ಸಾಧಕರ ಕೃತ್ಯವನ್ನು ಸಮಾಜ ನೆನೆಯಬೇಕು ರಾಘವೇಂದ್ರ ಕುಷ್ಟಗಿ
ರಿಪ್ಪನಪೇಟೆ :-
ಸಾಧಕನ ಕೃತ್ಯವನ್ನು ಸಮಾಜ ನೆನೆದು ಒಂದೆರೆಡು ಆನಂದಭಾಷ್ಪ ನಮ್ಮ ಕಣ್ಣುಗಳಿಂದ ಉರುಳಿದರೆ ಅದಕ್ಕಿಂತ ದೊಡ್ಡ ಕೊಡುಗೆ ಬೇರೆ ಇಲ್ಲ. ಅವರನ್ನು ಗುರುತಿಸುವ ಕೆಲಸ ನಮ್ಮಿಂದ ಆಗಬೇಕು. ಹಾಜಬ್ಬ ನಮಗೆಲ್ಲ ಆದರ್ಶ, ಊರಿಗೊಬ್ಬ ಹಾಜಬ್ಬಗಳು ಹುಟ್ಟಿ ಬರಬೇಕು ಅಂದಾಗ ಸಮಾಜ ಸುಧಾರಣೆ ವೇಗವನ್ನು ಪಡೆದುಕೊಳ್ಳಲು ಸಾಧ್ಯ ಎಂದು ರಾಜ್ಯದ ಖ್ಯಾತ ಜನಪರ ಹೋರಾಟಗಾರ ಮತ್ತು ವಾಗ್ಮಿ ರಾಯಚೂರಿನ ರಾಘವೇಂದ್ರ ಕುಷ್ಟಗಿ ಕರೆ ನೀಡಿದರು. ಅವರು ರಿಪ್ಪನಪೇಟೆಯ ಜಾಗೃತ ಯುವಜನ ಹೋರಾಟ ವೇದಿಕೆ ಇಲ್ಲಿಯ ಜಿಎಸ್ಬಿಕಲ್ಯಾಣ ಮಂದಿರ ದಲ್ಲಿ ಹಮ್ಮಿಕೊಳ್ಳ ಲಾಗಿದ್ದ ಸಂವಾದ ಕಾರ್ಯಕ್ರಮ ದಲ್ಲಿ ಅಪರೂಪದ ಸಮಾಜ ಸೇವಕ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಿ ಮಾತನಾಡಿದಿರು. ಕಳವಳಕಾರಿ ಸ್ಥಿತಿಯಲ್ಲಿ ನಮ್ಮೆಲ್ಲರ ಹೊಣೆಗಾರಿಕೆ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಅವರು ನಮ್ಮ ದೇಶ ಇಂದು ಸಂಕೀರ್ಣ ಕಾಲಘಟ್ಟದಲ್ಲಿ ಬಂದು ನಿಂತಿದೆ. ಒಬ್ಬರ ಹೋರಾಟದಿಂದ ಯಶಸ್ಸು ಅಸಾಧ್ಯ ಹೀಗಾಗಿ ನಾವು ನೀವು ಎಲ್ಲರೂ ಸೇರಿ ಯತ್ನಿಸಿದಾಗ ಯಶ ಪಡೆಯಲು ಸಾಧ್ಯ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹಾಜಬ್ಬ ಅವರು ನಾನೊಬ್ಬ ಜನಸಾಮಾನ್ಯ, ಎಲ್ಲ ಮಕ್ಕಳೂ ವಿದ್ಯೆ ಪಡೆಯ ಬೇಕು ಎಂಬುದು ಆಶಯ ಆ ಕಾರಣದಿಂದಾಗಿ ನಾನೊಂದು ಶಾಲೆಯನ್ನು ತೆರೆದೆ. ನನ್ನ ಈ ಕ್ರಿಯೆಯನ್ನು ಪತ್ರಕರ್ತರು ಸಹೃದಯರು ಗುರುತಿಸಿ ಪ್ರಚುರ ಪಡಿಸಿದ್ದಾರೆ. ನಾನೊಬ್ಬ ಅನಕ್ಷರಸ್ಥ ಈ ವೇದಿಕೆಯಲ್ಲಿ ಪ್ರಮುಖ ಗಣ್ಯ ರೊಟ್ಟಿಗೆ ನಾನು ಕುಳಿತು ಕೊಳ್ಳಲು ಸಾಧ್ಯವಾದದ್ದು ನಿಮ್ಮೆಲ್ಲರ ಪ್ರೀತಿ ವಿಶ್ವಾಸಗಳಿಂದ ಸಾಧ್ಯವಾಗಿದೆ. ನಿಮ್ಮೆಲ್ಲರಿಗೂ ನನ್ನ ಅನಂತ ವಂದನೆಗಳು ಎಂದರು.
