ಸಾಧನಾಶೀಲ ಕ್ಯಾನ್ಸರ್ ಸಂಶೋಧಕಿ -ಡಾ.ಕಮಲ್ ರಣದಿವೆ
ನಿನ್ನೆ (ನವೆಂಬರ್ ೮) ಅಂತರ್ಜಾಲವನ್ನು ಜಾಲಾಡುತ್ತಿರುವಾಗ ಗೂಗಲ್ ಮುಖಪುಟದಲ್ಲಿ ಒಂದು ಡೂಡಲ್ ಗಮನಿಸಿದೆ. ಅದು ಬಹಳ ಆಕರ್ಷಣೀಯವಾಗಿತ್ತು. ಅದರ ಬಗ್ಗೆ ಪರಿಶೀಲಿಸಿದಾಗ ಅದು ಭಾರತೀಯ ಸಂಶೋಧಕಿಯಾದ ಡಾ.ಕಮಲ್ ರಣದಿವೆ ಕುರಿತಾಗಿತ್ತು. ಅವರ ೧೦೪ನೇಯ ಜನ್ಮದಿನದ ಸಲುವಾಗಿ ಗೂಗಲ್ ಡೂಡಲ್ ರಚಿಸುವುದರ ಮೂಲಕ ಡಾ. ಕಮಲ್ ರಣದಿವೆ ಅವರಿಗೆ ಗೌರವ ಸಮರ್ಪಣೆ ಮಾಡಿತ್ತು. ಗೂಗಲ್ (Google) ಎಂಬ ಆಂಗ್ಲ ಪದವನ್ನು ಬಹಳ ಸೊಗಸಾಗಿ ರಣದಿವೆ ಅವರ ಚಿತ್ರದೊಂದಿಗೆ ರಚನೆ ಮಾಡಲಾಗಿತ್ತು. ಈ ಡೂಡಲ್ ರಚನೆ ಮಾಡಿದ ಕಲಾವಿದ ಇಬ್ರಾಹಿಂ ರೇಯಿಂತಕತ್ ಇವರು. ಇವರ ಕಲಾಕೌಶಲ್ಯಕ್ಕೆ ನಮನಗಳನ್ನು ಸಲ್ಲಿಸುತ್ತಾ ಕಮಲ್ ರಣದಿವೆ ಕುರಿತಾಗಿ ಒಂದಿಷ್ಟು ತಿಳಿದುಕೊಳ್ಳೋಣ.
ಕಮಲ್ ಜನಿಸಿದ್ದು ನವೆಂಬರ್ ೮, ೧೯೧೭ರಲ್ಲಿ ಮಹಾರಾಷ್ಟ್ರ ರಾಜ್ಯದ ಪುಣೆಯಲ್ಲಿ. ಇವರ ತಂದೆ ದಿನಕರ ದತ್ತಾತ್ರೇಯ ಸಮರ್ಥ್ ಹಾಗೂ ತಾಯಿ ಶಾಂತಾಬಾಯಿ ದಿನಕರ ಸಮರ್ಥ್. ಇವರ ತಂದೆ ಫರ್ಗ್ಯೂಸನ್ ಕಾಲೇಜಿನಲ್ಲಿ ಜೀವಶಾಸ್ತ್ರ ಉಪನ್ಯಾಸಕರಾಗಿದ್ದರು. ಇವರ ತಂದೆಗೆ ತನ್ನ ಮಗಳು ವೈದ್ಯಳಾಗಿ ಜನರ ಸೇವೆ ಸಲ್ಲಿಸಬೇಕೆಂದು ಮಹದಾಸೆ ಇತ್ತು. ಆದರೆ ಕಮಲ್ ಅವರ ಆಸಕ್ತಿ ಇದ್ದದ್ದು ಸಂಶೋಧನೆಯಲ್ಲಿ. ಇವರು ತಮ್ಮ ಬಿ.ಎಸ್ಸಿ. ಪದವಿಯನ್ನು ಪ್ರಾಣಿಶಾಸ್ತ್ರ ಹಾಗೂ ಸಸ್ಯಶಾಸ್ತ್ರದಲ್ಲಿ ಪೂರೈಸಿದರು. ಅದರ ಬಳಿಕ ಸೈಟೋಜೆನಿಟಿಕ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡರು. ೧೯೩೯ರಲ್ಲಿ ಇವರು ಜಯಸಿಂಗ್ ತ್ರಯಂಬಿಕ್ ರಣದಿವೆ (ಜೆ.ಡಿ.ರಣದಿವೆ) ಇವರನ್ನು ವಿವಾಹವಾದ ಬಳಿಕ ಕಮಲ್ ಜಯಸಿಂಗ್ ರಣದಿವೆ ಆದರು. ಇವರ ಪತಿ ಜಯಸಿಂಗ್ ಅವರು ಗಣಿತ ಉಪನ್ಯಾಸಕರಾಗಿದ್ದರು. ವಿವಾಹದ ಬಳಿಕ ಇವರು ತಮ್ಮ ವಾಸ್ತವ್ಯವನ್ನು ಪುಣೆಯಿಂದ ಮುಂಬಯಿಗೆ ಬದಲಾಯಿಸಿಕೊಂಡರು.
