ಸಾಗರ ಸಂಪನ್ಮೂಲಗಳನ್ನು ಮಾಲಿನ್ಯದಿಂದ ರಕ್ಷಿಸೋಣ ಬನ್ನಿ!!

Submitted by Ashwin Rao K P on Mon, 06/08/2020 - 13:53

ಜೂನ್ ೮ ವಿಶ್ವ ಸಾಗರ ದಿನ. ವಿಶ್ವ ಪರಿಸರ (ಜೂನ್ ೫)ದಿನ ಕಳೆದು ಮೂರೇ ದಿನಕ್ಕೆ ವಿಶ್ವ ಸಾಗರ ದಿನ. ಇದು ಒಂದಕ್ಕೊಂದು ಸಂಬಂಧಿತ ದಿನಗಳೇ. ಸಾಗರ ಅಥವಾ ಸಮುದ್ರ ದಿನವನ್ನು ೨೦೦೮ ಡಿಸೆಂಬರ್ ೫ರಂದು ವಿಶ್ವ ಸಂಸ್ಥೆಯು ಅಂಗೀಕರಿಸಿತು. ಸಮುದ್ರ ನಮ್ಮ ಭೂಮಿಯ ಶ್ವಾಸಕೋಶದ ರೀತಿ ಕೆಲಸ ಮಾಡುತ್ತವೆ. ಸಾಗರದಲ್ಲಿರುವ ಅಸಂಖ್ಯಾತ ಹವಳದ ಬಂಡೆಗಳು ಮತ್ತು ಲಕ್ಷಾಂತರ ಸಮುದ್ರ ಸಸ್ಯಗಳು ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಇದರಿಂದ ಭೂಮಿಯ ಮೇಲೆ ಆಮ್ಲಜನಕ ಪ್ರಮಾಣ ಸರಿತೂಗಿಸಲ್ಪಡುತ್ತದೆ. ಇಲ್ಲವಾದಲ್ಲಿ ನಮಗೆ ಉಸಿರಾಡಲು ಆಮ್ಲಜನಕದ ಕೊರತೆ ಉಂಟಾಗುತ್ತಿತ್ತು. ನಾವು ಉಸಿರಾಡಿ ಹೊರಗೆ ಬಿಡುವ ಇಂಗಾಲದ ಡೈ ಆಕ್ಸೈಡ್ ನ್ನು ಸ್ವಲ್ಪ ಪ್ರಮಾಣದಲ್ಲಿ ಸಮುದ್ರಗಳು ಹೀರಿ ಕೊಳ್ಳುತ್ತವೆ.

ಸಾಗರಕ್ಕೆ ಒಂದು ದಿನ ಏಕೆ ಬೇಕಾಯಿತು? ಮಾನವನ ನಿರಂತರ ಅಸುರಕ್ಷಿತ ಬಳಕೆಯಿಂದಾಗಿ ಸಾಗರ ಮಲಿನವಾಗಿದೆ. ಕೈಗಾರಿಕೆಗಳ ತ್ಯಾಜ್ಯಗಳು ನೇರವಾಗಿ ಸಮುದ್ರ ಸೇರುತ್ತಿವೆ. ಇದರಿಂದ ಸಮುದ್ರದಲ್ಲಿ ಹೇರಳವಾಗಿರುವ ಜಲಚರಗಳು ನಾಶವಾಗುತ್ತಿವೆ. ಕೆಲವು ವರ್ಷಗಳ ಹಿಂದೆ ಹೇರಳವಾಗಿದ್ದ ಮತ್ಸ್ಯ ಸಂಪತ್ತು ಈಗ ಕಡಿಮೆಯಾಗಿದೆ. ಮೀನುಗಾರರು ಹೇಳುವಂತೆ ಸಮುದ್ರಕ್ಕೆ ಕೈಗಾರಿಕೆಗಳ ತ್ಯಾಜ್ಯ ವಿಷವಸ್ತುಗಳು ಸೇರುವುದರಿಂದ, ಅದನ್ನು ಮೀನು ಮತ್ತು ಉಳಿದ ಜಲಚರಗಳು ತಿನ್ನುವುದರಿಂದ ಅವುಗಳ ಜೀವಕ್ಕೆ ಅಪಾರ ಹಾನಿಯಾಗುತ್ತಿವೆ. ಸಮುದ್ರದಲ್ಲೂ ಅಪಾರ ಸಸ್ಯ ಪ್ರಬೇಧಗಳಿವೆ. ಅವುಗಳೂ ಹಾನಿಗೊಳಪಟ್ಟಿವೆ. ಇದರಿಂದ ಮೀನಿನ ಲಭ್ಯತೆ ಕಮ್ಮಿ ಆಗಿದೆ. ಮೊದಲು ಮಳೆಗಾಲದಲ್ಲಿ ಮೀನುಗಳು ಸಂತಾನೋತ್ಪತ್ತಿ ಮಾಡುವ ಸಮಯವೆಂದು ಮೀನುಗಾರಿಕಾ ರಜಾದಿನಗಳು ಇದ್ದುವು. ಆದರೀಗ ಕಾಟಾಚಾರಕ್ಕೆ ರಜಾ ದಿನವೆಂದು ಹೇಳಿ ಕೆಲವು ಮಂದಿ ಆಳ ಸಮುದ್ರ ಮೀನುಗಾರಿಕೆ ಮಾಡುತ್ತಾರೆ. ಇದರಿಂದಲೂ ಮೀನುಗಳ ಸಂಖ್ಯೆ ಕಮ್ಮಿ ಆಗುತ್ತಿದೆ. 

