ಸಾಧಕರ ಹಾದಿ

ಸಾಧಕರ ಹಾದಿ

ಪುಸ್ತಕದ ಲೇಖಕ/ಕವಿಯ ಹೆಸರು
ಕೆ. ಎನ್. ಪರಾಂಜಪೆ
ಪ್ರಕಾಶಕರು
ಸೃಷ್ಟಿ ಪಬ್ಲಿಕೇಷನ್ಸ್, ಬೆಂಗಳೂರು
ಪುಸ್ತಕದ ಬೆಲೆ
ರೂ.೧೦೦/-

ಕನ್ನಡ ನಾಡು ಮತ್ತು ನುಡಿಗಾಗಿ ಬೆಲೆ ಕಟ್ಟಲಾಗದ ಸೇವೆ ಸಲ್ಲಿಸಿದವರು ಹಲವು ಮಹನೀಯರು. ಅಂತಹ ೫೦ ಸಾಧಕರ ಪುಟ್ಟ ಪರಿಚಯ ಮಾಡಿಕೊಡುವ ಪುಸ್ತಕ ಇದು.

“ಇಲ್ಲಿನ ೫೦ ವ್ಯಕ್ತಿ ಚಿತ್ರಗಳಲ್ಲಿ ಸಾಹಿತಿಗಳು, ಸಂಶೋಧಕರು, ಜಾನಪದ ಸಂಗ್ರಾಹಕರು, ಸಂಗೀತಗಾರರು, ಆಡಳಿತಗಾರರು ಮತ್ತು ಸಮಾಜ ಸುಧಾರಕರು ಸೇರಿದ್ದಾರೆ. ….. ಮಂಜೇಶ್ವರ ಗೋವಿಂದ ಪೈಗಳು ಕನ್ನಡ ಕಾವ್ಯಕ್ಕೆ ಅನಿವಾರ್ಯ ಎಂದು ಭಾವಿಸಲಾದ “ಪ್ರಾಸ”ವನ್ನು ಬಿಟ್ಟು ಬಿಡುವ ಕ್ರಾಂತಿಕಾರಿ ಧೋರಣೆ ತಳೆದರು. ಪ್ರೊ. ಹಿರಿಯಣ್ಣ, ಎಸ್. ವಿ. ಪರಮೇಶ್ವರ ಭಟ್ಟ, ಎ. ಆರ್. ಕೃಷ್ಣ ಶಾಸ್ತ್ರಿ, ದೇವುಡು, ತೀ. ನಂ. ಶ್ರೀಕಂಠಯ್ಯ ಮೊದಲಾದ ಮಹನೀಯರು ಸಂಸ್ಕೃತದ ಮಹಾನ್ ಗ್ರಂಥಗಳ ಬಗ್ಗೆ ಕನ್ನಡದಲ್ಲಿ ಬರೆದು ಕನ್ನಡಿಗರ ಅರಿವು ಹೆಚ್ಚಿಸಿದರು. ಸಿ. ಡಿ. ನರಸಿಂಹಯ್ಯನವರು ಆಂಗ್ಲ ಭಾಷೆಯ ಬಗ್ಗೆ ತಿಳುವಳಿಕೆ ಮೂಡಿಸಿದರು. ಕಿಟೆಲ್, ಸೇಡಿಯಾಪು, ಮುಳಿಯ, ತಿ. ತಾ. ಶರ್ಮ ಮತ್ತು ರುದ್ರಪಟ್ನಂ ಶಾಮಾ ಶಾಸ್ತ್ರಿಗಳೇ ಮೊದಲಾದ ಪಂಡಿತ ಪರಂಪರೆಯ ವಿದ್ವಾಂಸರು ಕನ್ನಡ ಪ್ರಾಚೀನ ಪರಂಪರೆಯ ಬಗ್ಗೆ ಆಳವಾದ ಜ್ನಾನ ಸಂಪಾದಿಸಿಕೊಂಡು ಅದನ್ನು ಆಧುನಿಕರಿಗೆ ತಿಳಿಸಿ ಹೇಳಲು ಪ್ರಯತ್ನಿಸಿದರು. ಹುಕ್ಕೇರಿ ಬಾಳಪ್ಪ ಮತ್ತು ಕರೀಂ ಖಾನ್ ಅವರು ಅದುವರೆಗೆ ನಿರಾಕರಣೆಗೆ ಒಳಗಾಗಿದ್ದ ನಮ್ಮ ಮೌಖಿಕ ಪರಂಪರೆಗೆ ಹೊಸ ಜೀವ ತುಂಬಿದರು. ಯು. ಶ್ರೀನಿವಾಸ ಮಲ್ಯ, ಬೆನಗಲ್ ನರಸಿಂಹ ರಾವ್, ಮಿರ್ಜಾ ಇಸ್ಮಾಯಿಲ್, ಅಮ್ಮೆಂಬಳ ಸುಬ್ಬರಾಯ ಪೈ, ಕೆ. ಪಿ. ಪುಟ್ಟಣ್ಣ ಶೆಟ್ಟಿ ಮೊದಲಾದವರು ಆಡಳಿತದಲ್ಲಿ ಸುಧಾರಣೆ ತರಲು ಹೋರಾಡಿದರು. ಆನಂದಿ ಬಾಯಿ ಜೋಷಿ, ನಿರಂಜನ, ದಿನಕರ ದೇಸಾಯಿ, ಎಚ್. ನರಸಿಂಹಯ್ಯ, ಎ. ಎನ್. ಮೂರ್ತಿರಾಯರೇ ಮೊದಲಾದವರು ಸಾಮಾಜಿಕ ಪ್ರಗತಿಗೆ ವೈಚಾರಿಕತೆಯ ಆಯಾಮ ನೀಡಿ ಸಮಾಜ ಜಡವಾಗದಂತಹ ಕನಸು ಕಂಡು ಅದಕ್ಕಾಗಿ ಹೆಣಗಿದರು. ಮಧುರ ಚೆನ್ನ, ಪಂಜೆ ಮಂಗೇಶರಾಯ, ಜಿ. ಪಿ. ರಾಜರತ್ನಂ, ಪು. ತಿ. ನ., ಹುಯಿಲಗೋಳ ನಾರಾಯಣ ರಾಯರು, ಕೆ. ಎನ್. ಭಟ್ ಶಿರಾಡಿಪಾಲ್, ಬೆಟಗೇರಿ ಕೃಷ್ಣ ಶರ್ಮ, ತ. ಸು. ಶಾಮರಾಯ ಮೊದಲಾದ ಮಹನೀಯರು ಹೆಚ್ಚು ಮೂರ್ತವಾಗಿ ನಾಡನ್ನು ಮತ್ತು ಭಾಷೆಯನ್ನು ಹೊಸದಾಗಿ ಕಟ್ಟುವುದಕ್ಕೆ ಜೀವ ತೇದರು. ವರದಾಚಾರ್ ಅವರು ಕರ್ನಾಟಕ ಸಂಗೀತಕ್ಕೆ ಹೊಸ ಮೆರುಗು ತಂದರಲ್ಲದೆ, ಅದನ್ನು ದೇಶವಿದೇಶಗಳಲ್ಲಿ ಪ್ರಚುರ ಪಡಿಸಿದರು. ನಾಡು ನುಡಿಯ ಅಭ್ಯುದಯಕ್ಕೆ ಇವರೆಲ್ಲರೂ ಸಲ್ಲಿಸಿದ ಸೇವೆ ಅನುಪಮವಾದುದು. ಹೀಗೆ ಈ ಕೃತಿಯಲ್ಲಿ ಅತ್ಯಂತ ಅರ್ಹವಾಗಿ ಸ್ಥಾನ ಪಡೆದ ಎಲ್ಲ ಮಹನೀಯರು ವಸಾಹತುಶಾಹೀ ಆಡಳಿತ ಕಾಲದಲ್ಲಿ ದಕ್ಕಿದ ಶಿಕ್ಷಣವು ತಂದಿತ್ತ ತಿಳುವಳಿಕೆಯ ಆಧಾರದಲ್ಲಿ ನಾಡುನುಡಿಯನ್ನು ಹೊಸ ಕಾಲಕ್ಕೆ ಸಜ್ಜುಗೊಳಿಸುವ ಮಹಾನ್ ಕಾರ್ಯದಲ್ಲಿ ದಣಿವರಿಯದೆ ನಿರಂತರವಾಗಿ ದುಡಿದವರು” ಎಂದು ಮುನ್ನುಡಿಯಲ್ಲಿ ಡಾ. ಪುರುಷೋತ್ತಮ ಬಿಳಿಮಲೆ ಅವರು ಬರೆದಿದ್ದಾರೆ.

