ಸಾಗುತ್ತಿದೆ ಪಯಣ ಕೊನೆಯ ಉಸಿರಿನವರೆಗೆ...
ಬೀದರಿನಿಂದ ಕೊಡಗು ದಾಟಿ ಹಾಸನದವರೆಗೆ, ವನಮಾರ್ಪಳ್ಳಿಯಿಂದ ಹೊಳೆನರಸೀಪುರದವರೆಗೆ, ಕಲ್ಯಾಣ ಕರ್ನಾಟಕದಿಂದ ಮುಂಬಯಿ ಕರ್ನಾಟಕ, ಕರಾವಳಿ ಕರ್ನಾಟಕ, ಮಲೆನಾಡು ಕರ್ನಾಟಕ, ಹಳೆ ಮೈಸೂರು ಕರ್ನಾಟಕದವರೆಗೆ...
ಕಪ್ಪು ಮಣ್ಣಿನಿಂದ ಕೆಂಪು ಮಣ್ಣಿನವರೆಗೆ, ಖಡಕ್ ರೊಟ್ಟಿಯಿಂದ ಮಲೆನಾಡ ಕಡುಬು, ಕರಾವಳಿಯ ಮೀನು, ಬಯಲು ಸೀಮೆಯ ರಾಗಿ ಮುದ್ದೆಯವರೆಗೆ, ತೆಲುಗು ಮಿಶ್ರಿತ ಕನ್ನಡದಿಂದ, ಮರಾಠಿ ಮಿಶ್ರಿತ, ಉರ್ದು ಮಿಶ್ರಿತ, ಹಿಂದಿ ಮಿಶ್ರಿತ, ಮಲೆಯಾಳಂ ಮಿಶ್ರಿತ, ಕುಂದಾಪುರ ಕನ್ನಡ, ತುಳು ಕೊಂಕಣಿ ಕೊಡುವ ಅರೆಭಾಷೆ, ಹಳ್ಳಿ ಸೊಗಡಿನ ಹಾಸನದ ಕನ್ನಡದವರೆಗೆ...
ಜವಾರಿ ಸೀರೆ ಧೋತಿಯಿಂದ, ಪಂಚೆ ಪೈಜಾಮ ದಾಟಿ ವರ್ಣನೆಗೆ ಕಷ್ಟವಾದ ವಸ್ತ್ರ ವಿನ್ಯಾಸ ಮೀರಿ ಜೀನ್ಸ್ ಚೆಡ್ಡಿಯವರೆಗೆ, ಹತ್ತಿ ಬೆಳೆಯಿಂದ ಕಬ್ಬು ತೊಗರಿ ಜೋಳ ದ್ರಾಕ್ಷಿ ಸೀಬೆ ದಾಳಿಂಬೆ ಮಾವು ತೆಂಗು ಅಡಿಕೆ ಬಾಳೆ ಆಲೂಗೆಡ್ಡೆಯವರೆಗೆ, ಹಾವಿನಿಂದ ಜಿಗಣೆ, ಸೊಳ್ಳೆ, ಕೋತಿ, ಹಸು, ನಾಯಿ, ಕುರಿ, ಕೋಳಿ, ನವಿಲು, ಜಿಂಕೆ, ಆನೆ, ಕರಡಿ ಸೇರಿ ನರಮಾನವನವರೆಗೆ, ಮೈ ನಡುಗುವ ಚಳಿಯಿಂದ, ದೇಹದ ನೀರು ಬಸಿಯುವ ಬೇಸಿಗೆ ದಾಟಿ, ಬಿರುಗಾಳಿ, ಮಂಜು ಮುಸುಕಿನ ಹಾದಿಯಲ್ಲಿ ಧೋ ಎಂದು ಸುರಿಯುವ ರಭಸದ ಮಳೆ ನಂತರ ತುಂತುರು ಸೋನೆಯವರೆಗೆ...
