ಸಾಗರದಲ್ಲಿ ಹಾಡುವ ಸಾಗರಿ ವೇಲ್
ಸಾಗರದ ದೈತ್ಯ ಸಸ್ತನಿ ಸಾಗರಿ ಎಂಬ ವೇಲ್ ಮುಂಜಾವದಲ್ಲಿ ನೀರಿನಲ್ಲಿ ಈಜಾಡುತ್ತಾ “ಓಹೋ, ಎಂಥ ಚಂದದ ಮುಂಜಾವ” ಎಂದು ಹಾಡಿತು. ಸೂರ್ಯನ ಕಿರಣಗಳು ಶುಭ್ರ ನೀಲಿ ನೀರಿನ ಆಳಕ್ಕೆ ನುಗ್ಗುತ್ತಿದ್ದವು. ಅದು ಅತ್ತಿತ್ತ ಈಜಾಡಿ, ಚಕ್ರಾಕಾರದಲ್ಲಿ ಸುತ್ತಾಡಿ, ಭುಸ್ಸೆಂದು ಸಾಗದಲೆಗಳ ಮೇಲಕ್ಕೆ ಕಂಸಾಕಾರದಲ್ಲಿ ಹಾರಿ ನಾಜೂಕಾಗಿ ಪುನಃ ನೀರಿಗೆ ಇಳಿಯಿತು.
ಹಾಡುವುದು ಮತ್ತು ಸಾಗರದ ನೀರಿನಲ್ಲಿ ನೃತ್ಯ ಮಾಡುವುದೆಂದರೆ ಸಾಗರಿಗೆ ಖುಷಿಯೋ ಖುಷಿ. ಅದರ ನೃತ್ಯ ಚಂದವೋ ಚಂದ. ಆದರೆ ಅದರ ಹಾಡುವಿಕೆ ಮಾತ್ರ ಕರ್ಣಕಠೋರ. ಅದು ಒಂದಾದ ಮೇಲೊಂದರಂತೆ ಹಾಡುಗಳನ್ನು ಹಾಡುವಾಗ ಅದರ ದೊಡ್ಡ ಬಾಯಿ ಇಷ್ಟಗಲ ತೆರೆದುಕೊಳ್ಳುತ್ತಿತ್ತು. ಆದರೆ ಸಾಗರಿಯ ಯಾವ ಹಾಡಿಗೂ ರಾಗವೇ ಇರುತ್ತಿರಲಿಲ್ಲ!
ಸಾಗರಿಯ ಭಯಂಕರ ಧ್ವನಿ ಸಾಗರದಲ್ಲಿ ಮೈಲುಗಳುದ್ದ ಪಸರಿಸುತ್ತಿತ್ತು. ನೀರಿನಲ್ಲಿ ತರಂಗಗಳನ್ನು ಎಬ್ಬಿಸುತ್ತಿದ್ದ ಅದನ್ನು ಕೇಳಿದೊಡನೆ ಮೀನುಗಳೂ ಇತರ ಸಾಗರಜೀವಿಗಳೂ ಸಾಗರದ ನೀರಿನ ಆಳಕ್ಕೆ ನುಗ್ಗಿ ಅಲ್ಲಿನ ಕಲ್ಲುಗಳ ಹವಳಗಿಡಗಳ ಎಡೆಯಲ್ಲಿ ಅಡಗಿಕೊಳ್ಳುತ್ತಿದ್ದವು. ಸೂರ್ಯ ಆಕಾಶದಲ್ಲಿ ಬೆಂಕಿಯುಂಡೆಯಂತೆ ಬೆಳಗುತ್ತಿದ್ದಾಗ ಸಾಗರಿಯ ಹಾಡುಗಾರಿಕೆ ವಿಪರೀತವಾಗುತ್ತಿತ್ತು. ಯಾಕೆಂದರೆ ನೀರಿನಲ್ಲಿ ಪ್ರತಿಫಲಿಸುವ ಬೆಚ್ಚಗಿನ ಬಿಸಿಲು ಸಾಗರಿಯನ್ನು ಹರುಷದಿಂದ ಹಾಡಲು ಹುಚ್ಚೆಬ್ಬಿಸುತ್ತಿತ್ತು. ಸಾಗರದ ಇತರ ಜೀವಿಗಳಿಗೆ ಸಾಗರಿಯ ಹಾಡಿನಿಂದ ಎಷ್ಟು ತೊಂದರೆಯಾಗುತ್ತಿತ್ತು ಎಂದರೆ ಅವು ಆಕಾಶದಲ್ಲಿ ಮೋಡ ಕವಿದಿರಲಿ ಮತ್ತು ಮಳೆ ಬರುತ್ತಿರಲಿ ಎಂದು ಪ್ರಾರ್ಥಿಸತೊಡಗಿದವು.
