಹಿತ್ಯ ಮತ್ತು ನಿರ್ಲಿಪ್ತತೆ ಎಂಬ ಆರ್ಥಗಳಿವೆ. ಇವುಗಳ ಅರ್ಥವೈಶಾಲ್ಯ ಎಷ್ಟಿದೆಯೆಂದರೆ ಗಂಟೆಗಟ್ಟಲೆ ಚರ್ಚೆ ಮಾಡುತ್ತಲೇ ಹೋಗಬಹುದಾಗಿದೆ. ಹಾಗಾದರೆ ನಾವು ಏನನ್ನೂ ಕೂಡಿಡಲೇಬಾರದೆ? ನಿರಾಸಕ್ತರಾಗಿ ಚಿಂದಿ ಬಟ್ಟೆ ತೊಟ್ಟು ಬೀದಿಯಲ್ಲಿ ಅಲೆದಾಡಬೇಕೆ? ಅಪರಿಗ್ರಹವೆಂದರೆ ಹೀಗೂ ಅಲ್ಲ. ಸತ್ವಗುಣ, ರಜೋಗುಣ ಮತ್ತು ತಮೋಗುಣಗಳ ಜನರನ್ನು ಮತ್ತು ಅವರ ಸ್ವಭಾವಗಳನ್ನು ಗಮನಿಸುತ್ತೇವಲ್ಲವೆ? ತಮೋಗುಣದವರು ಆಲಸಿಕರಾಗಿದ್ದರೆ, ರಜೋಗುಣದವರು ಮುನ್ನುಗ್ಗುವ, ರೋಷಾವೇಶದ ಸ್ವಭಾವದವರಾಗಿರುತ್ತಾರೆ. ಆದರೆ ಸಾತ್ವಿಕ ಗುಣದವರು ಮಾದರಿಯಾಗಿದ್ದು, ಅವರಲ್ಲಿ ತಮಸ್ ಮತ್ತು ರಜಸ್ ಗುಣಗಳ ಹಿತವಾದ ಸಾಂಗತ್ಯವಿರುತ್ತದೆ. ಭೌತಿಕ ಸಂಪತ್ತಿನ ಬಗ್ಗೆ ವೈರಾಗ್ಯ ತಳೆದು ವಾಸದ ಮನೆಯನ್ನೂ ತೊರೆದು, ದೇಹವನ್ನು ಬೆಚ್ಚಗಿಡುವ ಬಟ್ಟೆಗಳನ್ನೂ ವರ್ಜಿಸುವವರು ಅತಿರೇಕದ ಒಂದು ಕೊನೆಯಲ್ಲಿದ್ದರೆ, ಬಂದದ್ದೆಲ್ಲವನ್ನೂ ಕೂಡಿಡುತ್ತಾ, ಹೊರಗೆ ಹೋಗಲು ಬಿಡದ, ಅಗತ್ಯಕ್ಕಿಂತಲೂ ಹೆಚ್ಚು ಸಂಪತ್ತನ್ನು ಸಂಗ್ರಹಿಸುತ್ತಲೇ ಹೋಗುವವರು ಅತಿರೇಕದ ಮತ್ತೊಂದು ಕೊನೆಯಲ್ಲಿರುತ್ತಾರೆ. ಸಾತ್ವಿಕ ಗುಣದವರು ತಮಗೆ ಎಷ್ಟು ಬೇಕೋ ಅಷ್ಟು ಮಾತ್ರ ಹೊಂದಿ ತೃಪ್ತರಾಗುತ್ತಾರೆ. ಇದು ಅಪರಿಗ್ರಹದ ಆದರ್ಶ ಸ್ಥಿತಿ, ಬದುಕಲು ಎಷ್ಟು ಅಗತ್ಯವೋ ಅಷ್ಟನ್ನು ಮಾತ್ರ ಬಯಸುವುದು ಮತ್ತು ಪಡೆಯುವುದು.