ಈ ಹೊತ್ತಗೆಯಲ್ಲಿರುವ ಹಲವು ವ್ಯಕ್ತಿಚಿತ್ರಗಳಲ್ಲಿ, ಅವರ ಬದುಕಿನ ಒಂದು ಘಟನೆಯ ನಿರೂಪಣೆಯೊಂದಿಗೆ ಅವರ ವ್ಯಕ್ತಿತ್ವ ಮತ್ತು ಸ್ಥೂಲ ಪರಿಚಯ ದಾಖಲಾಗಿದೆ. ಆದರೆ ಅವರ ಸಮಗ್ರ ಪರಿಚಯ ಹಾಗೂ ಅವರ ಕೃತಿಗಳ ಸಂಪೂರ್ಣ ಮಾಹಿತಿ ಇಲ್ಲಿಲ್ಲ. "ಅವರು ಬದುಕಿದ ರೀತಿ ಮತ್ತು ಅವರ ಜೀವನಾದರ್ಶವನ್ನು ಬಿಂಬಿಸುವುದೇ ನನಗಿದ್ದ ಉದ್ದೇಶ" ಎಂದು ಲೇಖಕರು ಬರೆದು ಕೊಂಡಿದ್ದಾರೆ.

“ಜನಮಾನಸದಿಂದ ದೂರವಾದ ಈ ಮಹನೀಯ ಭಾರತದ ಸಂವಿಧಾನದ ಕರಡು ರಚಿಸಿದವರು” ಎಂಬ ವ್ಯಕ್ತಿಚಿತ್ರದಲ್ಲಿ ಬೆನಗಲ್ ನರಸಿಂಗ ರಾವ್ (೧೮೮೭ - ೧೯೫೩) ಅವರನ್ನು ಪರಿಚಿಯಿಸುತ್ತಾ ಲೇಖಕರು ಹೀಗೆಂದು ದಾಖಲಿಸಿದ್ದಾರೆ: “ಸ್ವಾತಂತ್ರ್ಯಾ ನಂತರದಲ್ಲಿ ಭಾರತದ ನೂತನ ಸಂವಿಧಾನ ರಚನೆ ಮಾಡುವ ಸವಾಲು ಸರಕಾರದ ಮುಂದಿತ್ತು. ಕಾನೂನು ಪಂಡಿತರಲ್ಲಿ ಈ ಬಗ್ಗೆ ಚಿಂತನ-ಮಂಥನ ನಡೆದಿತ್ತು. ಆಗ ಭಾರತ ಸರಕಾರ ಬಿ.ಆರ್. ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ಸಂವಿಧಾನ ರಚನೆ ಮಾಡುವ ಸಲುವಾಗಿ ಸಮಿತಿಯೊಂದನ್ನು ರಚಿಸಿತ್ತು. ಆ ಸಮಿತಿಯ ಪ್ರಮುಖ ಸಲಹೆಗಾರರಾಗಿದ್ದವರೇ ಈ ಬೆನಗಲ್ ನರಸಿಂಗ ರಾವ್. ಭಾರತ ಸಂವಿಧಾನದ ಮೂಲ ಕರಡನ್ನು ಬಿ. ಎನ್. ರಾವ್ ಸ್ವತಂತ್ರವಾಗಿ ರಚಿಸಿ ಅದನ್ನು ಸಮಿತಿಯ ಮುಂದಿಟ್ಟರು. ಕೆಲವು ಬದಲಾವಣೆಗಳೊಂದಿಗೆ ಅದನ್ನು ಬಿ.ಆರ್. ಅಂಬೇಡ್ಕರ್ ನಾಯಕತ್ವದ ಸಮಿತಿ ಅನುಮೋದಿಸಿತು. ಸಂವಿಧಾನವನ್ನು ಜಾರಿಗೆ ತರಲು ಲೋಕಸಭೆಯಲ್ಲಿ ಮಂಡಿಸಲಾದ ಗೊತ್ತುವಳಿಯಲ್ಲಿ ಇರುವ ಒಕ್ಕಣೆ ಹೀಗಿದೆ: “ಸಂವಿಧಾನ ತಜ್ನ ಬಿ. ಎನ್. ರಾವ್ ಸಿದ್ಧಪಡಿಸಿರುವ ಮತ್ತು ಬಿ.ಆರ್. ಅಂಬೇಡ್ಕರ್ ಅಧ್ಯಕ್ಷತೆಯ ಸಮಿತಿಯು ಅನುಮೋದಿಸಿರುವ ಸಂವಿಧಾನದ ಕರಡನ್ನು ಈ ಮೂಲಕ ಒಪ್ಪಿ ವಿಧಾಯಕಗೊಳಿಸಲಾಗಿದೆ.” ….. ಸಂವಿಧಾನದ ಕರಡು ಮೂಲತಃ ರಚಿಸಿದವರು ಯಾರು ಎಂಬುದನ್ನು ಪರಾಮರ್ಶಿಸಲು ಇಷ್ಟೇ ಸಾಕಲ್ಲವೇ? ನರಸಿಂಗ ರಾವ್ ಭಾರತ ಮಾತ್ರವಲ್ಲದೇ ಬರ್ಮಾ ದೇಶದ ಸಂವಿಧಾನವನ್ನು ಕೂಡ ರಚನೆ ಮಾಡಿ ಕೊಟ್ಟಿದ್ದರು."