ಹಾಜಬ್ಬರ ವ್ಯಕ್ತಿ ಪರಿಚಯ ಮತ್ತು ಅವರ ಸಮಾಜಮುಖಿ ಕೃತ್ಯಗಳನ್ನು ಮತ್ತು ಶಿಕ್ಷಣದ ಬಗೆಗಿನ ಅವರ ಆದಮ್ಯ ಕಳಕಳಿ ಕುರಿತು ಮಾತನಾಡಿದ ಸಾಹಿತಿ ಸರ್ಜಾಶಂಕರ ರವರು ಚೀನಿ ಗಾದೆಯೊಂದನ್ನು ಉದ್ಧರಿಸಿ 'ನಿಜದ ಮಾತು ನಿರರ್ಗಳವಲ್ಲ, ನಿರರ್ಗಳ ಮಾತು ನಿಜವಲ್ಲ ' ಎಂದು ಮಾತನಾಡಿ ಹಾಜಬ್ಬ ಮತುಗಾರರಲ್ಲ ಅವರು ಕೃತಿಯಲ್ಲಿ ಮಾಡಿ ತೋರಿಸುವವರು ಎಂದರು. ಕನ್ನಡಪ್ರಭ ಮತ್ತು ಇಡಿಯನ್ ಎಕ್ಸಪ್ರೆಸ್ ಪತ್ರಿಕೆ ಗ್ರೂಫಿನವರು ಇವರ ಸಾಧನೆಯನ್ನು ಗುರುತಿಸಿ ಇವರನ್ನು ವರ್ಷದ ವ್ಯಕ್ತಿಯೆಂದು ಗುರುತಿಸಿದ್ದಾರೆ. ಈ ಆಯ್ಕೆ ಸಮಿತಿಯಲ್ಲಿ ಖ್ಯಾತ ಸಾಹಿತಿ ಯೂ.ಆರ್.ಅನಂತಮೂರ್ತಿ ಯವರು ಇದ್ದುದು ಆಯ್ಕೆಯ ಗಹನತೆಯನ್ನು ಹೆಚ್ಚಿಸಿದೆ, ಎನ್ಡಿಟಿವಿ ಯವರು ಇವರ ಕಾರ್ಯವನ್ನ ಬಹು ಮೆಚ್ಚಿ ಐದು ಲಕ್ಷ ರೂಪಾಯಿಗಳ ಪ್ರೊತ್ಸಾಹ ಧನವನ್ನು ನೀಡಿದ್ದು ಹಾಜಬ್ಬ ಬಡತನದಲ್ಲಿದ್ದರೂ ಆ ಹಣವನ್ನು ಪೂರ್ತಿಯಾಗಿ ಶಾಲೆಯ ಅಭಿವೃದ್ಧಿಗೆ ಬಳಸಿದ್ದು ಶಿಕ್ಷಣದ ಬಗೆಗಿನ ಅವರ ಕಳಕಳಿಯನ್ನು ತೋರಿಸುತ್ತದೆ ಎಂದರು.
ಇಲ್ಲಿಯ ಸರ್ಕಾರಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಜಿ.ಕೆ.ಅನಂತಶಾಸ್ತ್ರಿ ಯವರು ಮಾತನಾಡಿ ಮತದಾನ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಒಂದು ಪ್ರಮುಖ ಘಟ್ಟ, ಆದರೆ ನಾವು ಭ್ರಷ್ಟರನ್ನು ಆಯ್ಕೆಮಾಡಿ ಕಳಿಸಿ ವ್ಯವಸ್ಥೆಯ ಬಗ್ಗೆ ದೂರುತ್ತೇವೆ, ಇದು ನಿಲ್ಲಬೇಕು. ಭ್ರಷ್ಟಾಚಾರ ವರ್ತಮಾನದ ಸಮಸ್ಯೆ ಶಿಕ್ಷಣದಲ್ಲಿ ನೈತಿಕಮಟ್ಟ ಕುಸಿದಿರುವುದೆ ಇದಕ್ಕೆಲ್ಲ ಕಾರಣ ಎಂದರು. ಒಳ್ಳೆಯದು ಮತ್ತು ಕೆಟ್ಟದು ಇವುಗಳ ವ್ಯತ್ಯಾಸ ಮಗುವಿಗೆ ಆದರೆ ಅದು ಗುಣಮಟ್ದದ ಶಿಕ್ಷಣ.ಯಾರಿಗೂ ನೋವಾಗದಂತೆ ಪ್ರಕೃತಿಯನ್ನು ಹಾಳುಗೆಡವದಂತೆ ಬದುಕಲು ಕಲಿಯುವುದೆ ಉತ್ತಮ ಶಿಕಣದ ಗುರಿ ಎಂದರು.
ಜನಪರ ಚಿಂತಕ ಶಿವಮೊಗ್ಗದ ಅನಂತ ಶಾನಭಾಗ ಮಾತನಾಡಿ ಸಮಾಜದ ವ್ಯವಸ್ಥೆಯಲ್ಲಿ ಏರುಪೇರು ಗಳಾದಾಗ ಹೋರಾಟಕ್ಕೆ ನಾಂದಿಯಾಗುತ್ತದೆ. ಹೋರಾಟ ಒಂದು ನಿರಂತರ ಪ್ರಕ್ರಿಯೆ, ಅದು ಸಾರ್ವಕಾಲಿಕ. ವ್ಯವಸ್ಥೆಯಲ್ಲಿಯ ಲೋಪ ದೋಷಗಳ ಬಗ್ಗೆ ಯುವಕರು ಪ್ರಶ್ನಿಸದೆ ಹೋದರೆ ಅವ್ಯವಸ್ಥೆಗೆ ರಹದಾರಿ ಯಾದಂತೆ ಎಂದರು.
ಭೂರಹಿತರ ಹೋರಾಟ ವೇದಿಕೆಯ ಅಧ್ಯಕ್ಷ ಕಬಸೆ ಅಶೋಕಿಮೂರ್ತಿ ಮಾತನಾಡಿ ಪ್ರಾಮಾಣಿಕ ಹೋರಾಟಕ್ಕೆ ಬೆಲೆಯಿದೆ, ನಮ್ಮ ಇತಿಮಿತಿಯಲ್ಲಿಯೆ ಸಮಾಜಮುಖಿ ಕೆಲಸಗಳನ್ನು ಮಡಬೇಕು ಎಂದ ಅವರು ನಾವು ಎಷ್ಟು ದಿನ ಬದುಕಿದೆವು ಎನ್ನುವುದು ಮುಖ್ಯವಲ್ಲ ಹೇಗೆ ಬದುಕಿದೆವು ಎನ್ನುವುದು ಮುಖ್ಯ. ಮನುಷ್ಯನ ಬದುಕಿಗೆ ಆತ್ಮಸಾಕ್ಷಿ ಮುಖ್ಯ ಎಂದರು. ಕೋಣಂದೂರಿನ ಪತ್ರಕರ್ತ ಮುರುಘರಾಜ, ಹೋರಾಟಗಾರ ವಿಶ್ವನಾಥಗೌಡ ಅರ್ದಂತೆ, ದಂಡಾವತಿ ಹೋರಾಟ ಸಮಿತಿಯ ಅಧ್ಯಕ್ಷ ವಾಮದೇವಗೌಡ, ಸ್ಥಳೀಯ ಪತ್ರಕರ್ತ ತ.ಮ.ನರಸಿಂಹ, ಆದರ್ಶ ಕೃಷಿಕ ಅನಂತಮೂರ್ತಿ ಜವಳಿ, ಸಾಗರದ ವಿಶ್ವನಾಥ ಸಂವಾದದಲ್ಲಿ ಕ್ರಿಯಾತ್ಮಕವಾಗಿ ಭಾಗವಹಿಸಿದ್ದರು. ಬಿಲ್ಲೇಶ್ವರದ ವಿದ್ಯಾಧರ್ ಅಶ್ಫಕ್ ಹಾರುವ ಓತಿಯನ್ನು ತಾನು ಕಂಡ ಬಗ್ಗೆ ಹಲವು ಪ್ರಯತ್ನಗಳ ಬಳಿಕ ಅದನ್ನು ಹಿಡಿದ ಬಗ್ಗೆ ಅವಿವರವಾಗಿ ಮಾತನಾಡಿ ತನ್ನ ಕ್ರಿಯಾತ್ಮಕತೆಗೆ ತೇಜಸ್ವಿಯವರ ಕರ್ವಾಲೋ ಮುಂತಾದ ಕೃತಿಗಳು ಕಾರಣ ಎಂದರು.