     ನಮಗೆ ಜೀವಿಸಲು ಎಷ್ಟು ಅಗತ್ಯ ಮತ್ತು ಏನು ಅಗತ್ಯ? ನಮಗೆ ಅನುಕೂಲಕರವಾಗಿರಲು, ರಕ್ಷಣೆಯಿರಲು, ಆರೋಗ್ಯದಿಂದ ಇರಲು, ಉತ್ತಮ ಶಿಕ್ಷಣ ಹೊಂದಲು, ಇತ್ಯಾದಿ ಮೂಲಭೂತ ಅಗತ್ಯವಿರುವ ಸಂಗತಿಗಳು ಇರಬೇಕು. ಈ ಅಗತ್ಯ ಅನ್ನುವುದು ವಿಚಿತ್ರವಾಗಿರುತ್ತದೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅಗತ್ಯವಾಗುತ್ತದೆ. ಆಡಳಿತಗಾರರಿಗೆ, ಅಧಿಕಾರಿಗಳಿಗೆ, ಸಾಮಾನ್ಯರಿಗೆ ಅವರ ಅಗತ್ಯಗಳು ಬೇರೆಯದೇ ಆಗಿರುತ್ತವೆ. ನನ್ನದೇ ಅನುಭವ ಇಲ್ಲಿ ಉಲ್ಲೇಖಿಸಬಹುದೆನಿಸುತ್ತಿದೆ. ನಾನು ಉಪತಹಸೀಲ್ದಾರನಾಗಿದ್ದಾಗ ನಾನು ಒಂದು ಮೊಪೆಡ್ ಹೊಂದಿದ್ದೆ. ನನ್ನ ಅಗತ್ಯಗಳಿಗೆ ಅದು ಸಾಕಿತ್ತು. ಅಲ್ಲದೆ ಹಾಸಿಗೆ ಇದ್ದಷ್ಟು ಕಾಲುಚಾಚುವ ಸ್ವಭಾವದವನಾದ ನನಗೆ ಆ ಸಂದರ್ಭದಲ್ಲಿ ಅದಕ್ಕಿಂತ ಹೆಚ್ಚಿನ ಬೆಲೆಯ ವಾಹನ ಹೊಂದುವುದು ಆಗಿರಲಿಲ್ಲ. 'ಟರ್..ರ್..ರ್..' ಎಂದು ಶಬ್ದ ಮಾಡುತ್ತಿದ್ದ ನನ್ನ ಮೊಪೆಡ್ಡಿನ ಪಕ್ಕದಲ್ಲಿಯೇ ನನ್ನ ಅಧೀನ ನೌಕರರಾದ ರೆವಿನ್ಯೂ ಇನ್ಸ್‌ಪೆಕ್ಟರ್, ಗ್ರಾಮಲೆಕ್ಕಿಗರುಗಳು 'ಗುಡು .ಗುಡು . .' ಶಬ್ದ ಮಾಡುತ್ತಾ ಬರುತ್ತಿದ್ದ ತಮ್ಮ ಬುಲೆಟ್, ಯೆಜ್ಡಿ ಮುಂತಾದ ಬೈಕುಗಳನ್ನು ನನ್ನ ಮೊಪೆಡ್ಡಿನ ಪಕ್ಕದಲ್ಲಿಯೇ ನಿಲ್ಲಿಸುತ್ತಿದ್ದರು. ಆನೆಗಳ ಮಧ್ಯದಲ್ಲಿ ಇದ್ದ ಕುರಿಯಂತೆ ನನ್ನ ಮೊಪೆಡ್ ಕಾಣಿಸುತ್ತಿತ್ತು. ನನ್ನ 'ಡಿಗ್ನಿಟಿ'ಗೆ ಬೈಕು ತೆಗೆದುಕೊಳ್ಳಲು ಹಲವರು ಸೂಚಿಸುತ್ತಲೂ ಇದ್ದರು. ೫-೬ ವರ್ಷಗಳು ಈ ಮೊಪೆಡ್ ಓಡಿಸುತ್ತಿದ್ದವನು ನಂತರ ಒಂದು ಸುಜುಕಿ ಸಮುರಾಯ್ ತೆಗೆದುಕೊಂಡು ನನ್ನ 'ಡಿಗ್ನಿಟಿ' ಹೆಚ್ಚಿಸಿಕೊಂಡಿದ್ದೆ! ತಹಸೀಲ್ದಾರನಾದ ಮೇಲೆ ಸರ್ಕಾರಿ ವಾಹನವೇ ಇತ್ತಾದ್ದರಿಂದ 'ಡಿಗ್ನಿಟಿ'ಗೆ ಧಕ್ಕೆಯಾಗಿರಲಿಲ್ಲ. ಈಗ ನಾನು ನಿವೃತ್ತನಾಗಿದ್ದೇನೆ. ಸುಜುಕಿ ಬೈಕು ಮಾರಿ ಒಂದು ಸ್ಕೂಟರ್ ಇಟ್ಟುಕೊಂಡಿದ್ದೇನೆ. ಇದು ನನ್ನ ಅಗತ್ಯಕ್ಕೆ ಸಾಕು. ಈ 'ಅಗತ್ಯ' ಅನ್ನುವುದು ವಿಚಿತ್ರ ಎಂದು ಈ ಕಾರಣಕ್ಕಾಗಿಯೇ ಹೇಳಿದ್ದು. ನಿಜ, ಒಬ್ಬ ಪ್ರಧಾನ ಮಂತ್ರಿಗೆ, ಒಂದು ದೊಡ್ಡ ಕಂಪೆನಿಯ ಮಾಲಿಕನಿಗೆ, ಗಣ್ಯರು ಮತ್ತು ಉನ್ನತ ಸ್ಥಾನಗಳಲ್ಲಿರುವವರಿಗೆ ಕೆಲವು ಹೆಚ್ಚಿನ ಅಗತ್ಯಗಳು ಅವರ ಸ್ಥಾನಮಾನಗಳಿಗೆ ತಕ್ಕಂತೆ ಇರಬೇಕಾಗುತ್ತದೆ, ಅವರುಗಳು ಇಷ್ಟಪಡಲಿ, ಇಷ್ಟಪಡದಿರಲಿ.

     ಅಪರಿಗ್ರಹದ ವಿಚಾರ ಚರ್ಚಿಸುವಾಗ ಅಪಾರಗ್ರಹಣದ ಅನಾನುಕೂಲಗಳನ್ನೂ ಗಮನಿಸೋಣ. ಹೆಚ್ಚಿನ ಹಣ, ಸಂಪತ್ತು, ಆಸ್ತಿ ಇತ್ಯಾದಿಗಳನ್ನು ಹೊಂದಿದವರಿಗೆ ಅವುಗಳ ರಕ್ಷಣೆ ಮತ್ತು ಉಳಿಸಿಕೊಳ್ಳುವ ಬಗ್ಗೆ ಗಮನವಿರಬೇಕಾಗುತ್ತದೆ, ಅವು ಎಲ್ಲಿ ಹಾಳಾಗುವುವೋ, ನಷ್ಟ ಹೊಂದುವವೋ ಎಂಬ ಆತಂಕ ಸಹ ಇರುತ್ತದೆ. ಹೊಸದಾಗಿ ಕೊಂಡ ಕಾರಿನ ಮೇಲೆ ಯಾರಾದರೂ ಗೀಚಿದರೆ ಅಥವ ಏನಾದರೂ ತಗುಲಿ ಗೆರೆಗಳು ಮೂಡಿದರೆ ನಮ್ಮ ಹಣೆಯ ಮೇಲೂ ಗೆರೆಗಳು ಮೂಡುತ್ತವೆ. ಹೊಂದಿದ ಸಂಪತ್ತಿನ ರಕ್ಷಣೆಯ ಒತ್ತಡದಿಂದ ಅಥವ ಸಂಪತ್ತಿನ ನಷ್ಟದಿಂದ ಬದುಕು ಸಂತೋಷವನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ಅಪರಿಗ್ರಹ ಇಂತಹ ಸಂಗತಿಗಳ ಬಗ್ಗೆ ಹೆಚ್ಚು ಕೇಂದ್ರೀಕೃತವಾಗದಿರಲು ಹೇಳುತ್ತದೆ. ಅಪಾರಗ್ರಹಣದ ಭೀಕರ ಫಲವನ್ನು ನಮ್ಮ ದೇಶ ಇಂದು ಎದುರಿಸುತ್ತಿದೆ. ಅಕ್ರಮ ಮಾರ್ಗದಿಂದ ಈ ಹಿಂದೆ ಸಾಮಾನ್ಯರಂತಿದ್ದ ಹಲವಾರು ರಾಜಕಾರಣಿಗಳು ಇಂದು ಲೆಕ್ಕವಿಲ್ಲದಷ್ಟು ಕೋಟಿ ಕೋಟಿ ಸಾರ್ವಜನಿಕರ ಹಣವನ್ನು ಕೊಳ್ಳೆ ಹೊಡೆದು ಕೊಬ್ಬಿದ್ದಾರೆ ಮತ್ತು ಅದರ ಬಲದಿಂದಲೇ ಅಧಿಕಾರ ಉಳಿಸಿಕೊಳ್ಳುತ್ತಿದ್ದಾರೆ ಅಥವ ಉಳಿಸಿಕೊಳ್ಳಲು ಎಂತಹ ಹೇಯ ಮಾರ್ಗವನ್ನೂ ಅನುಸರಿಸುವ ಮಟ್ಟಕ್ಕೆ ಇಳಿದಿದ್ದಾರೆ, ಅದರಲ್ಲಿ ಸಫಲರೂ ಆಗುತ್ತಿದ್ದಾರೆ. ಇವರುಗಳ ಕಪಿಮುಷ್ಟಿಯಿಂದ ಪಾರಾಗುವುದು ಸಾಮಾನ್ಯ ಜನತೆಗೆ ಸಾಧ್ಯವಿಲ್ಲದೆ ದೇಶ ಅಧೋಗತಿಗೆ ಜಾರುತ್ತಿದೆ.

     ಅಪರಿಗ್ರಹದ ಪ್ರಬಲ ಬೆಂಬಲಿಗ ಗಾಂಧೀಜಿಯವರ ಅನಿಸಿಕೆ ಕೇಳಿ: "ನನ್ನ ಹೆಗಲ ಮೇಲೆ ಬಿದ್ದ ಹೊರೆಯಿಂದಾಗಿ ನಾನು ಆರಾಮವಾಗಿ ನಡೆಯಲಾಗುತ್ತಿಲ್ಲ ಮತ್ತು ನನ್ನ ಸಹಜನರ ಸೇವೆಯನ್ನು ಸುಸೂತ್ರವಾಗಿ ಮತ್ತು ಹೆಚ್ಚಿನ ಸಂತೋಷದಿಂದ ಮಾಡಲಾಗುತ್ತಿಲ್ಲವೆಂದು ನನಗೆ ಭಾಸವಾಗುತ್ತಿತ್ತು. ಯಾವುದನ್ನೇ ಆಗಲಿ ಹೊಂದುವುದು ತ್ರಾಸದಾಯಕ ಮತ್ತು ಹೊರೆ ಅನ್ನಿಸಿತು. ಅದರ ಮೂಲವನ್ನು ಹುಡುಕಿದಾಗ ನನಗೆ ಕಂಡದ್ದೇನೆಂದರೆ, ಯಾವುದನ್ನಾದರೂ ನನ್ನ ಸ್ವಂತದ್ದೆಂದು ಇಟ್ಟುಕೊಂಡರೆ, ಅದನ್ನು ಇಡೀ ಪ್ರಪಂಚದ ವಿರುದ್ಧ ರಕ್ಷಿಸಬೇಕಿತ್ತು. . .ನನಗೆ ನಾನೇ ಹೇಳಿಕೊಂಡೆ: ಯಾರಾದರೂ ಅದನ್ನು ಬಯಸಿದರೆ, ಅದು ಅವರು ಕೆಟ್ಟ ಉದ್ದೇಶದಿಂದ ಮಾಡಿರಲಾರರು; ಆದರೆ ಅವರಿಗೆ ನನಗಿಂತ ಹೆಚ್ಚಿನ ಅವಶ್ಯಕತೆ ಇದ್ದೀತು. ಹೊಂದುವುದು ನನಗೆ ಅಪರಾಧದಂತೆ ತೋರುತ್ತದೆ. ಇತರರು ಹೊಂದಲು ಸಾಧ್ಯವಿರುವಂತಹ ವಸ್ತುಗಳನ್ನಷ್ಟೇ ನಾನೂ ಹೊಂದಬಹುದು. ಅದು ಅಸಾಧ್ಯವೇ ಸರಿ.  