ನಮ್ಮ ಪ್ರಪಂಚದ ಸುಮಾರು ಶೇ.೭೫ರಷ್ಟು ಭಾಗ ಸಮುದ್ರದಿಂದಲೇ ಭೂಭಾಗವು ಆವೃತ್ತವಾಗಿದೆ. ಆದರೂ ಸಮುದ್ರದಲ್ಲಿ ಮಾಲಿನ್ಯ ಉಂಟಾಗುತ್ತಿದೆ. ನಾವು ಉಪಯೋಗಿಸಿ ಬಿಸಾಕುವ ಪ್ಲಾಸ್ಟಿಕ್ ಸಾಗರ ಗರ್ಭ ಸೇರುತ್ತಿದೆ. ತಿಮಿಂಗಿಲ, ಡಾಲ್ಫಿನ್ನಂತಹ ಮೀನುಗಳು ಇವುಗಳನ್ನು ತಿಂದು ದಾರುಣವಾಗಿ ಬಲಿಯಾಗುತ್ತಿವೆ. ನಾವು ಆದಷ್ಟು ಪ್ಲಾಸ್ಟಿಕ್ ಬಳಕೆ ತ್ಯಜಿಸಬೇಕಾಗಿದೆ. ಕಡಲ ತೀರಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇದಿಸಬೇಕು. ಇದರಿಂದ ಬಹಳಷ್ಟು ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು ಸಮುದ್ರ ಸೇರುವುದನ್ನು ತಡೆಯಬಹುದು.

೨೦೩೦ರ ಸಮಯಕ್ಕೆ ನಮ್ಮ ಸಮುದ್ರವು ಸ್ವಚ್ಚ, ಸಮೃದ್ಧವಾಗಬೇಕೆಂದು ವಿಶ್ವ ಸಂಸ್ಥೆಯ ಅಜೆಂಡಾ. ಸಮುದ್ರದಲ್ಲಿ ವೈಜ್ಞಾನಿಕ ರೀತಿಯ ಸಂಶೋಧನೆ, ಯಾಂತ್ರಿಕ ಮೀನುಗಾರಿಕೆ, ಮೀನುಗಾರರ ಅಭಿವೃದ್ಧಿ ಮೊದಲಾದ ಕೆಲಸಗಳನ್ನು ಮಾಡಲು ವಿಶ್ವ ಸಂಸ್ಥೆ ಮುಂದಡಿ ಇಟ್ಟಿದೆ. ಸಮುದ್ರದ ಆರೋಗ್ಯ ಸರಿಯಾಗಿದ್ದರೆ ಭೂಮಿಯ ಆರೋಗ್ಯವೂ ಸರಿಯಾಗುತ್ತದೆ. ಭೂ ವಾಸಿಗಳೂ ನೆಮ್ಮದಿಯಿಂದ ನಿದ್ರೆ ಮಾಡಬಹುದು. ಸಮುದ್ರ ಲಕ್ಷಾಂತರ ಜನರಿಗೆ ನೇರವಾಗಿ ಮತ್ತು ಪರೋಕ್ಷವಾಗಿ ಉದ್ಯೋಗ ಒದಗಿಸಿಕೊಟ್ಟಿದೆ. ಇವೆಲ್ಲವೂ ಭವಿಷ್ಯದಲ್ಲೂ ನಮಗೆ ಲಭ್ಯವಾಗಬೇಕಾದಲ್ಲಿ ನಾವು ಸಮುದ್ರವನ್ನು ಸದಾಕಾಲ ಮಾಲಿನ್ಯ ರಹಿತವನ್ನಾಗಿಸಲು ಶ್ರಮಿಸಬೇಕು. ಬನ್ನಿ ವಿಶ್ವ ಸಾಗರ ದಿನದಂದು ನಾವು ಈ ಪ್ರತಿಜ್ಞೆಯನ್ನು ಮಾಡುವ.