ಸಾಗುತ್ತಲೇ ಇರಲಿ ಜೀವನ…!

ಬರುವವರಿಗೆ ಸ್ವಾಗತ,
ಹೋಗುವವರಿಗೆ ವಂದನೆಗಳು,
ಮೆಚ್ಚುವವರಿಗೆ ಧನ್ಯವಾದಗಳು,
ಟೀಕಿಸುವವರಿಗೆ ನಮಸ್ಕಾರಗಳು,
ಅಭಿಮಾನಿಸುವವರಿಗೆ ಕೃತಜ್ಞತೆಗಳು,
ಅಸೂಯೆಪಡುವವರಿಗೆ ಸಹಾನುಭೂತಿಗಳು,
ಪ್ರೀತಿಸುವವರಿಗೆ ನಗು,
ದ್ವೇಷಿಸುವವರಿಗೆ ನಿರ್ಲಕ್ಷ್ಯ,
ಸಹಾಯ ಮಾಡುವವರಿಗೆ ಸಲಾಂ,
ತೊಂದರೆ ಕೊಡುವವರಿಗೆ ಗುಡ್ ಬೈ,
ಆತ್ಮೀಯರಿಗೊಂದಷ್ಟು ಅಪ್ಪುಗೆ,
ಪರಿಚಿತರಿಗೊಂದಷ್ಟು ಸಲುಗೆ,
ಪ್ರೋತ್ಸಾಹಿಸುವವರಿಗೆ ನಮನಗಳು,
ಕಾಲೆಳೆಯುವವರಿಗೆ ತಿರಸ್ಕಾರಗಳು,
ಜೊತೆಯಾಗುವವರಿಗೆ ಯಶಸ್ಸಾಗಲಿ,
ದೂರಾಗುವವರಿಗೆ ಒಳ್ಳೆಯದಾಗಲಿ,
ಗೆದ್ದವರಿಗೆ ಅಭಿನಂದನೆಗಳು,
ಸೋತವರಿಗೆ ಹಿತ ನುಡಿಗಳು,
ಹೀಗೆ, ಎಲ್ಲಾ ಭಾವನೆಗಳೊಂದಿಗೆ, ಸಾಗುತ್ತಲೇ ಇದೆ ಬದುಕು,
ನನ್ನದು, ನಿಮ್ಮದು, ಎಲ್ಲರದೂ,
ಬದುಕಿನೊಂದಿಗೆ ಸರಸವಾಡುತ್ತಾ,
ವಿಧಿಯೊಂದಿಗೆ ಚೆಲ್ಲಾಟವಾಡುತ್ತಾ,
ಬರುವುದನ್ನು ಸ್ವೀಕರಿಸುತ್ತಾ,
ಹೋಗುವುದನ್ನು ಬೀಳ್ಕೊಡುತ್ತಾ,
ನಗುತ್ತಾ, ಅಳುತ್ತಾ,
ಸಾಗುತ್ತಲೇ ಇರಲಿ ಜೀವನ,
ಕೊನೆಯೇ ಇಲ್ಲವೇನೋ ಎಂಬ ಭಾವದೊಂದಿಗೆ....
***
-ವಿವೇಕಾನಂದ ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