ಪ್ರೀತಿ ಅಭಿಮಾನ ಗೌರವ ಮೊಗೆಮೊಗೆದು ನೀಡುವುದರಿಂದ ಹಿಡಿದು ನಿರ್ಲಕ್ಷ್ಯದವರೆಗೆ, ಪಂಚತಾರಾ ಸೌಕರ್ಯದಿಂದ ರಸ್ತೆ ಬದಿಯವರೆಗೆ, ಕಾಫಿ ಚಹಾದಿಂದ ಎಳನೀರು ದಾಟಿ ಕಬ್ಬಿನ ರಸ ಸೇರಿ ಕಷಾಯದವರೆಗೆ, ಕೆರೆ ಬಾವಿ ಹಳ್ಳ ಕೊಳ್ಳದಿಂದ ನೂರಾರು ನದಿಗಳ ದಾಟಿ ಕೃಷ್ಣ ತುಂಗಾ ಭದ್ರಾ ಶರಾವತಿ ನಂತರ ಸಮುದ್ರಗಳನ್ನು ಮೀರಿ ಹೇಮಾವತಿಯವರೆಗೆ,
1,35,00,000 ( ಒಂದು ಕೋಟಿ ಮೂವತ್ತೈದು ಲಕ್ಷ ಹೆಜ್ಜೆಗಳು.....) 9000 ಕಿಲೋಮೀಟರುಗಳು.... 7200 ( ಏಳು ಸಾವಿರದ ಇನ್ನೂರು ಗಂಟೆಗಳು.......) 300 ದಿನಗಳು.... ಇನ್ನೂ ಸಾಗುತ್ತಲೇ ಇದೆ....
ಮಾನವೀಯ ಮೌಲ್ಯಗಳ ಪುನರುತ್ಥಾನದ " ಜ್ಞಾನ ಭಿಕ್ಷಾ ಪಾದಯಾತ್ರೆ " ನಿಜ ಮನುಷ್ಯರ ಹುಡುಕುತ್ತಾ..... ಸಮ ಸಮಾಜದ ಕನಸಿನಲ್ಲಿ........ ಜೀವಪರ ನಿಲುವಿನೊಂದಿಗೆ...... ಪರಿಸರದ ಉಳಿವಿಗಾಗಿ....... ಎಲ್ಲಾ ಭಾವನೆಗಳನ್ನು ಅನುಭವಿಸುತ್ತಾ..... ಎಲ್ಲರಲ್ಲೂ ಪ್ರೀತಿ ಎಂಬ ಭಾವವನ್ನು ಸ್ಥಾಯಿಯಾಗಿಸುವ ಆಸೆಯೊಂದಿಗೆ......ಸಾಗುತ್ತಿದೆ ಪಯಣ ಕೊನೆಯ ಉಸಿರಿನವರೆಗೆ.....
- 299 ನೆಯ ದಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆ ಕೊಡಗು ಜಿಲ್ಲೆಯ ಶನಿವಾರಸಂತೆ ಗ್ರಾಮದಿಂದ ಸುಮಾರು 22 ಕಿಲೋಮೀಟರ್ ದೂರದ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕು ತಲುಪಿತು. ಇಂದು 27/8/2021 ಶುಕ್ರವಾರ 300 ನೆಯ ದಿನ ನಮ್ಮ ಕಾಲ್ನಡಿಗೆ ಹಾಸನ ಜಿಲ್ಲೆಯ ಅರಕಲಗೂಡಿನಿಂದ ಭಾರತದ ಪ್ರಧಾನ ಮಂತ್ರಿಗಳಾಗಿದ್ದ ದೇವೇಗೌಡರು ಪ್ರತಿನಿಧಿಸುತ್ತಿದ್ದ ಸುಮಾರು 21 ಕಿಲೋಮೀಟರ್ ದೂರದ ಹೊಳೆನರಸೀಪುರ ತಾಲ್ಲೂಕು ತಲುಪಲಿದೆ. ನಾಳೆ 28/8/2021 ಶನಿವಾರ 301 ನೆಯ ದಿನ ನಮ್ಮ ಕಾಲ್ನಡಿಗೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನತ್ತಾ..........
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ; ಇಂಟರ್ನೆಟ್ ತಾಣ