ಸಾಧಕರ 8 ವಿಶೇಷ ಗುಣಗಳು

“ಗುಣ ಲಕ್ಷಣ + ಅವಕಾಶ = ಯಶಸ್ಸು ಎನ್ನುವ ಇನ್ ಫೋಸಿಸ್ ನ ಸ್ಥಾಪಕರಲ್ಲೊಬ್ಬರಾದ ಎನ್ ಆರ್ ನಾರಾಯಣ ಮೂರ್ತಿಯವರ ಮಾತನ್ನು ಮುಖಪುಟದಲ್ಲೇ ಪ್ರಕಟಿಸಿದ್ದಾರೆ ‘ಸಾಧಕರ ೮ ವಿಶೇಷ ಗುಣಗಳು’ ಕೃತಿಯ ಲೇಖಕರಾದ ಸುಂಬರ್ ಬಾಬು ಇವರು. ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ‘ಉಪ್ಪಿಗಿಂತ ರುಚಿ ಬೇರೆ ಇಲ್ಲ’ ಎಂಬ ಕೃತಿಯ ಲೇಖಕರಾದ ರಾಮಸ್ವಾಮಿ ಹುಲಕೋಡು. ಅವರು ತಮ್ಮ ‘ಎಂಟರ ನಂಟು ಬೆಳೆಯಲಿ’ ಎನ್ನುವ ಬರಹದಲ್ಲಿ “ ಎಂಟು ಎಂದರೆ ಸಂಸ್ಕೃತದಲ್ಲಿ ‘ಅಷ್ಟ’. ಅಷ್ಟ ಸಿದ್ದಿ ಸಾಧಿಸಿದರೇನೆ ಯೋಗಿಯಾಗಲು ಸಾಧ್ಯ. ಅಷ್ಟ ದಿಕ್ಕುಗಳಿಂದ ಅರಿವಿನ ಬೆಳಕು ಪಡೆದರೇನೆ ಜ್ಞಾನಿಯಾಗಲು ಸಾಧ್ಯ. ಹಾಗೆಯೇ ಸಾಧಕರಾಗಲು ಕೂಡ ಬೇಕಾಗಿರುವುದು ಅಷ್ಟ ಅಂದರೆ ಎಂಟು ಗುಣಗಳು.
ಈ ಗುಣಗಳು ಯಾವವು, ಈಗಲೂ ಇವು ಪ್ರಸ್ತುತವೇ ಎಂದು ಚರ್ಚಿಸುತ್ತಲೇ ಆರಂಭವಾಗುವ ಈ ಕೃತಿ, ನಮ್ಮ ನಡುವಿನ ಸಾಧಕರನ್ನು ಮುಖಾಮುಖಿಯಾಗಿಸಿ, ಅವರ ಗುಣ ವಿಶೇಷಗಳನ್ನು ನಮಗೆ ಪರಿಚಯಿಸುತ್ತಾ ಹೋಗುತ್ತದೆ. ನಮಗರಿವಿಲ್ಲದಂತೆಯೇ, ನಮ್ಮಲ್ಲಿನ ನಕಾರಾತ್ಮಕ ಧೋರಣೆಗಳಿಗೆ ‘ಅಷ್ಟ ಬಂಧ’ ಹಾಕಿ, ಸಾಧನೆಯ ಮೆಟ್ಟಿಲುಗಳನ್ನೇರಲು ಪ್ರೇರಣೆ ನೀಡುತ್ತದೆ. ಸರಳ ಭಾಷೆ, ವಿಷಯ ಮನದಷ್ಟು ಮಾಡಿಸಲು ಉದಾಹರಿಸಿದ ದೃಷ್ಟಾಂತಗಳು ನಮ್ಮನ್ನು ಹಿಡಿದಿಡುತ್ತವೆ. ಪ್ರತಿಯೊಂದು ಗುಣಗಳನ್ನು ವಿವರಿಸುತ್ತಲೇ ಅವುಗಳನ್ನು ಸಿದ್ಧಿಸಿಕೊಳ್ಳಲು ಉಪಯುಕ್ತ ಟಿಪ್ಸ್ ನೀಡಿರುವುದು ಈ ಪುಸ್ತಕದ ಪ್ಲಸ್ ಪಾಯಿಂಟ್. ಜತೆಗೆ ವಿಷಯಕ್ಕೆ ಸಂಬಂಧಿಸಿದಂತೆ ಸಾಧಕರು, ಜ್ಞಾನಿಗಳು ಏನು ಹೇಳಿದ್ದಾರೆ, ಅವರ ಗ್ರಹಿಕೆ ಏನು ಎಂಬುದನ್ನೂ ಒಂದೆರಡು ವಾಕ್ಯಗಳಲ್ಲಿ ನೀಡಿರುವುದು ಬೋನಸ್!” ಎಂದಿದ್ದಾರೆ.
