ಸಾಗಾಟ ವ್ಯವಸ್ಥೆಗಳು ಸಾಗಿ ಬಂದ ಹಾದಿ…
ಅನಾದಿ ಕಾಲದಿಂದಲೂ ಮಾನವನು ತನ್ನ ಜೀವನದ ಕ್ರಮದಲ್ಲಿ ನಿರಂತರವಾಗಿ ಬದಲಾವಣೆಗಳನ್ನು ನಡೆಸುತ್ತಾ ಬಂದಿದ್ದಾನೆ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗುವ ಸಂದರ್ಭದಲ್ಲಿ ತನ್ನ ಸಾಮಾಗ್ರಿಗಳನ್ನು ಸಾಗಿಸಲು ಮೊದಲು ಮಾನವ ತನ್ನ ಕಾಲಿನ ಹಾಗೂ ಕೈಯ ಶಕ್ತಿಯನ್ನೇ ನಂಬಿಕೊಂಡಿದ್ದ. ಕ್ರಮೇಣ ತಾನು ಹೊರುವ ಭಾರವನ್ನು ತಾನು ಸಾಕಿಕೊಂಡಿದ್ದ ಪ್ರಾಣಿಗಳಾದ ಕತ್ತೆ, ಕುದುರೆ, ಎತ್ತು, ಕೋಣ, ಒಂಟೆಗಳ ಮೇಲೆ ಹೇರಲು ಪ್ರಾರಂಭಿಸಿದ. ತನ್ನ ವಾಸ ಸ್ಥಾನವನ್ನು ಬದಲಾಯಿಸುವ ಸಂದರ್ಭದಲ್ಲಿ ಅಥವಾ ತನ್ನ ಮನೆಗೆ ಅಗತ್ಯವಾದ ಸಾಮಾಗ್ರಿಗಳನ್ನು ತರುವಾಗ ಈ ಪ್ರಾಣಿಗಳ ಮೇಲೆ ಸಾಮಾನುಗಳನ್ನು ಹೇರಿಕೊಂಡು ಹೋಗಲು ಪ್ರಾರಂಭಿಸಿದ.
ಈ ಕ್ರಮದಿಂದ ಸ್ವಲ್ಪ ಸಾಮಾಗ್ರಿಗಳನ್ನು ಮಾತ್ರ ತರಲು ಸಾಧ್ಯವಾಗುತ್ತಿತ್ತು. ಏಕೆಂದರೆ ಪ್ರಾಣಿಯ ಬೆನ್ನ ಮೇಲೆ ಹಿಡಿಸುವಷ್ಟು ಭಾರವನ್ನು ಮಾತ್ರ ಹೊರಿಸಿ ತರಬಹುದಾಗಿತ್ತು. ಕ್ರಮೇಣ ಮಾನವನ ಚುರುಕಾದ ಮೆದುಳು ಈ ಭಾರವನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸಲು ಕೆಲವೊಂದು ಬದಲಾವಣೆಗಳನ್ನು ಮಾಡಬೇಕೆಂದು ಯೋಚನೆ ಮಾಡತೊಡಗಿತು.
ಆ ಪ್ರಕಾರ ಗುಂಡಾದ ದಿಮ್ಮಿಗಳನ್ನಿಟ್ಟು, ಅದರ ಮೇಲೆ ಒಂದು ಸಮತಟ್ಟಾದ ಹಲಗೆಯಂತಹ ವಸ್ತುವನ್ನಿರಿಸಿ ಎಳೆಯಲಾರಂಭಿಸಿದರು. ಇದರಿಂದ ಗುಂಡಗಿನ ದಿಮ್ಮಿ ಚಲಿಸಿದಾಗ ಹಲಗೆಯೂ ಚಲಿಸಲಾರಂಭಿಸುತ್ತದೆ. ಇದು ಕಮ್ಮಿ ಶಕ್ತಿಯಿಂದ ಸರಾಗವಾಗಿ ಚಲಿಸುತ್ತದೆ. ಮೊದಲು ಕೇವಲ ಹಲಗೆಯನ್ನು ಮಾತ್ರ ಎಳೆಯುವಾಗ ಅದು ವೇಗವಾಗಿ ಚಲಿಸುತ್ತಿರಲಿಲ್ಲ. ಆದರೆ ಇದರಲ್ಲೂ ಕೆಲವು ಸಮಸ್ಯೆಗಳಿದ್ದವು. ದಿಮ್ಮಿಗೂ, ಹಲಗೆಗೂ ಯಾವುದೇ ಬಂಧನವಿರದ ಕಾರಣ ಕೆಲವೊಮ್ಮೆ ದಿಮ್ಮಿಯ ಮೇಲಿನಿಂದ ಹಲಗೆ ಜಾರಿಕೊಂಡು ಬಿಡುತ್ತಿತ್ತು. ಮತ್ತೆ ಅದನ್ನು ದಿಮ್ಮಿಯ ಮೇಲಿರಿಸಿ ಸಾಮಾಗ್ರಿಗಳನ್ನು ಸಾಗಿಸಬೇಕಾಗಿತ್ತು. ಇದು ಮತ್ತೊಂದು ಪ್ರಯಾಸದ ಕೆಲಸವಾಗಿತ್ತು. ಕ್ರಮೇಣ ಬಂಡಿಗಳನ್ನು ತಯಾರಿಸಲು ಮಾನವ ಪ್ರಾರಂಭಿಸಿದ. ಆದರೆ ಅವನಿಗೆ ಮೊದಲು ವೃತ್ತಾಕಾರದ ಚಕ್ರಗಳಂತಹ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳಲು ಆಗಿರಲಿಲ್ಲ.