ಆದ್ದರಿಂದ ಎಲ್ಲರೂ ಹೊಂದಬಹುದಾದ ಒಂದೇ ವಸ್ತುವೆಂದರೆ 'ಏನನ್ನೂ ಹೊಂದದಿರುವುದು' ಅಥವ ಇಚ್ಛಾಪೂರ್ವಕ ಸಮರ್ಪಣ . . " ಸರಳತೆಗೆ ಹೆಸರಾಗಿದ್ದ ದಿ. ಲಾಲಬಹಾದುರ ಶಾಸ್ತ್ರಿಯವರು ತಮ್ಮ ಪತ್ನಿ ಮನೆ ಖರ್ಚು ಕಳೆದು ಹತ್ತು ರೂ. ಉಳಿಸಿದ್ದು ತಿಳಿದಾಗ ತಮ್ಮ ಸಂಬಳದಲ್ಲಿ ಹತ್ತು ರೂ. ಕಡಿಮೆ ಮಾಡಲು ತಮ್ಮ ಕಾರ್ಯದರ್ಶಿಗೆ ತಿಳಿಸಿದ್ದರಂತೆ. ಇನ್ನೊಬ್ಬ ಪ್ರಧಾನಿ ದಿ. ಗುಲ್ಜಾರಿಲಾಲ್ ನಂದಾರವರು ತಮ್ಮ ಅಂತ್ಯಕಾಲವನ್ನು ಒಂದು ಗುಡಿಸಲಿನಲ್ಲಿ ಸರಳವಾಗಿ ಕಳೆದಿದ್ದರು. ಇಂತಹವರು ಅಪರಿಗ್ರಹದ ಮಹತ್ವ ತಿಳಿದಿದ್ದವರು. ಇಂತಹ ವ್ಯಕ್ತಿತ್ವದವರು ಇಂದಿಗೂ ನಮ್ಮ ನಡುವೆ ಕಂಡುಬರುತ್ತಾರೆ. ಭೌತಿಕ ಸಂಪತ್ತು, ಸ್ವಂತ ಜೀವನವನ್ನು ಬದಿಗೊತ್ತಿ ದೇಶಕಾರ್ಯದ ಸಲುವಾಗಿ, ಸಮಾಜದ ಉನ್ನತಿಗಾಗಿ, ಸರ್ವರ ಒಳಿತಿಗಾಗಿ ಜೀವನವನ್ನೇ ಮೀಸಲಿರಿಸಿರುವ ಸಾವಿರಾರು ಜೀವಗಳಿವೆ. ನಮಗೆ ನೋಡುವ ಕಣ್ಣುಗಳಿರಬೇಕು ಅಷ್ಟೆ. 'ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ' ಅನ್ನುವ ಧ್ಯೇಯವಾಕ್ಯ ಇಂತಹವರನ್ನು ಕುರಿತೇ ಇರಬೇಕು! ಮಾಧ್ಯಮಗಳು ಋಣಾತ್ಮಕ ಸಂಗತಿಗಳಿಗೆ ಪ್ರಾಧಾನ್ಯತೆ ನೀಡಿ ತಮ್ಮ ಟಿ.ಆರ್.ಪಿ. ಹೆಚ್ಚಿಸಿಕೊಳ್ಳುವ ಕಡೆಗೆ, ತಮ್ಮ ಆದಾಯ ಹೆಚ್ಚಿಸಿಕೊಳ್ಳುವ ಕಡೆಗೆ ಚಿಂತಿಸಿ ಸಮಾಜವನ್ನು ಹಾಳುಗೆಡವುವ ಬದಲಿಗೆ ಅಥವ ಜೊತೆಜೊತೆಗಾದರೂ ಇಂತಹ ಉತ್ತಮ ವ್ಯಕ್ತಿತ್ವಗಳ ದರ್ಶನ ಮಾಡಿಸುವ ಕಡೆಗೂ ದೃಷ್ಟಿ ಹರಿಸಬೇಕಾದುದು ಇಂದಿನ ಅಗತ್ಯವಾಗಿದೆ.