ಲೇಖಕರಾದ ಸುಂದರ್ ಬಾಬು ಅವರು ತಮ್ಮ ಮಾತುಗಳಲ್ಲಿ “ಎಲ್ಲಾ ಕ್ಷೇತ್ರಗಳ ಸಾಧಕರಲ್ಲಿ ಸಾಮಾನ್ಯವಾಗಿ ಕಂಡು ಬರುವ ವಿಶೇಷ ಗುಣಗಳು ಇವು. ಆದರೆ ಈ ವಿಶೇಷ ಗುಣಗಳ ಜೊತೆಗೆ ಇನ್ನೂ ಬೇಕಾದಷ್ಟು ಗುಣಗಳು ಗೆಲುವಿಗೆ ದಾರಿ ಮಾಡಿಕೊಡುತ್ತವೆ. ಧನಾತ್ಮಕ ಧೋರಣೆ, ಗುರಿ ನಿರ್ಧಾರ, ಆಪ್ತ ಸಲಹೆಗಾರರ ಒಡನಾಟ, ಅಪಾಯಗಳನ್ನು ಎದುರಿಸುವ ಉಪಾಯ ಮುಂತಾದ ಗುಣಗಳು ಸಹಾ ಯಶಸ್ಸಿಗೆ ದಾರಿ ಎಂಬುದನ್ನು ಮರೆಯುವಂತಿಲ್ಲ. ಮೊದಲು ಹೇಳಿದ ವಿಶೇಷ ಗುಣಗಳ ಜೊತೆಗೆ ಈ ಗುಣಗಳಿಂದ ಸಹಾ ಅಪಾರ ಸಂಖ್ಯೆಯಲ್ಲಿ ಸಾಧಕರು ಹೊರಹೊಮ್ಮಿದ್ದಾರೆ.
ಇದರ ಜೊತೆಗೆ ವೃತ್ತಿಪರ ಕೌಶಲ್ಯ, ತಾಂತ್ರಿಕ ಕೌಶಲ್ಯ, ಜನರೊಂದಿಗೆ ಬೆರೆಯುವ ಕೌಶಲ್ಯ, ಸಂವಹನದ ಕೌಶಲ್ಯ, ನಾಯಕತ್ವದ ಕೌಶಲ್ಯ ಮುಂತಾದವು ವಿವಿಧ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಅಗತ್ಯವಾದ ಪ್ರಮುಖ ಗುಣಗಳು. ಈ ಗುಣಗಳು ಹೊಂದಿಲ್ಲದೇ ಇದ್ದರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರೂ ಇದ್ದಾರೆ. ಯಾವ ಕ್ಷೇತ್ರದಲ್ಲಾದರೂ ಮೇಲೆ ಹೇಳಲಾದ ೮ ವಿಶೇಷ ಗುಣಗಳು ಯಶಸ್ಸು ಸಾಧಿಸಲು ಬುನಾದಿ ಎಂಬುದನ್ನು ಪರಿಗಣಿಸಬೇಕು.
ಹಲವಾರು ಕ್ಷೇತ್ರಗಳಲ್ಲಿ ಉನ್ನತ ಶಿಖರಗಳನ್ನು ಏರಿದ ಮಹನೀಯರು ಸಾಗಿಬಂದ ಹಾದಿಯನ್ನು ಪರಿಶೀಲಿಸಿ ಅವರು ಅಳವಡಿಸಿಕೊಂಡ ವಿಧಾನಗಳನ್ನು ನಾವು ಆರಿಸಿಕೊಂಡ ಕೆಲಸ ಅಥವಾ ಕ್ಷೇತ್ರದಲ್ಲಿ ಮೆಟ್ಟಿಲೇರಲು ಬಳಸಿಕೊಳ್ಳಬೇಕು.
ಸಾಮಾನ್ಯವಾಗಿ ಸಾಧಕರು ಹೊಂದಿರುವ ಮೇಲೆ ಹೇಳಲಾದ ೮ ವಿಶೇಷ ಗುಣಗಳು ಅವರ ವ್ಯಕ್ತಿತ್ವವನ್ನು ತೋರಿಸುತ್ತವೆ. ಆದರೆ ಅವರು ಆರಿಸಿಕೊಂಡ ೮ ವಿಶೇಷ ಗುಣಗಳು ಅವರಿಗೆ ವಂಶ ಪಾರಂಪರಿಕವಾಗಿ ಸಂದಾಯವಾದವುಗಳೇನಲ್ಲ. ಹುಟ್ಟಿನಿಂದ ಬಂದ ಗುಣಗಳ ಜೊತೆಗೆ ಈ ಎಂಟು ಗುಣಗಳನ್ನು ವೃದ್ಧಿಸಿಕೊಂಡು ಗೆಲುವಿನ ಸೋಪಾನಗಳನ್ನು ಏರಿ ಉನ್ನತ ಸ್ಥಾನಕ್ಕೆ ತಲುಪಿದ್ದಾರೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸುಮಾರು ೧೪೦ ಪುಟಗಳ ಈ ಕೃತಿಯು ಜ್ಞಾನದಾಹಕ ಓದಿಗೆ ಸಹಕಾರಿ.