“ಸಾಗರಿಯ ಭಯಂಕರ ಹಾಡುಗಾರಿಕೆಯ ಸಮಸ್ಯೆಗೆ ನಾವು ಏನಾದರೂ ಪರಿಹಾರ ಹುಡುಕಲೇ ಬೇಕು. ಅದರ ಕರ್ಕಶ ಧ್ವನಿ ನನ್ನನ್ನು ನಡುಗಿಸಿ, ನಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂಬುದೇ ಕಾಣೋದಿಲ್ಲ” ಎಂದಿತು ಜೆಲ್ಲಿ ಮೀನು. “ನಾನಂತೂ ದೂರ, ಬಹಳ ದೂರ ಹೋಗಿ ಬಿಡುತ್ತೇನೆ. ಸಾಗರಿಯ ಭೀಕರ ಧ್ವನಿಗೆ ನನ್ನ ತಲೆ ಸಿಡಿದು ಹೋಗುತ್ತಿದೆ” ಎಂದು ದೂರಿತು ಸಿಗಡಿ.
“ನೀನಿನ್ನು ಹಾಡಬೇಡ ಎಂದು ಸಾಗರಿ ವೇಲ್ಗೆ ಯಾರಾದರೂ ಹೇಳಲೇ ಬೇಕು” ಎಂದಿತು ಸ್ಟಿಂಗ್-ರೇ (ಉದ್ದ ಬಾಲದ ಚಪ್ಪಟೆ ಮೀನು - ತೊರಕೆ ಮೀನು). "ಹಾಗೆ ಹೇಳಿದರೆ ಸಾಗರಿ ಸಂಕಟ ಪಡುತ್ತದೆ" ಎಂಬುದು ಜೆಲ್ಲಿ ಮೀನಿನ ಅಂಬೋಣ. “ಆ ಸಂಕಟ, ಸಾಗರಿಯ ಹಾಡು ಕೇಳಿದಾಗ ನನ್ನ ಕಿವಿಗಳಿಗೆ ಆಗುವ ಸಂಕಟಕ್ಕಿಂತ ಕಡಿಮೆಯೇ" ಎಂಬುದು ಸಿಗಡಿಯ ಪ್ರತಿಕ್ರಿಯೆ.
ಅಂತೂ ಅವರೆಲ್ಲರೂ ನಿರ್ಧರಿಸಿದರು - ಇನ್ನು ಮುಂದೆ ಹಾಡಬಾರದೆಂದು ಸಾಗರಿ ವೇಲ್ಗೆ ಸ್ಟಿಂಗ್-ರೇ ಮರುದಿನ ಬೆಳಗ್ಗೆ ಹೇಳಬೇಕೆಂದು. ಮರುದಿನ ಸ್ಟಿಂಗ್-ರೇ ಹಾಗೆ ಹೇಳಿದಾಗ, ಸಾಗರಿ ಪೆಚ್ಚಾಯಿತು. ಅದು ಮಂಕಾಗಿ ಕಣ್ಣೀರು ಹಾಕಿತು.
“ನಾನು ಹಾಡುತ್ತಾ ನನ್ನ ಪಾಡಿಗೆ ಸಂತೋಷ ಪಡುತ್ತಿದ್ದೆ. ನನ್ನ ಹಾಡುಗಳಿಂದ ನಿಮಗೆಲ್ಲ ತೊದರೆಯಾಗುತ್ತಿದೆ ಅನ್ನೋದು ನನಗೆ ಗೊತ್ತಾಗಲೇ ಇಲ್ಲ” ಎಂದಿತು ಸಾಗರಿ. “ಪರವಾಗಿಲ್ಲ. ನೀನು ಈಗಲೂ ನೃತ್ಯ ಮಾಡಬಹುದು” ಎಂದು ಸಂತೈಸಿತು ಸ್ಟಿಂಗ್-ರೇ.