ತನ್ನ ಬ್ಲಾಗಿನಲ್ಲಿ ಲೇಖಕರು ೨೦೦೯ರಿಂದ ಪ್ರಕಟಿಸಿದ್ದ ಈ ವ್ಯಕ್ತಿಚಿತ್ರಗಳು ಪುಸ್ತಕ ರೂಪದಲ್ಲಿ ಬಿಡುಗಡೆ ಆಗಿರುವುದರಿಂದ, ಕನ್ನಡ ನಾಡುನುಡಿಗಾಗಿ ೨೦ನೆಯ ಶತಮಾನದಲ್ಲಿ ಅಮೂಲ್ಯ ಸೇವೆ ಸಲ್ಲಿಸಿದ ೫೦ ಮಹಾನುಭಾವರ ಬಗ್ಗೆ ಸ್ಥೂಲವಾಗಿ ತಿಳಿದುಕೊಳ್ಳಲು ಈಗಿನ ತಲೆಮಾರಿನವರಿಗೆ ಸಹಾಯವಾಗಿದೆ.

Comments

Submitted by Ashwin Rao K P Sat, 10/23/2021 - 09:25

'ಸಾಧಕರ ಹಾದಿ' ಓದುವ ಆಸೆಯಾಗಿದೆ.

ಪುಸ್ತಕ ಮಾಹಿತಿಯಲ್ಲಿ 'ಸಾಧಕರ ಹಾದಿ' ಪುಸ್ತಕದ ವಿವರಗಳನ್ನು ಓದಿದ ಬಳಿಕ, ಪುಸ್ತಕವನ್ನು ಕೊಂಡು ಓದುವ ಆಸೆಯಾಗಿದೆ. ನಮ್ಮ ಹಿರಿಯ ಸಾಧಕರ ಬದುಕು ನಮಗೆ ಯಾವಾತ್ತೂ ಪ್ರೇರಣೆಯಾಗಿರಬೇಕು. ಅವರ ಅನುಭವಗಳಿಂದ ನಾವು ಕಲಿಯಬೇಕಾದದ್ದು ಸಾಕಷ್ಟಿದೆ. ಈ ನಿಟ್ಟಿನಲ್ಲಿ ಈ ಪುಸ್ತಕ ಬಹಳ ಸಹಕಾರಿಯಾದೀತು ಎಂಬುದು ನನ್ನ ಮನದಾಳದ ಅನಿಸಿಕೆ. ಮಹತ್ವದ ಪುಸ್ತಕದ ಮಾಹಿತಿ ನೀಡಿದ್ದಕ್ಕಾಗಿ ಕೃತಜ್ಞತೆಗಳು.