ಸಾಗರಕ್ಕೊಂದು ಗರಿಮೆ ತಂದ ಸಿ.ಟಿ. ಬ್ರಹ್ಮಾಚಾರ್
ಸಾಗರಕ್ಕೆ ಮತ್ತೊಮ್ಮೆ ನಾಟಕ ಅಕಾಡೆಮಿ ಗೌರವ
ಸಾಗರದ ಸಿ.ಟಿ. ಬ್ರಹ್ನಾಚಾರ್ ಮಲೆನಾಡಿನ ನಾಟಕ ರಂಗದಲ್ಲೊಂದು ಗುರುತು. 56ವರ್ಷ ವಯಸ್ಸಿನ ಬ್ರಹ್ಮಾಚಾರ್ 2010-11ರ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನಮ್ಮೆಲ್ಲರ ಒಡನಾಡಿ, ನೀನಾಸಮ್ ಪದವೀಧರ ಬ್ರಹ್ಮಾಚಾರ್ ಚಿಕ್ಕಂದಿನಿಂದಲೂ ನಾಟಕದ ಘೀಳು ಅಂಟಿಸಿಕೊಂಡು ಬಂದವರು. ಶಾಲಾ ದಿನಗಳ ನಂತರ ಸಾಗರದ ಪ್ರಸಿದ್ಧ ರಂಗ ಸಂಘಟನೆ ಉದಯ ಕಲಾವಿದರು ಸಾಗರ ಇದರ ಸಕ್ರಿಯ ಕಾರ್ಯಕರ್ತನಾಗಿ, ನಟನಾಗಿ ದುಡಿದ ಇವರು ನೀನಾಸಮ್ ಪದವಿ ಪಡೆದು ನೀನಾಸಮ್ ತಿರುಗಾಟದ ಸದಸ್ಯನಾಗಿ, ನಟನಾಗಿ, ಬೆಳಕು ವಿನ್ಯಾಸಕಾರನಾಗಿ ದುಡಿದ ಅನುಭವಿ. ನಂತರ ಉದಯ ಕಲಾವಿದರ ನಾಟಕಗಳಿಗೂ ನಿರ್ದೇಶಕನಾಗಿ, ರಂಗಸಜ್ಜಿಕೆ, ಪ್ರಸಾದನ ಪಟುವಾಗಿ, ಬೆಳಕು ವಿನ್ಯಾಸಕಾರನಾಗಿ, ಒಟ್ಟಾರೆ ಎಲ್ಲ ರಂಗಗಳಲ್ಲೂ ಅವಶ್ಯ ವ್ಯಕ್ತಿಯಾಗಿ ದುಡಿಯುತ್ತಿದ್ದಾರೆ.
ಇವರ ಬೆನ್ನಿಗೆ ಧರ್ಮಸ್ಥಳ, ಉಜರೆ, ಚಿಕ್ಕಮಗಳೂರು, ಪುತ್ತೂರು, ಶಿವಮೊಗ್ಗ, ಸಾಗರ, ಹೊಸನಗರ ಹೀಗೆ ನಾಡಿನಾದ್ಯಂತ ನಾಟಕ ನಿರ್ದೇಶಿಸಿ ತಂತ್ರಜ್ಞನಾಗಿಯೂ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಇದೆ. ಇತ್ತೀಚಿನ ದಿನಗಳಲ್ಲಿ ಮುಂಬೈ ಕನ್ನಡ ಸಂಘದ ಉಪಾಧ್ಯಾಯರು ಮತ್ತು ಮಕ್ಕಳಿಗೂ ನಾಟಕ ನಿರ್ದೇಶಿಸಿದ್ದಾರೆ.
ಸಾಲದೆಂಬಂತೆ ತಮಗೆ ಅವಶ್ಯ ಕಂಡ ಸಂದರ್ಭಕ್ಕೆ ಐದು ನಾಟಕಗಳನ್ನೂ ರಚಿಸಿ ನಿರ್ದೇಶಿಸಿ ಸೈ ಎನಿಸಿಕೊಂಡಿದ್ದಾರೆ.
ಇವರ ಈ ಎಲ್ಲ ಸಾಧನೆ ಸೇವೆಗಳನ್ನು ಪರಿಗಣಿಸಿ ಈ ಬಾರಿಯ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಿ ಗೌರವಿಸುತ್ತಿದೆ.
ಇವರಿಗೆ ನನ್ನ ಅಭಿನಂದನೆಗಳು.