“ಹಾಡುತ್ತಾ ನೃತ್ಯ ಮಾಡೋದಕ್ಕೂ ಹಾಡದೆ ನೃತ್ಯ ಮಾಡೋದಕ್ಕೂ ಬಹಳ ವ್ಯತ್ಯಾಸವಿದೆ. ಹಾಡದಿದ್ದರೆ ನೃತ್ಯದ ಲಯ ಸಿಗೋದೇ ಇಲ್ಲ" ಎಂದು ಬೇಸರದಿಂದ ಹೇಳಿತು ಸಾಗರಿ. ತಕ್ಷಣವೇ ತಾನು ಸ್ವಲ್ಪ ಹೊತ್ತು ಏಕಾಂತದಲ್ಲಿ ಇರಬೇಕೆಂದು ಹೇಳುತ್ತಾ ಸಾಗರದ ಆಳಕ್ಕೆ ಈಜುತ್ತಾ ಕಣ್ಮರೆಯಾಯಿತು ಸಾಗರಿ.
ಸಾಗರದ ತಳದಲ್ಲಿ ಮಂಕಾಗಿ ಮಲಗಿದ್ದ ಸಾಗರಿಗೆ ದೂರದಿಂದ ತೇಲಿ ಬಂದ ಮಧುರವಾದ ಧ್ವನಿ ಕೇಳಿಸಿತು. ಯಾರೋ ಹಾಡುತ್ತಿರುವಂತೆ ಕೇಳಿಸಿತು. ಅಷ್ಟು ಚಂದದ ಧ್ವನಿ ಯಾರದೆಂದು ತಿಳಿಯಲಿಕ್ಕಾಗಿ ಸಾಗರಿ ತನ್ನ ದೊಡ್ಡ ಬಾಲವನ್ನು ಬಡಿದು ಒಂದೇಟಿಗೆ ಆ ಧ್ವನಿ ಬಂದತ್ತ ಈಜುತ್ತಾ ಸಾಗಿತು.
ಆ ಧ್ವನಿಯ ಮೂಲದ ಹತ್ತಿರ ಬಂದಂತೆ ಸಾಗರಿಗೆ ಇಂಪಾದ ಸ್ವರದ ಹಾಡು ಕೇಳಿತು. ದೊಡ್ಡ ಕಲ್ಲುಬಂಡೆಯ ಮರೆಯಲ್ಲಿ ತೇಲುತ್ತಾ ಸಾಗರಿ ಇಣುಕಿದಾಗ ಆ ಮಧುರಸ್ವರ ಒಂದು ಪುಟ್ಟ ಆಕ್ಟೋಪಸಿನದು ಎಂದು ತಿಳಿಯಿತು.
ಅಲ್ಲಿ ಆಕ್ಟೋಪಸ್ ತನ್ನ ಎಂಟು ಕಾಲುಗಳನ್ನು ಸಮತೋಲನ ಮಾಡುತ್ತಾ ಹಾಡುತ್ತಾ ನೃತ್ಯ ಮಾಡಲು ಪ್ರಯತ್ನಿಸುತ್ತಿತ್ತು. ಆದರೆ ಅದರ ಎಂಟು ಕಾಲುಗಳು ಎಂಟು ದಿಕ್ಕುಗಳಲ್ಲಿ ಚಲಿಸುತ್ತಾ ಅದಕ್ಕೆ ಮತ್ತೆಮತ್ತೆ ಆಯ ತಪ್ಪುತ್ತಿತ್ತು. ಕೊನೆಗೊಮ್ಮೆ ಆಕ್ಟೋಪಸ್ ಬುಗುರಿಯಂತೆ ತಿರುಗಲು ಹವಣಿಸಿತು. ಆದರೆ ಅದರ ಕಾಲುಗಳು ಒಂದಕ್ಕೊಂದು ಸಿಲುಕಿಕೊಂಡು ಅದು ದಢಾರನೆ ಸಾಗರದ ತಳಕ್ಕೆ ಕುಸಿದು ಬಿತ್ತು.