     ಪುರಂದರದಾಸರ 'ಬಡತನಕೆ ಉಂಬುವ ಚಿಂತೆ| ಉಂಬುವುದಾದರೆ ಉಡುವ ಚಿಂತೆ| ಉಡುವುದಾದರೆ ಮದುವೆಯ ಚಿಂತೆ| ಮದುವೆಯಾದರೆ ಮಕ್ಕಳ ಚಿಂತೆ|' ಎಂಬ ಹಾಡು ಮನುಷ್ಯನ ಸ್ವಭಾವಕ್ಕೆ ಹಿಡಿದ ಕನ್ನಡಿಯಾಗಿದೆ. ಹೀಗೆ 'ಅನುಗಾಲವೂ ಚಿಂತೆ ಜೀವಕೆ' ಎಂದು ಹಾಡಿದ ಪುರಂದರದಾಸರ ವೈಯಕ್ತಿಕ ಜೀವನವೇ ಅಪರಿಗ್ರಹದ ಔನ್ನತ್ಯಕ್ಕೆ ಮಾದರಿಯಾಗಿದೆ. ಅಂದಿನ ಕಾಲಕ್ಕೆ ಅತ್ಯುನ್ನತ ಶ್ರೀಮಂತರೆನಿಸಿ 'ನವಕೋಟಿ ನಾರಾಯಣ'ರೆಂಬ ಹೆಸರಿದ್ದ ಅವರು ಕಡುಲೋಭಿಯಾಗಿದ್ದು ತಾವೂ ನೆಮ್ಮದಿಯಾಗಿರದೆ ತಮ್ಮ ಕುಟುಂಬದವರನ್ನೂ ನೆಮ್ಮದಿಯಾಗಿ ಇರಲು ಬಿಡದಿದ್ದವರು. ಇಂತಹವರು ದೈವಪ್ರೇರಣೆಯಿಂದ ಪತ್ನಿಯ ಮೂಲಕವಾಗಿ ಭೌತಿಕ ಸಂಪತ್ತಿನ ಮೂಲಕ ಸುಖವಾಗಿರಲಾರೆನೆಂಬುದನ್ನು ಮನಗಂಡು, ಅಕ್ಷರಶಃ ತಮ್ಮ ಸಂಪತ್ತೆಲ್ಲವನ್ನೂ ತ್ಯಜಿಸಿ ಹೊರಬಂದು ಬರಿಗೈಯಲ್ಲಿ ತಂಬೂರಿ, ತಾಳ ಹಿಡಿದು ಸಂತಸಪಟ್ಟವರು. 'ಕಳೆದುಕೊಳ್ಳಲು ಏನೂ ಇರದಾಗ ಮುಂದೆ ಎಲ್ಲಾ ಗಳಿಸುವುದೇ ಆಗಿರುತ್ತದೆ' ಎಂದು ಸಾರಿದವರು. 