ಮೊದ ಮೊದಲು ಪ್ರಾಣಿಗಳಿಂದ ಎಳೆಯಲ್ಪಡುವ ಗಾಡಿಯ ಚಕ್ರ ಚೌಕಾಕಾರವಾಗಿತ್ತು. ಪ್ರಾಣಿಗಳಿಗೆ ಇದನ್ನು ಎಳೆಯುವುದು ಬಹಳ ತ್ರಾಸಕರವಾಗಿತ್ತು. ಕ್ರಮೇಣ ಈ ಚೌಕಾಕಾರದ ಚಕ್ರಗಳನ್ನು ವೃತ್ತಾಕಾರಕ್ಕೆ ಬದಲಾಯಿಸಲಾಯಿತು. ಇದರಿಂದ ಸಾಗಾಟ ಬಹಳ ಸರಾಗವಾಯಿತು. ಬಂಡಿಗಳಿಗೆ ವೃತ್ತಾಕಾರದ ಚಕ್ರಗಳ ಅಳವಡಿಕೆಯಿಂದಾಗಿ ಮಾನವನ ನಾಗರೀಕತೆ ಮತ್ತಷ್ಟು ಅಭಿವೃದ್ಧಿ ಹೊಂದಿತು. ಬಂಡಿಗಳನ್ನು ಎಳೆಯಲು ಎತ್ತು, ಕುದುರೆಗಳನ್ನು ಬಳಸಲಾಯಿತು. ಬಂಡಿಗಳಲ್ಲೂ ಹೊಸ ಹೊಸ ವಿಧಾನದ ಬಂಡಿಗಳ ಅನ್ವೇಷಣೆಯಾಯಿತು. ಈಗಲೂ ಗ್ರಾಮೀಣ ಭಾಗದಲ್ಲಿ ಎತ್ತಿನ ಹಾಗೂ ಕುದುರೆ ಬಂಡಿಯ ಬಳಕೆ ಇದೆ. ಎತ್ತಿನ ಬಂಡಿಯನ್ನು ಸಾಮಾನುಗಳನ್ನು ಸಾಗಿಸಲೂ, ಕುದುರೆ ಬಂಡಿ (ಜಟಕಾ ಗಾಡಿ) ಯನ್ನು ಮನುಷ್ಯರ ಪ್ರಯಾಣಕ್ಕೂ ಹೆಚ್ಚಾಗಿ ಬಳಸಲಾಗುತ್ತಿದೆ.
ಈ ವ್ಯವಸ್ಥೆ ಜನಪ್ರಿಯವಾಗುತ್ತಲೇ, ಜನರಿಗೂ ತಮ್ಮ ಸಾಗಾಟಕ್ಕೆ ಹೊಸ ವ್ಯವಸ್ಥೆ ದೊರೆಯಿತು. ಆದರೆ ಈ ಬಂಡಿಗಳಿಗೆ ಅಳವಡಿಸಿದ ಚಕ್ರಗಳು ಮರದ್ದಾದ್ದರಿಂದ ಅವುಗಳು ಬೇಗ ಸವೆಯುತ್ತಿದ್ದವು. ಹೀಗೆ ಸವೆದ ಗಾಲಿಗಳು ತುಂಡಾಗಿ ಬಿಡುತ್ತಿದ್ದವು. ಅದಕ್ಕಾಗಿ ಆ ಗಾಲಿಗಳಿಗೆ ಕಬ್ಬಿಣದ ಅಥವಾ ತಾಮ್ರದ ಪಟ್ಟಿಗಳನ್ನು ಅಳವಡಿಸಲು ಪ್ರಾರಂಭಿಸಿದರು. ಇದರಿಂದ ಸವೆತ ಕಮ್ಮಿಯಾಗಲು ಪ್ರಾರಂಭಿಸಿದರೂ ಅದು ಶ್ರಮದಾಯಕ ವ್ಯವಸ್ಥೆಯಾಗಿತ್ತು. ನಂತರದ ದಿನಗಳಲ್ಲಿ ರಬ್ಬರ್ ಎಂಬ ವಸ್ತುವಿನ ಅನ್ವೇಷಣೆಯಾದ ಬಳಿಕ ಈ ಗಾಲಿಗಳಿಗೆ ರಬ್ಬರ್ ಚಕ್ರಗಳು ಬಂದವು. ರಬ್ಬರ್ ಅಳವಡಿಕೆಯಿಂದ ಸಾಗಾಟ ಬಹಳ ಆರಾಮದಾಯಕವಾಯಿತು. ಕ್ರಮೇಣ ಗಾಳಿತುಂಬಿಕೊಂಡ ಟಯರ್ ಗಳು ಬಳಕೆಗೆ ಬಂದವು. ಇದರಿಂದ ಬಂಡಿಗಳ ಚಲನೆಗೆ ವೇಗ ದೊರೆಯಿತು.