ಇದನ್ನೆಲ್ಲ ನೋಡುತ್ತಿದ್ದ ಸಾಗರಿ ಕೇಳಿತು, “ನೀನು ಏನು ಮಾಡಲು ಪ್ರಯತ್ನಿಸುತ್ತಿದ್ದಿ?” ಪುಟ್ಟ ಆಕ್ಟೋಪಸ್ ಮುಜುಗರ ಪಡುತ್ತಾ ಉತ್ತರಿಸಿತು, "ನಾನು ನೃತ್ಯ ಮಾಡಲು ಪ್ರಯತ್ನಿಸುತ್ತಿದ್ದೆ. ಆದರೆ ನನಗೆ ಬಹಳ ಚೆನ್ನಾಗಿ ನೃತ್ಯ ಮಾಡಲು ಬರೋದಿಲ್ಲ."
“ಪರವಾಗಿಲ್ಲ. ನಾನು ಒಳ್ಳೆಯ ನೃತ್ಯಗಾರ. ಹಾಗಾಗಿ ನಾನು ನಿನಗೆ ಚಂದವಾಗಿ ನೃತ್ಯ ಮಾಡಲು ಕಲಿಸಬಲ್ಲೆ” ಎಂದಿತು ಸಾಗರಿ. “ಆದರೆ, ಅದಕ್ಕೆ ಬದಲಾಗಿ ನೀನೂ ನನಗೆ ಕಲಿಸಬೇಕು” ಎಂದೂ ಹೇಳಿತು ಸಾಗರಿ.
ಕೆಲವು ವಾರಗಳು ಸರಿದವು. ಜೆಲ್ಲಿ ಮೀನು, ಸಿಗಡಿ ಮತ್ತು ಸ್ಟಿಂಗ್-ರೇ ಸಾಗರದಲ್ಲಿ ಮಾತನಾಡಿಕೊಳ್ಳುತ್ತಿದ್ದವು - ಸಾಗರಿ ಎಲ್ಲಿಗೆ ಹೋಗಿರಬಹುದೆಂದು. ಆಗ ಸಾಗರದ ನೀರಿನಲ್ಲಿ ಅಲೆಅಲೆಯಾಗಿ ಮಧುರವಾದ ಧ್ವನಿಯೊಂದು ತೇಲಿಬಂತು.
“ಓಹೋ, ಎಂಥ ಚಂದದ ಮುಂಜಾವ” ಎಂಬ ಸಾಗರಿಯ ಅಚ್ಚುಮೆಚ್ಚಿನ ಹಾಡು ತೇಲಿ ಬರುತ್ತಿತ್ತು. ಆದರೆ, ಒಂದಲ್ಲ ಎರಡು ಇಂಪಾದ ಧ್ವನಿಗಳಲ್ಲಿ ಪರಿಪೂರ್ಣ ಜುಗಲ್ಬಂಧಿಯಲ್ಲಿ ಆ ಹಾಡು ತೇಲಿ ಬರುತ್ತಿತ್ತು.
“ಅರೇ, ಇದು ಸಾಗರಿಯ ಧ್ವನಿಯಲ್ಲವೇ?” ಎಂದು ಮೂವರು ಗೆಳೆಯರೂ ಅಚ್ಚರಿಯಿಂದ ಕೇಳುತ್ತಿದ್ದಂತೆ, ಅಲ್ಲಿಗೆ ತೇಲುತ್ತಾ ಬಂದರು - ಸಾಗರಿ ವೇಲ್ ಮತ್ತು ಪುಟ್ಟ ಆಕ್ಟೋಪಸ್. ಸಾಗರಿ ಅತ್ತಿತ್ತ ತಿರುಗುತ್ತಾ ಸುತ್ತುತ್ತಾ ಅದ್ಭುತವಾಗಿ ನೃತ್ಯ ಮಾಡುತ್ತಿದ್ದರೆ, ಅದರ ಹೊಸ ಗೆಳೆಯ ಪುಟ್ಟ ಆಕ್ಟೋಪಸ್ ಸಾಗರಿಯ ಹಾಡಿಗೆ ಅಮೋಘವಾಗಿ ದನಿಗೂಡಿಸುತ್ತಿತ್ತು!
ಚಿತ್ರ ಕೃಪೆ: "ದ ನರ್ಸರಿ ಕಲೆಕ್ಷನ್" ಪುಸ್ತಕ