ಕಮಲ್ ಇವರು ಟಾಟಾ ಮೆಮೊರಿಯಲ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ವೃತ್ತಿಯ ಜೊತೆಗೆ ತಮ್ಮ ಪಿ.ಹೆಚ್.ಡಿಯನ್ನೂ ಪೂರೈಸಿದರು. ಡಾ.ವಿ.ಆರ್.ಖಾನೋಲ್ಕರ್ ಇವರ ಮಾರ್ಗದರ್ಶನದಲ್ಲಿ ಇವರು ಡಾಕ್ಟರೇಟ್ ಪದವಿಯನ್ನು ಗಳಿಸಿದರು. ಇವರ ವಿದ್ಯಾಭ್ಯಾಸದ ಆಸಕ್ತಿಗೆ ತಂದೆ ಹಾಗೂ ಪತಿಯ ಬೆಂಬಲ ಲಭಿಸಿತ್ತು. ಉನ್ನತ ವ್ಯಾಸಂಗಕ್ಕೆ ಅಮೇರಿಕಾಗೆ ತೆರಳಿ ಅಲ್ಲಿ ಅಂಗಾಂಶ ಕೃಷಿ ವಿಷಯದಲ್ಲಿ ಸಂಶೋಧನೆಯನ್ನು ನಡೆಸಿದರು.
ಭಾರತಕ್ಕೆ ಮರಳಿದ ಬಳಿಕ ಮುಂಬೈಯಲ್ಲಿರುವ ಭಾರತೀಯ ಕ್ಯಾನ್ಸರ್ ಸಂಶೋಧನಾ ಕೇಂದ್ರ (Indian Cancer Research Center- ICRC) ದಲ್ಲಿ ವಿಜ್ಞಾನಿಯಾಗಿ ಸೇರಿಕೊಂಡು ತಮ್ಮ ಸಂಶೋಧನೆಗಳನ್ನು ಮುಂದುವರೆಸಿದರು. ಈ ಸಂಶೋಧನಾ ಕೇಂದ್ರದಲ್ಲಿ ಜೀವಶಾಸ್ತ್ರ ಹಾಗೂ ಅಂಗಾಂಶ ಕೃಷಿಯ ಬಗ್ಗೆ ಪ್ರಯೋಗಾಲಯಗಳನ್ನು ಪ್ರಾರಂಭಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಕ್ಯಾನ್ಸರ್ ಕಾಯಿಲೆಯ ಕುರಿತಾದ ಇವರ ಸಂಶೋಧನೆಗಳು ಈಗಲೂ ಪರಿಣಾಮಕಾರಿಯಾಗಿವೆ. ಕ್ಯಾನ್ಸರ್ ಪ್ರಭಾವಕ್ಕೆ ಒಳಪಡಬಹುದಾದ ಹಾರ್ಮೋನ್ಸ್ ಮತ್ತು ಕ್ಯಾನ್ಸರ್ ಹೊಂದಿದ ಗೆಡ್ಡೆಗಳ ಕೊಂಡಿಗಳ ಬಗ್ಗೆ ಅನ್ವೇಷಣೆ ನಡೆಸಿದರು. ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುವ ಸ್ತನ ಕ್ಯಾನ್ಸರ್ ಕುರಿತಾದ ಇವರ ಸಂಶೋಧನೆಯು ಭವಿಷ್ಯದಲ್ಲಿ ಬಹಳಷ್ಟು ಪ್ರಯೋಜನಕಾರಿಯಾಯಿತು.