     ಸಾರಾಂಶ ರೂಪವಾಗಿ ಹೇಳಬೇಕೆಂದರೆ, ಅಪರಿಗ್ರಹವು ಕಳೆದುಹೋಗಬಹುದಾದ, ನಷ್ಟವಾಗಬಹುದಾದ ಸಂಗತಿಗಳ ಬಗ್ಗೆ ನಮ್ಮ ಮನಸ್ಸನ್ನು ಕೇಂದ್ರೀಕರಿಸದೆ, ಕಳೆಯಲಾಗದ ಸಂಗತಿಗಳ ಬಗ್ಗೆ ಕೇಂದ್ರೀಕರಿಸಲು ಸೂಚಿಸುತ್ತದೆ. ಕಳೆದುಹೋಗದ, ನಷ್ಟವಾಗದ ಆ ಸಂಗತಿಗಳಾದರೂ ಯಾವುವು? ನಿಷ್ಕಲ್ಮಶ ಪ್ರೀತಿ, ಸುತ್ತಲಿನ ಜೀವಜಗತ್ತು, ಪ್ರಕೃತಿಯ ಕುರಿತು ಕಾಳಜಿ, ಸುಮನಸ್ಸಿನಿಂದ, ಸದುದ್ದೇಶದಿಂದ ಮಾಡುವ ಒಳ್ಳೆಯ ಕೆಲಸಗಳು, ಇತರರಿಗೆ ಹಿತವೆನಿಸುವ ನಡವಳಿಕೆಗಳು, ಮನಸ್ಸನ್ನು ಶಾಂತಗೊಳಿಸುವ ಪ್ರಯತ್ನಗಳು, ಆತ್ಮನನ್ನು ಅರಿಯುವ, ಅಂತರಂಗದ ಕರೆಗೆ ಓಗೊಡುವ ಮನಸ್ಥಿತಿಗಳು ಕಳೆದುಹೋಗುವ ಸಂಗತಿಗಳಲ್ಲ. ಅತ್ಯಂತ ಬಡವನೆನಿಸಿಕೊಂಡವನೂ ಸಹ ಇತರರಿಗೆ ಒಳ್ಳೆಯ ಮಾತನಾಡಬಲ್ಲ, ಸಹಾಯ ಮಾಡಬಲ್ಲ! ಅಂತರಂಗದ ಶುದ್ಧತೆಗೆ ಅಪರಿಗ್ರಹ ಅತ್ಯುತ್ತಮ ಸಾಧನವಾಗಿದೆ.

-ಕ.ವೆಂ.ನಾಗರಾಜ್.

ಚಿತ್ರ ಕೃಪೆ: http://niyamasyyamas-suberquibuboerat.blogspot.in/2010/08/ejemplos-de-ap...

Comments

Submitted by nageshamysore Sun, 05/04/2014 - 19:44

ಕವಿಗಳೇ, ಅಪರಿಗ್ರಹವನ್ನು 'ಪರಿಗ್ರಹಿ'ಸುವ ಜಿತೇಂದ್ರಿಯತ್ವ ಎಲ್ಲರಿಗೂ ಸುಲಭದೆ ದಕ್ಕದ ಸರಕು!
.
ಕೊ.ಕೊ: ಹಾಗೆಯೇ ಮದುವೆ ವಾರ್ಷಿಕೋತ್ಸವದ ಹೃತ್ಪೂರ್ವಕ ಶುಭಾಶಯಗಳು ಮತ್ತು ಅಭಿನಂದನೆಗಳು (ತುಸು ತಡವಾಗಿ)

Submitted by naveengkn Mon, 05/05/2014 - 14:42

ಕಳೆದುಕೊಳ್ಳಲು ಏನೂ ಇರದಾಗ ಮುಂದೆ ಎಲ್ಲಾ ಗಳಿಸುವುದೇ ಆಗಿರುತ್ತದೆ' ಎಂದು ಸಾರಿದವರು.,,,, ಕವಿಗಳೇ,,, ಎಂತಹ ಅರ್ಥಪೂರ್ಣ ಬರಹ,,,,ಸಾಂದರ್ಭಿಕತೆಗೆ ಹಾಗು ಸರಳ ವಿವರಣೆಗೆ ತಲೆಬಾಗಿದ್ದೇನೆ,,,ಬೇಕುಗಳ ಭಾವನಾರಹಿತ ಬದುಕಿಗೆ ಉತ್ತರ ಸುಂದರವಾಗಿದೆ,,,ಧನ್ಯವಾದಗಳು