ಬೈಸಿಕಲ್ ಗಳು ಅನ್ವೇಷಣೆಯಾದ ಬಳಿಕ ಕ್ರಮೇಣ ಪ್ರಾಣಿಗಳನ್ನು ಸಾಗಾಟಕ್ಕೆ ಬಳಸುವುದು ಕಮ್ಮಿಯಾಯಿತು. ನಂತರದ ದಿನಗಳಲ್ಲಿ ಹಲವಾರು ಸಾಮಾನು ಸಾಗಿಸುವ ಬಂಡಿಗಳು ಬಳಕೆಗೆ ಬಂದವು. ಸುಖ ಪ್ರಯಾಣಕ್ಕೆ ಕಾರುಗಳು, ಸಾರ್ವಜನಿಕ ಪ್ರಯಾಣಕ್ಕೆ ಬಸ್ ಗಳು ಎಲ್ಲವೂ ಬರತೊಡಗಿದವು. ಇದರಿಂದಾಗಿ ಜನರ ಜೀವನ ಮಟ್ಟವೂ ಏರತೊಡಗಿತು. ರೈಲು ಹಾಗೂ ವಿಮಾನಗಳು ಅನ್ವೇಷಣೆಯಾದ ಬಳಿಕವಂತೂ ಸಾಮಾನುಗಳ ಸಾಗಾಟವು ಬಹಳ ವೇಗವನ್ನು ಪಡೆಯಿತು. ಹೀಗೆ ಕಾಲ ಕಾಲಕ್ಕೆ ಸಾಗಾಣಿಕೆಯ ವ್ಯವಸ್ಥೆ ಹೊಸ ಹೊಸ ರೂಪವನ್ನು ಪಡೆಯುತ್ತಾ ಹೋಯಿತು. ಅದರೂ ಕೆಲವೆಡೆ ಈಗಲೂ ಹಳೆಯ ಸಾಗಾಟದ ವ್ಯವಸ್ಥೆಯಾದ ಕುದುರೆ, ಎತ್ತುಗಳ ಬಂಡಿ, ಕತ್ತೆಯ ಮೇಲೆ ಸಾಗಾಟ ನಡೆಯುತ್ತಲೇ ಇದೆ. ಕಾರಣ ಆ ಪ್ರದೇಶದ ಭೌಗೋಳಿಕ ವ್ಯವಸ್ಥೆ. ಗುಡ್ಡ ಗಾಡು ಪ್ರದೇಶ ಮತ್ತು ಹಿಮ ಬೀಳುವ ಸ್ಥಳದಲ್ಲಿ ಯಾವುದೇ ವಾಹನ ಚಲಾವಣೆ ಸಾಧ್ಯವಿಲ್ಲ. ಆ ಸಮಯ ಬಳಕೆಯಾಗುವುದು ಪ್ರಾಣಿ ಆಧಾರಿತ ಸಾಗಾಣಿಕೆಯ ವ್ಯವಸ್ಥೆ.
ಹಿಂದಿನ ಕಾಲದ ಮಾನವರು ನಿರಂತರ ಪ್ರಯೋಗಗಳನ್ನು ನಡೆಸುತ್ತಾ ಬಂದ ಕಾರಣ ನಾವಿಂದು ಸುಧಾರಿತ ಸಾಗಾಟದ ವ್ಯವಸ್ಥೆಯನ್ನು ಕಂಡುಕೊಂಡಿದ್ದೇವೆ. ಇದೊಂದು ನಿರಂತರ ಪ್ರಕ್ರಿಯೆ. ನಿಂತ ನೀರಲ್ಲ, ಹರಿಯುತ್ತಾ ಇರುವ ಸಂಪರ್ಕ ವ್ಯವಸ್ಥೆ.
ಚಿತ್ರ ಕೃಪೆ: ಅಂತರ್ಜಾಲ ತಾಣ