ಕಮಲ್ ಇವರು ಟಾಟಾ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವಾಗ ಮಂಡಿಸಿದ ಸಂಶೋಧನಾ ವರದಿಯಾದ ‘ಕಂಪೇರಿಟಿವ್ ಮಾರ್ಫಾಲಜಿ ಆಫ್ ಮಾಮರಿ ಗ್ಲಾಂಡ್ ಆಫ್ ಫೋರ್ ಸ್ಟೇನ್ಸ್ ಆಫ್ ಮೈಸ್ ವೇರಿಯಿಂಗ್ ಇನ್ ದೇರ್ ಸಸೆಪ್ಟಿಬಿಲಿಟಿ ಟು ಬ್ರೆಸ್ಟ್ ಕ್ಯಾನ್ಸರ್' ಮಹಿಳೆಯ ಸ್ತನ ಕ್ಯಾನ್ಸರ್ ಬಗ್ಗೆ ಇನ್ನಷ್ಟು ವಿಷಯಗಳ ಬಗ್ಗೆ ಬೆಳಕು ಚೆಲ್ಲಿತು. ಅಹಮದ್ ನಗರದಲ್ಲಿ ಬುಡಕಟ್ಟು ಜನರ ಮಕ್ಕಳಲ್ಲಿ ಕಂಡು ಬರುತ್ತಿದ್ದ ಪೌಷ್ಟಿಕಾಂಶದ ಕೊರತೆಯ ಲಕ್ಷಣಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ, ವರದಿಯನ್ನು ತಯಾರು ಮಾಡಿದ್ದರು.
ಕಮಲ್ ರಣದಿವೆ ಇವರ ಸಮಾಜಮುಖಿ ಸಂಶೋಧನೆಗಳನ್ನು ಗುರುತಿಸಿ ಭಾರತ ಸರಕಾರ ೧೯೮೨ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಇವರು ೧೯೬೪ರಲ್ಲಿ ಇವರಿಗೆ ‘ಪ್ರಥಮ ರಜತ ಮಹೋತ್ಸವ ಸಂಶೋಧನಾ ಪ್ರಶಸ್ತಿ' ನೀಡಿ ಗೌರವಿಸಿದ್ದಾರೆ. ಕಮಲ್ ರಣದಿವೆ ಇವರು ಕ್ಯಾನ್ಸರ್ ಹಾಗೂ ಕುಷ್ಟ ರೋಗಕ್ಕೆ ಸಂಬಂಧಿಸಿ ಸುಮಾರು ೨೦೦ ಕ್ಕೂ ಅಧಿಕ ಸಂಶೋಧನಾ ವರದಿಗಳನ್ನು ತಯಾರು ಮಾಡಿದ್ದರು. ಇವರು ೨೦೦೧ರಲ್ಲಿ ತಮ್ಮ ೮೪ನೇ ವಯಸ್ಸಿನಲ್ಲಿ ನಿಧನ ಹೊಂದಿದರು. ಈಗಲೂ ಇವರ ಕ್ಯಾನ್ಸರ್ ಹಾಗೂ ಅದರ ಸೋಂಕುಗಳನ್ನು ತರುವ ವೈರಸ್ ಗಳ ನಡುವೆ ಇರುವ ಕೊಂಡಿಗಳ ಬಗೆಗಿನ ಸಂಶೋಧನೆ ಮಹತ್ತರವಾದುದಾಗಿದೆ.
ಚಿತ್ರ ಕೃಪೆ: ಅಂತರ್ಜಾಲ ತಾಣ