ಈ ಕಾರ್ಯಕ್ರಮದ ರೂವಾರಿ ಜಿಲ್ಲಾ ಪಿಯೂಸಿಎಲ್ ಅಧ್ಯಕ್ಷ ಮತ್ತು ಜನಪರ ಹೋರಾಟಗಾರ ತಿ.ರಾ.ಕೃಷ್ಣಪ್ಪ ವೇದಿಕೆಯ ಅಧ್ಯಕ್ಷ ಸ್ಥಾನದಿಂದ ಮಾತನಾಡಿ ಇಂತಹ ಕಾರ್ಯಕ್ರಮಗಳಲ್ಲಿ ಎಲ್ಲರೂ ಅದರಲ್ಲಿಯೂ ವಿಶೇಷವಾಗಿ ಯುವ ಜನತೆ ಆಸಕ್ತಿ ಯಿಂದ ಭಾಗವಹಿಸಬೇಕು ಎಂದರು. ಇದು ನಮ್ಮೂರ ಹಿರಿಯರ ನೆನಪಿನ ಸಭಾ ವೇದಿಕೆಯ ಎರಡನೆ ಕಾರ್ಯಕ್ರಮ. ನಮಗೆ ಮಹತ್ಮಾ ಗಾಂದೀಜಿ ಆಚಾರ್ಯ ವಿನೋಭಾ ಭಾವೆಯವರಷ್ಟೆ ನಮ್ಮ ಗ್ರಾಮದ ಹಿರಿಯರನ್ನು ನೆನಪಿಸಿ ಕೊಳ್ಳುವುದೂ ಅಷ್ಟೇ ಮುಖ್ಯ. ಮುಂದಿನ ಊರ ಹಿರಿಯರ ಸಾಧನೆ ಮತ್ತೆ ಅವರು ಸಾಗಿ ಹೋದ ಬದುಕನ್ನು ಕುರಿತು ದಾಖಲಿಸುವ ಯೋಚನೆಯಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಆದರ್ಶ ಬದುಕಿನ ಸಾಧಕರಾದ ರಾಘವೇಂದ್ರ ಕುಷ್ಟಗಿ, ಅನಂತ ಶಾನಭಾಗ, ರಿಪ್ಪನ ಪೇಟೆಯ ಹಿರಿಯ ವೈದ್ಯಕೀಯ ಪರೀಕ್ಷಕರಾದ ರಂಗಪ್ಪ, ಎನ್.ರಾಮಚಂದ್ರ, ಆದರ್ಶ ಕೃಷಿಕ ಅನಂತಮೂರ್ತಿ ಜವಳಿಯವರನ್ನು ಸನ್ಮಾನಿಸ ಲಾಯಿತು. ಕಾರ್ಯಕ್ರಮದ ಸ್ವಾಗತ ನಿರೂಪಣೆ ವಂದನಾರ್ಪಣೆಯನ್ನು ಸರ್ಜಾಶಂಕರ ಹರಳಿಮಠ ನೆರವೇರಿಸಿದರು.
***